ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TN Seetharam: ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಲು ತಯಾರಾದ ಟಿ.ಎನ್. ಸೀತಾರಾಮ್

ಕನ್ನಡದ ಶ್ರೇಷ್ಠ ಕಾದಂಬರಿ, ನಾಟಕ ಹಾಗೂ ಕಥೆಗಳಿಗೆ ಧಾರಾವಾಹಿ ರೂಪ ಕೊಡಲು ಸೀತಾರಾಮ್ ಅವರು ಮುಂದಾಗಿದ್ದಾರೆ. ಈರೀತಿಯ ಕಥೆಗಳನ್ನ ಸರಳ ಎಪಿಸೋಡ್‌ಗಳಂತೆ ಚಿತ್ರೀಕರಿಸಿ ಬಳಿಕ ಅದನ್ನ ಭೂಮಿಕಾ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಧಾರಾವಾಹಿಯಾಗಿ ಪ್ರಸಾರ ಮಾಡುವ ಪ್ಲಾನ್ ಇವರದ್ದು.

ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಲು ತಯಾರಾದ TN ಸೀತಾರಾಮ್

TN Seetharam

Profile Vinay Bhat Aug 16, 2025 7:45 AM

ಕಿರಿತೆರೆ ಲೋಕದ ದಿಗ್ಗಜ ಟಿ.ಎನ್. ಸೀತಾರಾಮ್ (TN Seetharam) ಅವರ ಧಾರಾವಾಹಿಯನ್ನು ನೋಡಲು ಜನರು ಇಂದೂ ಕಾತದಿಂದ ಕಾಯುತ್ತಿದ್ದಾರೆ. ಯಾಕೆಂದರೆ ಜನರಿಗೆ ಅವರು ಈ ಹಿಂದೆ ಮಾಡಿದ ಧಾರಾವಾಹಿಗಳು ಅಷ್ಟರ ಮಟ್ಟಿಗೆ ಇಂಪ್ಯಾಕ್ಟ್ ಮಾಡಿದೆ. ಮುಕ್ತ ಮುಕ್ತ ಧಾರಾವಾಹಿ ಇಂದೂ ಕಿರುತೆರೆ ಪ್ರೇಕ್ಷಕರ ಮನಸಿನಲ್ಲಿ ಹಾಗೇ ಉಳಿದಿದೆ. ಇದರ ಜೊತೆಗೆ ಮಾಯಾಮೃಗ, ಮನ್ವಂತರ, ಮಗಳು ಜಾನಕಿ ಮುಂತಾದ ಸೀರಿಯಲ್​​ಗಳಿಂದ ಸೀತಾರಾಮ್​​ ಅವರು ಕರ್ನಾಟಕದಲ್ಲಿ ಮನೆಮಾತಾದರು. ಇದೀಗ ಕನ್ನಡ ಟೆಲಿವಿಷನ್ ಲೋಕದಲ್ಲಿ ಮಹತ್ವದ ಹೆಜ್ಜೆಯೊಂದನ್ನಿಡಲು ಟಿ.ಎನ್‌. ಸೀತಾರಾಮ್ ಮುಂದಾಗಿದ್ದಾರೆ.

ಕನ್ನಡದ ಶ್ರೇಷ್ಠ ಕಾದಂಬರಿ, ನಾಟಕ ಹಾಗೂ ಕಥೆಗಳಿಗೆ ಧಾರಾವಾಹಿ ರೂಪ ಕೊಡಲು ಸೀತಾರಾಮ್ ಅವರು ಮುಂದಾಗಿದ್ದಾರೆ. ಈರೀತಿಯ ಕಥೆಗಳನ್ನ ಸರಳ ಎಪಿಸೋಡ್‌ಗಳಂತೆ ಚಿತ್ರೀಕರಿಸಿ ಬಳಿಕ ಅದನ್ನ ಭೂಮಿಕಾ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಧಾರಾವಾಹಿಯಾಗಿ ಪ್ರಸಾರ ಮಾಡುವ ಪ್ಲಾನ್ ಇವರದ್ದು. ಇದು ಕೇವಲ ಇವರೊಬ್ಬರಿಂದ ಸಾಧ್ಯವಿಲ್ಲ.. ಹೀಗಾಗಿ ಇದಕ್ಕೆ ವೀರಕಪುತ್ರ ಶ್ರೀನಿವಾಸ್ ಹಾಗೂ ಜೋಗಿ ಕೂಡ ಕೈ ಜೋಡಿಸಿದ್ದಾರೆ. ಈ ಬಗ್ಗೆ ಟಿ ಎನ್‌ ಸೀತಾರಾಮ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

‘‘ನಮಸ್ಕಾರ, ಹಿಂದೆ ನಮ್ಮ ಚಿತ್ರಕೂಟ ಸಂಸ್ಥೆಯಿಂದ ಕತೆಗಾರ ಎಂಬ ಕನ್ನಡದ ಶ್ರೇಷ್ಠ ಕಥೆಗಳ ಮಾಲಿಕೆಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದ್ದೆವು. ಈಗ ಮತ್ತೊಂದು ಮಹತ್ವದ ಯೋಜನೆ ನಮ್ಮ ಮುಂದೆ ಇದೆ. ಕನ್ನಡದ, ಭಾರತದ ಮತ್ತು ಜಗತ್ತಿನ ಕೆಲವು ಸೂಕ್ತವಾದ ಶ್ರೇಷ್ಠ ಕಾದಂಬರಿ, ನಾಟಕ ಮತ್ತು ಕಥೆಗಳನ್ನು ಸರಳ ಎಪಿಸೋಡುಗಳಂತೆ ಚಿತ್ರೀಕರಿಸಿ ಭೂಮಿಕಾ ಟಾಕೀಸ್ (ಯೂಟ್ಯೂಬ್) ನಲ್ಲಿ ಧಾರಾವಾಹಿಯಾಗಿ ಪ್ರಸಾರ ಮಾಡುವ ಯೋಜನೆ ಇದೆ.’’



‘‘ಇದೆಲ್ಲವೂ ಭಾಷಾಂತರವಾಗಿರುವುದಿಲ್ಲ. ಬದಲಿಗೆ ಭಾವಾಂತರವಾಗಿರುತ್ತವೆ. ಅವೆಲ್ಲವನ್ನೂ ನಮ್ಮ ನಾಡಿನ ಬದುಕಾಗಿ, ನಮ್ಮ ಕನ್ನಡದ ಆಡು ಭಾಷೆಯಾಗಿ, ನಮ್ಮ ನಾಡಿನ ದೇಸೀ ಪಾತ್ರಗಳ ಮೂಲಕವೇ ಇವನ್ನು ಧಾರಾವಾಹಿಯಾಗಿ ಚಿತ್ರಿಸಲಿದ್ದೇವೆ. ಅವು ಕನ್ನಡದ ಧಾರಾವಾಹಿಯಾಗಿ ಕಾಣಲಿದೆ. ಕನ್ನಡದ ಖ್ಯಾತ ಪುಸ್ತಕ ಸಂಸ್ಥೆ ವೀರಲೋಕದ ಜಾದೂಗಾರ ವೀರಕಪುತ್ರ ಶ್ರೀನಿವಾಸ್ ನಮ್ಮ ಬೆನ್ನಿಗೆ ನಿಂತು ಇದನ್ನು ನಿರ್ಮಿಸಲಿದ್ದಾರೆ.’’

‘‘ಪ್ರಸಿದ್ಧ ಬರಹಗಾರ ಮತ್ತು ವಿಮರ್ಶಕ ಜೋಗಿಯವರು ಇದರ ಪ್ರಧಾನ ವಿನ್ಯಾಸ ಮತ್ತು ಕಥೆಗಳ ಆಯ್ಕೆಯ ಹೊಣೆ ಹೊರಲಿದ್ದಾರೆ. ಹೊಸ ತಲೆಮಾರಿನ ಆಧುನಿಕ ಲೋಕದ ಅನೇಕ ನಿರ್ದೇಶಕರನ್ನು ಬರಹಗಾರರನ್ನು ಮತ್ತು ನಿರ್ಮಾಣ ಸಂಸ್ಥೆಗಳನ್ನು ಈ ಮಹತ್ವದ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಯೋಚನೆ ಇದೆ. ಕನ್ನಡ ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರು ಇದಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ.’’

‘‘ಈ ಅಪರೂಪದ, ಮಹತ್ವದ ಯೋಜನೆ ಬಗ್ಗೆ ನಿಮಗೆ ಏನನ್ನಿಸುತ್ತದೆ ದಯವಿಟ್ಟು ಒಂದು ಅಥವಾ ಎರಡು ವಾಕ್ಯಗಳಲ್ಲಿ ತಿಳಿಸಿ. ಹಾಗೆಯೇ ಸುಮಾರು ಸಾವಿರ ಅಥವಾ ಅದಕ್ಕಿಂತ ಹೆಚ್ಚು ಎಪಿಸೋಡುಗಳು ಇರಬಹುದಾದ ಈ ಮಹತ್ವದ ಧಾರಾವಾಹಿಗೆ ಒಂದು ಸುಂದರ ಹೆಸರನ್ನು ದಯಮಾಡಿ ಸೂಚಿಸ ಬಲ್ಲಿರಾ?’’ ಎಂದು ಸೋಶಿಯಲ್ ಮೀಡಿಯಾದಲ್ಲಿ ಟಿ.ಎನ್. ಸೀತಾರಾಮ್ ಅವರು ಪೋಸ್ಟ್ ಮಾಡಿದ್ದಾರೆ.

BBK 12: ಲೋಗೋ ಜೊತೆಗೆ ಈ ಬಾರಿಯ ಬಿಗ್ ಬಾಸ್ ಕಾನ್ಸೆಪ್ಟ್​ನ ಹಿಂಟ್ ಕೊಟ್ಟ ಕಲರ್ಸ್?