Jana Nayagan Release Date: ದಳಪತಿ ವಿಜಯ್ ಅಭಿನಯದ ಕೊನೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್: ಈ ವರ್ಷ ತೆರೆಗೆ ಬರುತ್ತಾ ʼಜನ ನಾಯಕನ್ʼ ?
Thalapathy Vijay: ಚಿತ್ರರಂಗಕ್ಕೆ ಬ್ರೇಕ್ ಹಾಕಿ ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದಾರೆ. ಸದ್ಯ ಅವರು ನಟಿಸುತ್ತಿರುವ ಕೊನೆಯ ಚಿತ್ರ ʼಜನ ನಾಯಕನ್ʼನ ಚಿತ್ರೀಕರಣ ನಡೆಯುತ್ತಿದೆ. ಇದೀಗ ಚಿತ್ರತಂಡ ರಿಲೀಸ್ ದಿನಾಂಕವನ್ನು ಪ್ರಕಟಿಸಿದೆ.

ʼಜನ ನಾಯಕನ್ʼ ಚಿತ್ರದ ಪೋಸ್ಟರ್.

ಚೆನ್ನೈ: ದೇಶ-ವಿದೇಶಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಸದ್ಯ ತಮ್ಮ ಕೊನೆಯ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಸಕ್ರಿಯ ರಾಜಕೀಯಕ್ಕೆ ಇಳಿದ ಅವರು ಸದ್ಯ ʼಜನ ನಾಯಕನ್ʼ (Jana Nayagan) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ತಮ್ಮ ಕೊನೆಯ ಚಿತ್ರ ಎಂದು ಅವರು ಈ ಹಿಂದೆಯೇ ಘೋಷಿಸಿದ್ದಾರೆ. ನಟನೆಗೆ ಬ್ರೇಕ್ ನೀಡಿ ರಾಜಕೀಯಕ್ಕೆ ತೆರಳುವುದಾಗಿ ಅವರು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅವರ ಈ ಕೊನೆಯ ಚಿತ್ರ ಕುತೂಹಲ ಕೆರಳಿಸಿದೆ. ಇದೀಗ ʼಜನ ನಾಯಕನ್ʼ ಚಿತ್ರತಂಡ ಬಹು ದೊಡ್ಡ ಅಪ್‌ಡೇಟ್ ಪ್ರಕಟಿಸಿದೆ (Jana Nayagan Release Date). ಹೌದು, ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.
ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಎಚ್.ವಿನೋದ್ (H.Vinoth) ಆ್ಯಕ್ಷನ್ ಹೇಳುತ್ತಿರುವ ಈ ಚಿತ್ರವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಇದೀಗ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡುವ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.
ವಿಜಯ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Thalapathy Vijay: ದಳಪತಿ ವಿಜಯ್ ಈಗ ʼಜನ ನಾಯಕನ್ʼ; ಕೊನೆ ಚಿತ್ರದ ಟೈಟಲ್ ರಿವೀಲ್
ಯಾವಾಗ ರಿಲೀಸ್?
