ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾದಲ್ಲಿ ವಾಸುಕಿ ವೈಭವ್ ಹಾಡು; ಕನ್ನಡದ ಪ್ರತಿಭೆಗೆ ಟಾಲಿವುಡ್‌ನಲ್ಲಿ ಭಾರಿ ಮೆಚ್ಚುಗೆ
ಪ್ರಭಾಸ್ ನಟನೆಯ ಬಹುನಿರೀಕ್ಷಿತ ʻಸ್ಪಿರಿಟ್ʼ ಸಿನಿಮಾಕ್ಕೆ ಕನ್ನಡದ ವಾಸುಕಿ ವೈಭವ್ ಎಂಟ್ರಿ ಕೊಟ್ಟಿದ್ದಾರೆ. ʻಸ್ಪಿರಿಟ್ʼ ಸಿನಿಮಾದಲ್ಲಿ ವಾಸುಕಿ ಸಂಯೋಜಿಸಿರುವ ಹಾಡೊಂದು ಇರಲಿದ್ದು, ಅದು ಚಿತ್ರಮಂದಿರಗಳಲ್ಲಿ ದೊಡ್ಡ ಸಂಚಲನ ಸೃಷ್ಟಿಸಲಿದೆ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಭರವಸೆ ವ್ಯಕ್ತಪಡಿಸಿದ್ದಾರೆ.
-
'ರಾಮಾ ರಾಮಾ ರೇ', 'ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು' ಹಾಗೂ 'ಬಡವ ರಾಸ್ಕಲ್' ಮುಂತಾದ ಸಿನಿಮಾಗಳ ಮೂಲಕ ಗಮನಸೆಳೆದಿರುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ಇದೀಗ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರು ಸಂಗೀತ ನೀಡಿರುವ ಹೊಸ ತೆಲುಗು ಚಿತ್ರ 'ರೋಮಾಂಚಕಂ' ಸೆಪ್ಟೆಂಬರ್ 3 ರಂದು ತೆರೆಕಂಡಿದ್ದು, ಅಷ್ಟರಲ್ಲಾಗಲೇ ಅವರಿಗೆ ಟಾಲಿವುಡ್‌ನಲ್ಲಿ ಮತ್ತೊಂದು ಬಹುದೊಡ್ಡ ಯೋಜನೆ ಒಲಿದುಬಂದಿದೆ.
ಪ್ರಭಾಸ್ ಸಿನಿಮಾದಲ್ಲಿ ವಾಸುಕಿ ಹಾಡು
ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಸ್ಪಿರಿಟ್' ಸಿನಿಮಾಗೆ ವಾಸುಕಿ ವೈಭವ್ ಒಂದು ಹಾಡನ್ನು ಸಂಯೋಜಿಸಿದ್ದಾರೆ ಎಂಬ ವಿಚಾರವನ್ನು ಸ್ವತಃ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಬಹಿರಂಗಪಡಿಸಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅರ್ಪಿಸಿ, ಅವರ ಸಹೋದರ ಪ್ರಣಯ್ ವಂಗಾ ನಿರ್ಮಾಣ ಮಾಡಿರುವ 'ರೋಮಾಂಚಕಂ' ಚಿತ್ರಕ್ಕೆ ವಾಸುಕಿ ಸಂಗೀತ ನೀಡಿದ್ದಾರೆ. ಈ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಸಂದೀಪ್ ರೆಡ್ಡಿ ವಂಗಾ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ವಾಸುಕಿ ವೈಭವ್ ಅವರ ಕೆಲಸವನ್ನು ಮೆಚ್ಚಿ ಮಾತನಾಡಿದ ಸಂದೀಪ್, "ಸ್ಪಿರಿಟ್ ಚಿತ್ರಕ್ಕಾಗಿ ವಾಸುಕಿ ಸಂಯೋಜಿಸಿರುವ ಹಾಡು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಶಿಳ್ಳೆ ಹೊಡೆಸಲಿದೆ" ಎಂದು ಹೇಳಿದ್ದಾರೆ.
Spirit release : ಪ್ರಭಾಸ್ ʻಸ್ಪಿರಿಟ್ʼ ಪೋಸ್ಟ್‌ಪೋನ್? ಏನಿದು ಗಾಸಿಪ್?
ವಾಸುಕಿಯನ್ನು ಹೊಗಳಿದ ವಿಜಯ್ ದೇವರಕೊಂಡ
'ರೋಮಾಂಚಕಂ' ಚಿತ್ರದ ಬಳಿಕ ತೆಲುಗು ಚಿತ್ರರಂಗದಲ್ಲಿ ವಾಸುಕಿಗೆ ಸಾಲು ಸಾಲು ಅವಕಾಶಗಳು ಸಿಗಲಿವೆ ಎಂದೂ ಸಂದೀಪ್ ರೆಡ್ಡಿ ವಂಗಾ ಭವಿಷ್ಯ ನುಡಿದಿದ್ದಾರೆ. ಈ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ನಟ ವಿಜಯ್ ದೇವರಕೊಂಡ ಕೂಡ, "ರೋಮಾಂಚಕಂ ಚಿತ್ರದ 'ರಾಧಾ ರಮಣ' ಹಾಡು ನಮ್ಮ ಮನೆಯಲ್ಲಿ ಸದಾ ಪ್ಲೇ ಆಗುತ್ತಿರುತ್ತದೆ; ವಾಸುಕಿಗೆ ಉತ್ತಮ ಭವಿಷ್ಯವಿದೆ" ಎಂದು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.
'ರೋಮಾಂಚಕಂ' ಮೂಲಕ ಮೊದಲ ಹೆಜ್ಜೆ
ವೇಣುಗೋಪಾಲ್ ರೆಡ್ಡಿ ನಿರ್ದೇಶನದ 'ರೋಮಾಂಚಕಂ' ಒಂದು ಪ್ರೇಮಕಥಾ ಚಿತ್ರವಾಗಿದ್ದು, ಸುಮಂತ್ ಪ್ರಭಾಸ್ ಹಾಗೂ ಅನಂತಿಕಾ ಸುನಿಲ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕರಾಗಿ ಇದು ವೇಣುಗೋಪಾಲ್ ಅವರಿಗೆ ಚೊಚ್ಚಲ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ನೆಲೆ ಕಂಡುಕೊಂಡಿರುವ ವಾಸುಕಿ ಅವರಿಗೆ 'ರೋಮಾಂಚಕಂ' ತೆಲುಗು ಚಿತ್ರರಂಗದಲ್ಲಿ ಹೊಸ ಹೆಜ್ಜೆಯಾಗಿದೆ. 'ಬಿಗ್ ಬಾಸ್ ಕನ್ನಡ'ದ ಮೂಲಕ ಇನ್ನಷ್ಟು ವ್ಯಾಪಕ ಜನಪ್ರಿಯತೆ ಗಳಿಸಿದ ಅವರು, ನಟರಾಗಿಯೂ ಬಣ್ಣಹಚ್ಚಿದ್ದಾರೆ.