ನಟ ವಿಜಯ್ ವಿರುದ್ಧದ ಡಿವೋರ್ಸ್ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತಾ; ಪ್ರಕರಣ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯ!
ತಮಿಳುನಾಡು ಸಿಎಂ ವಿಜಯ್ ಅವರ ಪತ್ನಿ ಸಂಗೀತಾ ಅವರು ಕಳೆದ ಫೆಬ್ರವರಿಯಲ್ಲಿ ಡಿವೋರ್ಸ್ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದು ವಿಜಯ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿತ್ತು. ಅಲ್ಲದೆ, ಅರ್ಜಿಯಲ್ಲಿ ವಿಜಯ್‌ಗೆ ನಟಿಯೊಬ್ಬರ ಜೊತೆ ಅಫೇರ್ ಇದೆ ಎಂಬ ಆರೋಪ ಮಾಡಲಾಗಿತ್ತು. ಸದ್ಯ ಈ ಡಿವೋರ್ಸ್ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.
-
ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ಸಿ. ಜೋಸೆಫ್ ವಿಜಯ್ ಅವರ ವಿರುದ್ಧ ಪತ್ನಿ ಸಂಗೀತಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯಲ್ಲಿ ದಿಢೀರ್ ತಿರುವು ಸಿಕ್ಕಿದೆ. ತಾವು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ಸಂಗೀತಾ ಶುಕ್ರವಾರ (ಆಗಸ್ಟ್ 7) ಕೌಟುಂಬಿಕ ನ್ಯಾಯಾಲಯಕ್ಕೆ ತಿಳಿಸಿದ್ದು, ಅದರಂತೆ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾದ ಸಂಗೀತಾ, "ನಾವು ಈ ವಿಚ್ಛೇದನ ಪ್ರಕರಣವನ್ನು ಮುಂದೆ ಮುಂದುವರಿಸಲು ಬಯಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು. ವಿಜಯ್ ಪರ ವಕೀಲರು ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ, ಸಂಗೀತಾ ಅವರ ಮನವಿಯನ್ನು ಪುರಸ್ಕರಿಸಿದ ಕೌಟುಂಬಿಕ ನ್ಯಾಯಾಲಯವು ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿತು. ಜೊತೆಗೆ ಭವಿಷ್ಯದಲ್ಲಿ ಅಗತ್ಯವಿದ್ದಲ್ಲಿ ಹೊಸ ಅರ್ಜಿ ಸಲ್ಲಿಸಲು ಅವರಿಗೆ ಅವಕಾಶ ಕಲ್ಪಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಅರ್ಜಿಯಲ್ಲಿದ್ದ ಗಂಭೀರ ಆರೋಪಗಳಿವು!
ಪತ್ನಿ ಸಂಗೀತಾ ಅವರು ಈ ವರ್ಷದ ಫೆಬ್ರವರಿಯಲ್ಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ನಟ ವಿಜಯ್ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ವಿಜಯ್ ಅವರು ನಟಿಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬುದನ್ನು ತಾವು 2021 ರಲ್ಲಿ ಕಂಡುಹಿಡಿದಿದ್ದಾಗಿ ಸಂಗೀತಾ ತಿಳಿಸಿದ್ದರು. ಸಂಬಂಧ ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರೂ ಅದನ್ನು ಮುಂದುವರಿಸಿದ್ದರು ಎಂದು ಆರೋಪಿಸಲಾಗಿತ್ತು.
Thalapathy Vijay: ನಟ ವಿಜಯ್-ಸಂಗೀತಾ ಡಿವೋರ್ಸ್ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್
ವಿದೇಶ ಪ್ರವಾಸ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟು, ಆ ನಟಿಯೊಂದಿಗೆ ವಿಜಯ್ ಭಾಗವಹಿಸುತ್ತಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ವಿಜಯ್ ಅದನ್ನು ನಿರಾಕರಿಸಲಿಲ್ಲ. ಸೋಶಿಯಲ್ ಮೀಡಿಯಾದಲ್ಲಾಗುತ್ತಿದ್ದ ಈ ಬೆಳವಣಿಗೆಗಳು ತಮಗೆ ಹಾಗೂ ತಮ್ಮ ಇಬ್ಬರು ಮಕ್ಕಳಾದ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಷಾ ಅವರಿಗೆ ತೀವ್ರ ಮಾನಸಿಕ ಆಘಾತ ಮತ್ತು ಸಾರ್ವಜನಿಕವಾಗಿ ಅವಮಾನವನ್ನುಂಟು ಮಾಡಿವೆ ಎಂದು ಅವರು ವಾದಿಸಿದ್ದರು. ತಮಗೆ ನೀಡಲಾಗಿದ್ದ ಸೌಲಭ್ಯಗಳನ್ನು ವಿಜಯ್ ಹಿಂಪಡೆದಿದ್ದಾರೆ ಹಾಗೂ ಆರ್ಥಿಕ ನಿರ್ಬಂಧಗಳನ್ನು ಹೇರಿ ಸ್ವಾತಂತ್ರ್ಯವನ್ನು ಕಡಿತಗೊಳಿಸಿದ್ದಾರೆ ಎಂದು ಸಂಗೀತಾ ದೂರಿದ್ದರು.
ಅರ್ಜಿ ವಾಪಸ್ ಪಡೆದಿದ್ದಕ್ಕೆ ಅಚ್ಚರಿ!
2024 ರಲ್ಲಿ ವಿಜಯ್ ಸುತ್ತ ನಡೆದ ಸಾಮಾಜಿಕ ಜಾಲತಾಣದ ವಿವಾದಗಳು ತಮಗೆ ತೀವ್ರ ಮನಸ್ಸಿಗೆ ನೋವುಂಟು ಮಾಡಿದ್ದು, ತಮ್ಮ ದಾಂಪತ್ಯ ಜೀವನವು ರಾಜಿಯ ಗಡಿ ದಾಟಿ ಕೇವಲ 'ಕಾಗದದ ಮೇಲಷ್ಟೇ' ಉಳಿದಿದೆ ಎಂದು ಸಂಗೀತಾ ಅವರು ಈ ಹಿಂದೆ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಸಂಸಾರ ಸರಿಪಡಿಸಲಾಗದಷ್ಟು ಮುರಿದುಬಿದ್ದಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದ ಸಂಗೀತಾ, ಇದೀಗ ದಿಢೀರನೆ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿರುವುದು ತಮಿಳುನಾಡು ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿದೆ.