ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಲವ್ ಕೇಸ್' ಸಿನಿಮಾದಲ್ಲಿ ʻಕಾಂತಾರʼ ಖ್ಯಾತಿಯ ರಂಜನ್‌ಗೆ ʻಮಹಾನಟಿʼ ವಂಶಿ ಜೋಡಿ; ಅದ್ದೂರಿಯಾಗಿ ಮುಗಿದ ಶೂಟಿಂಗ್‌

‘ಲವ್ ಕೇಸ್’ ಚಿತ್ರದ ಚಿತ್ರೀಕರಣ ಬೆಂಗಳೂರಿನ ನಾಗರಭಾವಿಯ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಜೈಶ್ ನಿರ್ದೇಶನದ, ಮೋಹನ್ ಬಾಬು ನಿರ್ಮಿಸಿರುವ ಈ ಚಿತ್ರದಲ್ಲಿ ‘ಕಾಂತಾರ’ ಖ್ಯಾತಿಯ ರಂಜನ್ ಹಾಗೂ ‘ಮಹಾನಟಿ’ ವಂಶಿ ಜೋಡಿಯಾಗಿ ನಟಿಸಿದ್ದಾರೆ.

ಲವ್ ಕೇಸ್ ಶೂಟಿಂಗ್ ಕಂಪ್ಲೀಟ್; ʻಕಾಂತಾರʼ ರಂಜನ್‌ಗೆ ಜೋಡಿಯಾದ ಮಹಾನಟಿ ವಂಶಿ

-

Avinash GR
Avinash GR Jun 10, 2026 3:58 PM

ಮುಹೂರ್ತವಾದ ದಿನದಿಂದಲೇ ಸ್ಯಾಂಡಲ್‌ವುಡ್‌ ಚಿತ್ರಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದ, ಬಹುತಾರಾಗಣದ ಕಮರ್ಷಿಯಲ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ‘ಲವ್ ಕೇಸ್’ (Love Case) ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸದ್ಯ ಚಿತ್ರತಂಡವು ಕುಂಬಳಕಾಯಿ ಹೊಡೆದಿದೆ. ಯುವ ನಿರ್ದೇಶಕ ಜೈಶ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವನ್ನು ‘ಎಂ.ಬಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಖ್ಯಾತ ನಿರ್ಮಾಪಕ ಮೋಹನ್ ಬಾಬು ಅವರು ಭಾರಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ.

ಚಿತ್ರದ ಕೊನೆಯ ದಿನದ ಶೂಟಿಂಗ್ ಬೆಂಗಳೂರಿನ ನಾಗರಭಾವಿಯ ಪ್ರಸಿದ್ಧ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದಿದ್ದು, ಕೊನೆಯ ಸನ್ನಿವೇಶದ ಚಿತ್ರೀಕರಣ ಮುಗಿಯುತ್ತಿದ್ದಂತೆ ಇಡೀ ತಾರಾಗಣ ಹಾಗೂ ತಾಂತ್ರಿಕ ವರ್ಗದ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಕುಂಬಳಕಾಯಿ ಹೊಡೆದು ಚಿತ್ರೀಕರಣಕ್ಕೆ ಶುಭಂ ಹಾಡಿದೆ.

ರಂಜನ್‌ಗೆ ಜೋಡಿಯಾದ ವಂಶಿ

ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಇದರ ಮುಖ್ಯಭೂಮಿಕೆಯಲ್ಲಿ ಇಬ್ಬರು ಅತ್ಯಂತ ಭರವಸೆಯ ಯುವ ತಾರೆಗಳು ಕಾಣಿಸಿಕೊಂಡಿರುವುದು. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು’ ಹಾಗೂ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾದಲ್ಲಿ ತಮ್ಮ ಅಮೋಘ ನಟನೆಯಿಂದ ಮನೆಮಾತಾಗಿದ್ದ ಯುವ ನಟ ರಂಜನ್, ಈ ಚಿತ್ರದಲ್ಲಿ ಸಖತ್ ರಗಡ್ ಹಾಗೂ ಲವರ್ ಬಾಯ್ ಲುಕ್‌ನಲ್ಲಿ ನಾಯಕನಾಗಿ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಮಹಾನಟಿ’ ಮೂಲಕ ಕನ್ನಡಿಗರ ಮನಗೆದ್ದಿರುವ ಪ್ರತಿಭಾವಂತ ನಟಿ ವಂಶಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಹೊಸ ಜೋಡಿಯನ್ನು ತೆರೆಮೇಲೆ ನೋಡಲು ಸಿನಿಪ್ರಿಯರು ಕಾದಿದ್ದಾರೆ.

