ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vijay Antony: ಮಗಳ ನೆನಪಲ್ಲಿ ಚಪ್ಪಲಿ ಧರಿಸುವುದನ್ನೇ ಬಿಟ್ಟ ವಿಜಯ್ ಆಂಟೋನಿ!

Vijay Antony: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟೋನಿ (Vijay Antony) ಇತ್ತೀಚೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬರಿಗಾಲಿನಲ್ಲಿ ಆಗಮಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದರು. ವಿಜಯ್ ಆಂಟೋನಿ ಯಾಕೆ ಚಪ್ಪಲಿ (barefoot) ಧರಿಸುವುದಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಅವರ ಪತ್ನಿ ಫಾತಿಮಾ ಈ ನಿರ್ಧಾರದ ಹಿಂದಿರುವ ಮನಕಲಕುವ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಮಗಳ ನೆನಪಲ್ಲಿ ಚಪ್ಪಲಿ ಧರಿಸುವುದನ್ನೇ ಬಿಟ್ಟ ವಿಜಯ್ ಆಂಟೋನಿ!

ವಿಜಯ್ ಆಂಟೋನಿ -

Yashaswi Devadiga
Yashaswi Devadiga Nov 19, 2026 10:47 AM

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟೋನಿ (Vijay Antony) ಇತ್ತೀಚೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬರಿಗಾಲಿನಲ್ಲಿ ಆಗಮಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದರು. ವಿಜಯ್ ಆಂಟೋನಿ ಯಾಕೆ ಚಪ್ಪಲಿ (barefoot) ಧರಿಸುವುದಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಇದೀಗ ಅವರ ಪತ್ನಿ ಫಾತಿಮಾ ಈ ನಿರ್ಧಾರದ ಹಿಂದಿರುವ ಮನಕಲಕುವ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಮಗಳು ಮೀರಾಳನ್ನು ಕಳೆದುಕೊಂಡ ನೋವಿನಿಂದ ವಿಜಯ್ ಆಂಟೋನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ದುಬಾರಿ ವಾಚ್‌ಗಳನ್ನು ಧರಿಸುವುದನ್ನೂ ಅವರು ನಿಲ್ಲಿಸಿದ್ದಾರೆ. ಮಗಳು ಧರಿಸಬೇಕಿದ್ದ ಕೆಲವು ಚಪ್ಪಲಿಗಳನ್ನು ಮಾತ್ರ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಈ ವಿಚಾರವನ್ನು ಫಾತಿಮಾ ಅವರು ವಿಜಯ್ ಆಂಟೋನಿ ಅಭಿನಯದ ಮುಂಬರುವ 'ಅಪ್ಪಕುಟ್ಟಿ' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಮೀರಾ ನಿಧನದ ಬಳಿಕ ಮೊದಲ ಬಾರಿಗೆ ಫಾತಿಮಾ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಮಗಳಿಗಾಗಿ ಖರೀದಿಸಿದ್ದ ಚಪ್ಪಲಿಗಳೇ ತಂದೆಯ ನೋವಿಗೆ ಕಾರಣ!

ಮೀರಾ ಕಾಲೇಜಿಗೆ ಸೇರುವ ಸಿದ್ಧತೆಯಲ್ಲಿದ್ದಾಗ ಆಕೆಗೆಂದು ಕುಟುಂಬದವರು ಹಲವು ಜೋಡಿ ಚಪ್ಪಲಿಗಳನ್ನು ಖರೀದಿಸಿದ್ದರು. ಅಮೆರಿಕ, ಲಂಡನ್ ಸೇರಿದಂತೆ ವಿದೇಶಗಳ ವಿವಿಧ ಸ್ಥಳಗಳಿಂದ ಸುಂದರವಾದ ಚಪ್ಪಲಿಗಳನ್ನು ತಂದಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮೀರಾ ನಿಧನದ ಬಳಿಕ ಆಕೆಗಾಗಿ ಖರೀದಿಸಿದ್ದ ಚಪ್ಪಲಿಗಳು ಮನೆಯಲ್ಲೇ ಬಳಕೆಯಾಗದೆ ಉಳಿದುಕೊಂಡಿವೆ.

ಇದನ್ನೂ ಓದಿ: Gowri Putra Serial: ಸಹಾಯ ಮಾಡೋಕೆ ಹೋಗಿ ಇಲ್ದೇ ಇರೋದನ್ನ ಮೈಮೇಲೆ ಎಳ್ಕೊಂಡ್ನ ಕಾರ್ತಿಕ್?

