ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಪದ್ಮಶ್ರೀʼ ಪುರಸ್ಕೃತ ಹಿರಿಯ ನಟಿ ʻಸಾಹುಕಾರ್ʼ ಜಾನಕಿ ನಿಧನ; ಕಂಬನಿ ಮಿಡಿದ ಚಿತ್ರರಂಗ

Sowcar Janaki Death: ಪದ್ಮಶ್ರೀ ಪುರಸ್ಕೃತ ಹಿರಿಯ ನಟಿ ʻಸಾಹುಕಾರ್ʼ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಡಾ. ರಾಜ್‌ಕುಮಾರ್ ಮತ್ತು ಎನ್‌ಟಿಆರ್‌ರಂತಹ ಲೆಜೆಂಡ್‌ ನಟರೊಂದಿಗೆ ಕೆಲಸ ಮಾಡಿದ್ದಾರೆ.

ಚೆನ್ನೈನಲ್ಲಿ ಸಾವನ್ನಪ್ಪಿದ ಹಿರಿಯ ನಟಿ ʻಸಾಹುಕಾರ್ʼ ಜಾನಕಿ; ಗಣ್ಯರ ಸಂತಾಪ

-

Avinash GR
Avinash GR Aug 21, 2026 3:55 PM

ಪದ್ಮಶ್ರೀ ಪುರಸ್ಕೃತ ಹಿರಿಯ ನಟಿ ‘ಸಾಹುಕಾರ್‌’ ಜಾನಕಿ (95) ಅವರು ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಕ್ಷೀಣಿಸಿದ್ದರಿಂದ ಅವರನ್ನು ತುರ್ತು ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್‌ 21ರಂದು ಅವರು ಕೊನೆಯುಸಿರೆಳೆದಿದ್ದಾರೆ. ನಟಿ ಸಾಹುಕಾರ್ ಜಾನಕಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

ಜಾನಕಿ ಮೂಲ ಹೆಸರೇನು?

‘ಸಾಹುಕಾರ್‌’ ಜಾನಕಿ ಅವರ ಮೂಲ ಹೆಸರು ಶಂಕರಮಂಚಿ ಜಾನಕಿ. 1931ರ ಡಿಸೆಂಬರ್ 12ರಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದ ಜಾನಕಿ ಅವರು, ಬಾಲ್ಯದಲ್ಲೇ ಆಕಾಶವಾಣಿ ನಾಟಕಗಳ ಮೂಲಕ ಕಲಾಕ್ಷೇತ್ರಕ್ಕೆ ಕಾಲಿಟ್ಟರು. ತಮ್ಮ ಸ್ಪಷ್ಟ ವಾಕ್ಚಾತುರ್ಯ ಮತ್ತು ನಿರರ್ಗಳ ಉಚ್ಚಾರಣೆಯಿಂದ ಆರಂಭದಲ್ಲೇ ಎಲ್ಲರ ಗಮನ ಸೆಳೆದಿದ್ದರು.

ಹಿರಿಯ ನಟಿ ‘ಸಾಹುಕಾರ್‌’ ಜಾನಕಿ ತೀವ್ರ ಅಸ್ವಸ್ಥ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

‘ಸಾಹುಕಾರ್‌’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ

1950ರಲ್ಲಿ ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್‌) ಅವರೊಂದಿಗೆ ‘ಸಾಹುಕಾರ್‌’ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿಪರದೆಗೆ ಪದಾರ್ಪಣೆ ಮಾಡಿದರು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸು. ಅವರ ಚೊಚ್ಚಲ ಚಿತ್ರವೇ ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ, ಆ ಚಿತ್ರದ ಶೀರ್ಷಿಕೆಯೇ ಅವರ ಹೆಸರಿನೊಂದಿಗೆ ಸೇರಿಕೊಂಡು ‘ಸಾಹುಕಾರ್‌’ ಜಾನಕಿ ಎಂದೇ ಚಿತ್ರರಂಗದಲ್ಲಿ ಚಿರಪರಿಚಿತರಾದರು. ಇವರ ಸಹೋದರಿ ಕೃಷ್ಣಕುಮಾರಿ ಕೂಡ ಕನ್ನಡ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟಿಯಾಗಿದ್ದರು.

ಬಹುಭಾಷೆಯಲ್ಲಿ ಫೇಮಸ್‌ ಆಗಿರುವ ನಟಿ

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಒಟ್ಟು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹಿರಿಮೆ ಇವರದ್ದು. ಇವುಗಳಲ್ಲಿ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ವರನಟ ಡಾ. ರಾಜ್‌ಕುಮಾರ್, ಎನ್‌ಟಿಆರ್, ಎಎನ್‌ಆರ್, ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಸೇರಿದಂತೆ ದಕ್ಷಿಣ ಭಾರತದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡು, ಆ ಕಾಲದ ಅಗ್ರತಾರೆಯಾಗಿ ಮಿಂಚಿದ್ದರು.

