ʻವಸುದೇವ ಕುಟುಂಬʼ ಸೀರಿಯಲ್ ನಿರ್ಮಾಪಕರ ವಿರುದ್ಧ ರೊಚ್ಚಿಗೆದ್ದ ʻಬಿಗ್ ಬಾಸ್ʼ ಖ್ಯಾತಿಯ ನಟಿ ಹಂಸ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು
‘ವಸುದೇವ ಕುಟುಂಬ’ ಧಾರಾವಾಹಿಯ ನಿರ್ಮಾಪಕ ಕೊರಮಂಗಲ ಅನಿಲ್ ಕಲಾವಿದರಿಗೆ ಸಂಭಾವನೆ ನೀಡದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಗ್ ಬಾಸ್ ಖ್ಯಾತಿಯ ನಟಿ ಹಂಸ ಈ ಬಗ್ಗೆ ಧ್ವನಿ ಎತ್ತಿದ್ದು, ಶೂಟಿಂಗ್ ವೇಳೆ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ನಿರ್ಮಾಪಕರ ಉಡಾಫೆ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ʻವಸುದೇವ ಕುಟುಂಬʼ ಸೀರಿಯಲ್‌ನಲ್ಲಿ ನಟಿಸಿದ ಕಲಾವಿದರಿಗೆ ಸರಿಯಾಗಿ ಪೇಮೆಂಟ್ ನೀಡಿಲ್ಲ ಎಂಬ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಸಂಭಾವನೆನಯ್ನ ನೀಡದ ನಿರ್ಮಾಪಕರ ಮೇಲೆ ಆ ಧಾರಾವಾಹಿಯ ಕಲಾವಿದರು ಗರಂ ಆಗಿದ್ದಾರೆ. ʻಬಿಗ್ ಬಾಸ್ʼ ಖ್ಯಾತಿಯ ನಟಿ ಹಂಸ ಅವರು ಕೂಡ ʻವಸುದೇವ ಕುಟುಂಬʼ ಸೀರಿಯಲ್‌ನಲ್ಲಿ ನಟಿಸಿದ್ದು, ಅವರಿಗೂ ಸಹ ಸಂಭಾವನೆ ಸಿಕ್ಕಿಲ್ಲ. ಈ ಸಂಬಂಧ ನಿರ್ಮಾಪಕರ ವಿರುದ್ಧ ಕೆಂಡಕಾರಿದ್ದಾರೆ.
ನಟಿ ಹಂಸ ಏನಂದ್ರು?
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಟಿ ಹಂಸ, "ಕೊರಮಂಗಲ ಅನಿಲ್ ಎಂಬುವವರು ವಸುದೇವ ಕುಟುಂಬ ಧಾರಾವಾಹಿಗೆ ನಿರ್ಮಾಪಕರಾಗಿದ್ದರು. ಆ ಸೀರಿಯಲ್‌ನಲ್ಲಿ ನನಗೂ ಒಂದು ಪಾತ್ರವಿತ್ತು. ಚಾನೆಲ್‌ನಿಂದ ನಿಮಗೆ ಪೇಮೆಂಟ್ ಆಗಿಲ್ಲದಿದ್ದರೂ, ನೀವು ನಮಗೆ ಸರಿಯಾದ ಸಮಯಕ್ಕೆ ಪೇಮೆಂಟ್ ಮಾಡುತ್ತೀರಲ್ವಾ ಎಂದು ನಾನು ಪ್ರೊಡಕ್ಷನ್ ಹೌಸ್ ಜೊತೆ ಕೇಳಿದ್ದೆ. ಹೌದು, ಚಾನೆಲ್‌ಗೂ ಇದಕ್ಕೂ ಸಂಬಂಧ ಇಲ್ಲ. ನಾವೇ ಪೇಮೆಂಟ್ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಪೇಮೆಂಟ್ ಕೇಳಿದರೆ, ಚಾನೆಲ್ ಅವರು ಕೊಟ್ಟಿಲ್ಲ ಎಂದು ಹೇಳುತ್ತಾರೆ. ಚಾನೆಲ್ ಅವರು ಕೊಟ್ಟಮೇಲೆ ನೀಡುವುದಕ್ಕೆ ಇವರೇನ್ ಬ್ರೋಕರಾ? ನಿರ್ಮಾಪಕರು ಅಂದ್ರೆ ಹೇಗಿರಬೇಕು? ಮೊದಲು ಕಲಾವಿದರಿಗೆ ಪೇಮೆಂಟ್ ನೀಡಬೇಕು. ಆಮೇಲೆ ಚಾನೆಲ್ ಅವರಿಂದ ಪಡೆದುಕೊಳ್ಳಬೇಕು" ಎಂದು ಹೇಳಿದ್ದಾರೆ.