ಆ ಚಪ್ಪಲಿಗಳನ್ನು ನೋಡಿದಾಗಲೆಲ್ಲ ಮಗಳ ನೆನಪು ಕಾಡುತ್ತಿದ್ದ ಕಾರಣ ವಿಜಯ್ ಆಂಟೋನಿ ಇನ್ನು ಮುಂದೆ ತಾವು ಚಪ್ಪಲಿ ಧರಿಸುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಫಾತಿಮಾ ಈ ವಿಚಾರವನ್ನು ಭಾವುಕರಾಗಿ ಹಂಚಿಕೊಂಡಿದ್ದಾರೆ.

ಐದು ವರ್ಷಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಫಾತಿಮಾ!

ಮಗಳ ಸಾವಿನ ಬಳಿಕ ತಾವು ಮಾನಸಿಕವಾಗಿ ಸಂಪೂರ್ಣ ಕುಗ್ಗಿಹೋಗಿದ್ದಾಗಿ ಫಾತಿಮಾ ಹೇಳಿದ್ದಾರೆ.

"ಮೀರಾಳನ್ನು ಕಳೆದುಕೊಂಡ ಬಳಿಕ ನಾನು ತುಂಬಾ ಕಷ್ಟದ ಮನಸ್ಥಿತಿಯಲ್ಲಿದ್ದೆ. ಒಡೆದುಹೋದ ಗಾಜಿನ ಚೂರಿನಂತಾಗಿದ್ದೆ. ವಿಜಯ್ ಆಂಟೋನಿ ಮತ್ತು ಅವರ ಅಭಿಮಾನಿಗಳು ನನ್ನನ್ನು ಮತ್ತೆ ಬದುಕಿನತ್ತ ಕರೆತರುತ್ತಿದ್ದಾರೆ. ಮಗಳನ್ನು ಕಳೆದುಕೊಂಡು ಸುಮಾರು ಐದು ವರ್ಷಗಳ ಬಳಿಕ ಇಂದು ನಿಮ್ಮ ಮುಂದೆ ಬಂದು ಮಾತನಾಡುತ್ತಿದ್ದೇನೆ" ಎಂದು ಅವರು ಭಾವುಕರಾಗಿದ್ದಾರೆ.

"ವಿಜಯ್ ಮತ್ತು ಕೆಲವು ಆತ್ಮೀಯ ಸ್ನೇಹಿತರ ಬೆಂಬಲದಿಂದ ಮತ್ತೆ ಹೊರಬರಲು ಸಾಧ್ಯವಾಯಿತು. ನನ್ನನ್ನು ಭೇಟಿಯಾದವರೆಲ್ಲರೂ ಮೀರಾ ಈಗ ಉತ್ತಮ ಸ್ಥಳದಲ್ಲಿದ್ದಾಳೆ, ನೀವು ಜೀವನದಲ್ಲಿ ಮುಂದೆ ಸಾಗಬೇಕು, ಮತ್ತೆ ಸಿನಿಮಾಗಳನ್ನು ಮಾಡಬೇಕು ಎಂದು ಹೇಳುತ್ತಾರೆ" ಎಂದಿದ್ದಾರೆ.

ವಿದೇಶಿ ಸಂಗೀತ ಕಾರ್ಯಕ್ರಮಗಳಲ್ಲಿ ಮಾತ್ರ ಶೂ ಧರಿಸುತ್ತಾರೆ!

ವಿಜಯ್ ಆಂಟೋನಿ ಸಂಪೂರ್ಣವಾಗಿ ಚಪ್ಪಲಿ ಧರಿಸುವುದನ್ನು ಬಿಟ್ಟಿದ್ದರೂ, ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಶೂ ಧರಿಸುತ್ತಾರೆ. ಲಂಡನ್, ಪ್ಯಾರಿಸ್, ಸಿಂಗಾಪುರ ಹಾಗೂ ಮಲೇಷ್ಯಾದಂತಹ ದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳಿಗಾಗಿ ತೆರಳಿದಾಗ ಅನಿವಾರ್ಯವಾಗಿ ಶೂ ಧರಿಸುತ್ತಾರೆ. ಕಾರ್ಯಕ್ರಮ ಮುಗಿದ ತಕ್ಷಣ ಅವುಗಳನ್ನು ತೆಗೆದುಹಾಕುತ್ತಾರೆ ಎಂದು ಫಾತಿಮಾ ತಿಳಿಸಿದ್ದಾರೆ.

