ಆಡಿಯೋ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ; ʻಸಮುದ್ರ ಮಂಥನʼ ಸಿನಿಮಾದ ರೈಟ್ಸ್ ಈಗ ʻಡಿವೈನ್ ಸ್ಟಾರ್ʼ ಪಾಲು
‘ಸಮುದ್ರ ಮಂಥನ’ ಚಿತ್ರದ ಆಡಿಯೋ ಹಕ್ಕುಗಳನ್ನು ರಿಷಬ್ ಶೆಟ್ಟಿ ಮ್ಯೂಸಿಕ್ ಸಂಸ್ಥೆಯು ಉತ್ತಮ ಮೊತ್ತಕ್ಕೆ ಖರೀದಿಸಿದೆ. ಯಶ್ವಂತ್ ಕುಮಾರ್ ಹಾಗೂ ‘ಬ್ಲಿಂಕ್’ ಖ್ಯಾತಿಯ ಮಂದಾರ ಬಟ್ಟಲಹಳ್ಳಿ ನಟನೆಯ ಈ ಚಿತ್ರವು ಅತಿ ಶೀಘ್ರದಲ್ಲೇ ತೆರೆಗೆ ಬರಲಿದೆ.
-
‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಜೊತೆಗೆ ಇದೀಗ ಆಡಿಯೋ ಕ್ಷೇತ್ರದಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತಮ್ಮ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಸಂಸ್ಥೆಯ ಮೂಲಕ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದ ಅವರು, ಇದೀಗ ಮತ್ತೊಂದು ಕುತೂಹಲಕಾರಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಹಾಡುಗಳ ಹಕ್ಕನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಹಿಂದೆ ‘ಒಂದು ಶಿಕಾರಿಯ ಕಥೆ’ ಎಂಬ ವಿಭಿನ್ನ ಸಿನಿಮಾದ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ನಿರ್ದೇಶಕ ಸಚಿನ್ ಶೆಟ್ಟಿ ನಿರ್ದೇಶನದ ಹೊಸ ಚಿತ್ರ ‘ಸಮುದ್ರ ಮಂಥನ’ದ ಆಡಿಯೋ ಹಕ್ಕುಗಳನ್ನು ‘ರಿಷಬ್ ಶೆಟ್ಟಿ ಮ್ಯೂಸಿಕ್’ ಸಂಸ್ಥೆ ಉತ್ತಮ ಮೊತ್ತಕ್ಕೆ ಖರೀದಿಸಿದೆ. ಸದಭಿರುಚಿಯ ಸಿನಿಮಾಗಳು ಹಾಗೂ ಉತ್ತಮ ಸಂಗೀತಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುವ ರಿಷಬ್ ಶೆಟ್ಟಿ ಅವರ ಸಂಸ್ಥೆಯು ಈ ಚಿತ್ರದ ಹಾಡುಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿರುವುದು ಚಿತ್ರತಂಡಕ್ಕೆ ದೊಡ್ಡ ಬಲ ತಂದಿದೆ.
ಹಾಡುಗಳನ್ನು ಬರೆದ ತ್ರಿಲೋಕ್ ತ್ರಿವಿಕ್ರಮ
ಸಂಗೀತದ ವಿಚಾರದಲ್ಲಿ ‘ಸಮುದ್ರ ಮಂಥನ’ ವಿಶೇಷ ನಿರೀಕ್ಷೆ ಹುಟ್ಟಿಸಿದ್ದು, ನಿಶಾಂತ್ ಮಧುಗಿರಿ ಮತ್ತು ಮನೋಜ್ ಚಂದ್ರಕಾಂತ್ ಜಂಟಿಯಾಗಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಆಲ್ಬಮ್ನಲ್ಲಿ ಒಟ್ಟು 5 ವಿಭಿನ್ನ ಶೈಲಿಯ ಹಾಡುಗಳಿದ್ದು, ಈ ಎಲ್ಲಾ ಗೀತೆಗಳಿಗೆ ಖ್ಯಾತ ಗೀತರಚನೆಕಾರ ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯದ ಬರೆದಿದ್ದಾರೆ. ವಿಶೇಷವೆಂದರೆ, ಸಿದ್ದಾರ್ಥ್ ಬೆಳ್ಮಣ್ಣು, ಅನಿರುದ್ಧ್ ಶಾಸ್ತ್ರಿ, ಮೈಮ್ ರಾಮದಾಸ್, ಐರಾ ಉಡುಪಿ ಹಾಗೂ ಕರಿಬಸವ ತಡಕಲ್ ಅವರಂತಹ ಪ್ರತಿಭಾವಂತ ಗಾಯಕರು ಈ ಹಾಡುಗಳಿಗೆ ತಮ್ಮ ಕಂಠಸಿರಿ ನೀಡಿದ್ದು, ಸದ್ಯದಲ್ಲೇ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಮೂಲಕ ಈ ಗೀತೆಗಳು ಅಧಿಕೃತವಾಗಿ ಬಿಡುಗಡೆಯಾಗಲಿವೆ.
Rishab Shetty: ಹೊಂಬಾಳೆ ಬಳಿಕ ರಾಜ್ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ!
ಯಶ್ವಂತ್ ಕುಮಾರ್ಗೆ ಜೋಡಿಯಾದ ಮಂದಾರ
ಚಿತ್ರದ ತಾರಾಗಣದಲ್ಲೂ ಹೊಸಬರ ಹಾಗೂ ಪ್ರತಿಭಾವಂತರ ಸಮಾಗಮವಿದೆ. ಯುವ ನಟ ಯಶ್ವಂತ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ‘ಬ್ಲಿಂಕ್’ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಮಂದಾರ ಬಟ್ಟಲಹಳ್ಳಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಫ್ ಕಟ್ ಪ್ರೊಡಕ್ಷನ್ಸ್, ಎ ಸ್ಕ್ವೇರ್ ಮತ್ತು ಆರುಷ್ ಪಿಕ್ಚರ್ಸ್ ಬ್ಯಾನರ್ಗಳ ಅಡಿಯಲ್ಲಿ ಈ ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವ ಭರವಸೆ ಮೂಡಿಸಿದೆ.
ಶೀಘ್ರದಲ್ಲೇ ಈ ಸಿನಿಮಾ ತೆರೆಗೆ
ಸದ್ಯ ‘ಸಮುದ್ರ ಮಂಥನ’ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಅಂತಿಮ ಹಂತದಲ್ಲಿವೆ. ಅಷ್ಟೇ ಅಲ್ಲದೆ, ಸಿನಿಮಾ ಈಗಾಗಲೇ ಸೆನ್ಸಾರ್ ಮಂಡಳಿಯ ಅಂಗಳದಲ್ಲಿದ್ದು, ಪ್ರಮಾಣಪತ್ರ ಸಿಕ್ಕ ಕೂಡಲೇ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಈ ವಿಭಿನ್ನ ಪ್ರಯತ್ನದ ಸಿನಿಮಾ ಬೆಳ್ಳಿಪರದೆಯ ಮೇಲೆ ಮೂಡಿಬರಲಿದೆ.