ಸಿಎಂ ಆಗುವ ಸುಳಿವು 2024ರಲ್ಲೇ ನೀಡಿದ್ದ ದಳಪತಿ ವಿಜಯ್: 'TN CM 2026' ನಂಬರ್ ಪ್ಲೇಟ್‌ನ ಕಾರ್ ಚಲಾಯಿಸುವ ದೃಶ್ಯ ವೈರಲ್
ತಮಿಳುನಾಡಿನ ರಾಜಕೀಯದಲ್ಲಿ ದೀರ್ಘಕಾಲ ಪ್ರಭಾವ ಬೀರಿದ್ದ ಡಿಎಂಕೆ ಭದ್ರಕೋಟೆಯನ್ನು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಭೇದಿಸಿ ಐತಿಹಾಸಿಕ ಸಾಧನೆ ಮಾಡಿದೆ. 2024ರಲ್ಲಿ ಪ್ರಾರಂಭವಾದ ಈ ಪಕ್ಷವು 2026ರ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 2024ರಲ್ಲಿ ತೆರೆಕಂಡ ವಿಜಯ್ ಅವರ ‘GOAT’ ಚಿತ್ರದ ದೃಶ್ಯ ಈಗ ನಿಜವಾಗಿರುವುದು ವಿಶೇಷ. ಬಹುಮತಕ್ಕೆ ಸ್ವಲ್ಪ ಕೊರತೆ ಇದ್ದರೂ, ಕಾಂಗ್ರೆಸ್ ಸೇರಿ ಇತರ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಸಾಧ್ಯತೆ ಹೆಚ್ಚಿದೆ. ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದ ವಿಜಯ್ ಅವರ ಈ ಯಶಸ್ಸು ದಕ್ಷಿಣ ಭಾರತದ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.
ನಟ ವಿಜಯ್ ಮತ್ತು ಗೋಟ್ ಚಿತ್ರದಲ್ಲಿನ ಕಾರು (ಸಂಗ್ರಹ ಚಿತ್ರ) -
ಚೆನ್ನೈ, ಮೇ 5: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ಡಿಎಂಕೆ (DMK) ಭದ್ರಕೋಟೆಯನ್ನು ಭೇದಿಸುವ ಮೂಲಕ ನಟ ವಿಜಯ್ (Vijay) ಮತ್ತು ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಭರ್ಜರಿ ಪದಾರ್ಪಣೆ ಮಾಡಿದೆ. 50 ವರ್ಷಗಳ ದ್ರಾವಿಡ ರಾಜಕೀಯದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಬದಲಾವಣೆ ಎನಿಸಿಕೊಂಡಿದೆ. 2024ರಲ್ಲಿ ವಿಜಯ್ ಟಿವಿಕೆಯನ್ನು ಪ್ರಾರಂಭಿಸಿದಾಗ ಅವರು 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಊಹೆಗಳಿದ್ದವು. ಅವರ ಸೂಪರ್ ಹಿಟ್ ಚಿತ್ರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT)' ಬಿಡುಗಡೆಯಾದಾಗ ಅದರಲ್ಲಿ ಅವರ ರಾಜಕೀಯ ಮಹತ್ವಾಕಾಂಕ್ಷೆಯ ಸುಳಿವು ಇತ್ತು ಎಂಬುದು ಈಗ ಸಾಬೀತಾಗಿದೆ.
ಈ ಚಿತ್ರದ ಒಂದು ಕಿರು ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ವಿಜಯ್ 'TN 07 CM 2026' ಎಂಬ ನೋಂದಣಿ ಸಂಖ್ಯೆ ಹೊಂದಿರುವ ಕಾರನ್ನು ಚಲಾಯಿಸುತ್ತಿರುವುದು ಕಂಡುಬಂದಿದೆ. ಇಲ್ಲಿ 'TN' ಎಂದರೆ ತಮಿಳುನಾಡು ಮತ್ತು 'CM 2026' ಎಂದರೆ 2026ರ ಮುಖ್ಯಮಂತ್ರಿ ಎಂಬರ್ಥವನ್ನು ಅಭಿಮಾನಿಗಳು ಆಗಲೇ ವಿಶ್ಲೇಷಿಸಿದ್ದರು. ವಿಜಯ್ ಅವರ ಸಹನಟ ಪ್ರೇಮ್‌ಜಿ ಅಮರನ್ ಕೂಡ ಈ ಹಿಂದೆ, "2026ರಲ್ಲಿ ವಿಜಯ್ ಖಂಡಿತವಾಗಿಯೂ ತಮಿಳುನಾಡಿನ ಸಿಎಂ ಆಗಲಿದ್ದಾರೆ, ಕಾದು ನೋಡಿ" ಎಂದು ಭವಿಷ್ಯ ನುಡಿದಿದ್ದರು. ಅಮರನ್ ಅವರ ಮಾತುಗಳು ಈಗ ನಿಜವಾಗಿದ್ದು, ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಲಿರುವ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗಲಿದ್ದಾರೆ.
ʼಗೋಟ್ʼ ಚಿತ್ರದ ದೃಶ್ಯ:
TVK formed in Feb 2024
— Fundamental Investor ™ 🇮🇳 (@FI_InvestIndia) May 4, 2026
The Greatest of All Time release Sep 2024
Look at the Car number.
TN 07 CM 2026 ❤️❤️❤️
The Election Results came out First in Theatre Screens 🔔
Peak Detailing by @vp_offl Venkat Prabhu in Thalapathy Vijay movie GOAT 🔥🔥🔥#FI pic.twitter.com/Uv5M7RZR5A
234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ಇನ್ನು ಕೇವಲ 10 ಸ್ಥಾನಗಳ ಕೊರತೆಯಿದ್ದು, ಮೈತ್ರಿ ಮಾತುಕತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಸ್ತುತ ಡಿಎಂಕೆ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್ (5 ಸ್ಥಾನಗಳು), ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಪಕ್ಷಗಳು ವಿಜಯ್ ಅವರಿಗೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ವಿಜಯ್ ಸ್ವತಃ ತಿರುಚಿ (ಪೂರ್ವ) ಮತ್ತು ಪೆರಂಬೂರ್ ಎಂಬ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.
ಅಸ್ಸಾಂ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನಿಂದ ಗೆದ್ದ 19 ಶಾಸಕರಲ್ಲಿ 18 ಮಂದಿ ಮುಸ್ಲಿಮರು!
ರಾಜಕೀಯ ಲೆಕ್ಕಾಚಾರಗಳ ಪ್ರಕಾರ, ವಿಜಯ್ ತಿರುಚಿ (ಪೂರ್ವ) ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಪೆರಂಬೂರ್ ಕ್ಷೇತ್ರವನ್ನು ತಮ್ಮ ಬಳಿ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಸಿನಿಮಾ ರಂಗದ ಯಶಸ್ಸಿನ ನಂತರ ರಾಜಕೀಯದಲ್ಲಿಯೂ ವಿಜಯ್ ಅಷ್ಟೇ ಪ್ರಭಾವಶಾಲಿಯಾಗಿ ಹೊರಹೊಮ್ಮಿರುವುದು ದಕ್ಷಿಣ ಭಾರತದ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಅವರ ಈ ಗೆಲುವು ತಮಿಳುನಾಡಿನ ರಾಜಕೀಯ ಸಮೀಕರಣಗಳನ್ನು ಸಂಪೂರ್ಣವಾಗಿ ಬದಲಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲ ಮೂಡಿಸಿದೆ.