BBK 11 Final: ಮೀಸಲಾತಿಯಿಂದಲೇ ಹನುಮಂತ ಫಿನಾಲೆ ಎಂಟ್ರಿ... ವಿವಾದಾತ್ಮಕ ಹೇಳಿಕೆನೀಡಿದ ನಟಿ ಹಂಸ ಫುಲ್ ಟ್ರೋಲ್
ಆರಂಭದಿಂದಲೂ ಸಮಸ್ಯೆಗಳೇ
"ಈ ಸೀರಿಯಲ್‌ಗೆ ಹೋದಾಗಿನಿಂದಲೂ ಸಮಸ್ಯೆಗಳೇ. ಇಂಥ ಕಚಡಾ ಪ್ರೊಡಕ್ಷನ್ಸ್ ಹೌಸ್‌ನ ನಾನು ಇನ್ನೊಂದು ನೋಡಿಯೇ ಇಲ್ಲ. ಒಂದೊಳ್ಳೇ ಊಟ ಇಲ್ಲ. ಚಿಕ್ಕಮಗಳೂರಿಗೆ ಶೂಟಿಂಗ್‌ಗೆ ಕರೆದುಕೊಂಡು ಹೋಗಿದ್ದರು. ಆಗ ಸರಿಯಾದ ವ್ಯವಸ್ಥೆ ಕೂಡ ಮಾಡಿರಲಿಲ್ಲ. ಡ್ರೈವರ್‌ಗಳು ರೂಮ್ ಇಲ್ಲದೇ ಕಾರಿನಲ್ಲೇ ಮಲಗಿದ್ದರು. ಕಲಾವಿದರಿಗೂ ಸರಿಯಾದ ವ್ಯವಸ್ಥೆ ಕೊಟ್ಟಿರಲಿಲ್ಲ. ರೂಮ್, ಸ್ನಾನಕ್ಕೂ ಕೂಡ ಸಮಸ್ಯೆ ಆಯಿತು. ಪೇಮೆಂಟ್ ಕೇಳಿದರೆ, ಸಾಲದಲ್ಲಿದ್ದೀವಿ, ಸಮಸ್ಯೆ ಇದೆ ಅಂತ ಹೇಳ್ತಾನೇ ಇದ್ರು. ಆಯ್ತು ನಿಮಗೆ ಆದಾಗ ಕೊಡು ಅಂತ ಸಹಕಾರ ಮಾಡಿಕೊಂಡು ಬಂದೆವು" ಎಂದು ಹಂಸ ಹೇಳಿದ್ದಾರೆ.
ನಮಗೆ ಪೇಮೆಂಟ್ ಕೊಟ್ಟಿಲ್ಲ
"ಟಿಆರ್‌ಪಿ ವಿಚಾರದಲ್ಲಿ ಏನೋ ಮ್ಯಾನಿಪುಲೇಟ್ ಮಾಡುವುದಕ್ಕೆ ಹೋಗಿದ್ದಾನೆ, ಅದು ಚಾನೆಲ್ ಅವರಿಗೆ ಗೊತ್ತಾಗಿ, ಇವನನ್ನು ಕಿತ್ತು ಬಿಸಾಕಿದರು. ಆನಂತರ ಬೇರೆ ಪ್ರೊಡಕ್ಷನ್ಸ್ ಬಂದಿದ್ದಾರೆ. ಆದರೆ ಇವನು ನಮಗೆ ಹಳೆಯ ಪೇಮೆಂಟ್ ಕೊಟ್ಟಿಲ್ಲ. ಚಾನೆಲ್ ಅವರಿಗೆ ಈ ಬಗ್ಗೆ ಕೇಳಿದೆವು. ನಾವು ಪೇಮೆಂಟ್ ರಿಲೀಸ್ ಮಾಡುತ್ತೇವೆ, ಆದರೆ ಅವರು ನಿಮಗೆ ಪೇಮೆಂಟ್ ಮಾಡುತ್ತೇವೆ ಎಂದು ಇಮೇಲ್ ಮಾಡೋಕೆ ಹೇಳಿ ಎಂದರು. ಆದರೆ ಇವರು ಇಮೇಲ್ ಮಾಡೋದಕ್ಕೆ ರೆಡಿ ಇಲ್ಲ. ನಾವೇನ್ ಚಾನೆಲ್ ಅವರ ಹತ್ರ ಭಿಕ್ಷೆ ಬೇಡಬೇಕಿಲ್ಲ ಅಂತ ಹೇಳ್ತಾರೆ. ಅಲ್ಲ, ಇವರು ಭಿಕ್ಷೆ ಬೇಡಿಯೇ ತಾನೇ ಚಾನೆಲ್ ಅವರ ಹತ್ರ ಸ್ಲಾಟ್ ಪಡೆದುಕೊಂಡಿದ್ದು" ಎಂದಿದ್ದಾರೆ ನಟಿ ಹಂಸ.
