Mohit Sharma: ʻಧುರಂಧರ್ʼ ಚಿತ್ರಕ್ಕೆ ಮೇಜರ್ ಮೋಹಿತ್ ಶರ್ಮಾ ಸ್ಪೂರ್ತಿಯೇ? ಇವರ ಬಗ್ಗೆ ನಿಮಗೆಷ್ಟು ಗೊತ್ತು? ದೇಶಕ್ಕಾಗಿ ಪ್ರಾಣ ನೀಡಿದ ವೀರನ ಬಗ್ಗೆ ಇಲ್ಲಿದೆ ಮಾಹಿತಿ
Major Mohit Sharma Biopic: ಮೇಜರ್ ಮೋಹಿತ್ ಶರ್ಮಾ ಅವರ ಜೀವನವೇ ರಣವೀರ್ ಸಿಂಗ್ ನಟನೆಯ ಸೂಪರ್ ಹಿಟ್ 'ಧುರಂಧರ್' ಚಿತ್ರಕ್ಕೆ ಸ್ಫೂರ್ತಿ ಎಂಬ ಮಾತು ಕೇಳಿಬಂದಿದೆ. ಮೋಹಿತ್ ಶರ್ಮಾ ಅವರು ಭಾರತೀಯ ಸೇನೆಯ ಅಪ್ರತಿಮ ವೀರಸೇನಾನಿ. ಉಗ್ರರೊಂದಿಗೆ ಹೋರಾಡಿ ವೀರಮರಣ ಹೊಂದಿದ ಈ ಪರಾಕ್ರಮಿ ಬಗ್ಗೆ ಇಲ್ಲಿದೆ ಮಾಹಿತಿ.
-
ರಣವೀರ್ ಸಿಂಗ್ ನಟನೆಯ ʻಧುರಂಧರ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ ಈ ಚಿತ್ರದ ವಿಶ್ವಾದ್ಯಂತ ಗಳಿಕೆಯು 445+ ಕೋಟಿ ರೂಪಾಯಿ ದಾಟಿದೆ. ನಿರ್ಮಾಪಕರು ದೊಡ್ಡ ಲಾಭದ ರುಚಿಯನ್ನು ಸವಿಯಲಿದ್ದಾರೆ. ಅಂದಹಾಗೆ, ಚಿತ್ರತಂಡ ಹೇಳಿಕೊಂಡಿರುವ ಪ್ರಕಾರ, ಇದು ನೈಜ ಘಟನೆಗಳನ್ನಾಧರಿಸಿದ ಕಾಲ್ಪನಿಕ ಸಿನಿಮಾ ಎಂದು. ಆದರೆ ಇದು ಮೇಜರ್ ಮೋಹಿತ್ ಶರ್ಮಾ ಅವರ ಬದುಕನ್ನಧಾರಿಸಿದ ಸಿನಿಮಾ, ಮೋಹಿತ್ ಪಾತ್ರವನ್ನೇ ಇಲ್ಲಿ ರಣವೀರ್ ಸಿಂಗ್ ಮಾಡಿರುವುದು ಎಂಬ ಮಾತು ಕೂಡ ಇದೆ. ಈಗ ಎಲ್ಲರ ಮುಂದಿರುವ ಪ್ರಶ್ನೆ, ಯಾರು ಈ ಮೋಹಿತ್ ಶರ್ಮಾ ಎನ್ನೋದು!
ಮೇಜರ್ ಮೋಹಿತ್ ಶರ್ಮಾ ಯಾರು ಗೊತ್ತಾ?
ಧುರಂಧರ್ ಸಿನಿಮಾ ಟ್ರೆಂಡಿಂಗ್ ಆಗುತ್ತಿದ್ದಂತೆಯೇ, ಮೇಜರ್ ಮೋಹಿತ್ ಶರ್ಮಾ ಅವರ ಹೆಸರು ಚಾಲ್ತಿಯಲ್ಲಿದೆ. ಇವರು ಭಾರತೀಯ ಸೇನೆಯಲ್ಲಿ ಅಪ್ರತಿಮ ಸಾಧನೆಗೈದ ವೀರ ಸೇನಾನಿ. ಇವರು ಹುತಾತ್ಮರಾಗಿ 16 ವರ್ಷಗಳಾಗಿವೆ. ಇದೀಗ ಧುರಂಧರ್ ಸಿನಿಮಾದಿಂದಾಗಿ ಮೋಹಿತ್ ಶರ್ಮಾ ಮತ್ತೆ ಎಲ್ಲರಿಗೂ ನೆನಪಾಗಿದ್ದಾರೆ. ಅಷ್ಟಕ್ಕೂ ಈ ಮೋಹಿತ್ ಶರ್ಮಾ ಅವರ ಕಥೆ ಏನು ಅಂತೀರಾ? ಮುಂದೆ ಓದಿ.
