ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವರ್ಷಾನುಗಟ್ಟಲೇ ಸಿನಿಮಾ ಶೂಟಿಂಗ್‌ ಮಾಡೋರಿಗೆ 94 ವರ್ಷದ ಸಿಂಗೀತಂ ಶ್ರೀನಿವಾಸ ರಾವ್ ಟಾಂಗ್‌;‌ 77 ದಿನಗಳಲ್ಲಿ ʻಸಿಂಗ್‌ ಗೀತಂʼ ಚಿತ್ರೀಕರಣ ಫಿನೀಶ್‌

94 ವರ್ಷದ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ವರ್ಷಗಟ್ಟಲೆ ಶೂಟಿಂಗ್ ಎಳೆಯುವ ಇಂದಿನ ತಲೆಮಾರಿಗೆ ಮಾದರಿಯಾಗಿ ತಮ್ಮ ‘ಸಿಂಗ್ ಗೀತಂ’ ಸಿನಿಮಾವನ್ನು ಕೇವಲ 77 ದಿನಗಳಲ್ಲಿ ಪೂರ್ಣಗೊಳಿಸಿ ಜೂನ್ 12 ರಂದು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಾರೆ.

ಕೇವಲ 77 ದಿನದಲ್ಲಿ ʻಸಿಂಗ್ ಗೀತಂʼ ಚಿತ್ರದ ಶೂಟಿಂಗ್‌ ಮುಗಿಸಿದ್ದ ಸಿಂಗೀತಂ!

-

Avinash GR
Avinash GR Jun 12, 2026 7:52 PM

ಸದ್ಯ ಸ್ಟಾರ್‌ ಹೀರೋಗಳ ಸಿನಿಮಾಗಳು ಹೇಗೆಲ್ಲಾ ಶೂಟಿಂಗ್‌ ಆಗುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲಾ ರೀತಿಯ ಸೌಲಭ್ಯಗಳಿದ್ದರೂ ಸಿನಿಮಾಗಳನ್ನು ವರ್ಷಾನುಗಟ್ಟಲೇ ಎಳೆಯುತ್ತಾರೆ. ಈಗಲೂ ಎರಡ್ಮೂರು ವರ್ಷಗಳಾದರೂ ತೆರೆಗೆ ಸಿದ್ಧವಾಗದ ದೊಡ್ಡ ದೊಡ್ಡ ಸಿನಿಮಾಗಳು ನಮ್ಮ ಕಣ್ಣಮುಂದಿವೆ. ಇದರ ನಡುವೆ ಎಲ್ಲರಿಗಿಂತ ಭಿನ್ನ ಎನಿಸಿಕೊಂಡಿದ್ದಾರೆ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾ‌ವ್!

ಹೌದು, ದಕ್ಷಿಣ ಭಾರತದ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರಿಗೆ ಈಗ 94 ವರ್ಷ! ಈ ವಯಸ್ಸಿನಲ್ಲೂ ‘ಸಿಂಗ್ ಗೀತಂ’ ಎಂಬ ಪ್ರಯೋಗಾತ್ಮಕ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜೂನ್ 12 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಈ ಸಿನಿಮಾ ಉತ್ತಮ ಪ್ರತಿಕ್ರಿಯೆನ್ನು ಪಡೆದುಕೊಂಡಿದೆ. ಈ ಚಿತ್ರದ ಪ್ರತಿಯೊಂದು ಸಂಭಾಷಣೆಯನ್ನೂ ಹಾಡಿನ ರೂಪದಲ್ಲೇ ಹೇಳಿಸಿರುವುದು ವಿಶೇಷ. ಅಂದಹಾಗೆ, ಈ ವಿಭಿನ್ನ ಸಿನಿಮಾವನ್ನು 94 ವರ್ಷದ ಸಿಂಗೀತಂ ಕೇವಲ 77 ದಿನಗಳಲ್ಲಿ ಪೂರ್ಣಗೊಳಿಸಿರುವುದು ವಿಶೇಷ ಮತ್ತು ಈಗಿನವರಿಗೆ ಒಂದು ಪಾಠವಾಗಿದೆ.

ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುವಂತಿತ್ತು

ಈ ಕುರಿತು ಚಿತ್ರತಂಡದ ಮಾಹಿತಿ ನೀಡುವ ಆಪ್ತ ಮೂಲಗಳು, "94ರ ಇಳಿವಯಸ್ಸಿನಲ್ಲೂ ಸಿಂಗೀತಂ ಶ್ರೀನಿವಾಸ ರಾವ್ ಅವರು ‘ಸಿಂಗ್ ಗೀತಂ’ ಚಿತ್ರದ ಶೂಟಿಂಗ್ ಅನ್ನು ಕೇವಲ 77 ದಿನಗಳಲ್ಲಿ ಮುಗಿಸಿದ್ದಾರೆ. 90 ವರ್ಷ ದಾಟಿದ್ದರೂ ಕಥೆ ಹೇಳುವ ವಿಷಯದಲ್ಲಿ ಅವರಿಗಿರುವ ಉತ್ಸಾಹ ಮತ್ತು ಬದ್ಧತೆ ಸೆಟ್‌ನಲ್ಲಿದ್ದ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುವಂತಿತ್ತು" ಎಂದು ತಿಳಿಸಿವೆ.

94ನೇ ವಯಸ್ಸಿನಲ್ಲಿ ನಿರ್ದೇಶನಕ್ಕೆ ಮರಳಿದ ಸಿಂಗೀತಂ ಶ್ರೀನಿವಾಸ ರಾವ್;‌ ಅಣ್ಣಾವ್ರಿಗೆ ಸೂಪರ್‌ ಹಿಟ್‌ ಫಿಲ್ಮ್ಸ್‌ ಕೊಟ್ಟ ಡೈರೆಕ್ಟರ್‌ ಇವ್ರು!

