‘ಪೊಲೀಸ್ ಕಂಪ್ಲೇಂಟ್’ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್ - ರಾಗಿಣಿ ದ್ವಿವೇದಿ; ಟೀಸರ್ ರಿಲೀಸ್ ಮಾಡಿದ ನಟಿ ಪ್ರೇಮಾ
‘ಪೊಲೀಸ್ ಕಂಪ್ಲೇಂಟ್’ ಸಿನಿಮಾದ ಮೂಲಕ ನಟಿ ರಾಗಿಣಿ ದ್ವಿವೇದಿ ಮತ್ತೆ ಆ್ಯಕ್ಷನ್ ಅವತಾರ ತಾಳಿದ್ದಾರೆ. ವರಲಕ್ಷ್ಮೀ ಶರತ್‌ಕುಮಾರ್ ಜೊತೆಗೂಡಿ ನಟಿಸಿರುವ ಈ ಚಿತ್ರವು ಆ್ಯಕ್ಷನ್, ಹಾರರ್ ಮತ್ತು ತಾಯಿ-ಮಗನ ಎಮೋಷನಲ್ ಕಥಾಹಂದರ ಹೊಂದಿದೆ. ಇತ್ತೀಚೆಗಷ್ಟೇ ನಟಿ ಪ್ರೇಮಾ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
-
ನಟಿ ಮಾಲಾಶ್ರೀ ಅವರು ಚಿತ್ರರಂಗದಲ್ಲಿ ಪೀಕ್‌ನಲ್ಲಿದ್ದ ಸಮಯದಲ್ಲಿ ಸಾಕಷ್ಟು ಮಹಿಳಾ ಪ್ರಧಾನ ಆ್ಯಕ್ಷನ್ ಸಿನಿಮಾಗಳು ತೆರೆಕಾಣುತ್ತಿದ್ದವು. ಇದೀಗ ಆ ಪ್ರಮಾಣ ಕಡಿಮೆ ಆಗಿದೆ. ಒಂದು ಟೈಮ್‌ನಲ್ಲಿ ರಾಗಿಣಿ ಕೂಡ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರಗಳಲ್ಲಿ ಮಿಂಚಿದ್ದರು. ಇದೀಗ ಪುನಃ ಅದೇ ಜೋಶ್‌ನಲ್ಲಿ ಹೊಸದೊಂದು ಆ್ಯಕ್ಷನ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಬಹುಭಾಷಾ ನಟಿ ವರಲಕ್ಷ್ಮೀ ಶರತ್‌ಕುಮಾರ್ ಕೂಡ ಇದರಲ್ಲಿ ಬಣ್ಣ ಹಚ್ಚಿದ್ದಾರೆ. ಅಂದಹಾಗೆ, ಆ ಸಿನಿಮಾ ಹೆಸರು ‘ಪೊಲೀಸ್ ಕಂಪ್ಲೇಂಟ್’!
ಟೀಸರ್ ಮತ್ತು ಹಾಡು ರಿಲೀಸ್
ಈಚೆಗಷ್ಟೇ ‘ಮಾರ್ಕ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ವರಲಕ್ಷ್ಮೀ ಶರತ್‌ಕುಮಾರ್ ಈಗ ‘ಪೊಲೀಸ್ ಕಂಪ್ಲೇಂಟ್’ ಚಿತ್ರದಲ್ಲಿ ನಟಿಸಿದ್ದಾರೆ. ವರಲಕ್ಷ್ಮಿ, ರಾಗಿಣಿ ದ್ವಿವೇದಿ ಎದುರಲ್ಲಿ ನವೀನ್ ಚಂದ್ರ, ಕೃಷ್ಣ ಸಾಯಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಈಚೆಗೆ ನಟಿ ಪ್ರೇಮಾ ಅವರು ‘ಪೊಲೀಸ್ ಕಂಪ್ಲೇಂಟ್’ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ. ಮೊದಲ ಹಾಡನ್ನು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್. ಆ ರ್. ಕೆ ವಿಶ್ವನಾಥ್ ಬಿಡುಗಡೆಗೊಳಿಸಿದ್ದಾರೆ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
Varalaxmi Sarathkumar: ಕಿಚ್ಚನ ನಾಯಕಿ ಇದೀಗ ನಿರ್ದೇಶಕಿ; ಕಾಲಿವುಡ್‌ನಲ್ಲಿ ಹೊಸ ಸಾಹಸಕ್ಕೆ ಮುಂದಾದ ವರಲಕ್ಷ್ಮೀ
ರಾಗಿಣಿ ದ್ವಿವೇದಿ ಏನಂದ್ರು ನೋಡಿ
‘ಪೊಲೀಸ್ ಕಂಪ್ಲೇಂಟ್’ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, "ನನ್ನ ಸಿನಿಮಾ ಕೆರಿಯರ್‌ನಲ್ಲಿ ಇದೊಂದು ವಿಭಿನ್ನ ಸಿನಿಮಾ ಎಂದು ಹೇಳಬಹುದು. ಇದರಲ್ಲಿ ತಾಯಿ ಮತ್ತು ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜೊತೆಗೆ ಎಮೋಷನ್ಸ್ ಕೂಡ ಸಿನಿಮಾದಲ್ಲಿದೆ. ಎಲ್ಲಾ ಥರದ ಆಡಿಯನ್ಸ್‌ಗೂ ಈ ಸಿನಿಮಾ ಇಷ್ಟವಾಗಲಿದೆ" ಎಂದು ರಾಗಿಣಿ ಹೇಳಿದರು.
ನಿರ್ದೇಶಕರು ಯಾರು?
ಈ ಹಿಂದೆ ಪೂಜಾಗಾಂಧಿ ಅಭಿನಯದ ‘ಅನು’, ‘ದಂಡು’, ‘ಆಪ್ತ’ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಸಂಜೀವ ಮೆಗೋಟಿ ಅವರು ಈಗ ‘ಪೊಲೀಸ್ ಕಂಪ್ಲೈಂಟ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಎಂ.ಎಸ್.ಕೆ ಪ್ರಮೀದಾಶ್ರೀ ಫಿಲಂಸ್ ಬ್ಯಾನರಿನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ‘ಪೊಲೀಸ್ ಕಂಪ್ಲೇಂಟ್’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಿರ್ದೇಶಕರು ಹೇಳಿದ್ದೇನು?
"ಸುಮಾರು ಹತ್ತು ವರ್ಷದ ನಂತರ ‘ಪೊಲೀಸ್ ಕಂಪ್ಲೇಂಟ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾನು ಮತ್ತೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಆ್ಯಕ್ಷನ್ ಕಂ ಹಾರರ್-ಥ್ರಿಲ್ಲರ್ ಕಥಾಹಂದರದ ಸಿನಿಮಾ. ನಾವು ಮಾಡಿದ ಕರ್ಮ ಹೇಗೆ ನಮ್ಮನ್ನು ಕಾಡುತ್ತದೆ ಎಂಬ ಒಂದು ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಏಕಕಾಲಕ್ಕೆ ಎರಡೂ ಭಾಷೆಗಳಲ್ಲೂ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆ ಇದೆ" ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಸಂಜೀವ್ ಮೆಗೋಟಿ.
ಕನ್ನಡಕ್ಕೆ ಎಂಟ್ರಿ ಕೊಟ್ಟ ಕೃಷ್ಣ ಸಾಯಿ
ಈ ಸಿನಿಮಾದ ಬಗ್ಗೆ ಮಾತನಾಡಿದ ನಟ ಕೃಷ್ಣಸಾಯಿ, "ನಾನು ತೆಲುಗಿನಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ನಾಯಕ ನಟನಾಗಿ ಇದು ನನ್ನ ಮೊದಲ ಸಿನಿಮಾ. ಈ ಸಿನಿಮಾದ ಕಥೆ ಮತ್ತು ನನ್ನ ಪಾತ್ರ ತುಂಬಾ ಚೆನ್ನಾಗಿದೆ" ಎಂದು ಹೇಳಿದರು. ‘ಪೊಲೀಸ್ ಕಂಪ್ಲೈಂಟ್’ ಚಿತ್ರಕ್ಕೆ ಆರೋಹಣ ಸುಧೀಂದ್ರ ಸಂಗೀತ ಸಂಯೋಜಿಸಿದ್ದು, ಹರೀಶ್ ಸೊಂಡೇಕೊಪ್ಪ ಛಾಯಾಗ್ರಹಣ ಮಾಡಿದ್ದಾರೆ.