ಸಾಥ್‌ ನೀಡಿದ ಅನುಭವಿ ಕಲಾವಿದರು

ಕೇವಲ ಯುವ ನಟರಷ್ಟೇ ಅಲ್ಲದೆ, ಈ ಚಿತ್ರಕ್ಕೆ ಬಲ ತುಂಬಲು ಸ್ಯಾಂಡಲ್‌ವುಡ್‌ನ ಪ್ರಮುಖ ಅನುಭವಿ ತಾರಾಗಣವೇ ಸಾಥ್ ನೀಡಿದೆ. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ನಟ ಶ್ರೀನಗರ ಕಿಟ್ಟಿ, ಖಡಕ್ ಹಾಗೂ ಪೋಷಕ ಪಾತ್ರಗಳಲ್ಲಿ ಹೆಸರು ಮಾಡಿರುವ ಪ್ರಮೋದ್ ಶೆಟ್ಟಿ, ಹಿರಿಯ ನಟಿ ಸುಧಾರಾಣಿ ಹಾಗೂ ಹಾಸ್ಯ ಮತ್ತು ಗಂಭೀರ ಪಾತ್ರಗಳಲ್ಲಿ ಸೈ ಎನಿಸಿಕೊಂಡಿರುವ ನಾಗಭೂಷಣ್ ಈ ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

21 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ನಟಿಸಿದ ಆದಿತ್ಯ - ಶ್ರೀನಗರ ಕಿಟ್ಟಿ; ʻಟೆರರ್ʼ‌ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

ಲವ್‌ ಕೇಸ್‌ ಚಿತ್ರದ ತಾಂತ್ರಿಕ ವಿಭಾಗದಲ್ಲೂ ನುರಿತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಂಗೀತ ನಿರ್ದೇಶಕ ಆದಿ ಹರಿಕೃಷ್ಣ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ ಎನ್ನಲಾಗಿದೆ. ಹಿರಿಯ ಛಾಯಾಗ್ರಾಹಕ ಕೆ.ಎಸ್. ಚಂದ್ರಶೇಖರ್ ಅವರ ಕ್ಯಾಮೆರಾ ಕೈಚಳಕ ಹಾಗೂ ಅನುಕೃಷ್ಣ ಅವರ ಚುರುಕಾದ ಸಂಕಲನ ಈ ಚಿತ್ರಕ್ಕಿದೆ.

ಶೀಘ್ರದಲ್ಲೇ ರಿಲೀಸ್‌ ಆಗಲಿದೆ ಈ ಸಿನಿಮಾ

ಸದ್ಯ ಶೂಟಿಂಗ್ ಮುಗಿಸಿರುವ ‘ಲವ್ ಕೇಸ್’ ಚಿತ್ರತಂಡವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಭರದಿಂದ ಆರಂಭಿಸಿದೆ. ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸಿ, ಅತೀ ಶೀಘ್ರದಲ್ಲೇ ಸಿನಿಮಾವನ್ನು ಬೆಳ್ಳಿಪರದೆಗೆ ತರಲು ನಿರ್ಮಾಪಕ ಮೋಹನ್ ಬಾಬು ಸಿದ್ಧತೆ ನಡೆಸುತ್ತಿದ್ದಾರೆ. ಇದರ ಮೊದಲ ಹಂತವಾಗಿ ಸದ್ಯದಲ್ಲೇ ಚಿತ್ರದ ಫಸ್ಟ್ ಲುಕ್ ಟೀಸರ್ ಹಾಗೂ ಆಕರ್ಷಕ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ಅಧಿಕೃತ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಿದೆ.