‘ನಮ್ಮೆಲ್ಲರ ಹೆಮ್ಮೆ, ಸಂತೋಷಕ್ಕೆ ಕಾರಣವಾಗಿರು ಮಗನೇ..’; ಯಶ್ ರಾವಣ ಅವತಾರ ಕಂಡು ತಾಯಿ ಪುಷ್ಪಮ್ಮ ಫುಲ್ ಖುಷ್
ರಾಮಾಯಣ ಸಿನಿಮಾದಲ್ಲಿ ಲಂಕಾಧಿಪತಿ ರಾವಣನಾಗಿ ಅಬ್ಬರಿಸಿರುವ ರಾಕಿಂಗ್ ಸ್ಟಾರ್ ಯಶ್ ನಟನೆಗೆ ಜಗತ್ತಿನಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಐತಿಹಾಸಿಕ ಯಶಸ್ಸನ್ನು ಕಂಡು ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅತ್ಯಂತ ಭಾವುಕರಾಗಿ ಇನ್ಸ್ಟಾಗ್ರಾಮ್ನಲ್ಲಿ ಪ್ರೀತಿಯ ಸಂದೇಶ ಹಂಚಿಕೊಂಡಿದ್ದಾರೆ.
-
ರಣಬೀರ್ ಕಪೂರ್ ಹಾಗೂ ಯಶ್ ನಟನೆಯ ‘ರಾಮಾಯಣ’ ಸಿನಿಮಾ ತೆರೆಕಂಡಿದೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾವನ್ನು ಸಿನಿಪ್ರಿಯರು ಮುಗಿಬಿದ್ದು ನೋಡುತ್ತಿದ್ದಾರೆ. ಅದರಲ್ಲೂ ಯಶ್ ಅವರ ರಾವಣಾಸುರನ ಅಭಿನಯಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಯಶ್ ಅವರ ನಟನಾ ಕೌಶಲ್ಯಕ್ಕೆ ಜಗತ್ತಿನಾದ್ಯಂತ ಮುಕ್ತಕಂಠದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಯಶ್ ಅವರ ತಾಯಿ ಹಾಗೂ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಅವರು ಕೂಡ ಮಗನ ನಟನೆಗೆ ಬಹುಪರಾಕ್ ಎಂದಿದ್ದಾರೆ.
ಪ್ರತಿಯೊಂದು ಕನಸನ್ನೂ ನನಸಾಗಿಸಿಕೊಂಡು..
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಒಬ್ಬ ತಾಯಿಗೆ ಇದಕ್ಕಿಂತ ಹೆಚ್ಚಿನ ಸಂತೋಷ ಇನ್ನೇನು ಬೇಕು? ತನ್ನ ಮಗ ತಾನು ಕಂಡ ಪ್ರತಿಯೊಂದು ಕನಸನ್ನೂ ನನಸಾಗಿಸಿಕೊಂಡು, ಸಾಧನೆಯ ಶಿಖರವೇರಿ, ಜನರ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿರುವುದನ್ನು ನೋಡುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಇಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದ ‘ರಾಮಾಯಣ’ ಚಿತ್ರ ಬಿಡುಗಡೆಯಾಗಿದ್ದು, ರಾವಣನ ಪಾತ್ರದಲ್ಲಿ ನಿನ್ನ ಅದ್ಭುತ ಅಭಿನಯಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಮತ್ತು ಅಭಿಮಾನವನ್ನು ಕಂಡು ನನ್ನ ಸಂತೋಷಕ್ಕೆ ಪಾರವೇ ಇಲ್ಲ.." ಎಂದು ಹೇಳಿದ್ದಾರೆ.
ನಿನ್ನ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ
"ನಿನ್ನ ಈ ಸಾಧನೆ, ಪರಿಶ್ರಮ ಮತ್ತು ಅದ್ಭುತ ಅಭಿನಯಕ್ಕೆ ತಾಯಿಯಾಗಿ ಹೃತ್ಪೂರ್ವಕ ಅಭಿನಂದನೆಗಳು. ನಿನ್ನ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ. ನಿನಗೂ ಹಾಗೂ ಇಡೀ ಚಿತ್ರತಂಡದ ಪ್ರತಿಯೊಬ್ಬರಿಗೂ ಶುಭಾಶಯಗಳು. ಹೀಗೆಯೇ ಇನ್ನಷ್ಟು ಎತ್ತರಕ್ಕೆ ಬೆಳೆದು, ಸದಾ ನಮ್ಮೆಲ್ಲರ ಹೆಮ್ಮೆ ಮತ್ತು ಸಂತೋಷಕ್ಕೆ ಕಾರಣವಾಗಿರು ಮಗನೇ..." ಎಂದು ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ.