ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತೆಲುಗು ಚಿತ್ರರಂಗದ ಮೇಲೆ ಉತ್ತರ ಭಾರತದ ಹೀರೋಯಿನ್ಸ್‌ ಬೇಸರ; ನಟಿಯರ ಇಬ್ಬಗೆ ನೀತಿ ಕಂಡು ಕೆಂಡಕಾರಿದ ಟಾಲಿವುಡ್‌ ಸಿನಿಪ್ರಿಯರು!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಹಾಗೂ ಕೋಟ್ಯಂತರ ಸಂಭಾವನೆ ಪಡೆದು, ಮುಂಬೈ ಸೇರಿದ ಬಳಿಕ ತೆಲುಗು ಸಿನಿಮಾ ಮೇಕಿಂಗ್ ಶೈಲಿಯನ್ನು ಉತ್ತರ ಭಾರತದ ಕೆಲ ನಟಿಯರು ಅಣಕಿಸುತ್ತಿರುವುದು ಈಗ ತೀವ್ರ ವಿವಾದಕ್ಕೆ ಎಡೆಮಾಡಿದೆ. ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಿ ನೀಡಿದ ಅವಕಾಶಗಳನ್ನು ಮರೆತು, ದಕ್ಷಿಣದ ನಿರ್ದೇಶಕರನ್ನು ಕೀಳಾಗಿ ಕಾಣುವ ಇವರ ಇಬ್ಬಗೆಯ ನೀತಿಯ ವಿರುದ್ಧ ಚಿತ್ರಪ್ರೇಮಿಗಳು ಕಿಡಿಕಾರಿದ್ದಾರೆ.

ಉತ್ತರ ಭಾರತದ ನಟಿಯರ ಡಬಲ್ ಸ್ಟ್ಯಾಂಡರ್ಡ್ ಬಗ್ಗೆ ತೆಲುಗು ಸಿನಿಪ್ರಿಯರು ಗರಂ!

-

Avinash GR
Avinash GR Nov 4, 2026 12:58 PM

ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಿಂದ ಹೆಸರು, ಪ್ರೇಕ್ಷಕರ ಪ್ರೀತಿ ಹಾಗೂ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದ ಕೆಲ ಉತ್ತರ ಭಾರತದ ನಟಿಯರು, ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡ ಬಳಿಕ ದಕ್ಷಿಣ ಭಾರತದ ಮೇಕಿಂಗ್ ಶೈಲಿಯನ್ನು ಅಣಕಿಸುತ್ತಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಟಾಲಿವುಡ್ ಅನ್ನು ಕೇವಲ ‘ಲಾಂಚ್ ಪ್ಯಾಡ್’ ಆಗಿ ಬಳಸಿಕೊಂಡು ನಂತರ ಅದೇ ಚಿತ್ರರಂಗದ ಮೇಲೆ ಕೆಸರೆರಚುತ್ತಿದ್ದರೆ ಎಂದು ತೆಲುಗು ಸಿನಿಮಾ ಪ್ರಿಯರು ಕಿಡಿಕಾರುತ್ತಿದ್ದಾರೆ!

ಕೀಳಾಗಿ ಕಾಣುವುದು ಈಗ ಪ್ಯಾಷನ್‌ ಆಗಿದೆ

ದಕ್ಷಿಣದ ಭಾಷೆಗಳ ಅರಿವಿಲ್ಲದಿದ್ದರೂ, ಇಲ್ಲಿನ ಸ್ಥಳೀಯ ಪ್ರತಿಭೆಗಳನ್ನು ಬದಿಗೊತ್ತಿ ದಕ್ಷಿಣ ಭಾರತದ ನಿರ್ದೇಶಕರು ಉತ್ತರ ಭಾರತದ ನಟಿಯರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿದ್ದರು. ಟಾಲಿವುಡ್‌, ಕಾಲಿವುಡ್‌ನ ಘಟಾನುಘಟಿ ಸ್ಟಾರ್ ನಾಯಕರ ಜೊತೆ ತೆರೆ ಹಂಚಿಕೊಂಡು ಸ್ಟಾರ್ ಇಮೇಜ್ ಸಂಪಾದಿಸಿದ ಬಳಿಕ, ಮುಂಬೈ ಮಾಧ್ಯಮಗಳ ಮೈಕ್ ಎದುರು ಕುಳಿತು ದಕ್ಷಿಣ ಭಾರತದ ಸಿನಿಮಾ ಸಂಸ್ಕೃತಿ ಮತ್ತು ಚಿತ್ರೀಕರಣ ಶೈಲಿಯನ್ನು ಕೀಳಾಗಿ ಕಾಣುವುದು ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಂದು ಕ್ಯಾಮೆರಾ ಮುಂದೆ ನಟಿಸುವಾಗ ಅಥವಾ ಸಂಭಾವನೆ ಪಡೆಯುವಾಗ ಕಾಣಿಸದ ಸಮಸ್ಯೆಗಳು, ಈಗ ಸಿನಿಮಾ ಮುಗಿದು ಬಾಲಿವುಡ್‌ನಲ್ಲಿ ಸೆಟ್ಲ್‌ ಆದಮೇಲಷ್ಟೇ ನೆನಪಾಗುತ್ತವೆಯೇ ಎಂದು ನೆಟ್ಟಿಗರು ನೇರವಾಗಿ ಪ್ರಶ್ನಿಸುತ್ತಿದ್ದಾರೆ.

ವಿವಾದ ಹುಟ್ಟುಹಾಕಿದ್ದ ತಾಪ್ಸೀ ಪನ್ನು ಮಾತು

ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ನಟಿ ತಾಪ್ಸಿ ಪನ್ನು, ನಂತರ ಹಿಂದಿ ಸಂದರ್ಶನಗಳಲ್ಲಿ ದಕ್ಷಿಣದ ನಿರ್ದೇಶಕರಿಗೆ ನಾಯಕಿಯರ ಸೊಂಟ ಮತ್ತು ಹೊಕ್ಕಳಿನ ಸೌಂದರ್ಯದ ಮೇಲಷ್ಟೇ ಗಮನ ಎಂದು ಬಹಿರಂಗವಾಗಿಯೇ ವ್ಯಂಗ್ಯವಾಡಿದ್ದರು. ಇದೇ ಸಾಲಿನಲ್ಲಿ ‘ಅಲಾ ವೈಕುಂಠಪುರಮುಲೋ’ದಂತಹ ಬ್ಲಾಕ್‌ಬಸ್ಟರ್ ಹಿಟ್ ನೀಡಿದ ಪೂಜಾ ಹೆಗ್ಡೆ ಕೂಡ, ಸೌತ್ ಮೇಕರ್ಸ್‌ಗೆ ಹೆಣ್ಣಿನ ದೇಹದ ಅಂಗಾಂಗಗಳ ಮೇಲಿರುವ ವ್ಯಾಮೋಹದ ಕುರಿತು ಮಾತನಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ತೀವ್ರ ವಿರೋಧ ವ್ಯಕ್ತವಾದ ನಂತರ "ನನ್ನ ಮಾತುಗಳನ್ನು ತಪ್ಪಾಗಿ ಗ್ರಹಿಸಲಾಗಿದೆ" ಎಂದು ಸ್ಪಷ್ಟನೆ ನೀಡಬೇಕಾಯಿತು.

ತೆಲುಗು ಸಿನಿಪ್ರಿಯರ ಟ್ವೀಟ್‌



ಬಾಲಯ್ಯ ಜೊತೆ ನಟಿಸಿ ಕಾಮೆಂಟ್‌ ಮಾಡಿದ್ದ ರಾಧಿಕಾ

ಮತ್ತೊಂದೆಡೆ, ನಟ ನಂದಮೂರಿ ಬಾಲಕೃಷ್ಣ ಅವರೊಂದಿಗೆ ಸತತವಾಗಿ ಎರಡು ಚಿತ್ರಗಳಲ್ಲಿ ನಟಿಸಿದ್ದ ರಾಧಿಕಾ ಆಪ್ಟೆ, "ವಯಸ್ಸಾದ ಹೀರೋ ಜೊತೆ ರೊಮ್ಯಾನ್ಸ್ ಮಾಡಿಸಿದರು, ಸೆಟ್‌ನ ವಾತಾವರಣ ಪಿತೃಪ್ರಧಾನವಾಗಿತ್ತು" ಎಂದು ಇತ್ತೀಚೆಗೆ ಹೇಳಿದ್ದರು. ಮೊದಲ ಚಿತ್ರದ ಅನುಭವ ಅಷ್ಟು ಕಹಿಯಾಗಿದ್ದರೆ ಮತ್ತೆ ಅದೇ ಬಾಲಯ್ಯ ಜೊತೆ ಎರಡನೇ ಚಿತ್ರವನ್ನು ಏಕೆ ಒಪ್ಪಿಕೊಂಡರು ಎಂಬ ಪ್ರಶ್ನೆಗೆ ಅವರ ಬಳಿ ಸಮರ್ಥನೆಯಿಲ್ಲ. ಇತ್ತೀಚೆಗೆ ಬಿಡುಗಡೆಯಾದ ‘ಪೆದ್ದಿ’ ಚಿತ್ರದಲ್ಲಿ ರಾಮ್‌ ಚರಣ್ ಜೊತೆ ನಟಿಸಿದ ಜಾನ್ವಿ ಕಪೂರ್ ಸಹ ಸಿನಿಮಾ ರಿಲೀಸ್ ಆದ ಬಳಿಕ ತಮ್ಮ ಪಾತ್ರ ಚಿತ್ರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದರು.

ರಾಧಿಕಾಗೆ ಬಾಲಯ್ಯ ಫ್ಯಾನ್ಸ್‌ ಪ್ರಶ್ನೆ



ಬಾಲಿವುಡ್‌ ಬಗ್ಗೆ ಯಾವುದೇ ಆಕ್ಷೇಪ ಇಲ್ಲವೇಕೆ?

ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸ್ಕ್ರಿಪ್ಟ್ ಆಯ್ಕೆಯಿಂದ ಹಿಡಿದು, ವಸ್ತ್ರವಿನ್ಯಾಸ ಹಾಗೂ ಪ್ರತಿ ಶಾಟ್‌ನ ಮಾನಿಟರ್ ವೀಕ್ಷಣೆಯವರೆಗೆ ಕಲಾವಿದರಿಗೆ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಬಾಲಿವುಡ್ ಚಿತ್ರಗಳಲ್ಲಿ ಅತ್ಯಂತ ಬೋಲ್ಡ್ ದೃಶ್ಯಗಳಲ್ಲಿ ಮುಕ್ತವಾಗಿ ನಟಿಸುವ ಈ ನಟಿಯರು ದಕ್ಷಿಣದ ಕಮರ್ಷಿಯಲ್ ಅಂಶಗಳನ್ನು ಮಾತ್ರ ಜರಿಯುವುದು ಇಬ್ಬಗೆಯ ನೀತಿಗೆ ಸಾಕ್ಷಿ ಎಂದು ಸಿನಿಪ್ರಿಯರು ಅಸಮಾಧಾನ ಹೊರಹಾಕಿದ್ದಾರೆ.

ಅಂದು ಅವಕಾಶಗಳನ್ನು ಪಡೆಯುವಾಗ ಒಂದು ರೀತಿ, ಹೆಸರು, ಹಣ ಬಂದ ನಂತರ ಮತ್ತೊಂದು ರೀತಿ ಮಾತನಾಡುವ ನಟಿಯರನ್ನು ಆಯ್ಕೆ ಮಾಡುವ ಮುನ್ನ ನಿರ್ಮಾಪಕರು ಎಚ್ಚರಿಕೆ ವಹಿಸಬೇಕು ಎಂದು ಸಿನಿಪ್ರಿಯರು ಎಚ್ಚರಿಸಿದ್ದಾರೆ.