ʼಜನ ನಾಯಕನ್ʼ ಈ ವರ್ಷ ರಿಲೀಸ್ ಆಗುವುದಿಲ್ಲ. ಬದಲಾಗಿ ಮುಂದಿನ ವರ್ಷಾರಂಭದಲ್ಲೇ ತೆರೆಗೆ ಅಪ್ಪಳಿಸಲಿದೆ. 2026ರ ಜ. 9ರಂದು ವಿಶ್ವಾದ್ಯಂತ ʼಜನ ನಾಯಕನ್ʼ ಬಿಡುಗಡೆಯಾಗಲಿದೆ. ಜ. 14ರಂದು ನಡೆಯುವ ಮಕರ ಸಂಕ್ರಾಂತಿ ಹಬ್ಬದ ಮೇಲೆ ಕಣ್ಣಿಟ್ಟಿರುವ ಚಿತ್ರತಂಡ ಇದೇ ವೇಳೆ ಸಿನಿಮಾ ತೆರೆಗೆ ತರಲು ಸಜ್ಜಾಗಿದೆ. ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿ ಮುಖ್ಯ ಹಬ್ಬವಾಗಿರುವುದರಿಂದ ಪ್ರತೀ ವರ್ಷ ಆ ಸಮಯದಲ್ಲಿ ಸ್ಟಾರ್‌ಗಳ ಚಿತ್ರಗಳನ್ನು ರಿಲೀಸ್ ಮಾಡಲಾಗುತ್ತದೆ. ಸಾರ್ವತ್ರಿಕ ರಜೆ ಇರುವುದರಿಂದ ದಾಖಲೆಯ ಕಲೆಕ್ಷನ್ ಕೂಡ ಆಗುತ್ತದೆ. ಇದು ವಿಜಯ್ ಅವರ ಕೊನೆಯ ಚಿತ್ರ ಆಗಿರುವ ಕಾರಣದಿಂದ ಈ ಸೆಂಟಿಮೆಂಟ್ ಕೂಡ ವರ್ಕೌಟ್ ಆಗುವ ಸಾಧ್ಯತೆ ಇದೆ.
ವಿಜಯ್ ದಾಖಲೆಯನ್ನೇ ಮೀರಿಸುತ್ತಾ?
ಈ ಹಿಂದೆಯೂ ವಿಜಯ್ ಅವರ ಚಿತ್ರಗಳು ಮಕರ ಸಂಕ್ರಾಂತಿ ಅಥವಾ ಪೊಂಗಲ್ ವೇಳೆ ತೆರೆಕಂಡಿವೆ. ʼಗಿಲ್ಲಿʼ, ʼಮೆರ್ಸಲ್ʼ, ʼವಾರಿಸುʼ ಚಿತ್ರಗಳು ಪೊಂಗಲ್ ವೇಳೆಯಲ್ಲಿ ತೆರೆಕಂಡು ದಾಖಲೆಯ ಕಲೆಕ್ಷನ್ ಮಾಡಿವೆ. ಈ ಬಾರಿ ʼಜನ ನಾಯಕನ್ʼ ಅದನ್ನೆಲ್ಲ ಮೀರಿಸಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.
ಆ್ಯಕ್ಷನ್ ಪ್ಯಾಕ್ಡ್ ಪಾಲಿಟಿಕಲ್ ಥ್ರಿಲ್ಲರ್ ಆಗಿರುವ ಇದರಲ್ಲಿ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ವಿಶೇಷ ಎಂದರೆ ವಿಜಯ್-ಪೂಜಾ ಕಾಂಬಿನೇಷನ್‌ನ 2ನೇ ಚಿತ್ರ ಇದು. ಈ ಹಿಂದೆ ಇವರು 2022ರಲ್ಲಿ ಬಿಡುಗಡೆಯಾದ ನೆಲ್ಸನ್ ದಿಲೀಪ್‌ಕುಮಾರ್ ಅಭಿನಯದ ʼಬೀಸ್ಟ್ʼ ಸಿನಿಮಾದಲ್ಲಿ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಯಶಸ್ಸು ಕಂಡಿದ್ದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ನೀಡಿದ ಸಂಗೀತ ಗಮನ ಸೆಳೆದಿತ್ತು. ʼಜನ ನಾಯಕನ್ʼ ಸಿನಿಮಾಕ್ಕೂ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಒದಗಿಸುತ್ತಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಮಮಿತಾ ಬೈಜು, ಪ್ರಿಯಾಮಣಿ, ಬಾಬ್ಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ನರೇನ್, ವರಲಕ್ಷ್ಮೀ ಶರತ್‌ಕುಮಾರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ತಯಾರಾಗಲಿದೆ. ಇದು ಎಚ್.ವಿನೋತ್ ಮತ್ತು ವಿಜಯ್ ಕಾಂಬಿನೇಷನ್‌ನ ಮೊದಲ ಚಿತ್ರವೂ ಹೌದು.