ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Maarnami Review: ಕರಾವಳಿ ಸೊಗಡಿನ ಮಾರ್ನಮಿಯಲ್ಲಿ ಪ್ರೀತಿಯ ದೀಪಾವಳಿ ಮತ್ತು ದ್ವೇಷದ ರಕ್ತದೊಕುಳಿ!

Maarnami Movie Review: ಕರಾವಳಿಯ ಮಾರ್ನಮಿ ಹಬ್ಬ ಹಾಗೂ ಹುಲಿವೇಷದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಮಾರ್ನಮಿ ಚಿತ್ರದಲ್ಲಿ ರಿತ್ವಿಕ್ ಮಠದ್ ಮತ್ತು ಚೈತ್ರಾ ಆಚಾರ್ ಅವರ ನಟನೆ ಹೈಲೈಟ್‌ ಆಗಿದೆ. ಚರಣ್ ರಾಜ್ ಸಂಗೀತವು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ರಿತ್ವಿಕ್ - ಚೈತ್ರಾ ಆಚಾರ್ ನಟನೆಯ 'ಮಾರ್ನಮಿ' ‌ ಹೇಗಿದೆ? ರೇಟಿಂಗ್‌ ಎಷ್ಟು?

-

Avinash GR
Avinash GR Feb 20, 2026 5:12 PM

ಸ್ಯಾಂಡಲ್‌ವುಡ್‌ನಲ್ಲಿ ಈಗ ಕರಾವಳಿ ಸೊಗಡಿನ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಅದಕ್ಕೀಗ ಹೊಸ ಸೇರ್ಪಡೆ ʻಮಾರ್ನಮಿʼ. ರಿಷಿತ್‌ ಶೆಟ್ಟಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಕರಾವಳಿಯಲ್ಲಿ ಮಾರ್ನಮಿ ಹಬ್ಬದ ವೇಳೆ ಮಾಡುವ ಹುಲಿವೇಷವೇ ಹೈಲೈಟ್.‌ ಅದನ್ನು ಹಿನ್ನೆಲೆಯಾಗಿರಿಸಿಕೊಂಡು, ಕರಾವಳಿಯ ರೌಡಿಸಂ ಬಗ್ಗೆ ಹೇಳಿದ್ದಾರೆ. ಜೊತೆಗೆ ಒಂದು ಪ್ರೇಮಕಥೆ.

ಮಾರ್ನಮಿ ಕಥೆ ಏನು?

ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಮಾವನ ಆಸರೆಯಲ್ಲಿ ಬೆಳೆಯುವ ಚೇತು (ರಿತ್ವಿಕ್)‌, ಸ್ಥಳೀಯವಾಗಿ ಪ್ರಬಲವಾದ ವ್ಯಕ್ತಿ. ಆತನದ್ದೇ ಒಂದು ಗುಂಪು. ಸಣ್ಣಪುಟ್ಟ ಹೊಡೆದಾಟಗಳು ಕಾಮನ್.‌ ಇಂತಹ ಚೇತು ಮೇಲೆ ಅದೇ ಊರಿನ ದೀಕ್ಷಾಗೆ (ಚೈತ್ರಾ ಆಚಾರ್)‌ ಅಪಾರ ಪ್ರೀತಿ. ಮದುವೆಯಾದರೆ, ಇವನನ್ನೇ ಮದುವೆ ಆಗಬೇಕು ಎಂದು ಹಠಕ್ಕೆ ಬಿದ್ದು ಮದುವೆ ಆಗುತ್ತಾಳೆ. ಬರಡುಭೂಮಿಯಂತಿದ್ದ ಚೇತು ಮನಸ್ಸಿನಲ್ಲಿ ಪ್ರೀತಿಯ ಹಸಿರನ್ನು ಮೂಡಿಸುತ್ತಾಳೆ. ಪ್ರೀತಿಯ ಕೊರತೆಯಲ್ಲಿ ಬೆಳೆದ ಚೇತು ಕೂಡ ತನ್ನ ಬದುಕು ಬಂಗಾರವಾಯಿತು ಎಂದುಕೊಳ್ಳುತ್ತಿರುವಾಗಲೇ ವಿಧಿ ತನ್ನ ರಾಕ್ಷಸ ಕುಣಿತವನ್ನು ಮಾಡಿಬಿಡುತ್ತದೆ. ಚೇತು ಬದುಕಿನಲ್ಲಿ ಎಣಿಸದಂತಹ ತಿರುವುಗಳು ಬರುತ್ತವೆ. ಅದಕ್ಕೆಲ್ಲಾ ಯಾರೆಲ್ಲಾ ಕಾರಣರಾಗುತ್ತಾರೆ? ನಂಬಿದವರೇ ಚೇತುಗೆ ಹೇಗೆ ಉಲ್ಟಾ ಆಗುತ್ತಾರೆ? ಅದನ್ನೆಲ್ಲಾ ಅವರು ನಿವಾರಿಸಿಕೊಂಡು ಕನಸಿನ ಬದುಕನ್ನು ಕಟ್ಟಿಕೊಳ್ಳುತ್ತಾನಾ ಎಂಬ ಪ್ರಶ್ನೆಯೊಂದಿಗೆ ಮಾರ್ನಮಿ ಸಿನಿಮಾ ಸಾಗುತ್ತದೆ.