ಹರಿಯಾಣದ ರೋಹ್ಟಕ್‌ನಲ್ಲಿ 1978ರ ಜನವರಿ 13ರಂದು ರಾಜೇಂದ್ರ ಶರ್ಮಾ ಮತ್ತು ಸುಶೀಲಾ ಶರ್ಮಾ ದಂಪತಿಗೆ ಮಗನಾಗಿ ಜನಿಸಿದ ಮೋಹಿತ್ ಶರ್ಮಾಗೆ ಸಣ್ಣ ವಯಸ್ಸಿನಿಂದಲೇ ಸೇನೆಗೆ ಸೇರುವ ಮಹದಾಸೆ ಇತ್ತು. ದೇಶಸೇವೆಯೇ ಅವರ ಮುಖ್ಯ ಗುರಿಯಾಗಿತ್ತು. ಮನೆಯವರ ಪಾಲಿಗೆ ಪ್ರೀತಿಯ ಚಿಂಟುವಾಗಿದ್ದ ಮೋಹಿತ್, ಸಂಗೀತ ಪ್ರೇಮಿಯೂ ಹೌದು. ಗಿಟಾರ್, ಮೌತ್ ಆರ್ಗನ್ ಮತ್ತು ಸಿಂಥಸೈಜರ್ ಅನ್ನು ಸುಲಭವಾಗಿ ನುಡಿಸುತ್ತಿದ್ದರು. ಗಾಜಿಯಾಬಾದ್‌ನಲ್ಲಿ ಶಿಕ್ಷಣ ಪಡೆದ ಮೋಹಿತ್, 1995ರಲ್ಲಿ ಮಹಾರಾಷ್ಟ್ರದಲ್ಲಿನ ಎಂಜಿನಿಯರಿಂಗ್ ಕಾಲೇಜ್‌ವೊಂದಕ್ಕೆ ಪ್ರವೇಶವನ್ನು ಪಡೆದರು. ಓದಿನಲ್ಲಿ ಮುಂದಿದ್ದ ಅವರಿಗೆ ಆಗಲೇ ತಮ್ಮ ಮುಂದಿನ ಗುರಿ ಉದ್ದೇಶಗಳ ಕಡೆಗೆ ಸ್ಪಷ್ಟತೆ ಸಿಕ್ಕಿತ್ತು.
ಎಂಜಿನಿಯರಿಂಗ್ ಪದವಿಯನ್ನು ಅರ್ಧಕ್ಕೆ ಬಿಟ್ಟ ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಸೇರುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡರು. ಎನ್‌ಡಿಎ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ಡಿಸೆಂಬರ್ 1998 ರಲ್ಲಿ 50 ನೇ ಬ್ಯಾಚ್‌ನ ಅಧಿಕಾರಿಯಾಗಿ ಸೇನೆಗೆ ನಿಯೋಜಿಸಲ್ಪಟ್ಟರು ಮತ್ತು ಬೆಹಾರಿನ ಲೆಫ್ಟಿನೆಂಟ್ ಕರ್ನಲ್‌ನ 90-ಫೀಲ್ಡ್ ರೆಜಿಮೆಂಟ್‌ಗೆ ಸೇರಿದರು. 1999ರ ಡಿಸೆಂಬರ್ 11 ರಂದು ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ) ಯಿಂದ ಪದವಿ ಪಡೆದರು. ಅಲ್ಲಿಂದ ಅವರ ಸೇನಾ ಬದುಕು ಆರಂಭವಾಯಿತು. 38 ರಾಷ್ಟ್ರೀಯ ರೈಫಲ್ಸ್‌ನೊಂದಿಗೆ ಕಾಶ್ಮೀರದಲ್ಲಿ ದಂಗೆ ನಿಗ್ರಹ ಕಾರ್ಯಾಚರಣೆಗಳಲ್ಲಿಯು ಸೇವೆ ಸಲ್ಲಿಸಿದರು. ಮೋಹಿತ್ ಅವರ ಅಸಾಧಾರಣ ಸೇವೆಗಾಗಿ ಸೇನಾ ಮುಖ್ಯಸ್ಥ (COAS) ಪ್ರಶಂಸಾ ಪತ್ರವನ್ನು ನೀಡಲಾಗಿತ್ತು.
ನಕಲಿ ಉಗ್ರನ ವೇಷ ಧರಿಸಿದ ಮೋಹಿತ್
ಉಗ್ರರ ಹುಟ್ಟಡಗಿಸಲು ಪಣತೊಟ್ಟ ಒಂದು ದೊಡ್ಡ ಆಪರೇಷನ್‌ಗೆ ಜಾಯಿನ್ ಆದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಈ ಸಮಯದಲ್ಲಿಯೇ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯೊಳಗೆ ಸೇರಿಕೊಂಡ ಅವರು, ತಮ್ಮ ಹೆಸರನ್ನು ಇಫ್ತಿಕರ್ ಭಟ್ ಎಂದು ಬದಲಾಯಿಸಿಕೊಂಡರು. ಉಗ್ರರ ಗುಂಪಿನೊಳಗೆ ನುಸುಳುವ ಅತ್ಯಂತ ಅಪಾಯಕಾರಿ ಕೆಲಸವನ್ನು ನಿರ್ವಹಿಸಿ ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಿದ್ದರು. ಈ ಸಾಹಸಕ್ಕಾಗಿ ಅವರಿಗೆ ಸೇನಾ ಪದಕ (ಗ್ಯಾಲಂಟ್ರಿ) ನೀಡಿ ಗೌರವಿಸಲಾಯಿತು.
2009ರಲ್ಲಿ ವೀರ ಮರಣ ಹೊಂದಿದ್ದ ಮೋಹಿತ್
2009ರ ಮಾರ್ಚ್ 21 ರಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಫ್ರುಡಾ ಅರಣ್ಯದಲ್ಲಿ ಭಯೋತ್ಪಾದಕರ ವಿರುದ್ಧದ ಶೋಧ ಮತ್ತು ನಾಶ ಕಾರ್ಯಾಚರಣೆಯನ್ನು ಮೋಹಿತ್ ಅವರು ಮುನ್ನಡೆಸುತ್ತಿದ್ದರು. ಆಗ ಐವರು ಭಯೋತ್ಪಾದಕರೊಂದಿಗೆ ನಡೆದ ಘೋರ ಗುಂಡಿನ ಕಾಳಗದಲ್ಲಿ ಮೇಜರ್ ಮೋಹಿತ್ ಶರ್ಮಾ ಅವರು ತಮ್ಮ ಸಹಚರರನ್ನು ರಕ್ಷಿಸುವ ಸಲುವಾಗಿ, ಭಯೋತ್ಪಾದಕರ ಮೇಲೆ ನೇರ ದಾಳಿ ಮಾಡಿದರು. ಅವರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದರು, ಆದರೆ ಈ ಪ್ರಕ್ರಿಯೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರು ವೀರ ಮರಣವನ್ನಪ್ಪಿದರು. ದೇಶಕ್ಕಾಗಿ ಅವರು ತೋರಿದ ಅಪ್ರತಿಮ ಶೌರ್ಯ, ನಾಯಕತ್ವ ಮತ್ತು ಸ್ವಾರ್ಥರಹಿತ ತ್ಯಾಗಕ್ಕಾಗಿ ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರ ನೀಡಿ ಗೌರವಿಸಲಾಗಿದೆ.
ಧುರಂಧರ್ ಸಿನಿಮಾ ನೋಡಿದ್ರಾ? ಬೇಹುಗಾರಿಕೆಯ ಜಾಲ ಹೇಗಿರುತ್ತೆ?
ಶುರುವಾಗಿದೆ ವಿವಾದ
ಇದೀಗ ಇಂತಹ ಸಾಹಸಿಯ ಬದುಕನ್ನು ಇಟ್ಟುಕೊಂಡು ಧುರಂಧರ್ ಸಿನಿಮಾ ಮಾಡಲಾಗಿದೆ ಎಂಬ ಮಾತು ಕೇಳಿಬಂದಿದೆ. ಸ್ವತಃ ಮೋಹಿತ್ ಶರ್ಮಾ ಕುಟುಂಬದವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ‘ಧುರಂಧರ್’ ಸಿನಿಮಾವನ್ನು ಮಾಡುವುದಕ್ಕೆ ಮೇಜರ್ ಮೋಹಿತ್ ಶರ್ಮಾ ಅವರ ಕುಟುಂಬದವರ ಬಳಿ ಅನುಮತಿ ಪಡೆದುಕೊಂಡಿಲ್ಲ. ಇದರಿಂದಾಗಿ ಅವರ ಬಗ್ಗೆ ಸಿನಿಮಾದ ಮೂಲಕ ತಪ್ಪು ಮಾಹಿತಿ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕುಟುಂಬದವರು ಚಿತ್ರತಂಡದ ವಿರುದ್ಧ ಆಕ್ಷೇಪ ಎನ್ನಲಾಗಿದೆ. ಅನುಮತಿಯಿಲ್ಲದೆ ಸಿನಿಮಾ ಮಾಡಿದರೆ, ಸತ್ಯಾಸತ್ಯತೆ ಕಾಪಾಡಿಕೊಳ್ಳಲಾಗುವುದಿಲ್ಲ. ಇದರಿಂದಾಗಿ ಅವರ ಪಾತ್ರ ಮತ್ತು ತ್ಯಾಗವನ್ನು ತಪ್ಪಾಗಿ ಅಥವಾ ಅತಿರಂಜಿತವಾಗಿ ತೋರಿಸುವ ಸಾಧ್ಯತೆ ಇರುತ್ತದೆ ಎಂಬುದು ಕುಟುಂಬದ ಕಳವಳ.