ಮನೆಯಿಂದಲೇ ಶೂಟಿಂಗ್‌ ಮಾಡಿದ್ದ ಸಿಂಗೀತಂ

ಖ್ಯಾತ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಚಿತ್ರದ ನಿರ್ಮಾಪಕ ಹಾಗೂ ‘ಕಲ್ಕಿ 2898 ಎಡಿ’ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್, ಸಿಂಗೀತಂ ಅವರು ಈ ವಯಸ್ಸಿನಲ್ಲೂ ಸಿನಿಮಾವನ್ನು ಹೇಗೆ ಮುನ್ನಡೆಸಿದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ. "ಚಿತ್ರೀಕರಣದ ಸಮಯದಲ್ಲಿ ಕೆಲವು ಹೊಂದಾಣಿಕೆಗಳು ಅನಿವಾರ್ಯವಾಗಿದ್ದವು. ಚೆನ್ನೈನಲ್ಲಿ ಶೂಟಿಂಗ್ ಸುಲಭವಾಗಿ ನಡೆಯಿತು. ಆದರೆ ಹೈದರಾಬಾದ್‌ನಲ್ಲಿ ಕೊಂಚ ಕಷ್ಟವಾಯಿತು. ನಿರ್ದೇಶಕರಿಗೆ ಪ್ರಯಾಣ ಮಾಡಲು ಸಾಧ್ಯವಾಗದ ದಿನಗಳಲ್ಲಿ, ಅವರ ಮನೆಯಲ್ಲೇ ವರ್ಚುವಲ್ ಮಾನಿಟರ್ ಸೆಟಪ್ ಮಾಡಲಾಗಿತ್ತು. ಸಿಂಗೀತಂ ಅವರು ಹೆಡ್‌ಸೆಟ್ ಧರಿಸಿ ಮನೆಯಿಂದಲೇ ಮಾನಿಟರ್‌ ಮೂಲಕ ಶೂಟಿಂಗ್ ವೀಕ್ಷಿಸುತ್ತಾ ನಟರಿಗೆ ಮತ್ತು ಇಡೀ ಕ್ರೂಗೆ ಗೈಡ್ ಮಾಡುತ್ತಿದ್ದರು. ಆದಾಗ್ಯೂ, ಚಿತ್ರದ ಬಹುಪಾಲು ಚಿತ್ರೀಕರಣದ ಸಮಯದಲ್ಲಿ ಅವರು ಸೆಟ್‌ನಲ್ಲಿ ಖುದ್ದಾಗಿ ಹಾಜರಾಗಿದ್ದರು" ಎಂದು ನಾಗ್ ಅಶ್ವಿನ್ ವಿವರಿಸಿದ್ದಾರೆ.

"ಚಿತ್ರೀಕರಣದ ಕೊನೆಯ ಅವಧಿಯಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ಅವರಿಗೆ ತೀವ್ರ ಕೆಮ್ಮು ಕಾಣಿಸಿಕೊಂಡು, ನಂತರ ಅದು ಇನ್ಫೆಕ್ಷನ್ ಆಗಿ ಬದಲಾಗಿದ್ದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಅವರು ಸ್ವಲ್ಪ ತೂಕ ಕಳೆದುಕೊಂಡಿದ್ದರು, ಆದರೆ ಅದು ಅವರ ಉತ್ಸಾಹವನ್ನು ಕುಗ್ಗಿಸಲಿಲ್ಲ. ಅವರ ಸಿನಿಮಾ ಪ್ರೀತಿ ಎಲ್ಲರಿಗೂ ಹರಡುವಂತಿತ್ತು" ಎಂದು ನಾಗ್ ಅಶ್ವಿನ್ ಶ್ಲಾಘಿಸಿದ್ದಾರೆ.

ಏನಿದು ‘ಸಿಂಗ್ ಗೀತಂ’?

ಈ ಚಿತ್ರದ ಕಥೆಯು ಪ್ರತಾಪ್ ಎಂಬ ಯುವಕನ ಸುತ್ತ ಸಾಗುತ್ತದೆ. ಅವನು ಉತ್ತಮ ಅವಕಾಶಗಳ ಹುಡುಕಾಟದಲ್ಲಿ ಕುಬೇರಪುರಂ ಎಂಬ ನಿಗೂಢ ಹಾಗೂ ಪ್ರತ್ಯೇಕವಾದ ಹಳ್ಳಿಗೆ ಪ್ರಯಾಣ ಬೆಳೆಸುತ್ತಾನೆ. ಅಲ್ಲಿಗೆ ತಲುಪಿದ ನಂತರ, ಆ ಹಳ್ಳಿಗಿರುವ ವಿಚಿತ್ರವಾದ ಶಾಪವೊಂದರಿಂದಾಗಿ ಅವನು ಅನಿರೀಕ್ಷಿತ ಘಟನೆಗಳಿಗೆ ಸಿಲುಕಿಕೊಳ್ಳುತ್ತಾನೆ. ಆ ಶಾಪದ ಪ್ರಭಾವದಿಂದ ಆ ಊರಿನಲ್ಲಿ ಯಾರೂ ಮಾತನಾಡುವಂತಿಲ್ಲ, ಬದಲಿಗೆ ಪ್ರತಿಯೊಬ್ಬರೂ ಹಾಡಿನ ಮೂಲಕವೇ ಸಂಭಾಷಣೆ ನಡೆಸಬೇಕಿರುತ್ತದೆ! ಇದೊಂದು ಮ್ಯೂಸಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತವನ್ನು ಸಂಯೋಜಿಸಿದ್ದಾರೆ.