ಫೋನ್ ಮಾಡಿದರೂ ಉತ್ತರವಿಲ್ಲ
"ನಾವು ತುಂಬಾ ತಾಳ್ಮೆಯಿಂದ ಕಾದಿದ್ದೇವೆ. ಕಾಲ್ ಮಾಡಿದ್ದೇವೆ, ಮೇಸೆಜ್ ಮಾಡಿದ್ದೇವೆ. ಯಾವುದಕ್ಕೂ ಉತ್ತರ ಇಲ್ಲ. ಏನಾದರೂ ಕೇಳೋದಕ್ಕೆ ಹೋದರೆ, ರೌಡಿಸಂ ಮಾಡೋಕೆ ಬಂದಿದ್ದಾರಾ ಅನ್ನೋದು. ಅಲ್ಲಾ ರೌಡಿಸಂ ಅಂದರೆ ಏನು? ಅವರ ಹತ್ರ ಇರೋ ದುಡ್ಡನ್ನು ಕಿತ್ಕೋಳೋಕೆ ಹೋಗೋದು ರೌಡಿಸಂ. ನಮ್ಮ ದುಡ್ಡನ್ನು ಕೇಳೋದು ಅಲ್ಲ. ನಾವು ಹೊಡೆಯೋಕೆ ಹೋಗಿದ್ವಿ ಅಂತ ಆರೋಪ ಮಾಡ್ತಾನೆ. ಅದಕ್ಕೆ ಸಾಕ್ಷಿ ತೋರಿಸಲಿ? ಹೌದು, ಬೈದಿದ್ದೇವೆ. ನಮ್ಮ ದುಡ್ಡು ಸಿಗದೇ ಇದ್ದಾಗ ಕೇಳಲೇಬೇಕಾಗುತ್ತದೆ. ನಮಗೂ ಕೂಡ ಕಮಿಟ್‌ಮೆಂಟ್ಸ್ ಇರುತ್ತವೆ. ನಾವು ಮನೆಗೆ ಬಾಡಿಗೆ ಕಟ್ಟಿಲ್ಲ ಅಂದರೆ ಓನರ್ ಕೇಳುತ್ತಾರೆ" ಎಂದು ಹಂಸ ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲು
‘ವಸುದೇವ ಕುಟುಂಬ’ ಧಾರಾವಾಹಿಯ ಕಲಾವಿದರಿಗೆ ನಿರ್ಮಾಪಕರು ಸಂಭಾವನೆ ನೀಡದೇ ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸದ್ಯ ನಿರ್ಮಾಪಕರ ವಿರುದ್ಧ ಕಲಾವಿದರು ಬ್ಯಾಟರಾಯನಪುರ ಪೊಲೀಸರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. "ಹಣ ನೀಡದಿರುವ ಬಗ್ಗೆ ಕೇಳಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ, ಇದೀಗ ನಮ್ಮ ವಿರುದ್ಧವೇ ಬೆದರಿಕೆ ಮತ್ತು ಕಿರುಕುಳ ಆರೋಪ ಮಾಡಿ, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದ್ದರಿಂದ ನಮಗೆ ನೀಡಬೇಕಿರುವ ದುಡ್ಡನ್ನು ತಕ್ಷಣ ನೀಡುವಂತೆ, ನಿರ್ಮಾಣ ಸಂಸ್ಥೆಯಿಂದ ನಮ್ಮ ಮೇಲೆ ಮಾಡಲಾಗಿರುವ ಆರೋಪಗಳಿಂದ ನಮಗೆ ರಕ್ಷಣೆ ಒದಗಿಸಿ" ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.