ಬಹುಭಾಷಾ ಪ್ರಾವೀಣ್ಯತೆ ಹೊಂದಿದ್ದ ನಟಿ

ಅತ್ಯುತ್ತಮ ಭಾಷಾ ಪ್ರಾವೀಣ್ಯತೆ ಹೊಂದಿದ್ದ ಜಾನಕಿ ಅವರು ಪರಭಾಷಾ ಚಿತ್ರಗಳಲ್ಲೂ ತಮ್ಮ ಪಾತ್ರಗಳಿಗೆ ತಾವೇ ಖುದ್ದು ಡಬ್ಬಿಂಗ್ ಮಾಡುತ್ತಿದ್ದುದು ವಿಶೇಷ. ನಾಯಕಿಯಾಗಿಷ್ಟೇ ಅಲ್ಲದೆ, ನಂತರದ ದಿನಗಳಲ್ಲಿ ವಿಶಿಷ್ಟ ಪೋಷಕ ಪಾತ್ರಗಳ ಮೂಲಕ ಸತತ ನಾಲ್ಕು ತಲೆಮಾರುಗಳ ನಟ-ನಟಿಯರೊಂದಿಗೆ ತೆರೆ ಹಂಚಿಕೊಂಡ ಹಿರಿಮೆ ಇವರದ್ದು.

ಡಾ. ರಾಜ್‌ಕುಮಾರ್‌ ಜೊತೆಗೆ ಜಾನಕಿ ನಂಟು

1950ರಲ್ಲಿ ತೆಲುಗು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜಾನಕಿ, 1954ರಲ್ಲಿ ‘ದೇವಕನ್ನಿಕಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಡಾ. ರಾಜ್‌ಕುಮಾರ್‌ ಕೂಡ ಅದೇ ವರ್ಷ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು. ನಂತರದ ವರ್ಷಗಳಲ್ಲಿ ಇವರಿಬ್ಬರೂ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದರು.

‘ಸಾಕು ಮಗಳು’ ಚಿತ್ರದಲ್ಲಿ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ಜಾನಕಿ ನಟಿಸಿದ್ದರೆ, ನಂತರ ‘ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ರಾಜ್ ಅವರಿಗೆ ಸಾಕು ತಾಯಿಯಾಗಿ ಕಾಣಿಸಿಕೊಂಡಿದ್ದರು. ‘ಶಬ್ದವೇಧಿ’ ಸಿನಿಮಾದಲ್ಲೂ ಡಾ. ರಾಜ್‌ಕುಮಾರ್ ತಾಯಿಯ ಪಾತ್ರದಲ್ಲಿ ಜಾನಕಿ ಅಭಿನಯಿಸಿದ್ದರು. ಪುನೀತ್‌ ರಾಜ್‌ಕುಮಾರ್‌ ಅವರ ‘ಅಭಿ’ ಸಿನಿಮಾದಲ್ಲೂ ಜಾನಕಿ ಅವರು ಬಣ್ಣ ಹಚ್ಚಿದ್ದರು.

ಕೇಂದ್ರ ಸರ್ಕಾರದಿಂದ ‘ಪದ್ಮಶ್ರೀ’ ಗೌರವ

ಚಿತ್ರರಂಗ ಹಾಗೂ ಕಲಾಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2022ರಲ್ಲಿ ಇವರಿಗೆ ದೇಶದ ಪ್ರತಿಷ್ಠಿತ ನಾಗರಿಕ ಗೌರವವಾದ ‘ಪದ್ಮಶ್ರೀ’ ನೀಡಿ ಪುರಸ್ಕರಿಸಿತ್ತು. ಜೊತೆಗೆ ತಮಿಳುನಾಡು ಸರ್ಕಾರದ ‘ಕಲೈಮಾಮಣಿ’ ಸೇರಿದಂತೆ ಅನೇಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ-ಪುರಸ್ಕಾರಗಳು ಸಾಹುಕಾರ್‌ ಜಾನಕಿ ಅವರಿಗೆ ಸಂದಿದ್ದವು.

‘ಸಾಹುಕಾರ್‌’ ಜಾನಕಿ ನಟನೆಯ ಪ್ರಮುಖ ಕನ್ನಡ ಸಿನಿಮಾಗಳು

ದೇವಕನ್ನಿಕಾ

ಸಾಕು ಮಗಳು

ರತ್ನಗಿರಿ ರಹಸ್ಯ

ಭಾಗ್ಯಚಕ್ರ

ಮಹಿಷಾಸುರ ಮರ್ದಿನಿ

ಸದಾರಮೆ

ತಾಯಿಗೆ ತಕ್ಕ ಮಗ

ಗೀತಾ

ಸತಿ ಶಕ್ತಿ

ಭಾಗ್ಯೋದಯ

ಸ್ಕೂಲ್ ಮಾಸ್ಟರ್‌