ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕದಲ್ಲಿ ʻಜನ ನಾಯಗನ್‌ʼ ಸಿನಿಮಾ ಟಿಕೆಟ್‌ ದರ 1000 ರೂ.! ಆದರೆ, ತಮಿಳುನಾಡಿನಲ್ಲಿ 190 ರೂ. ದಾಟೋದಿಲ್ಲವೇಕೆ? ಇಲ್ಲಿದೆ ಮಾಹಿತಿ

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ಜುಲೈ 23 ರಂದು ಬಿಡುಗಡೆಯಾಗಲಿದ್ದು, ಕರ್ನಾಟಕದಲ್ಲಿ ಟಿಕೆಟ್ ದರ 1,000 ರೂಪಾಯಿಗೆ ತಲುಪಿದೆ. ಆದರೆ ತಮಿಳುನಾಡಿನಲ್ಲಿ ಸರ್ಕಾರಿ ನಿಯಮಾವಳಿಗಳ ಕಾರಣದಿಂದಾಗಿ ಟಿಕೆಟ್ ದರ 190 ರೂಪಾಯಿ ಮೀರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ತಮಿಳುನಾಡಿನಲ್ಲಿ ‘ಜನ ನಾಯಗನ್‌’ ಟಿಕೆಟ್‌ ದರ 190 ರೂ. ಫಿಕ್ಸ್! ಕಾರಣವೇನು?

-

Avinash GR
Avinash GR Jul 19, 2026 5:29 PM

ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ ಜುಲೈ 23ರಂದು ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗಿದೆ. ಈಗಾಗಲೇ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಭರ್ಜರಿಯಾಗಿ ಆರಂಭವಾಗಿದ್ದು, ಟಿಕೆಟ್ ದರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ಭಾರಿ ವ್ಯತ್ಯಾಸ ಕಂಡುಬಂದಿದೆ.

ಕರ್ನಾಟಕದ ಸಿಂಗಲ್ ಸ್ಕ್ರೀನ್‌ ಥಿಯೇಟರ್‌ಗಳಲ್ಲೇ ಟಿಕೆಟ್ ದರ ಬರೋಬ್ಬರಿ 1,000 ರೂಪಾಯಿವರೆಗೆ ಮಾರಾಟವಾಗುತ್ತಿದ್ದರೆ, ನೆರೆರಾಜ್ಯ ತಮಿಳುನಾಡಿನಲ್ಲಿ ಮಾತ್ರ ಟಿಕೆಟ್ ಬೆಲೆ 190 ರೂಪಾಯಿ ದಾಟುತ್ತಿಲ್ಲ! ಈ ಭಾರಿ ತಾರತಮ್ಯಕ್ಕೆ ಕಾರಣ ಇಲ್ಲಿದೆ.

ತಮಿಳುನಾಡಿನಲ್ಲಿ ಕಟ್ಟುನಿಟ್ಟಿನ ನಿಯಮ

ವಿಜಯ್ ಅವರು ಸದ್ಯ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವುದರಿಂದ, ತಮ್ಮದೇ ಸಿನಿಮಾಗೆ ನಿಯಮ ಸಡಿಲಿಕೆ ಮಾಡಿದ್ದಾರೆ ಎಂಬ ಆರೋಪ ಬರಬಾರದು ಎಂದು ಸರ್ಕಾರ ತೀವ್ರ ಎಚ್ಚರಿಕೆ ವಹಿಸಿದೆ. ತಮಿಳುನಾಡಿನಲ್ಲಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುವಂತಿಲ್ಲ. ಅಲ್ಲಿ ಗರಿಷ್ಠ 190 ರೂಪಾಯಿ ಮಿತಿ ಇರುವುದರಿಂದ ಚಿತ್ರಮಂದಿರಗಳು ದರ ಏರಿಕೆ ಮಾಡುವಂತಿಲ್ಲ. ಆದರೆ, ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಟಿಕೆಟ್ ದರ ನಿಗದಿಯಲ್ಲಿ ಫ್ಲೆಕ್ಸಿಬಿಲಿಟಿ (ಮುಕ್ತ ಅವಕಾಶ) ಇರುವುದರಿಂದ ಬೆಂಗಳೂರಿನಂತಹ ನಗರಗಳಲ್ಲಿ ಸಿಂಗಲ್‌ ಸ್ಕ್ರೀನ್‌ಗಳಲ್ಲೇ ಟಿಕೆಟ್‌ಗಳು 800 ರಿಂದ 1,000 ರೂಪಾಯಿವರೆಗೆ ಮಾರಾಟವಾಗುತ್ತಿವೆ.

