ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಜೈಲರ್ 2’ ಅಖಾಡದಲ್ಲಿ ರಜನಿಕಾಂತ್‌ಗೆ ಆಕ್ಷನ್ ಪಾಠ; ‘ತಲೈವಾ’ಗೆ ಸಾಹಸ ನಿರ್ದೇಶನ ಮಾಡಿದ ಕನ್ನಡಿಗ ಚೇತನ್ ಡಿಸೋಜಾ!

Jailer 2 Movie: ಸೂಪರ್‌ಸ್ಟಾರ್ ರಜನಿಕಾಂತ್ ಅವರ ʻಜೈಲರ್‌ 2ʼ ಸಿನಿಮಾಗೆ ಕಂಪ್ಲೀಟ್‌ ಆಗಿ ಉಡುಪಿ ಮೂಲದ ಕನ್ನಡಿಗ ಚೇತನ್ ಡಿಸೋಜಾ ಅವರೊಬ್ಬರೇ ಸಾಹಸ ನಿರ್ದೇಶನ ಮಾಡಿದ್ದಾರೆ. ಸಾಫ್ಟ್‌ವೇರ್ ವೃತ್ತಿ ತೊರೆದು ಸಮರಕಲೆಯಲ್ಲಿ ಪಳಗಿದ ಇವರು, ‘ಆವೇಶಂ’ ಯಶಸ್ಸಿನ ಬಳಿಕ ತಲೈವಾ ಸಿನಿಮಾಗೆ ಆಕ್ಷನ್ ಡೈರೆಕ್ಟರ್ ಆಗಿ ಆಯ್ಕೆಯಾದರು. ಅವರ ವೃತ್ತಿ ಬದುಕಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Jailer 2: ರಜನಿಕಾಂತ್‌ಗೆ ಆಕ್ಷನ್‌ ಪಾಠ ಮಾಡಿದ ಕನ್ನಡಿಗ ಚೇತನ್‌ ಡಿಸೋಜಾ

-

Avinash GR
Avinash GR Oct 9, 2026 1:38 PM

ʻಸೂಪರ್‌ಸ್ಟಾರ್ʼ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜೈಲರ್ 2’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಹಾಗೂ ರಜನಿಕಾಂತ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಮೆಗಾ ಆಕ್ಷನ್ ಥ್ರಿಲ್ಲರ್ ಚಿತ್ರವು ಅಕ್ಟೋಬರ್ 15ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ‘ಜೈಲರ್’ ಮೊದಲ ಭಾಗದ ಯಶಸ್ಸಿನ ಬಳಿಕ ಬರುತ್ತಿರುವ ಈ ಸೀಕ್ವೆಲ್ ಮೇಲೆ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮನೆಮಾಡಿದೆ.

ಈ ಬಾರಿಯ ಚಿತ್ರದಲ್ಲಿ ತಲೈವಾ ರಜನಿಕಾಂತ್ ಅವರ ಖಡಕ್ ಮಾಸ್ ಮ್ಯಾನರಿಸಂ ಜೊತೆಗೆ ಹೈ-ವೋಲ್ಟೇಜ್ ಆಕ್ಷನ್ ದೃಶ್ಯಗಳು ಪ್ರಮುಖ ಆಕರ್ಷಣೆಯಾಗಿದ್ದು, ಇಡೀ ಚಿತ್ರದ ಸಾಹಸ ಸನ್ನಿವೇಶಗಳನ್ನು ಸಂಯೋಜಿಸಿರುವುದು ಕರಾವಳಿ ಮೂಲದ ಹೆಮ್ಮೆಯ ಕನ್ನಡಿಗ ಚೇತನ್ ಡಿಸೋಜಾ ಎಂಬುದು ವಿಶೇಷ. ಈ ಬಿಗ್ ಬಜೆಟ್ ಚಿತ್ರದ ಏಕೈಕ ಆಕ್ಷನ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ ಚೇತನ್!

12ನೇ ತರಗತಿಯಲ್ಲಿದ್ದಾಗಲೇ ಬ್ಲ್ಯಾಕ್ ಬೆಲ್ಟ್

ಉಡುಪಿ ಮೂಲದ ಚೇತನ್ ಡಿಸೋಜಾ ಅವರ ಈ ಸಿನಿಮಾ ಪಯಣ ಅತ್ಯಂತ ರೋಚಕ ಹಾಗೂ ಸ್ಫೂರ್ತಿದಾಯಕ. ಶಾಲಾ ದಿನಗಳಲ್ಲೇ ಕರಾಟೆ ಅಭ್ಯಾಸ ಆರಂಭಿಸಿದ್ದ ಅವರು, 12ನೇ ತರಗತಿಯಲ್ಲಿದ್ದಾಗಲೇ ಬ್ಲ್ಯಾಕ್ ಬೆಲ್ಟ್ ಪಡೆದುಕೊಂಡರು. ಬಳಿಕ ಜಿಮ್ನಾಸ್ಟಿಕ್ಸ್, ಕ್ಯಾಲಿಸ್ಥೆನಿಕ್ಸ್ ಸೇರಿದಂತೆ ಹಲವು ಮೂವ್‌ಮೆಂಟ್ ಆರ್ಟ್ಸ್‌ಗಳಲ್ಲಿ ಪರಿಣತಿ ಸಾಧಿಸಿ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಎರಡು ಬಾರಿ ರಾಜ್ಯ ಮಟ್ಟದ ಗ್ರ್ಯಾಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಮುಗಿಸಿದ ನಂತರ, 2007ರಲ್ಲಿ ಬೆಂಗಳೂರಿಗೆ ಆಗಮಿಸಿ ಪ್ರಸಿದ್ಧ ಅಕ್ಸೆಂಚರ್ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ವೃತ್ತಿಜೀವನ ಆರಂಭಿಸಿದರು. ಆದರೆ, ಸಾಫ್ಟ್‌ವೇರ್ ಕೆಲಸದ ನಡುವೆಯೂ ತಮ್ಮ ಕನಸಿನ ಸಮರಕಲೆಗಳನ್ನು ಮುಂದುವರಿಸಿದ ಚೇತನ್, ʻರಾಂಗ್‌ ಮೂವ್‌ʼ ಎಂಬ ಕಿರುಚಿತ್ರವನ್ನು ನಿರ್ಮಿಸಿದರು. ಈ ಕಿರುಚಿತ್ರವು ಪ್ರತಿಭಾವಂತ ನಿರ್ದೇಶಕ ಪವನ್ ಕುಮಾರ್ ಅವರ ಗಮನ ಸೆಳೆದು, ಅವರು ‘ಯು ಟರ್ನ್’ ಚಿತ್ರದಲ್ಲಿ ಅವಕಾಶ ನೀಡಿದರು. ಆ ಮೂಲಕ ಚೇತನ್ ಸಾಹಸ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಆವೇಶಂನಿಂದ ಜೈಲರ್‌ 2 ಅವಕಾಶ

ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್‌ಕುಮಾರ್ ಅವರ ವಿಶೇಷ ಕಾಳಜಿ ಮತ್ತು ಸಹಕಾರದಿಂದ ಸ್ಟಂಟ್ ಯೂನಿಯನ್ ಕಾರ್ಡ್ ಪಡೆದುಕೊಂಡ ಚೇತನ್, ನಂತರ ಹಿಂತಿರುಗಿ ನೋಡಲೇ ಇಲ್ಲ. ಸ್ಯಾಂಡಲ್‌ವುಡ್‌ನ ಅಗ್ರಗಣ್ಯ ನಟರಾದ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಉಪೇಂದ್ರ, ಶ್ರೀಮುರಳಿ ಹಾಗೂ ರಾಜ್ ಬಿ. ಶೆಟ್ಟಿ ಮುಂತಾದವರ ಚಿತ್ರಗಳಿಗೆ ಸಾಹಸ ಸಂಯೋಜಿಸಿದರು.

ಕನ್ನಡದ ‘ಭಘೀರ’, ‘ಯುಐ’, ‘45’, ‘ಭೈರತಿ ರಣಗಲ್’ ಹಾಗೂ ‘ಮ್ಯಾಕ್ಸ್’ ಚಿತ್ರಗಳ ಆಕ್ಷನ್ ಸನ್ನಿವೇಶಗಳಿಗೆ ಜೀವ ತುಂಬಿ ಸೈ ಎನಿಸಿಕೊಂಡರು. ಆ ಬಳಿಕ ‘ಧೂಮಂ’ ಚಿತ್ರದ ಮೂಲಕ ಮಲಯಾಳಂ ನಟ ಫಹಾದ್ ಫಾಸಿಲ್ ಅವರ ಸಂಪರ್ಕ ಬೆಳೆದು, 2024ರಲ್ಲಿ ತೆರೆಕಂಡ ‘ಆವೇಶಂ’ ಚಿತ್ರಕ್ಕೆ ಆಕ್ಷನ್ ಡೈರೆಕ್ಟರ್ ಆಗಿ ಕೆಲಸ ಮಾಡುವ ಅವಕಾಶ ಒಲಿಯಿತು. ‘ಆವೇಶಂ’ ಚಿತ್ರದ ಅದ್ಭುತ, ವಿಭಿನ್ನ ಆಕ್ಷನ್ ದೃಶ್ಯಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದೇ ನೆಲ್ಸನ್ ದಿಲೀಪ್‌ಕುಮಾರ್ ನೇತೃತ್ವದ ‘ಜೈಲರ್ 2’ ತಂಡ ಚೇತನ್ ಅವರನ್ನು ಸಂಪರ್ಕಿಸಲು ಪ್ರಮುಖ ಕಾರಣವಾಯಿತು.

