ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಶಾಂತಿ ಕ್ರಾಂತಿʼ ಸಿನಿಮಾದಲ್ಲಿ ಬಾಲ ನಟಿ, ʻಯಾರೇ ನೀನು ಚೆಲುವೆʼ ಚಿತ್ರದಲ್ಲಿ ರವಿಚಂದ್ರನ್‌ಗೆ ನಾಯಕಿ; ಮಲಯಾಳಂನ ಸಂಗೀತಾ ಮಾಧವನ್‌ ಬಗ್ಗೆ ನಿಮಗೆಷ್ಟು ಗೊತ್ತು?

'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ 'ಶಾಂತಿ ಕ್ರಾಂತಿ' ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ಮಲಯಾಳಂ ನಟಿ ಸಂಗೀತಾ ಮಾಧವನ್ ನಾಯರ್, ಮುಂದೆ 'ಯಾರೇ ನೀನು ಚೆಲುವೆ' ಚಿತ್ರದಲ್ಲಿ ಅವರಿಗೆ ನಾಯಕಿಯಾಗಿದ್ದ ಸುಂದರ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ʻಶಾಂತಿ ಕ್ರಾಂತಿʼ ಸಿನಿಮಾದ ಬಾಲ ನಟಿಯಾಗಿದ್ದ ಸಂಗೀತಾ ಮಾಧವನ್‌ ಈಗ ಏನಂದ್ರು?

-

Avinash GR
Avinash GR Aug 11, 2026 2:13 PM

ಕನ್ನಡ ಚಿತ್ರರಂಗದಲ್ಲಿ ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಅವರ ಬಿಗ್ ಬಜೆಟ್ ಸಿನಿಮಾ ‘ಶಾಂತಿ ಕ್ರಾಂತಿ’ಯನ್ನು ಮರುಬಿಡುಗಡೆ ಮಾಡಬೇಕೆಂಬ ಕೂಗು ಅಭಿಮಾನಿಗಳಿಂದ ಜೋರಾಗಿ ಕೇಳಿಬರುತ್ತಿದೆ. ಈ ನಡುವೆ, ಈ ಸಿನಿಮಾದಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಸಂಗೀತಾ ಮಾಧವನ್ ನಾಯರ್ ಅವರು ಅಂದಿನ ಸವಿನೆನಪುಗಳನ್ನು ಮೆಲುಕು ಹಾಕುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಬಾಲನಟಿಯಿಂದ ನಾಯಕಿಯವರೆಗಿನ ಪಯಣ

1976ರಲ್ಲಿ ಜನಿಸಿದ ಸಂಗೀತಾ ಅವರು ಕೇವಲ 2 ವರ್ಷದ ಮಗುವಾಗಿದ್ದಾಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಮಲಯಾಳಂ ಚಿತ್ರರಂಗದಲ್ಲಿ ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿದ ಇವರು, 1991ರಲ್ಲಿ ತೆರೆಕಂಡ ರವಿಚಂದ್ರನ್ ಅವರ 'ಶಾಂತಿ ಕ್ರಾಂತಿ' ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯಗೊಂಡರು. ಅದಾಗಿ ಏಳು ವರ್ಷಗಳ ನಂತರ, ಅಂದರೆ 1998ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ 'ಯಾರೇ ನೀನು ಚೆಲುವೆ' ಸಿನಿಮಾದಲ್ಲಿ ಸ್ವತಃ ರವಿಚಂದ್ರನ್ ಅವರಿಗೇ ನಾಯಕಿಯಾಗಿ ನಟಿಸಿದ್ದು ವಿಶೇಷ.

ನನಗೆ ಸಿಕ್ಕ ದೊಡ್ಡ ಆಶೀರ್ವಾದ

"ಶಾಂತಿ ಕ್ರಾಂತಿ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ ನಾನು, ಮುಂದೆ ಅದೇ ರವಿಚಂದ್ರನ್ ಅವರಿಗೆ ನಾಯಕಿಯಾಗುತ್ತೇನೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಇದು ನನ್ನ ಜೀವನಕ್ಕೆ ಸಿಕ್ಕ ದೊಡ್ಡ ಆಶೀರ್ವಾದ" ಎಂದು ಸಂಗೀತಾ ಸಂತಸ ವ್ಯಕ್ತಪಡಿಸಿದ್ದಾರೆ.

ಸೆಟ್‌ನಲ್ಲಿ ಐಸ್‌ಕ್ರೀಮ್ ತಂದುಕೊಡುತ್ತಿದ್ದರು

ರವಿಚಂದ್ರನ್ ಅವರ ಜೊತೆಗಿನ ಕೆಲಸದ ಅನುಭವವನ್ನು ಹಂಚಿಕೊಂಡ ಸಂಗೀತಾ, "ಯಾರೇ ನೀನು ಚೆಲುವೆ ಸಿನಿಮಾದಲ್ಲಿ ನಾನು ನಾಯಕಿಯಾದ ಮೇಲೆಯೂ ರವಿಚಂದ್ರನ್ ಸರ್ ನನ್ನನ್ನು ಮಗುವಿನಂತೆಯೇ ನೋಡಿಕೊಳ್ಳುತ್ತಿದ್ದರು. ಶೂಟಿಂಗ್ ಸೆಟ್‌ನಲ್ಲಿ ನನಗಾಗಿ ಐಸ್‌ಕ್ರೀಮ್ ತಂದುಕೊಡುತ್ತಿದ್ದುದು ಇಂದಿಗೂ ನೆನಪಿದೆ. ಅವರು ಸಿನಿಮಾ ಮಾಡುವ ಶೈಲಿ, ಮೇಕಿಂಗ್ ಮತ್ತು ಚಿತ್ರರಂಗದ ಮೇಲಿನ ಅವರ ಕಾಳಜಿ ನನಗಿಷ್ಟ. ನನ್ನ ಪಾಲಿಗೆ ಅವರು ಎಂದಿಗೂ ರಿಯಲ್ ಹೀರೋ" ಎಂದು ಹೇಳಿದ್ದಾರೆ.

‘ಶಾಂತಿ ಕ್ರಾಂತಿ ಸಿನಿಮಾವನ್ನು ರೀ-ರಿಲೀಸ್ ಮಾಡ್ತೀವಿ' ಎಂದ ವಿಕ್ರಮ್‌ ರವಿಚಂದ್ರನ್; ಆದರೆ, ಇದರ ಹಿಂದಿರುವ ಸವಾಲುಗಳೇನು?

28 ವರ್ಷಗಳ ನಂತರ ಕನ್ನಡಕ್ಕೆ ಕಂಬ್ಯಾಕ್:

2000ರಲ್ಲಿ ಶರವಣನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಂಗೀತಾ ಅವರು ನಟನೆಯಿಂದ ಸುದೀರ್ಘ ವಿರಾಮ ಪಡೆದಿದ್ದರು. 2023ರ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು, ಸುದೀರ್ಘ 28 ವರ್ಷಗಳ ನಂತರ ‘ಸೆಲೆಬ್ರಿಟಿ’ ಎಂಬ ಹೊಸ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಅಂದಹಾಗೆ, 1998ರಲ್ಲಿ ʻಚಿಂತಾವಿಷ್ಟಯಾಯ ಶ್ಯಾಮಲಾʼ ಸಿನಿಮಾದ ನಟನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಇದೇ ವೇಳೆ ‘ಶಾಂತಿ ಕ್ರಾಂತಿ’ ಮರುಬಿಡುಗಡೆಯ ಟ್ರೆಂಡ್ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸಿನಿಮಾ ರೀ-ರಿಲೀಸ್ ಆಗುತ್ತಿರುವ ಸುದ್ದಿ ಕೇಳಿ ನಿಜಕ್ಕೂ ತುಂಬಾ ಖುಷಿಯಾಯಿತು. ಅದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ ನಾನು ಖಂಡಿತವಾಗಿಯೂ ಥಿಯೇಟರ್‌ಗೆ ಹೋಗಿ ವೀಕ್ಷಿಸುತ್ತೇನೆ" ಎಂದು ತಿಳಿಸಿದ್ದಾರೆ.