ಬೆಂಗಳೂರಲ್ಲಿ ಬೆಳಿಗ್ಗೆ 6ಕ್ಕೆ ಮೊದಲ ಶೋ!

ಬೆಂಗಳೂರಿನಲ್ಲಿ ‘ಜನ ನಾಯಗನ್’ ಮುಂಗಡ ಟಿಕೆಟ್ ಮಾರಾಟ ಓಪನ್ ಆಗಿದ್ದು, ಜುಲೈ 23ರ ಬೆಳಿಗ್ಗೆ 6 ಗಂಟೆಯ ಶೋಗಳ ಟಿಕೆಟ್‌ಗಳು ಈಗಾಗಲೇ ‘ಬುಕ್‌ಮೈಶೋ’ನಲ್ಲಿ ಬಹುತೇಕ ಸೋಲ್ಡ್ ಔಟ್ ಆಗಿವೆ. ಇತ್ತ ತಮಿಳುನಾಡಿನಲ್ಲಿ ಮೊದಲ ಪ್ರದರ್ಶನ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ.

Jana Nayagan: ಸಿಎಂ ವಿಜಯ್ ಅವರನ್ನು ಭೇಟಿಯಾದ ʻಜನ ನಾಯಗನ್ʼ ಸಹ-ನಿರ್ಮಾಪಕ; ಮೂವಿ ರಿಲೀಸ್‌ ಯಾವಾಗ?

ಉತ್ತರ ಭಾರತದಲ್ಲೂ ದಳಪತಿ ಕ್ರೇಜ್

ಉತ್ತರ ಭಾರತದಲ್ಲೂ ಈ ಚಿತ್ರಕ್ಕೆ ಅಭೂತಪೂರ್ವ ಬೇಡಿಕೆ ಸೃಷ್ಟಿಯಾಗಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಸುಮಾರು 1,500 ರಿಂದ 2,000 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದೆ. ಮುಂಬೈನ ಮಲಾಡ್, ಸಯನ್ ಮತ್ತು ಅಂಧೇರಿಗಳಂತಹ ತಮಿಳು ಭಾಷಿಕರು ಹೆಚ್ಚಿರುವ ಪ್ರದೇಶಗಳಲ್ಲಿ ಜುಲೈ 23ರ ಬೆಳಿಗ್ಗೆ 4 ಗಂಟೆಯಿಂದಲೇ ಶೋಗಳು ಆರಂಭವಾಗುತ್ತಿವೆಯಂತೆ. ಈ ವಾರ ಉತ್ತರ ಭಾರತದಲ್ಲಿ ಯಾವುದೇ ದೊಡ್ಡ ಹಿಂದಿ ಸಿನಿಮಾಗಳು ಬಿಡುಗಡೆಯಾಗದಿರುವುದು ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಎಂದು ವಿತರಕ ಪಂಕಜ್ ಜಯಸಿನ್ಹ ತಿಳಿಸಿದ್ದಾರೆ.

Jana Nayagan: ಸಿಎಂ ʻದಳಪತಿʼ ವಿಜಯ್ ಸಿನಿಮಾಕ್ಕಾಗಿ ಪೋಸ್ಟ್‌ಪೋನ್‌ ಆಗುತ್ತಾ ಪುತ್ರ ಜೇಸನ್ ಸಂಜಯ್ ಚೊಚ್ಚಲ ಚಿತ್ರ ʻಸಿಗ್ಮಾʼ?

ಈ ಚಿತ್ರದ ವಿಶೇಷತೆಗಳೇನು?

ಎಚ್. ವಿನೋದ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರದಲ್ಲಿ ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಕಾಶ್ ರಾಜ್ ಮತ್ತು ಗೌತಮ್ ವಾಸುದೇವ್ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಈಗಾಗಲೇ ಸೂಪರ್ ಹಿಟ್ ಆಗಿದೆ. ಮುಖ್ಯವಾಗಿ, ಸಿನಿಮಾದ ಆರಂಭದ ಟೈಟಲ್ ಕಾರ್ಡ್‌ನಲ್ಲಿ "ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಟನೆಯ.." ಎಂದು ಪ್ರದರ್ಶನಗೊಳ್ಳುತ್ತಿರುವುದರಿಂದ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.