Jana Nayagan: ಸಿಎಂ ʻದಳಪತಿʼ ವಿಜಯ್ ಸಿನಿಮಾಕ್ಕಾಗಿ ಪೋಸ್ಟ್‌ಪೋನ್ ಆಗುತ್ತಾ ಪುತ್ರ ಜೇಸನ್ ಸಂಜಯ್ ಚೊಚ್ಚಲ ಚಿತ್ರ ʻಸಿಗ್ಮಾʼ?
ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಜುಲೈ 23 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳ ಕೊರತೆಯಿಂದಾಗಿ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಚಿತ್ರ ‘ಸಿಗ್ಮಾ’ ಬಿಡುಗಡೆಯನ್ನು ಆಗಸ್ಟ್ ತಿಂಗಳಿಗೆ ಮುಂದೂಡಲಾಗಿದೆ.
-
ತಮಿಳುನಾಡು ಮುಖ್ಯಮಂತ್ರಿ ʻದಳಪತಿʼ ವಿಜಯ್ ಅವರ ಕೊನೆಯ ಬಹುನಿರೀಕ್ಷಿತ ಚಿತ್ರ ʻಜನ ನಾಯಗನ್ʼ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆದರೆ, ಈ ಬಿಗ್ ಬಜೆಟ್ ಸಿನಿಮಾದ ಆಗಮನವು ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರ ಚೊಚ್ಚಲ ನಿರ್ದೇಶನದ ʻಸಿಗ್ಮಾʼ ಚಿತ್ರಕ್ಕೆ ಥಿಯೇಟರ್ ಸಮಸ್ಯೆ ತಂದೊಡ್ಡುವ ಮುನ್ಸೂಚನೆ ನೀಡಿದೆ.
ಜುಲೈ 31ರಂದು ತೆರೆಕಾಣಲು ಸಕಲ ಸಿದ್ಧತೆ ಮಾಡಿಕೊಂಡಿದ್ದ ‘ಸಿಗ್ಮಾ’ ಸಿನಿಮಾದ ಬಿಡುಗಡೆಯನ್ನು, ವಿಜಯ್ ಅವರ ಕೊನೆಯ ಸಿನಿಮಾದ ಭರ್ಜರಿ ಕ್ರೇಜ್‌ನಿಂದಾಗಿ ಆಗಸ್ಟ್ ತಿಂಗಳಿಗೆ ಮುಂದೂಡಲು ಲೈಕಾ ಪ್ರೊಡಕ್ಷನ್ಸ್ ನಿರ್ಧರಿಸಿದೆ ಎಂದು ಚಿತ್ರರಂಗದ ವಲಯಗಳು ತಿಳಿಸಿವೆ.
Jana Nayagan: ಮತ್ತೆ ಸೆನ್ಸಾರ್ ಮಂಡಳಿ ಮುಂದೆ ‘ಜನ ನಾಯಗನ್’ ?
ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಲು ಮುಂದೂಡಿಕೆ
ಎಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಸಿನಿಮಾವು ಜುಲೈ 23ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿರುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಇದು ವಿಜಯ್ ಅವರ ಕೊನೆಯ ಸಿನಿಮಾವಾಗಿರುವುದರಿಂದ, ಸಹಜವಾಗಿಯೇ ತಮಿಳುನಾಡು ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ದೊಡ್ಡ ಮಟ್ಟದ ಚಿತ್ರಮಂದಿರಗಳನ್ನು ಆವರಿಸಿಕೊಳ್ಳಲಿದೆ. ಪ್ರದರ್ಶಕರು ಕನಿಷ್ಠ ಎರಡು ವಾರಗಳವರೆಗೆ ಈ ಚಿತ್ರಕ್ಕೆ ಹೆಚ್ಚಿನ ಸ್ಕ್ರೀನ್‌ಗಳನ್ನು ನೀಡಲು ನಿರ್ಧರಿಸಿದ್ದಾರೆ. ಈ ಕಾರಣದಿಂದಾಗಿ, ನಂತರದ ವಾರದಲ್ಲೇ ಬರಬೇಕಿದ್ದ ಮಗನ ಚೊಚ್ಚಲ ಚಿತ್ರ ʻಸಿಗ್ಮಾʼಗೆ ಥಿಯೇಟರ್ ಕೊರತೆಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ನಿರ್ಮಾಪಕರು ಈ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
7 ತಿಂಗಳ ವಿಳಂಬದ ನಂತರ ತೆರೆಗೆ ʻಜನ ನಾಯಗನ್ʼ
ಸೆನ್ಸಾರ್ ಸರ್ಟಿಫಿಕೇಟ್ ಸಮಸ್ಯೆಯಿಂದಾಗಿ ಜನವರಿ 9ರಂದು ಬಿಡುಗಡೆಯಾಗಬೇಕಿದ್ದ ‘ಜನ ನಾಯಗನ್’ ಚಿತ್ರವು ಸುಮಾರು 7 ತಿಂಗಳು ತಡವಾಗಿ ಜುಲೈನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ ತಿಂಗಳಲ್ಲಿ ಈ ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದರೂ ಸಹ ಪ್ರೇಕ್ಷಕರಲ್ಲಿ ಇದರ ಮೇಲಿರುವ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಯುಕೆ ಮತ್ತು ಕೆನಡಾದಲ್ಲಿ ಜುಲೈ 24ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಈಗಾಗಲೇ ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಭಾರತದಲ್ಲಿ ಅದಕ್ಕಿಂತ ಒಂದು ದಿನ ಮುಂಚಿತವಾಗಿ, ಅಂದರೆ ಜುಲೈ 23ರಂದೇ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
Jana Nayagan: ಸಿಎಂ ವಿಜಯ್ ಅವರನ್ನು ಭೇಟಿಯಾದ ʻಜನ ನಾಯಗನ್ʼ ಸಹ-ನಿರ್ಮಾಪಕ; ಮೂವಿ ರಿಲೀಸ್ ಯಾವಾಗ?
ಹೈಸ್ಟ್ ಎಂಟರ್‌ಟೈನರ್ ʻಸಿಗ್ಮಾʼ
ಜೇಸನ್ ಸಂಜಯ್ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ‘ಸಿಗ್ಮಾ’ ಚಿತ್ರದಲ್ಲಿ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಕಾಮಿಡಿ ಮತ್ತು ನಿಧಿ ಹುಡುಕುವ ಸಾಹಸದ ಅಂಶಗಳನ್ನು ಒಳಗೊಂಡಿರುವ ಒಂದು 'ಹೈಸ್ಟ್ ಎಂಟರ್‌ಟೈನರ್' ಸಿನಿಮಾವಾಗಿದೆ. ತಮಿಳುನಾಡು ಮತ್ತು ಥೈಲ್ಯಾಂಡ್‌ನಾದ್ಯಂತ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ಸಂಗೀತ ನೀಡಿದ್ದಾರೆ. ಚಿತ್ರದ ತಾರಾಗಣದಲ್ಲಿ ರಾಜು ಸುಂದರಂ, ಸಂಪತ್ ರಾಜ್, ಶಿವ ಪಂಡಿತ್, ಶೀಲಾ ರಾಜ್‌ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
ಸದ್ಯ ತಂದೆಯ ಕೊನೆಯ ಸಿನಿಮಾದ ಅಬ್ಬರಕ್ಕೆ ಮಗನ ಮೊದಲ ಸಿನಿಮಾ ಸ್ವಲ್ಪ ದಿನಗಳ ಮಟ್ಟಿಗೆ ಬ್ರೇಕ್ ಹಾಕಿಕೊಂಡಿದ್ದು, ಆಗಸ್ಟ್‌ನಲ್ಲಿ ‘ಸಿಗ್ಮಾ’ ಹೊಸ ರಿಲೀಸ್ ದಿನಾಂಕದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ.