ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ಪುಟ್ಟಣ್ಣನ ಕತ್ತೆ’ ಸಿನಿಮಾ ಆಯ್ಕೆ!
ಆಸ್ಟ್ರೇಲಿಯಾದ ಪ್ರತಿಷ್ಠಿತ ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ಗೆ ‘ಪುಟ್ಟಣ್ಣನ ಕತ್ತೆ’ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿ ಜಾಗತಿಕ ಮನ್ನಣೆ ಪಡೆದಿದೆ. ಸಿದ್ದು ಪೂರ್ಣಚಂದ್ರ ನಿರ್ದೇಶನದ ಈ ಸಿನಿಮಾವು ನಗರಕ್ಕೆ ವಲಸೆ ಬಂದು ಕತ್ತೆ ಹಾಲು ಮಾರಿ ಬದುಕುವ ಗ್ರಾಮೀಣ ಜನರ ನೈಜ, ಸಂಕೀರ್ಣ ಬದುಕಿನ ಕಥೆಯನ್ನು ಹೇಳುತ್ತದೆಯಂತೆ.
-
ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ಕಥಾಹಂದರಗಳ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ಹೊಸ ಸಿನಿಮಾ ‘ಪುಟ್ಟಣ್ಣನ ಕತ್ತೆ’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ. ವಿಶಿಷ್ಟ ಕಥಾವಸ್ತು ಹೊಂದಿರುವ ಈ ಚಿತ್ರವು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್’ಗೆ ಅಧಿಕೃತವಾಗಿ ಆಯ್ಕೆಯಾಗಿದ್ದು, ಜಾಗತಿಕ ವೇದಿಕೆಯಲ್ಲಿ ಪ್ರದರ್ಶನ ಕಾಣಲು ಸಜ್ಜಾಗಿದೆ.
ಇದು ಚಂದನವನಕ್ಕೆ ಹೆಮ್ಮೆ
ಮೆಲ್ಬೋರ್ನ್ ಫಿಲಂ ಫೆಸ್ಟಿವಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಘನತೆ ಹಾಗೂ ಮನ್ನಣೆ ಹೊಂದಿರುವ ವೇದಿಕೆಯಾಗಿದೆ. ವಿಶ್ವಾದ್ಯಂತ ನೂರಾರು ಸಿನಿಮಾಗಳು ಸ್ಪರ್ಧಿಸುವ ಈ ಉತ್ಸವದಲ್ಲಿ ಕೇವಲ ಅತ್ಯುತ್ತಮ ಗುಣಮಟ್ಟದ ಕಂಟೆಂಟ್ ಹೊಂದಿರುವ ಚಿತ್ರಗಳಿಗೆ ಮಾತ್ರ ಪ್ರವೇಶ ಸಿಗುತ್ತದೆ. ಹೀಗಾಗಿ ಅಲ್ಲಿಗೆ ಸಿನಿಮಾ ಆಯ್ಕೆಯಾಗುವುದೇ ಒಂದು ದೊಡ್ಡ ಪ್ರಶಸ್ತಿಗೆ ಸಮಾನ ಎನ್ನಲಾಗುತ್ತದೆ. ಈ ತೀವ್ರ ಪೈಪೋಟಿಯ ನಡುವೆ ಕನ್ನಡದ ನೆಲಮೂಲದ ಕಥೆಯುಳ್ಳ ‘ಪುಟ್ಟಣ್ಣನ ಕತ್ತೆ’ ಸಿನಿಮಾ ಮೆಲ್ಬೋರ್ನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವುದು ಇಡೀ ಚಂದನವನಕ್ಕೆ ಹೆಮ್ಮೆ ತರುವ ಸಂಗತಿಯಾಗಿದೆ.
ಪುಟ್ಟಣ್ಣನ ಪಾತ್ರದಲ್ಲಿ ಭೀಮೇಶ್ ಗೌಡ
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಕತ್ತೆಯೊಂದನ್ನು ಕೇಂದ್ರಬಿಂದುವಾಗಿಟ್ಟುಕೊಂಡು ರೂಪುಗೊಂಡ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಹಳ್ಳಿಗಳಿಂದ ಬಂದು ಕತ್ತೆ ಹಾಲು ಮಾರುವ ಜನರ ಜೀವನ ಹಾಗೂ ಹಳ್ಳಿಯಿಂದ ನಗರಕ್ಕೆ ಕತ್ತೆಯೊಂದಿಗೆ ವಲಸೆ ಬಂದ ಪುಟ್ಟಣ್ಣ ಎಂಬ ವ್ಯಕ್ತಿಯ ಸುತ್ತ ನಡೆಯುವ ಸಂಕೀರ್ಣ, ಭಾವನಾತ್ಮಕ ಮತ್ತು ಆಸಕ್ತಿದಾಯಕ ವಿದ್ಯಮಾನಗಳೇ ಈ ಸಿನಿಮಾದ ತಿರುಳು. ಕಥೆಯ ಬೆನ್ನೆಲುಬಾಗಿರುವ ಪುಟ್ಟಣ್ಣನ ಪಾತ್ರದಲ್ಲಿ ಭೀಮೇಶ್ ಗೌಡ ಅದ್ಭುತವಾಗಿ ಜೀವ ತುಂಬಿದ್ದರೆ, ಅನೀಶ್ ಆರ್ಯನ್ ಚಿತ್ರದ ನಾಯಕನಾಗಿ ವಿಶಿಷ್ಟ ಹಾಗೂ ಸವಾಲಿನ ಪಾತ್ರದಲ್ಲಿ ನಟಿಸಿದ್ದಾರೆ.
ಶೀಘ್ರದಲ್ಲೇ ಈ ಸಿನಿಮಾ ತೆರೆಗೆ
‘ಪೂರ್ಣಚಂದ್ರ ಫಿಲಂಸ್’ ಬ್ಯಾನರ್‌ನಡಿಯಲ್ಲಿ ತನ್ಮಯ್ ಎಸ್. ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿದ್ದು ಪೂರ್ಣಚಂದ್ರ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಉಳಿದ ತಾರಾಗಣದಲ್ಲಿ ಎನ್.ಟಿ. ರಾಮಸ್ವಾಮಿ, ಕವಿತಾ ಕಂಬಾರ್, ವಿಭಾ, ಕಲಾರತಿ ಮಹದೇವ್, ರೋಹಿಣಿ, ರಶ್ಮಿ ಮೈಸೂರ್, ಲಕ್ಕಿ ಶಂಕರ್, ವಾಸು, ರಾಕಿ, ಮಂಡ್ಯ ಸಿದ್ದು ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ತಾಂತ್ರಿಕವಾಗಿ ರಾಜು ಹೆಮ್ಮಿಗೆಪುರ ಅವರ ಛಾಯಾಗ್ರಹಣ, ಅನಂತ್ ಆರ್ಯನ್ ಅವರ ಸಂಗೀತ ನಿರ್ದೇಶನ ಹಾಗೂ ದೀಪು ಸಿ.ಎಸ್. ಅವರ ಸಂಕಲನ ಈ ಚಿತ್ರಕ್ಕಿದೆ. ಸದ್ಯ ಜಾಗತಿಕ ವೇದಿಕೆಯಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಎದುರು ಬರಲಿದೆ.