Yash: ʻಅಂಥ ಕೆಲಸ ಮಾಡಿದ್ರೆ ಹುಷಾರ್..ʼ: ಪೈರಸಿ ತಡೆಗೆ ಕೋರ್ಟ್ ಆದೇಶ ಮುಂದಿಟ್ಟು ಖಡಕ್ ಎಚ್ಚರಿಕೆ ಕೊಟ್ಟ 'ರಾಮಾಯಣ' ಟೀಮ್!
Ramayana Part 1 Piracy: ರಾಮಾಯಣ ಚಿತ್ರವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಸಂದರ್ಭದಲ್ಲೇ, ಮೊಬೈಲ್ ಮೂಲಕ ದೃಶ್ಯಗಳನ್ನು ರೆಕಾರ್ಡ್ ಮಾಡಿ ಹಂಚಿಕೊಳ್ಳುವ ಕಿಡಿಗೇಡಿಗಳಿಗೆ ಚಿತ್ರತಂಡ ಖಡಕ್ ಎಚ್ಚರಿಕೆ ರವಾನಿಸಿದೆ. ಹಕ್ಕುಸ್ವಾಮ್ಯ ಹಾಗೂ ಸಿನಿಮಾಟೋಗ್ರಾಫ್ ಕಾಯ್ದೆಗಳಡಿ ಇದು ಗಂಭೀರ ಅಪರಾಧವಾಗಿದ್ದು, ಉಲ್ಲಂಘಿಸಿದರೆ ಜೈಲು ಶಿಕ್ಷೆ ಎಂದು ಸ್ಪಷ್ಟಪಡಿಸಿದೆ.
-
'ರಾಮಾಯಣ: ಭಾಗ 1' ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಚಿತ್ರತಂಡ ಪೈರಸಿ ವಿರುದ್ಧ ಸಮರ ಸಾರಿದೆ. ಚಿತ್ರಮಂದಿರಗಳ ಒಳಗೆ ಸಿನಿಮಾದ ದೃಶ್ಯಗಳನ್ನು ಅನಧಿಕೃತವಾಗಿ ಮೊಬೈಲ್ ಮೂಲಕ ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣಗಳು ಮತ್ತು ಮೆಸೇಜಿಂಗ್ ಆ್ಯಪ್ಗಳಲ್ಲಿ ಹಂಚಿಕೊಳ್ಳುತ್ತಿರುವವರ ವಿರುದ್ಧ ಚಿತ್ರತಂಡ ಕೆಂಡಾಮಂಡಲವಾಗಿದ್ದು, ಕಾನೂನು ಕ್ರಮದ ಕಠಿಣ ಎಚ್ಚರಿಕೆಯನ್ನು ನೀಡಿದೆ.
ಕೋರ್ಟ್ ಆದೇಶ ನೆನಪಿಸಿದ ಚಿತ್ರತಂಡ
ಈ ಕುರಿತು ಚಿತ್ರತಂಡವು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮಹತ್ವದ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಬಿಗ್ ಬಜೆಟ್ ಸಿನಿಮಾದ ದೃಶ್ಯಗಳನ್ನು ಚಿತ್ರಮಂದಿರಗಳ ಒಳಗೆ ಅನಧಿಕೃತವಾಗಿ ಚಿತ್ರೀಕರಿಸಿ, ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುವುದು ಗಂಭೀರವಾಗಿ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ. ಈ ಕೃತ್ಯವನ್ನು ತಡೆಯಲು ಈಗಾಗಲೇ ಮುಂಬೈ ಹೈಕೋರ್ಟ್ ಆದೇಶ ಹೊರಡಿಸಿರುವುದನ್ನು ಚಿತ್ರತಂಡ ಸಾರ್ವಜನಿಕರ ಗಮನಕ್ಕೆ ತಂದಿದೆ.