ಚಪ್ಪಲಿ ಮಾತ್ರವಲ್ಲದೆ ವಿಜಯ್ ಆಂಟೋನಿ ತಮ್ಮ ದುಬಾರಿ ವಾಚ್‌ಗಳ ಸಂಗ್ರಹವನ್ನೂ ಬಿಟ್ಟುಕೊಟ್ಟಿದ್ದಾರೆ. ರಾಡೋ, ರೋಲೆಕ್ಸ್‌ನಂತಹ ದುಬಾರಿ ಬ್ರ್ಯಾಂಡ್‌ಗಳ ವಾಚ್‌ಗಳನ್ನು ಅವರು ಬಳಸುತ್ತಿಲ್ಲ.

ಈಗ ಅವರು ಧರಿಸುತ್ತಿರುವುದು ಮೀರಾ ಸಾವನ್ನಪ್ಪಿದ ಸಂದರ್ಭದಲ್ಲಿ ಆಕೆ ಕೈಯಲ್ಲಿದ್ದ ವಾಚ್ ಮಾತ್ರ. ಈ ಬಗ್ಗೆ ಫಾತಿಮಾ ಮಾತನಾಡಿ, "ನನ್ನ ಮಗಳಿಗೆ ಆ ವಾಚ್ ಬೇಕೆಂದು ಕೇಳಿದ್ದರಿಂದ ನಾನೇ ಅದನ್ನು ಖರೀದಿಸಿಕೊಟ್ಟಿದ್ದೆ. ಅದರ ಬೆಲೆ ಕೇವಲ 4 ಸಾವಿರ ರೂಪಾಯಿ. ಈಗ ವಿಜಯ್ ಆ ವಾಚ್ ಒಂದನ್ನೇ ಧರಿಸುತ್ತಾರೆ. ಸ್ಮಾರ್ಟ್‌ವಾಚ್ ಬಳಸುವಂತೆ ಹಲವು ಬಾರಿ ಹೇಳಿದ್ದರೂ ಅವರು ನನ್ನ ಮಾತು ಕೇಳುತ್ತಿಲ್ಲ" ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮ ಮತ್ತೊಂದು ಕಾರಣಕ್ಕೂ ವಿಶೇಷವಾಗಿತ್ತು. ವಿಜಯ್ ಆಂಟೋನಿ ದಂಪತಿಯ ಕಿರಿಯ ಮಗಳು ಲಾರಾ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯ ಮೇಲೆ ಕಾಣಿಸಿಕೊಂಡರು.

ತಂದೆಯ ಪರಿಶ್ರಮದ ಬಗ್ಗೆ ಮಾತನಾಡಿದ ಲಾರಾ, "ಈ ಸಿನಿಮಾಗಾಗಿ ನನ್ನ ತಂದೆ ಹಗಲು-ರಾತ್ರಿ ಕಷ್ಟಪಟ್ಟಿದ್ದಾರೆ. ಇದು ತಂದೆ ಮತ್ತು ಮಗುವಿನ ನಡುವಿನ ಪ್ರೀತಿಯ ಕಥೆ. ಪ್ರತಿಯೊಂದು ಮಗುವೂ ಈ ಸಿನಿಮಾ ನೋಡಬೇಕು. ಇದರಿಂದ ತಂದೆಯ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಇಂಗ್ಲಿಷ್‌ನಲ್ಲಿ ಮಾತನಾಡಿದರು.

ನಂತರ ನಿರೂಪಕರ ಮನವಿಯ ಮೇರೆಗೆ ತಮಿಳಿನಲ್ಲಿಯೂ ಮಾತನಾಡಿದ ಲಾರಾ, ಕಪ್ಪು ಬಣ್ಣ ತನ್ನ ನೆಚ್ಚಿನ ಬಣ್ಣ ಮತ್ತು ಗುಲಾಬ್ ಜಾಮೂನ್ ತನ್ನ ನೆಚ್ಚಿನ ಸಿಹಿತಿಂಡಿ ಎಂದು ತಿಳಿಸಿದರು. ಅಲ್ಲದೆ, ಎಲ್ಲರೂ 'ಅಪ್ಪಕುಟ್ಟಿ' ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸುವಂತೆ ಮನವಿ ಮಾಡಿದರು.

