ನಟ ಧನ್ವೀರ್ ವಿರುದ್ಧ ದೂರು ದಾಖಲಿಸಿದ ವಿಜಯಲಕ್ಷ್ಮೀ ದರ್ಶನ್ ಮ್ಯಾನೇಜರ್; ‘ಮುಖವಾಡ ಕಳಚುವ ಕಾಲ ಬಂದಿದೆ’ ಎಂದು ಗುಡುಗಿದ ಶೋಕ್ದಾರ್!
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಮ್ಯಾನೇಜರ್ ನಾಗರಾಜ್ ಎಂಬುವವರು ನಟ ಧನ್ವೀರ್ ವಿರುದ್ಧ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಈ ಕುರಿತು ನಟ ಧನ್ವೀರ್ ಕೂಡ ಪ್ರತಿಕ್ರಿಯೆ ನೀಡಿದ್ದು, "ಮುಖವಾಡ ಕಳಚುವ ಕಾಲ ಬಂದಿದೆ" ಎಂದು ಗುಡುಗಿದ್ದಾರೆ.
-
ನಟ ದರ್ಶನ್ ಅವರ ಪರಮಾಪ್ತ, ಸ್ಯಾಂಡಲ್ವುಡ್ನ ‘ಶೋಕ್ದಾರ್’ ಖ್ಯಾತಿಯ ನಟ ಧನ್ವೀರ್ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಎಂಬುವವರು ಈ ದೂರು ನೀಡಿದ್ದಾರೆ. ಧನ್ವೀರ್ ತಮಗೆ ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ನಾಗರಾಜ್, ಸಂಭಾಷಣೆಯ ಆಡಿಯೋ ಸಾಕ್ಷ್ಯವನ್ನು ಪೊಲೀಸರಿಗೆ ನೀಡಿದ್ದಾರೆ ಎನ್ನಲಾಗಿದೆ. ಈ ದೂರಿನ ಅನ್ವಯ ಪೊಲೀಸರು ಶೀಘ್ರದಲ್ಲೇ ಧನ್ವೀರ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ.
ಬೈಯ್ಯೋದಕ್ಕೆ ಬಲವಾದ ಕಾರಣ ಇದೆ
ದರ್ಶನ್ ಕುಟುಂಬಕ್ಕೆ ಮೊದಲಿನಿಂದಲೂ ಅತ್ಯಂತ ಆಪ್ತರಾಗಿ ಗುರುತಿಸಿಕೊಂಡಿದ್ದ ಧನ್ವೀರ್, ಇದೀಗ ಸ್ವತಃ ದರ್ಶನ್ ಪತ್ನಿಯ ಮ್ಯಾನೇಜರ್ ಜೊತೆಗೇ ಜಗಳಕ್ಕಿಳಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಧನ್ವೀರ್ ಹಾಗೂ ದರ್ಶನ್ ಕುಟುಂಬದ ನಡುವೆ ಬಿರುಕು ಮೂಡಿದೆಯೇ ಎಂಬ ಚರ್ಚೆಗಳು ಕೇಳಿಬರುತ್ತಿದ್ದ ಬೆನ್ನಲ್ಲೇ, ಈ ಎಲ್ಲಾ ಬೆಳವಣಿಗೆಗಳ ಕುರಿತು ನಟ ಧನ್ವೀರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಪೊಲೀಸರಿಗೆ ದೂರು ನೀಡಿರುವುದಕ್ಕೆ ಕಿಂಚಿತ್ತೂ ಕ್ಯಾರೆ ಎನ್ನದ ಅವರು, ತಾನು ಬೈದಿರುವುದು ನಿಜ ಮತ್ತು ಅದಕ್ಕೆ ಬಲವಾದ ಕಾರಣವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
Darshan Case: ದರ್ಶನ್ಗೆ ಇಂದು ರಿಯಲ್ ಚಾಲೆಂಜ್! ಕೋರ್ಟ್ನಲ್ಲಿ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲಿರುವ ಪ್ರದೋಷ್
ಮುಖವಾಡಗಳೆಲ್ಲ ಜನರ ಮುಂದೆ ಬಯಲಾಗುತ್ತವೆ
ಮಾಧ್ಯಮಗಳೊಂದಿಗೆ ಮಾತನಾಡಿದ ಧನ್ವೀರ್, "ದೂರು ನೀಡಲಿ, ನಾನು ಯಾವುದಕ್ಕೂ ಹೆದರುವುದಿಲ್ಲ. ಮುಂದೆಯೂ ಆ ವ್ಯಕ್ತಿಗೆ ಇದೇ ರೀತಿ ಮಾಡುತ್ತೇನೆ, ಇಲ್ಲಿಗೇ ನಿಲ್ಲಿಸುವುದಿಲ್ಲ. ನಾನು ಸುಮ್ಮನೆ ಯಾರನ್ನೂ ಬೈಯುವುದಿಲ್ಲ, ಒಬ್ಬ ವ್ಯಕ್ತಿಯನ್ನು ಬೈದಿದ್ದೇನೆ ಎಂದರೆ ಅದರ ಹಿಂದೆ ಬಲವಾದ ಕಾರಣವಿರುತ್ತದೆ. ಆ ಕಾರಣವೇನು ಎಂಬುದನ್ನು ಮೊದಲು ಕೇಳಿ. ಆ ಕಾರಣ ಹೊರಬಂದರೆ ಸಾಕು, ಇಲ್ಲಿ ಮ್ಯಾನೇಜರ್ ಎಂದು ಹೇಳಿಕೊಂಡು ಓಡಾಡುತ್ತಿರುವವರ ಅಸಲಿ ಬಂಡವಾಳ ಮತ್ತು ಮುಖವಾಡಗಳೆಲ್ಲ ಜನರ ಮುಂದೆ ಬಯಲಾಗುತ್ತವೆ" ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ದರ್ಶನ್ ಯಾರಿಗೂ ಸಮಾಧಾನ ಮಾಡಿಲ್ಲ!