ಚೇತನ್‌ ಕೈಯಲ್ಲಿವೆ ಬಹುನಿರೀಕ್ಷಿತ ಸಿನಿಮಾಗಳು

‘ಜೈಲರ್ 2’ ಚಿತ್ರಕ್ಕಾಗಿ 2025ರ ಜನವರಿಯಲ್ಲಿ ಹೊರಬಂದ ಮೊದಲ ಅಧಿಕೃತ ಟೀಸರ್‌ನ ಆಕ್ಷನ್ ವಿನ್ಯಾಸವನ್ನು ಯಶಸ್ವಿಯಾಗಿ ನಿರ್ವಹಿಸಿದ ನಂತರ, ಚಿತ್ರತಂಡ ಇಡೀ ಸಿನಿಮಾದ ಸಾಹಸ ಸಂಯೋಜನೆಯ ಜವಾಬ್ದಾರಿಯನ್ನು ಚೇತನ್ ಅವರಿಗೇ ವಹಿಸಿತು. ರಜನಿಕಾಂತ್ ಅವರಂತಹ ಭಾರತೀಯ ಚಿತ್ರರಂಗದ ಮಹಾನ್ ದಂತಕಥೆಯೊಂದಿಗೆ ಕೆಲಸ ಮಾಡುವುದು ತಮ್ಮ ವೃತ್ತಿಜೀವನದ ಮರೆಯಲಾಗದ ಹಾಗೂ ಅತ್ಯಂತ ವಿಭಿನ್ನ ಅನುಭವ ಎಂದು ಚೇತನ್ ಹೇಳುತ್ತಾರೆ. ಪ್ರಸ್ತುತ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಸಾಹಸ ನಿರ್ದೇಶಕರಾಗಿ ಹೊರಹೊಮ್ಮಿರುವ ಇವರು, ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಡ್ರ್ಯಾಗನ್’, ಪ್ರಭಾಸ್ ನಟನೆಯ ‘ಫೌಜಿ’ ಹಾಗೂ ಜಿತು ಮಾಧವನ್ ನಿರ್ದೇಶನದ, ಸೂರ್ಯ ನಾಯಕನಾಗಿರುವ ‘ಸೀನ್’ ಚಿತ್ರಗಳಿಗೂ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್‌ನಿಂದ ಫೈಟ್‌ ಮಾಸ್ಟರ್‌ವರೆಗೆ...

ಸಾಹಸ ಸಂಯೋಜನೆ ಮಾತ್ರವಲ್ಲದೆ, ಚೇತನ್ CF Action Design ಸಂಸ್ಥೆಯ ಸಂಸ್ಥಾಪಕರಾಗಿದ್ದು, ಬೆಂಗಳೂರಿನ ಪ್ರಸಿದ್ಧ ಸ್ಟಂಟ್ ತರಬೇತಿ ಕೇಂದ್ರ Chaos Faktory ಸಹ-ಸಂಸ್ಥಾಪಕರೂ ಆಗಿದ್ದಾರೆ. ಈ ಕೇಂದ್ರದ ಮೂಲಕ ಫಹಾದ್ ಫಾಸಿಲ್, ಕಾರ್ತಿ, ವಿಜಯ್ ದೇವರಕೊಂಡ, ಶ್ರೀಮುರಳಿ ಹಾಗೂ ಯುವ ರಾಜ್‌ಕುಮಾರ್ ಸೇರಿದಂತೆ ಭಾರತದ ಜನಪ್ರಿಯ ನಟರಿಗೆ ಕಠಿಣ ಆಕ್ಷನ್ ತರಬೇತಿ ನೀಡಿದ್ದಾರೆ.

Jailer 2: ʻಕೆಡಿʼ ಬಳಿಕ ಪುನಃ ದಕ್ಷಿಣ ಭಾರತದತ್ತ ಮುಖ ಮಾಡಿದ ನಟಿ ನೋರಾ ಫತೇಹಿ! ರಜನಿಕಾಂತ್ ಸಿನಿಮಾದಲ್ಲಿ ‌ʻಬಿಂದಾಸ್‌ʼ ಡ್ಯಾನ್ಸ್

ಮಾರ್ಷಲ್ ಆರ್ಟ್ಸ್ ಮತ್ತು ಮೂವ್‌ಮೆಂಟ್ ಆರ್ಟ್ಸ್ ರಂಗದಲ್ಲಿ ಬರೋಬ್ಬರಿ 22 ವರ್ಷಗಳಿಗೂ ಹೆಚ್ಚಿನ ಅಪಾರ ಅನುಭವ ಹೊಂದಿರುವ ಚೇತನ್, ಕನ್ನಡ ಸೇರಿದಂತೆ ದೇಶದ ಪ್ರಮುಖ ಏಳು ಭಾಷೆಗಳ ಚಿತ್ರರಂಗಗಳಲ್ಲಿ 68ಕ್ಕೂ ಹೆಚ್ಚು ಸ್ಟಂಟ್ ಕ್ರೆಡಿಟ್‌ಗಳನ್ನು ಗಳಿಸಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆಯನ್ನು ತೊರೆದು, ಭಾರತೀಯ ಚಿತ್ರರಂಗದ ದಿಗ್ಗಜರ ಸಾಹಸ ದೃಶ್ಯಗಳನ್ನು ಮುನ್ನಡೆಸುವ ಹಂತಕ್ಕೆ ಬೆಳೆದು ನಿಂತಿರುವ ಈ ಉಡುಪಿಯ ಯುವಕನ ಸಾಧನೆ ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.