ರಿತ್ವಿಕ್ ಮಠದ್ - ಚೈತ್ರಾ ಆಚಾರ್ ಜೋಡಿಯ 'ಮಾರ್ನಮಿ' ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್; ಕರಾವಳಿಯ ಸಂಸ್ಕೃತಿಯ ಸಿನಿಮಾಕ್ಕೆ ʻಕಿಚ್ಚʼ ಸುದೀಪ್ ಸಾಥ್!

ಗಮನಸೆಳೆಯುವ ರಿತ್ವಿಕ್ ಮಠದ್‌

ಕಿರುತೆರೆಯಲ್ಲಿ ಫೇಮಸ್‌ ಆಗಿರುವ ರಿತ್ವಿಕ್ ಮಠದ್‌ ಮಾರ್ನಮಿಯಲ್ಲಿ ಹೀರೋ ಆಗಿದ್ದಾರೆ. ವಿಶೇಷವೆಂದರೆ, ಉತ್ತರ ಕರ್ನಾಟಕದವರಾದ ರಿತ್ವಿಕ್ ಮಠದ್‌ ಅವರು ಕರಾವಳಿ‌ ಸೊಗಡಿನ ಕಥೆಯಲ್ಲಿ ಮಿಂಚಿದ್ದಾರೆ. ಜಾಸ್ತಿ ಮಾತಿಲ್ಲದ, ಮೌನಕ್ಕೆ ಜಾಸ್ತಿ ಪ್ರಾಧಾನ್ಯತೆ ಇರುವ ಪಾತ್ರದಲ್ಲಿ ರಿತ್ವಿಕ್ ಮಿಂಚಿದ್ದಾರೆ. ಅವರಿಗಿಲ್ಲಿ ಎರಡು ಶೇಡ್‌ನ ಪಾತ್ರವಿದ್ದು, ಅದನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದೇ ರೀತಿ ನಟಿ ಚೈತ್ರಾ ಆಚಾರ್‌ ಅವರಿಗೂ ಇಲ್ಲಿ ಎರಡು ಶೇಡ್‌ನ ಪಾತ್ರವಿದೆ. ಸಲೀಸಾಗಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿರುವ ಚೈತ್ರಾ ಅವರ ನಟನೆಯನ್ನು ನೋಡುವುದೇ ಚೆಂದ. ಆರಂಭದಲ್ಲಿ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗುವ ಚೈತ್ರಾ, ಕೊನೆಕೊನೆಗೆ ಕೋಪಕ್ಕೂ ಗುರಿಯಾಗುತ್ತಾರೆ. ಅದು ಹೇಗೆ ಎಂಬುದನ್ನು ತೆರೆಮೇಲೆಯೇ ನೋಡಬೇಕು.

