ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

666 Operation Dream Theatre: ʻನಾನಿಲ್ಲಿ ಡಿಸೆಂಟ್‌ ಬಾಂಡ್‌ʼ ಎಂದ ಶಿವಣ್ಣ,‌ ʻಏಜೆಂಟ್‌ ಶಂಕರ್‌ʼ ಆಗಿ ಬಂದ ʻಡಾಲಿʼ ಧನಂಜಯ್‌!

ಡಾ. ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿರುವ, ಹೇಮಂತ್ ಎಂ. ರಾವ್ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ರೋಮಾಂಚನಕಾರಿ ರೆಟ್ರೋ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶಿವಣ್ಣ 'ಏಜೆಂಟ್ ಪ್ರಕಾಶ್' ಆಗಿ ಹಾಗೂ ಧನಂಜಯ್ 'ಏಜೆಂಟ್ ಶಂಕರ್' ಆಗಿ ಪತ್ತೇದಾರಿ ಪ್ರಪಂಚದ ರಹಸ್ಯ ಕಾರ್ಯಾಚರಣೆಗೆ ಇಳಿದಿದ್ದಾರೆ.

ಶಿವಣ್ಣ- ಡಾಲಿಯ ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಸಿನಿಮಾದ ಟೀಸರ್‌ ಹೇಗಿದೆ?

-

Avinash GR
Avinash GR Jul 3, 2026 7:58 PM

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ, ಡಾ. ಶಿವರಾಜ್‌ಕುಮಾರ್‌ ಮತ್ತು ಡಾಲಿ ಧನಂಜಯ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರದ ಮೊದಲ ಟೀಸರ್‌ ಬಿಡುಗಡೆಯಾಗಿದೆ. 'ಸಪ್ತಸಾಗರದಾಚೆ ಎಲ್ಲೊ' ಖ್ಯಾತಿಯ ಹೇಮಂತ್‌ ಎಂ. ರಾವ್‌ ನಿರ್ದೇಶನದ ಈ ಚಿತ್ರವು ರೆಟ್ರೋ ಕಾಲದ ಸ್ಪೈ ಕಥಾಹಂದರ ಹೊಂದಿದ್ದು, ಟೀಸರ್ ಮೂಲಕವೇ ಭಾರಿ ಕುತೂಹಲ ಕೆರಳಿಸಿದೆ.

ಪತ್ತೇದಾರಿ ಪ್ರಪಂಚದ ರೋಮಾಂಚಕ ನೋಟ

ಸುಮಾರು ಎರಡು ನಿಮಿಷಗಳ ಅವಧಿಯ ಈ ಟೀಸರ್, ಚಿತ್ರದ ಕಥೆಯನ್ನು ಸಂಪೂರ್ಣವಾಗಿ ಬಿಟ್ಟುಕೊಡದೆ ಪತ್ತೇದಾರಿ ಪ್ರಪಂಚದ ರಹಸ್ಯ ನೋಟವನ್ನಷ್ಟೇ ತೋರಿಸಿದೆ. ಸ್ಟೈಲಿಶ್ ಹಾಗೂ ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವ ಈ ಟೀಸರ್‌ನಲ್ಲಿ ಶಿವರಾಜ್‌ಕುಮಾರ್ ಅವರು 'ಏಜೆಂಟ್ ಪ್ರಕಾಶ್' ಆಗಿ ಮತ್ತು ಧನಂಜಯ ಅವರು 'ಏಜೆಂಟ್ ಶಂಕರ್' ಆಗಿ ಕಾಣಿಸಿಕೊಂಡಿದ್ದಾರೆ. ರಹಸ್ಯ ಕಾರ್ಯಾಚರಣೆಯ ಹಿನ್ನೆಲೆಯುಳ್ಳ ಈ ಚಿತ್ರದಲ್ಲಿ ಗನ್‌ಫೈಟ್‌ಗಳು, ಭೀಕರ ಸ್ಫೋಟಗಳು ಮತ್ತು ರೋಮಾಂಚಕ ಚೇಸಿಂಗ್ ದೃಶ್ಯಗಳು ಹೈಲೈಟ್ ಆಗಿವೆ.

ರೈತರ ಸಮಸ್ಯೆಗೆ ಧ್ವನಿ ಆಗಲಿದ್ದಾರೆ ಶಿವರಾಜ್‌ಕುಮಾರ್: ವಿಜಯ್‌ ರಾಘವೇಂದ್ರ ನಟನೆಯ 'ಮಹಾನ್' ಚಿತ್ರಕ್ಕೆ 'ಕರುನಾಡ ಚಕ್ರವರ್ತಿ' ಎಂಟ್ರಿ

ಅದ್ವೈತ್ ಗುರುಮೂರ್ತಿ ಅವರ ಅದ್ಭುತ ಛಾಯಾಗ್ರಹಣ ಹಾಗೂ ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಚಿತ್ರದ ಮೂಡ್ ಅನ್ನು ಶ್ರೀಮಂತಗೊಳಿಸಿದೆ. ವಿಶೇಷವಾಗಿ, ಟೀಸರ್‌ನ ಹಲವು ದೃಶ್ಯಗಳಲ್ಲಿ ಶಿವಣ್ಣ ಅವರ ಲುಕ್ ಮತ್ತು ಸ್ಟೈಲಿಂಗ್, ಅವರ ತಂದೆ ಡಾ. ರಾಜ್‌ಕುಮಾರ್ ಅವರ ಕ್ಲಾಸಿಕ್ ಬಾಂಡ್ ಸಿನಿಮಾಗಳಾದ 'ಆಪರೇಷನ್ ಡೈಮಂಡ್ ರ‍್ಯಾಕೆಟ್' ದಿನಗಳನ್ನು ನೆನಪಿಸುವಂತಿದೆ.

ನಾನು ಡಿಸೆಂಟ್ ಬಾಂಡ್

"ಹೇಮಂತ್ ಒಬ್ಬ ಅದ್ಭುತ ನಿರ್ದೇಶಕ. ಧನಂಜಯ್ ಜೊತೆ ಇದು ನನ್ನ 3ನೇ ಹಾಗೂ ಪ್ರಿಯಾಂಕಾ ಜೊತೆ 2ನೇ ಸಿನಿಮಾ. ಬಾಂಡ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಈಜುಕೊಳ, ಹುಡುಗಿಯರು ಇರುತ್ತಾರೆ. ಆದರೆ ಈ ಚಿತ್ರದಲ್ಲಿ ನಾನು ಆ ರೀತಿಯ ಬಾಂಡ್ ಅಲ್ಲ, ಬದಲಿಗೆ ಎಲ್ಲರನ್ನೂ ಒಟ್ಟಿಗೆ ಜೋಡಿಸುವ 'ಡಿಸೆಂಟ್ ಬಾಂಡ್'. ಚಿತ್ರದಲ್ಲಿ ಹೊಸ ವೇಷ ಧರಿಸಿದಾಗ ಆ ಅಟಿಡ್ಯೂಡ್ ಮತ್ತು ಸ್ವಾಗ್ ತಾನಾಗಿಯೇ ಬರುತ್ತದೆ" ಎಂದು ಶಿವಣ್ಣ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

ಚಿತ್ರದಲ್ಲಿ ಹಲವು ಸರ್ಪ್ರೈಸ್‌ಗಳಿವೆ ಎಂದ ಡಾಲಿ

"ನಿರ್ಮಾಪಕ ವೈಶಾಖ್ ಅವರಿಗೆ ಸ್ಯಾಂಡಲ್‌ವುಡ್‌ಗೆ ಸ್ವಾಗತ. ಹೇಮಂತ್ ಅವರು ಮಗು ರಚ್ಚೆ ಹಿಡಿದು ಕೆಲಸ ಮಾಡಿಸಿಕೊಳ್ಳುವ ರೀತಿ ನಟರಿಂದ ಕೆಲಸ ತೆಗಿಸಿಕೊಳ್ಳುತ್ತಾರೆ, ಅವರಿಂದ ತುಂಬಾ ಕಲಿತಿದ್ದೇನೆ. ಶಿವಣ್ಣ ನನಗೆ ಯಾವಾಗಲೂ ದೊಡ್ಡ ಶಕ್ತಿ. ಇದು ಕೇವಲ ಟೀಸರ್ ಅಷ್ಟೇ, ಸಿನಿಮಾದಲ್ಲಿ ಪ್ರೇಕ್ಷಕರಿಗೆ ಭಾರಿ ಸರ್ಪ್ರೈಸ್‌ಗಳು ಕಾದಿವೆ" ಎಂದಿದ್ದಾರೆ ನಟ ಧನಂಜಯ್.

10 ವರ್ಷಗಳ ಹುಡುಕಾಟಕ್ಕೆ ಸಿಕ್ಕ ಪ್ರತಿಫಲ

"ಒಬ್ಬ ಸರಿಯಾದ ನಿರ್ಮಾಪಕರಿಗಾಗಿ ನಾನು ಕಳೆದ 10 ವರ್ಷಗಳಿಂದ ಒದ್ದಾಡಿದ್ದೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕೆ ಅಪ್ಪನ ಸಹಾಯ ಪಡೆದಿದ್ದೆ. ಈಗ ವೈಶಾಖ್ ಅವರಂತಹ ಬೆಂಬಲ ನೀಡುವ ನಿರ್ಮಾಪಕರು ಸಿಕ್ಕಿದ್ದಾರೆ. ನಮ್ಮ ಸೆಟ್‌ಗೆ ಆನೆಬಲ ತಂದಿರುವುದು ಶಿವಣ್ಣ. ಅವರ ಕೆಲಸದ ಮೇಲಿನ ಆಸಕ್ತಿ ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಇದೀಗ ಚಿತ್ರದ ಸಣ್ಣ ಭಾಗವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದೇವೆ" ಎಂದು ನಿರ್ದೇಶಕ ಹೇಮಂತ್ ಎಂ. ರಾವ್ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಶಿವಣ್ಣ, ಧನಂಜಯ್ ಜೊತೆಗೆ ಪ್ರಿಯಾಂಕ ಮೋಹನ್, ಅದಿತಿ ಬಾಲನ್ ಹಾಗೂ ಸುಖ್ವಿಂದರ್ ಸಿಂಗ್ ಒಳಗೊಂಡ ದೊಡ್ಡ ತಾರಾಗಣವಿದೆ. 'ವೈಶಾಕ್ ಜೆ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ. ಗೌಡ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನ, ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಹಾಗೂ ಚರಣ್ ರಾಜ್ ಅವರ ಸಂಗೀತ ನಿರ್ದೇಶನವಿದೆ. ಇಂಚರಾ ಸುರೇಶ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ಈ ವರ್ಷದ ಕೊನೆಯಲ್ಲಿ ಸಿನಿಮಾ ಬೆಳ್ಳಿಪರದೆಗೆ ಅಪ್ಪಳಿಸುವ ನಿರೀಕ್ಷೆಯಿದೆ.