ಮಗಳನ್ನು ನೆನೆದು ಭಾವುಕರಾದ ವಿಜಯ್ ಆಂಟೋನಿ!

ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ಆಂಟೋನಿ ಅವರು ಮೀರಾಳನ್ನು ನೆನೆದು ಭಾವುಕರಾದರು. ಇಂತಹ ಕಾರ್ಯಕ್ರಮವೊಂದರಲ್ಲಿ ಮಗಳು ಮೀರಾ ಮಾತನಾಡುವುದನ್ನು ನೋಡುವ ಅವಕಾಶ ತಮಗೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲಾರಾ ಸ್ವಭಾವತಃ ನಾಚಿಕೆ ಸ್ವಭಾವದವಳಾಗಿರುವುದರಿಂದ ವೇದಿಕೆಯ ಮೇಲೆ ಮಾತನಾಡಲು ಸಾಧ್ಯವಾಗುತ್ತದೆಯೇ ಎಂದು ಆರಂಭದಲ್ಲಿ ಅನುಮಾನಪಟ್ಟಿದ್ದಾಗಿ ತಿಳಿಸಿದರು. ಆದರೆ ಮಗಳು ಅದ್ಭುತವಾಗಿ ಮಾತನಾಡಿದ್ದನ್ನು ಕಂಡು ಸಂತೋಷವಾಯಿತು ಎಂದರು.

ಅಲ್ಲದೆ, ಮಗಳ ಸಾವಿನ ನಂತರದ ಕಠಿಣ ಸಮಯದಲ್ಲಿ ಬೆಂಬಲವಾಗಿ ನಿಂತ ಪತ್ನಿ ಫಾತಿಮಾ ಅವರಿಗೆ ಧನ್ಯವಾದ ಅರ್ಪಿಸಿದರು. ಬಂಡೆಯಂತೆ ತಮ್ಮ ಜೊತೆ ನಿಂತ ಫಾತಿಮಾ ಅವರೇ ತಮ್ಮ ಶಕ್ತಿ ಎಂದು ಹೇಳಿದರು. ವಿಜಯ್ ಆಂಟೋನಿ ಫಿಲ್ಮ್ ಕಾರ್ಪೊರೇಷನ್‌ನ ಬೆಳವಣಿಗೆಯ ಹಿಂದೆಯೂ ಫಾತಿಮಾ ಅವರ ಶ್ರಮವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2023ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಮೀರಾ

ವಿಜಯ್ ಆಂಟೋನಿ ಅವರ ಹಿರಿಯ ಮಗಳು ಮೀರಾ 2023ರಲ್ಲಿ ಆತ್ಮಹತ್ಯೆಯಿಂದ ಮೃತಪಟ್ಟಿದ್ದರು. ಆಗ ಆಕೆಗೆ 16 ವರ್ಷ ವಯಸ್ಸಾಗಿತ್ತು. ಮಗಳ ಅಗಲಿಕೆಯ ನೋವಿನಿಂದ ವಿಜಯ್ ಆಂಟೋನಿ ಕುಟುಂಬ ಇಂದಿಗೂ ಹೊರಬರಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: Bigg Boss Kannada 13: ಇಬ್ಬರು ಯುವರಾಣಿಯರಲ್ಲಿ ಯಾರಾಗ್ತಾರೆ ಮಹಾರಾಣಿ?

ಇದೀಗ ಮಗಳ ನೆನಪಿಗಾಗಿ ವಿಜಯ್ ಆಂಟೋನಿ ತೆಗೆದುಕೊಂಡಿರುವ ನಿರ್ಧಾರಗಳು ಅಭಿಮಾನಿಗಳ ಮನಕಲಕಿವೆ. ತಂದೆಯೊಬ್ಬನಿಗೆ ಮಗಳ ಮೇಲಿರುವ ಅಪಾರ ಪ್ರೀತಿ ಮತ್ತು ಆಕೆಯ ಅಗಲಿಕೆಯ ನೋವು ಎಷ್ಟು ಆಳವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಇನ್ನು ಎಂ. ಮಾರನ್ ನಿರ್ದೇಶನದ ವಿಜಯ್ ಆಂಟೋನಿ ಅಭಿನಯದ 'ಅಪ್ಪಕುಟ್ಟಿ' ಸಿನಿಮಾ ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.