Marnami Movie: 'ಮಾರ್ನಮಿ' ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಕಿಚ್ಚ- ಫೋಟೋಸ್ ಇಲ್ಲಿದೆ!

ಹಾಸ್ಯದ ಜೊತೆಗೆ ಭಾವುಕತೆಯುಳ್ಳ ಪೋಷಕ ಪಾತ್ರದಲ್ಲಿ ಪ್ರಕಾಶ್‌ ತುಮ್ಮಿನಾಡು ಮಿಂಚಿದ್ದಾರೆ. ಖಳ ಪಾತ್ರಗಳಲ್ಲಿ ಜ್ಯೋತಿಶ್‌ ಶೆಟ್ಟಿ, ಸ್ವರಾಜ್ ಶೆಟ್ಟಿ ಇಷ್ಟವಾಗುತ್ತಾರೆ. ಬಹುಭಾಷಾ ನಟ ಸುಮನ್‌ ತಲ್ವಾರ್‌ಗೆ ಜಾಸ್ತಿ ಸ್ಕ್ರೀನ್‌ ಸ್ಪೇಸ್‌ ಸಿಕ್ಕಿಲ್ಲ. ಸೋನು ಗೌಡ ಅವರು ಮೊದಲ ಬಾರಿಗೆ ಭಿನ್ನವಾದ ಅತಿಥಿ ಪಾತ್ರದಲ್ಲಿ ಮಿಂಚಿದ್ಧಾರೆ.

ಮೇಕಿಂಗ್‌ ಹೇಗಿದೆ?

ನಿರ್ದೇಶಕ ರಿಷಿತ್‌ ಶೆಟ್ಟಿ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸುತ್ತಾರೆ. ಕರಾವಳಿ ಸೊಗಡಿನ ಕಥೆಯೊಳಗೆ ಹುಲಿವೇಷವನ್ನು ಬಳಕೆ ಮಾಡಿರುವ ಕ್ರಮ ಚೆನ್ನಾಗಿದೆ. ಮಾರ್ನಮಿ ಆಚರಣೆ, ಹುಲಿವೇಷದ ಕುಣಿತ, ಅದಕ್ಕೆ ಬೇಕಾದ ತಯಾರಿಗಳು ಎಲ್ಲವೂ ಗಮನಸೆಳೆಯುತ್ತವೆ. ಬರವಣಿಗೆ ಇನ್ನಷ್ಟು ಮೊನಚಾಗಿದ್ದರೆ, ಮಾರ್ನಮಿ ಸಂಭ್ರಮ ಇನ್ನೂ ಜೋರಿರುತ್ತಿತ್ತು. ಚೇತು ಮತ್ತು ದೀಕ್ಷಾ ಪಾತ್ರಗಳನ್ನು ಬರೆದಿರುವ ರೀತಿ ಕೂಡ ಉತ್ತಮವಾಗಿದೆ. ಆದರೆ ಆರಂಭದಲ್ಲಿದ್ದ ಓಘವನ್ನು ದ್ವಿತೀಯಾರ್ಧದಲ್ಲೂ ಕಾಯ್ದುಕೊಳ್ಳಬೇಕಿತ್ತು. ಚರಣ್‌ ರಾಜ್‌ ಅವರ ಸಂಗೀತ ಈ ಸಿನಿಮಾದ ಮುಖ್ಯ ಆಸ್ತಿ. ಹಿನ್ನೆಲೆ ಸಂಗೀತದಲ್ಲಿ ಮೋಡಿ ಮಾಡುವ ಅವರು ಕಥೆಗೆ ಹೊಂದಿಕೆಯಾಗುವಂತಹ ಹಾಡುಗಳನ್ನು ಕೂಡ ನೀಡಿದ್ದಾರೆ. ಶಿವಸೇನ ಅವರ ಛಾಯಾಗ್ರಹಣ ಮೆಚ್ಚುವಂತಿದೆ.