ಸೌದಿ ದೇಶಗಳಲ್ಲಿ ಬ್ಯಾನ್ ಆಗಿದೆ ಧುರಂಧರ್!
ʻಧುರಂಧರ್ʼ ಸಿನಿಮಾವನ್ನು ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ 6 ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಯಾವ ಸಿನಿಮಾದಲ್ಲಿ ಪಾಕಿಸ್ತಾನ ವಿರೋಧಿ ಅಂಶ ಇರುತ್ತದೋ, ಅಂತಹ ಸಿನಿಮಾಗಳು ಈ ದೇಶಗಳಲ್ಲಿ ರಿಲೀಸ್ ಆಗೋದಿಲ್ಲ. ಹಾಗಾಗಿ, ಧುರಂಧರ್ ಈ ದೇಶಗಳಲ್ಲಿ ರಿಲೀಸ್ ಆಗೋದಿಲ್ಲ! ಈ ಹಿಂದೆ ‘ಸ್ಕೈ ಫೋರ್ಸ್’, ‘ಫೈಟರ್’, ‘ಆರ್ಟಿಕಲ್ 370’, ‘ಟೈಗರ್ 3’ ಚಿತ್ರಗಳನ್ನು ಕೂಡ ಈ ದೇಶಗಳಲ್ಲಿ ನಿಷೇಧ ಮಾಡಲಾಗಿತ್ತು. ಅಸಲಿಗೆ, ಈ ದೇಶಗಳಲ್ಲಿ ತಮ್ಮ ಸಿನಿಮಾವನ್ನು ರಿಲೀಸ್ ಮಾಡಲು ಧುರಂಧರ್ ತಂಡವು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಲ್ಲಿನ ಸೆನ್ಸಾರ್ ಮಂಡಳಿ ಅದಕ್ಕೆ ಒಪ್ಪಿಗೆ ನೀಡಲಿಲ್ಲ.
ಪಾಕ್‌ನ ಸಿನಿಮಾ ವಿಮರ್ಶಕ ಹೇಳಿದ್ದೇನು?
ಪಾಕಿಸ್ತಾನದ ಚಲನಚಿತ್ರ ವಿಮರ್ಶಕ ಮತ್ತು ಬರಹಗಾರರಾದ ಒಮೈರ್ ಅಲವಿ, "ಈ 'ಧುರಂಧರ್' ಉತ್ತಮವಾಗಿ ನಿರ್ಮಾಣಗೊಂಡಿದ್ದರೂ ಮತ್ತು ಉತ್ತಮ ನಟನೆಯನ್ನು ಹೊಂದಿದ್ದರೂ, ಅದರಲ್ಲಿ ಕರಾಚಿ ಮತ್ತು 2007-2008 ರ ಘಟನೆಗಳ ಚಿತ್ರಣವು ನಿಖರವಾಗಿಲ್ಲ. 'ಧುರಂಧರ್' ಒಂದು ಉತ್ತಮವಾಗಿ ನಿರ್ಮಿಸಲಾದ, ಆಕರ್ಷಕವಾದ ಚಲನಚಿತ್ರವಾಗಿದೆ ಮತ್ತು ನಟನೆಯೂ ಚೆನ್ನಾಗಿದೆ, ಆದರೆ ಇದರಲ್ಲಿ ಕರಾಚಿ ಮತ್ತು ಚಲನಚಿತ್ರದಲ್ಲಿ ತೋರಿಸಿರುವ 2007-2008 ರ ಅವಧಿಯ ಕುರಿತ ಸತ್ಯಾಂಶಗಳಲ್ಲಿ ಹಲವು ದೋಷಗಳು ಇವೆ. ನಮ್ಮ ಚಲನಚಿತ್ರ ನಿರ್ಮಾಪಕರು ಅಂತಹ Propaganda ಚಲನಚಿತ್ರಗಳನ್ನು ಮಾಡಲು ಬಯಸುವುದಿಲ್ಲ, ಏಕೆಂದರೆ ಅದು ದೊಡ್ಡ ಆರ್ಥಿಕ ಅಪಾಯವಾಗಿದೆ. ಹಿಂದಿನ ದಿನಗಳಲ್ಲಿ ದೇಶಭಕ್ತಿಯ ಧ್ವನಿಯಲ್ಲಿ ಮಾಡಿದ ಇಂತಹ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿವೆ" ಎಂದಿದ್ದಾರೆ.