ದರ್ಶನ್ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಯಾರಿಂದಲೂ ಅಂತರ ಕಾಯ್ದುಕೊಂಡಿಲ್ಲ. ದರ್ಶನ್ ಅಣ್ಣನ ಪರವಾಗಿ ನಾವು ಗಟ್ಟಿಯಾಗಿ ನಿಂತಿದ್ದೆವು. ಆದರೆ, ನಾವು ಜೊತೆಗಿದ್ದರೆ ಕೆಲವರಿಗೆ ತಮ್ಮ ಸ್ವಾರ್ಥ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮುಂದೊಂದು, ಬೆನ್ನಹಿಂದೆ ಮತ್ತೊಂದು ಮುಖವಾಡ ಧರಿಸಿ ಬದುಕುತ್ತಿರುವವರ ಅಸಲಿ ಬಣ್ಣ ಬಯಲಾಗುವ ಸಮಯ ಬಂದಿದೆ. ಜೈಲಿನಲ್ಲಿ ದರ್ಶನ್ ಅವರು ನನ್ನ ಮತ್ತು ವಿಜಯಲಕ್ಷ್ಮೀ ಸಮಾಧಾನಪಡಿಸಲು ಯತ್ನಿಸಿದರು ಎಂಬುದೆಲ್ಲ ಶುದ್ಧ ಸುಳ್ಳು. ನಾನು ಹೋಗಿ ಕೇವಲ ಅಣ್ಣನನ್ನು ಮಾತನಾಡಿಸಿಕೊಂಡು ಬಂದಿದ್ದೇನಷ್ಟೇ" ಎಂದು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದ ಧನ್ವೀರ್
"ನನ್ನಲ್ಲಿ ನ್ಯಾಯ, ನೀತಿ ಮತ್ತು ಸತ್ಯ ಇರುವಾಗ ನಾನು ಯಾರಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಆ ಮ್ಯಾನೇಜರ್ಗೆ ಬೈದಿರುವುದು ನೂರಕ್ಕೆ ನೂರು ದರ್ಶನ್ ಅಣ್ಣನ ವಿಚಾರಕ್ಕಾಗಿಯೇ ಹೊರತು ವೈಯಕ್ತಿಕ ವಿಚಾರಕ್ಕಲ್ಲ. ದರ್ಶನ್ ಅವರಿಗೆ ಯಾರು ಅನ್ಯಾಯ ಮಾಡಲು ಹೊರಟಿದ್ದಾರೋ ಅವರ ವಿರುದ್ಧವೇ ನಾನು ಧ್ವನಿ ಎತ್ತಿದ್ದೇನೆ. ಆ ಧ್ವನಿಯನ್ನು ಹತ್ತಿಕ್ಕಲು ಇಷ್ಟೆಲ್ಲಾ ಮಾಡುತ್ತಿದ್ದಾರೆ. ಶೀಘ್ರದಲ್ಲೇ ನಾನೇ ಖುದ್ದಾಗಿ ಪತ್ರಿಕಾಗೋಷ್ಠಿ ನಡೆಸಿ, ನನ್ನದೇ ಶೈಲಿಯಲ್ಲಿ ಎಲ್ಲರ ಮುಖವಾಡಗಳನ್ನು ಜನರ ಮುಂದೆ ಕಳಚಿ ಇಡುತ್ತೇನೆ" ಎಂದು ಸವಾಲು ಹಾಕಿದ್ದಾರೆ.