ʻನನ್ನ ಕೊನೆಯ ಸಿನಿಮಾದ ವಿರುದ್ಧ ಪಿತೂರಿ ಮಾಡಿದ್ರುʼ; ಎಲೆಕ್ಷನ್ ಪ್ರಚಾರದಲ್ಲಿ ʻಜನ ನಾಯಗನ್ʼ ಬಗ್ಗೆ ʻದಳಪತಿʼ ವಿಜಯ್ ಮಾತು
ʻಜನ ನಾಯಗನ್ʼ ಚಿತ್ರದ ಬಿಡುಗಡೆ ವಿಳಂಬದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ನಟ, ಟಿವಿಕೆ ಅಧ್ಯಕ್ಷ ವಿಜಯ್ ಗಂಭೀರ ಆರೋಪ ಮಾಡಿದ್ದಾರೆ. ತಿರುಚಿಯಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಅವರು, ಜನರಿಗೂ ತಮಗೂ ಇರುವ ಬಾಂಧವ್ಯ ಕಂಡು ಎದುರಾಳಿಗಳು ಹೆದರಿದ್ದಾರೆ ಎಂದು ಗುಡುಗಿದ್ದಾರೆ.
-
ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ಮತ್ತು ನಟ ವಿಜಯ್ ಅವರು ಚುನಾವಣಾ ಪ್ರಚಾರದಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಗುಡುಗಿದ್ದಾರೆ. ತಮ್ಮ ವೃತ್ತಿಜೀವನದ ಕೊನೆಯ ಸಿನಿಮಾವಾದ 'ಜನ ನಾಯಗನ್' ಬಿಡುಗಡೆ ವಿಳಂಬದ ಹಿಂದೆ ಜಂಟಿ ಪಿತೂರಿ ಇದೆ ಎಂದು ನೇರವಾಗಿ ಆರೋಪಿಸಿದ್ದಾರೆ. ತಿರುಚಿ (ಪೂರ್ವ) ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಂತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ವಿಜಯ್, ಯಾವುದೇ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಹೇಳದಿದ್ದರೂ, ಪರೋಕ್ಷವಾಗಿ ಡಿಎಂಕೆ ಮತ್ತು ಬಿಜೆಪಿ ಎರಡೂ ಒಂದೇ ಎಂದು ಕಿಡಿಕಾರಿದ್ದಾರೆ.
"ಅನೇಕ ಪ್ರಭಾವಿ ಶಕ್ತಿಗಳು ನನ್ನನ್ನು ಎದುರಿಸಲು ಒಂದಾಗಿವೆ, ಅದನ್ನು ನಾನು ನಿಮಗೆ ಬಿಡಸಿ ಹೇಳಬೇಕಿಲ್ಲ. 'ಜನ ನಾಯಗನ್' ಸಿನಿಮಾ ಬಿಡುಗಡೆಯಾದರೆ ಜನರಿಗೂ ನನಗೂ ಇರುವ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ಭಯ ಅವರಿಗಿದೆ. ಅದಕ್ಕಾಗಿಯೇ ಈ ಸಿನಿಮಾವನ್ನು ತಡೆಯುವ ಜಂಟಿ ಸಂಚು ನಡೆದಿದೆ. ಕರೂರ್ ಘಟನೆಯ ಸುತ್ತ ನಡೆದ ಪಿತೂರಿ ನಡೆದಿದೆ" ಎಂದು ದಳಪತಿ ವಿಜಯ್ ಅವರು ಹೇಳಿದ್ದಾರೆ.
ದಳಪತಿ ವಿಜಯ್ 'ಜನ ನಾಯಗನ್' ಬಿಡುಗಡೆಗೆ ಕಾನೂನು ಸಂಕಷ್ಟ: ಜನವರಿ 27ಕ್ಕೆ ಹೈಕೋರ್ಟ್ ಅಂತಿಮ ತೀರ್ಪು!
ನಿಮಗೆ ಎಂದಿಗೂ ಸುಳ್ಳು ಹೇಳುವುದಿಲ್ಲ
"ನಾನು ಎಲ್ಲಾ ಸುಖ-ಸೌಲಭ್ಯಗಳನ್ನು ಬಿಟ್ಟು ನಿಮಗಾಗಿ ಇಲ್ಲಿಗೆ ಬಂದಿದ್ದೇನೆ. ನಿಮ್ಮ ಪ್ರೀತಿಯ ಋಣ ತೀರಿಸಲು ಮತ್ತು ನಿಮ್ಮ ನೋವಿನಲ್ಲಿ ಭಾಗಿಯಾಗಲು ನಾನು ಸಿದ್ಧನಿದ್ದೇನೆ. ನಾನು ನಿಮಗೆ ಎಂದಿಗೂ ಸುಳ್ಳು ಹೇಳುವುದಿಲ್ಲ ಅಥವಾ ಮೋಸ ಮಾಡುವುದಿಲ್ಲ. ಜನವಿರೋಧಿ ಕೆಲಸ ಮಾಡುತ್ತಿರುವ ಸ್ಟಾಲಿನ್ ಸರ್ ಬೇಕೋ ಅಥವಾ ನಿಮಗಾಗಿ ಕೆಲಸ ಮಾಡುವ ವಿಜಯ್ ಬೇಕೋ? ಈ ಚುನಾವಣೆ ನಿರ್ಧರಿಸುವುದು ಅದನ್ನೇ" ಎಂದು ವಿಜಯ್ ಹೇಳಿದ್ದಾರೆ.
ವಿಜಯ್ ಚುನಾವಣಾ ಪ್ರಚಾರದ ವಿಡಿಯೋ
"From the Karur incident scheme to my last film #JanaNayagan, what if it made our close-to-heart relationship even stronger? And what if that film became a powerful weapon in this election? So they deceived me… I need justice too.."
— Laxmi Kanth (@iammoviebuff007) April 2, 2026
- #ThalapathyVijaypic.twitter.com/tMWACIScOO
'ಜನ ನಾಯಗನ್' ಬಿಡುಗಡೆ ವಿಳಂಬ
ಎಚ್. ವಿನೋದ್ ನಿರ್ದೇಶನದ 'ಜನ ನಾಯಗನ್' ಚಿತ್ರವು ವಿಜಯ್ ರಾಜಕೀಯ ಪ್ರವೇಶಕ್ಕೂ ಮುನ್ನ ಜನವರಿ 9 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ (CBFC) ಪ್ರಮಾಣಪತ್ರ ಸಿಗದ ಕಾರಣ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಇದುವರೆಗೂ ಆ ಸಿನಿಮಾ ತೆರೆಕಂಡಿಲ್ಲ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದಿರಂದ ಅದು ತೆರೆಕಾಣುವುದೂ ಇಲ್ಲ. ಸದ್ಯದ ಮಾಹಿತಿ ಪ್ರಕಾರ, ಏಪ್ರಿಲ್ 24 ಅಥವಾ 30ರಂದು ಈ ಚಿತ್ರವನ್ನು ವಿಶ್ವಾದ್ಯಂತ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಮಮಿತಾ ಬೈಜು, ಪೂಜಾ ಹೆಗ್ಡೆ, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ಬಾಬಿ ಡಿಯೋಲ್ ನಟಿಸಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಇದು ವಿಜಯ್ ಅವರ ಕೊನೆಯ ಸಿನಿಮಾವಾಗಿದೆ.