Tamil Nadu CM Vijay: ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್; 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಣೆ
Kollur Mookambika Temple: ತಮಿಳುನಾಡು ಸಿಎಂ ವಿಜಯ್ ಅವರ ಆಗಮನ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ದೇಗುಲದ ಸುತ್ತಮುತ್ತ ಹಾಗೂ ಅವರು ತೆರಳು ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇವಿಯ ದರ್ಶನದ ಬಳಿಕ ಅವರು ಚೆನ್ನೈಗೆ ನಿರ್ಗಮಿಸಿದರು.
ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ತಮಿಳುನಾಡು ಸಿಎಂ ವಿಜಯ್. -
ಉಡುಪಿ: ತಮಿಳುನಾಡು ಸಿಎಂ ವಿಜಯ್ (Tamil Nadu CM Vijay) ಅವರು ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಿ ದೇಗುಲಕ್ಕೆ (Kollur Mookambika Temple) ಶುಕ್ರವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು, ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ತೆರಳಿ, ದೇವಿಯ ದರ್ಶನ ಪಡೆದರು.

ಶರ್ಟ್ ಕಳಚಿ, ಕೆಂಪು ಬಣ್ಣದ ಶಲ್ಯ ಹೊದ್ದು ಬಂದ ವಿಜಯ್ ಅವರಿಗೆ ಅರ್ಚಕರು, ಆಡಳಿತ ಮಂಡಳಿಯಿಂದ ಸ್ವಾಗತ ದೊರೆಯಿತು. ನಂತರ ಸಂಕಲ್ಪ ಮಾಡಿ, ದೇವಿಗೆ ಹಣ್ಣು, ಹೂವು, ಸೀರೆ ಹಾಗೂ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ತಮಿಳುನಾಡು ವಿಧಾನಸಭಾ ಚುನಾವಣೆಯ ವಿಜಯದ ಸಂಕೇತವಾಗಿ ಖಡ್ಗ ಅರ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ತಮಿಳುನಾಡು ಸಿಎಂ ವಿಜಯ್ ಅವರ ಆಗಮನ ಹಿನ್ನೆಲೆಯಲ್ಲಿ ದೇಗುಲದ ಸುತ್ತಮುತ್ತ ಹಾಗೂ ಅವರು ತೆರಳು ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇವಿಯ ದರ್ಶನದ ಬಳಿಕ ವಿಜಯ್ ಅವರು ಚೆನ್ನೈನತ್ತ ಪ್ರಯಾಣ ಬೆಳೆಸಿದರು. ಮಂಗಳೂರು ಏರ್‌ಪೋರ್ಟ್ ಮೂಲಕ ಅವರು ತಮಿಳುನಾಡಿಗೆ ತೆರಳಲಿದ್ದಾರೆ.

ಸಿಎಂ ವಿಜಯ್ ಬೆಳ್ಳಿ ಖಡ್ಗ ಅರ್ಪಿಸಿದ್ದೇಕೆ?
ತಮಿಳುನಾಡು ಸಿಎಂ ವಿಜಯ್ ಅವರ ಭೇಟಿ ಬಗ್ಗೆ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರು ಮಾತನಾಡಿ, ಸಿಎಂ ವಿಜಯ್ ಅವರು ದೇವಿಗೆ ಫಲ, ಬೆಳ್ಳಿಯ ಖಡ್ಗವನ್ನು ಸಮರ್ಪಣೆ ಮಾಡಿದ್ದಾರೆ. ಖಡ್ಗವನ್ನು ನಿತ್ಯವೂ ಅಲಂಕಾರಕ್ಕೆ ಉಪಯೋಗಿಸಿ ಎಂದು ತಿಳಿಸಿದ್ದಾರೆ. ಖಡ್ಗವನ್ನು ವಿಜಯದ ಪ್ರತೀಕವಾಗಿ ನೀಡಲಾಗುತ್ತದೆ. ಒಂದು ವೇಳೆ ಸಂಕಲ್ಪ ಮಾಡಿರದಿದ್ದರೆ ಶತ್ರು ಸಂಹಾರಕ್ಕಾಗಿ ಈ ರೀತಿಯಾಗಿ ಖಡ್ಗ ಅರ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಎಂಜಿಆರ್ ಅವರು ನೀಡಿದ್ದ ಚಿನ್ನದ ಖಡ್ಗವನ್ನು ನಿತ್ಯ ಪೂಜೆಯಲ್ಲಿ ಉಪಯೋಗವಾಗುತ್ತಿದೆ. ಇದೀಗ ಸಿಎಂ ವಿಜಯ್ ಅವರು ನೀಡಿರುವ ಖಡ್ಗವನ್ನು ಯಾವ ರೀತಿ ಬಳಸಿಕೊಳ್ಳಲಾಗುತ್ತದೆ ಎಂಬುವುದನ್ನು ಆಡಳಿತ ಮಂಡಳಿ ತೀರ್ಮಾನಿಸಲಿದೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ.
1984ರಲ್ಲಿ ಚಿನ್ನದ ಖಡ್ಗ ಅರ್ಪಿಸಿದ್ದ ಮಾಜಿ ಸಿಎಂ ಎಂಜಿಆರ್
ಈ ಹಿಂದೆ ತಮಿಳುನಾಡು ಮಾಜಿ ಸಿಎಂ ಎಂಜಿಆರ್ ಅವರು ಮುಕಾಂಬಿಕೆ ಸನ್ನಿಧಿಗೆ 1984ರಲ್ಲಿ ಭೇಟಿ ನೀಡಿದ್ದರು. ತೀವ್ರ ಅನಾರೋಗ್ಯದಿಂದ ಚೇತರಿಸಿಕೊಂಡು ಭಾರಿ ರಾಜಕೀಯ ಯಶಸ್ಸು ಗಳಿಸಿದ ನಂತರ ದೇವಿಗೆ ಭಕ್ತಿಯ ಕಾಣಿಕೆಯಾಗಿ 1.5 ಕೆಜಿ ತೂಕದ ಚಿನ್ನದ ಖಡ್ಗ ಸಮರ್ಪಿಸಿದ್ದರು. ಆ ಖಡ್ಗ ಇಂದಿಗೂ ಉತ್ಸವಗಳ ಸಂದರ್ಭದಲ್ಲಿ ಬಳಕೆಯಾಗುತ್ತಿದೆ.
Karnataka: Tamil Nadu Chief Minister Vijay arrives at the Kollur Sri Mookambika Devi Temple in the Udupi district🔥 #TVKVijay @CMOTamilnadu @TVKVijayHQ #CMVijay #தமிழகவெற்றிக்கழகம் pic.twitter.com/QXpMI55VoG
— Devanayagam (@Devanayagam) June 12, 2026
ಬಳಿಕ ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ 2004ರಲ್ಲಿ ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ, ಅನ್ನಸಂತರ್ಪಣೆಗಾಗಿ ದೇಣಿಗೆ ನೀಡಿದ್ದರು. ದೇವಿಗೆ ಪ್ರಿಯವಾದ ಚಂಡಿಕಾ ಹೋಮವನ್ನು ಜಯಲಲಿತಾ ಮಾಡಿಸಿದ್ದರು. ತಮ್ಮ ರಾಜಕೀಯ ಗುರು ಎಂಜಿಆರ್ ಸಮರ್ಪಿಸಿದ್ದ ಚಿನ್ನದ ಖಡ್ಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ತಮಿಳುನಾಡು ಸಿಎಂ ವಿಜಯ್ ಮೊದಲ ಬಾರಿಗೆ ಮೂಕಾಂಬಿಕೆ ದರ್ಶನ ಪಡೆದಿದ್ದಾರೆ.
ಇನ್ನು 2024ರಲ್ಲಿ ತೆಲುಗು ನಟ ಜೂನಿಯರ್ ಎನ್‌ಟಿಆರ್, 2025 ಮಲಯಾಳಂ ನಟ ಮೋಹನ್ ಲಾಲ್, ಮಾಜಿ ಸಿಎಂ ಪತ್ನಿ ಸ್ಟಾಲಿನ್ ಪತ್ನಿ ದುರ್ಗಾ ಅವರು ಕೊಲ್ಲೂರಿಗೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದ್ದರು.