ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ಡಿವೈನ್‌ ಸ್ಟಾರ್‌ ಮೀಟ್ಸ್‌ ಬಿಗ್‌ ಬಿ; ʼಕೌನ್ ಬನೇಗಾ ಕರೋಡ್‌ಪತಿ' ಶೋನಲ್ಲಿ ರಿಷಬ್‌ ಶೆಟ್ಟಿ

Kaun Banega Crorepati 17: ಸ್ಯಾಂಡಲ್‌ವುಡ್‌ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಸದ್ಯ ʼಕಾಂತಾರ: ಚಾಪ್ಟರ್‌ 1' ಚಿತ್ರದ ಅಭೂತಪೂರ್ವ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ವಿವಿಧ ಭಾಷೆಗಳಲ್ಲಿ, ಜಾಗತಿಕ ಮಟ್ಟದಲ್ಲಿ ಚಿತ್ರ ಗಮನ ಸೆಳೆಯುತ್ತಿದ್ದು, ಈಗಾಗಲೇ 500 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ. ಈ ಮಧ್ಯೆ ರಿಷಬ್‌ ಶೆಟ್ಟಿ ಹಿಂದಿಯ 'ಕೌನ್ ಬನೇಗಾ ಕರೋಡ್‌ಪತಿ' ಶೋನಲ್ಲಿ ಅಮಿತಾಭ್‌ ಬಚ್ಚನ್‌ ಜತೆ ಭಾಗವಹಿಸಿದ್ದಾರೆ.

ʼಕೌನ್ ಬನೇಗಾ ಕರೋಡ್‌ಪತಿ' ಶೋನಲ್ಲಿ ರಿಷಬ್‌ ಶೆಟ್ಟಿ

-

Ramesh B Ramesh B Oct 11, 2025 7:48 PM

ಮುಂಬೈ: ಸದ್ಯ ಬಾಕ್ಸ್‌ ಆಫೀಸ್‌ನಲ್ಲಿ ʼಕಾಂತಾರ: ಚಾಪ್ಟರ್‌ 1' (Kantara Chapter 1) ಚಿತ್ರದ್ದೇ ಸದ್ದು. ಸ್ಯಾಂಡಲ್‌ವುಡ್‌ನ ಹಿರಿಮೆಯನ್ನು ಮತ್ತೊಮ್ಮೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಇದಕ್ಕೆ ಸಲ್ಲುತ್ತದೆ. ಈಗಾಗಲೇ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ ಈ ಸಿನಿಮಾ ಮೂಲಕ ರಿಷಬ್‌ ಶೆಟ್ಟಿ (Rishab Shetty) ಮತ್ತೊಮ್ಮೆ ಪ್ಯಾನ್‌ ಇಂಡಿಯಾ, ಪ್ಯಾನ್‌ ವರ್ಲ್ಡ್‌ ಮಟ್ಟದಲ್ಲಿ ಮಿಂಚಿದ್ದಾರೆ. ರಿಲೀಸ್‌ ಆಗಿ 8 ದಿನಗಳಲ್ಲಿ 500 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದ್ದು, ಚಿತ್ರತಂಡ ದೇಶದ ವಿವಿಧ ನಗರಗಳಿಗೆ ತೆರಳಿ ಪ್ರಚಾರದ ಕಾರ್ಯದಲ್ಲಿ ನಿರತವಾಗಿದೆ. ಈ ಮಧ್ಯೆ ರಿಷಬ್‌ ಶೆಟ್ಟಿ ಭಾರತೀಯ ಚಿತ್ರರಂಗದ ದಂತಕಥೆ ಅಮಿತಾಭ್‌ ಬಚ್ಚನ್‌ (Amitabh Bachchan) ಅವರನ್ನು ಭೇಟಿಯಾಗಿದ್ದಾರೆ. ಈ ಇಬ್ಬರು ಲೆಜೆಂಡ್‌ ಕಲಾವಿದರು ಒಂದೇ ಫ್ರೇಮ್‌ನಲ್ಲಿ ಸೆರೆಯಾಗಿರುವ ಫೋಟೊ ವೈರಲ್‌ ಆಗಿದೆ.

ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ನಡೆಸಿಕೊಡಿತ್ತಿರುವ ಜನಪ್ರಿಯ ಕ್ವಿಝ್‌ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್‌ಪತಿ' (Kaun Banega Crorepati). ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಶೋಗಳಲ್ಲಿ ಒಂದಾದ ಇದರ 17ನೇ ಸೀಸನ್‌ ನಡೆಯುತ್ತಿದೆ. ಇದರಲ್ಲಿ ಮುಖ್ಯ ಅತಿಥಿಯಾಗಿ ರಿಷಬ್‌ ಭಾಗವಹಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಹಂಚಿಕೊಂಡ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Kantara: Chapter 1: ಕಾಂತಾರ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೆ ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ನಟ ರಿಷಬ್‌ ಶೆಟ್ಟಿ!

ಅಮಿತಾಭ್‌ ಬಚ್ಚನ್‌ ಅವರೊಂದಿಗಿನ ರಿಷಬ್‌ ಫೋಟೊವನ್ನು ಹೊಂಬಾಳೆ ಫಿಲ್ಮ್ಸ್‌ ಹಂಚಿಕೊಂಡಿದ್ದು, ಫ್ಯಾನ್‌ ಮೆಚ್ಚಿಕೊಂಡಿದ್ದಾರೆ. ಅ. 11 ಅಮಿತಾಬ್‌ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್‌ ಫೋಟೊ ಶೇರ್‌ ಮಾಡಿ ಶುಭಾಶಯ ತಿಳಿಸಿದೆ. ರಿಷಬ್‌ ಪಂಚೆ ಮತ್ತು ಕಪ್ಪು ಶರ್ಟ್‌ ಧರಿಸಿ ಗಮನ ಸೆಳೆದಿದ್ದಾರೆ.

''ಕಾಂತಾರ: ಚಾಪ್ಟರ್ 1ʼ ತಂಡವು ಭಾರತೀಯ ಚಿತ್ರರಂಗದ ಶಹೆನ್‌ಶಾ, ದಂತಕಥೆ ಅಮಿತಾಭ್ ಬಚ್ಚನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತದೆ. ಕೌನ್ ಬನೇಗಾ ಕರೋಡ್‌ಪತಿ ಶೋನ ಮುಂಬರುವ ಸಂಚಿಕೆಗಾಗಿ ಉತ್ಸುಕರಾಗಿದ್ದೇವೆ. ನಿಮ್ಮನ್ನು ಭೇಟಿ ಮಾಡಿದ್ದು ಸಂತೋಷ ತಂದಿದೆ'' ಎಂದು ಹೊಂಬಾಳೆ ಫಿಲ್ಮ್ಸ್‌ ಬರೆದುಕೊಂಡಿದೆ. ಭಾರಿ ಕುತೂಹಲ ಮೂಡಿಸಿರುವ ಈ ಸಂಚಿಕೆ ಯಾವಾಗ ಪ್ರಸಾರವಾಗಲಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಹಿಂದಿಯಲ್ಲಿ 100 ಕೋಟಿ ರೂ. ಕ್ಲಬ್‌ ಸೇರಿದ ʼಕಾಂತಾರʼ

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಕಾಂತಾರ: ಚಾಪ್ಟರ್‌ 1' ಕನ್ನಡ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬಂದಿದೆ. ಅಕ್ಟೋಬರ್‌ 2ರಂದು ರಿಲೀಸ್‌ ಈ ಚಿತ್ರ ಈಗಾಗಲೇ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 500 ಕೋಟಿ ರೂ. ಗಳಿಸಿ ಮುಂದುವರಿದಿದೆ. ಈ ಪೈಕಿ ಭಾರತದಲ್ಲೇ 360 ಕೋಟಿ ರೂ. ಹರಿದು ಬಂದಿದೆ. ಇನ್ನು ಹಿಂದಿ ಮತ್ತು ಕನ್ನಡದಲ್ಲಿ ತಲಾ 100 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ.

ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್‌ ನಟಿಸಿದ್ದು, ಗುಲ್ಶನ್‌ ದೇವಯ್ಯ, ರಾಕೇಶ್‌ ಪೂಜಾರಿ, ಜಯರಾಮ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಇದು.