ʻಟಾಕ್ಸಿಕ್ʼ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರಿಗೆ ಇಲ್ಲಿದೆ ಮತ್ತೊಂದು ಚಾನ್ಸ್, OTT ಅಂಗಳಕ್ಕೆ ಯಶ್ ಸಿನಿಮಾ! ಯಾವಾಗ, ಎಲ್ಲಿ ಪ್ರಸಾರ?
Toxic OTT Release Date: ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ನಟನೆಯ ಬಹುನಿರೀಕ್ಷಿತ ʻಟಾಕ್ಸಿಕ್ʼ ಸಿನಿಮಾವು ಓಟಿಟಿಗೆ ಯಾವಾಗ ಬರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಆ ಕುರಿತ ಮಾಹಿತಿ ಇಲ್ಲಿದೆ.
-
ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರಮಂದಿರಗಳಲ್ಲಿ ತೆರೆಕಂಡ ಕೆಲವೇ ವಾರಗಳಲ್ಲಿ ಒಟಿಟಿ ಅಂಗಳಕ್ಕೆ ಕಾಲಿಡಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಸಾಧ್ಯವಾಗದ ಪ್ರೇಕ್ಷಕರಿಗೆ ಮನೆಯಲ್ಲೇ ಕುಳಿತು ಕಣ್ತುಂಬಿಕೊಳ್ಳುವ ಅವಕಾಶ ಶೀಘ್ರದಲ್ಲೇ ಒದಗಿಬರಲಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವು ಸೆಪ್ಟೆಂಬರ್ 25 ರಂದು ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ‘ಜೀ5’ (ZEE5) ಮೂಲಕ ಡಿಜಿಟಲ್ ಲೋಕದಲ್ಲಿ ಪ್ರಸಾರವಾಗುವ ನಿರೀಕ್ಷೆಯಿದೆ. ಆದರೆ, ಈ ಬಿಡುಗಡೆ ದಿನಾಂಕ ಕುರಿತಂತೆ ಚಿತ್ರತಂಡವಾಗಲಿ ಅಥವಾ ‘ಜೀ5’ ಸಂಸ್ಥೆಯಾಗಲಿ ಇನ್ನಷ್ಟೇ ಅಧಿಕೃತ ಘೋಷಣೆ ಹೊರಡಿಸಬೇಕಿದೆ.
ಕಲೆಕ್ಷನ್ ವಿಚಾರದಲ್ಲಿ ಕುಸಿತ
ಬಾಕ್ಸ್ ಆಫೀಸ್‌ನಲ್ಲಿ ಆರಂಭದಲ್ಲಿ ಭರ್ಜರಿ ಓಪನಿಂಗ್ ಪಡೆದಿದ್ದ ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾ, ಆ ಬಳಿಕ ಕಲೆಕ್ಷನ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿತು. ಮೊದಲ ವಾರದಲ್ಲಿ 239.30 ಕೋಟಿ ಗಳಿಸಿ ದಾಲಲೆ ಬರೆದಿದ್ದ ಈ ಸಿನಿಮಾ, ಎರಡನೇ ವಾರಕ್ಕೆ ಕೇವಲ 8.94 ಕೋಟಿ ಗಳಿಸಲಷ್ಟೇ ಶಕ್ತವಾಗಿ ಶೇಕಡ 95ಕ್ಕಿಂತ ಹೆಚ್ಚಿನ ಕುಸಿತ ಕಂಡಿತು. ಚಿತ್ರಮಂದಿರಗಳಲ್ಲಿ ಪ್ರದರ್ಶನಗಳ ಸಂಖ್ಯೆಯಲ್ಲೂ ಭಾರಿ ಇಳಿಕೆ ದಾಖಲಾಗಿದ್ದು, ಮೊದಲ ದಿನ ಭಾರತದಾದ್ಯಂತ ಬರೋಬ್ಬರಿ 24,579 ಶೋಗಳನ್ನು ಕಂಡಿದ್ದ ಈ ಸಿನಿಮಾ, 21ನೇ ದಿನಕ್ಕೆ ತಲುಪುವ ವೇಳೆಗೆ ಕೇವಲ 248 ಶೋಗಳಿಗೆ ಕುಸಿಯುವ ಮೂಲಕ ಶೇಕಡ 99ರಷ್ಟು ಪ್ರದರ್ಶನಗಳನ್ನು ಕಳೆದುಕೊಂಡಿತ್ತು.
ದ್ವಿಪಾತ್ರದಲ್ಲಿ ಯಶ್ ನಟನೆ
‘ಕೆಜಿಎಫ್ 2’ ನಂತರ ಯಶ್ ಅವರ ಬಹುನಿರೀಕ್ಷಿತ ಚಿತ್ರವಾಗಿದ್ದರಿಂದ ‘ಟಾಕ್ಸಿಕ್’ ಮೇಲೆ ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆಗಳಿದ್ದವು. ಗೋವಾದ ಹಿನ್ನೆಲೆಯಲ್ಲಿ ಅಂಡರ್‌ವರ್ಲ್ಡ್ ಡ್ರಗ್ ಕಾರ್ಟೆಲ್ ಜಾಲದ ಸುತ್ತ ಸಾಗುವ ಈ ಸಿನಿಮಾದಲ್ಲಿ ಯಶ್ ಗ್ಯಾಂಗ್‌ಸ್ಟರ್ ‘ರಾಯ’ ಹಾಗೂ ಆತನ ಮಗ ‘ಟಿಕೆಟ್’ ಎಂಬ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ನಟಿ ನಯನತಾರಾ ಸಹೋದರಿ ಗಂಗಾ ಪಾತ್ರದಲ್ಲಿ ನಟಿಸಿದ್ದರು. ವರದಿಯಂತೆ ಸೆಪ್ಟೆಂಬರ್ 25 ರಂದೇ ಒಟಿಟಿಗೆ ಬಂದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ ಒಂದು ತಿಂಗಳೊಳಗೆ ʻಟಾಕ್ಸಿಕ್ʼ ಡಿಜಿಟಲ್ ಪ್ರವೇಶ ಪಡೆದಂತಾಗುತ್ತದೆ.
Toxic Movie: ಚಿಂತೆಯಲ್ಲಿ ಕೂರಬೇಡಿ! ʼಟಾಕ್ಸಿಕ್ʼ ಸಿನಿಮಾ ಬಗ್ಗೆ ಆಪ್ತ ಸ್ನೇಹಿತನ ಬಳಿ ಯಶ್ ಹೇಳಿದ್ದೇನು?
ಮತ್ತೊಂದೆಡೆ, ಈ ಚಿತ್ರದ ಡಿಜಿಟಲ್ ಹಕ್ಕುಗಳ ಒಪ್ಪಂದದ ಸುತ್ತ ಹಲವು ದಿನಗಳಿಂದ ಚರ್ಚೆಗಳು ನಡೆಯುತ್ತಿವೆ. ವರದಿಗಳ ಪ್ರಕಾರ, ಒಟಿಟಿ ಸಂಸ್ಥೆಯೊಂದು ಆರಂಭದಲ್ಲಿ ₹150 ಕೋಟಿ ಆಫರ್ ನೀಡಿತ್ತಾದರೂ, ಚಿತ್ರತಂಡ ₹200 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿತ್ತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಗಳಿಕೆ ಗಣನೀಯವಾಗಿ ತಗ್ಗಿದ ಕಾರಣ ಒಟಿಟಿ ಸಂಸ್ಥೆಗಳು ತಮ್ಮ ಆಫರ್ ಮೊತ್ತವನ್ನು ಮತ್ತಷ್ಟು ಕಡಿತಗೊಳಿಸಿವೆ ಎನ್ನಲಾಗಿದೆ. ಅಲ್ಲದೆ, ಡಿಜಿಟಲ್ ವೀಕ್ಷಕರಿಗಾಗಿ ಚಿತ್ರದ ಹೊಸ ವರ್ಷನ್ ಅನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ವದಂತಿಗಳೂ ಹರಿದಾಡುತ್ತಿದ್ದು, ಈ ಎಲ್ಲದರ ಕುರಿತು ಚಿತ್ರತಂಡದಿಂದಲೇ ಅಧಿಕೃತವಾಗಿ ಸ್ಪಷ್ಟನೆ ಹೊರಬೀಳಬೇಕಿದೆ.
ಕೆವಿಎನ್ ಪ್ರೊಡಕ್ಷನ್ಸ್, ಮಾನ್‌ಸ್ಟರ್ ಮೈಂಡ್ ಕ್ರಿಯೆಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ಸುದೇವ್ ನಾಯರ್ ಮುಂತಾದವರು ನಟಿಸಿದ್ದರು. ರವಿ ಬಸ್ರೂರು ಸಂಗೀತ ನೀಡಿದ್ದ ಈ ಚಿತ್ರಕ್ಕೆ ರಾಜೀವ್ ರವಿ ಅವರು ಛಾಯಾಗ್ರಹಣ ಮಾಡಿದ್ದರು.