ಇದು ನ್ಯಾಯಾಂಗ ನಿಂದನೆಗೂ ಸಮ
ಮುಂಬೈ ಹೈಕೋರ್ಟ್ನ 2026ರ ಕಮರ್ಷಿಯಲ್ ಐಪಿ ಸೂಟ್ (ಎಲ್) ಸಂಖ್ಯೆ 37230 ರಲ್ಲಿ, 2 ನವೆಂಬರ್ 2026 ಹಾಗೂ 6 ನವೆಂಬರ್ 2026 ರಂದು ಹೊರಡಿಸಲಾದ ಆದೇಶಗಳನ್ನು ಉಲ್ಲೇಖಿಸಿರುವ ತಂಡ, ಅಧಿಕೃತ ಅನುಮತಿಯಿಲ್ಲದೆ ಚಿತ್ರದ ಯಾವುದೇ ಭಾಗವನ್ನು ರೆಕಾರ್ಡ್ ಮಾಡುವುದು, ಅಪ್ಲೋಡ್ ಮಾಡುವುದು, ಹಂಚಿಕೊಳ್ಳುವುದು ಅಥವಾ ಪ್ರಸಾರ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ರೀತಿಯ ಕೃತ್ಯವು ಗಂಭೀರ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದ್ದು (ಕಾಪಿರೈಟ್ ಉಲ್ಲಂಘನೆ), ಕೃತಿಸ್ವಾಮ್ಯ ಕಾಯ್ದೆ 1957, ಸಿನಿಮಾಟೋಗ್ರಾಫ್ ಕಾಯ್ದೆ 1952, ಭಾರತೀಯ ನ್ಯಾಯ ಸಂಹಿತೆ (BNS) 2023 ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆ 2000 ರ ಅಡಿಯಲ್ಲಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾದ ಅಪರಾಧವಾಗಿದೆ. ಜೊತೆಗೆ ಇದು ನ್ಯಾಯಾಂಗ ನಿಂದನೆಗೂ ಸಮನಾಗುತ್ತದೆ ಎಂದು ಎಚ್ಚರಿಸಿದೆ.
ದೃಶ್ಯಗಳನ್ನು ಪೋಸ್ಟ್ ಮಾಡಿದರೆ ಕ್ರಮ ಖಚಿತ
ಹೀಗಾಗಿ ಚಿತ್ರಮಂದಿರಗಳಲ್ಲಿ ಸಿನಿಮಾದ ದೃಶ್ಯಗಳನ್ನು ರೆಕಾರ್ಡ್ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಅಥವಾ ಇತರರೊಂದಿಗೆ ಹಂಚಿಕೊಳ್ಳುವುದರಿಂದ ಎಲ್ಲರೂ ದೂರವಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈಗಾಗಲೇ ಇಂತಹ ದೃಶ್ಯಗಳನ್ನು ಪೋಸ್ಟ್ ಮಾಡಿದ್ದರೆ ಅವುಗಳನ್ನು ತಕ್ಷಣವೇ ಅಳಿಸಿಹಾಕಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ಯಾವುದೇ ಮುನ್ಸೂಚನೆಯಿಲ್ಲದೆ ಸಂಬಂಧಪಟ್ಟ ಸಾಮಾಜಿಕ ವೇದಿಕೆಗಳು ಹಾಗೂ ಕಾನೂನು ಜಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ಅಂತಹ ವ್ಯಕ್ತಿಗಳು ಕ್ರಿಮಿನಲ್, ಸಿವಿಲ್ ಮತ್ತು ನ್ಯಾಯಾಂಗ ನಿಂದನೆ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ ಎಂದು ಚಿತ್ರತಂಡ ಕಟುವಾಗಿ ಎಚ್ಚರಿಕೆ ರವಾನಿಸಿದೆ.
ಚಿತ್ರತಂಡ ನೀಡಿರುವ ಎಚ್ಚರಿಕೆ
A clear reminder: Unauthorised recording and sharing of the film is prohibited. https://t.co/28fLMDza4N
— The World Of Ramayana (@WorldOfRamayana) November 7, 2026
ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಭವ್ಯ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ನಟಿಸಿದ್ದಾರೆ. ಎರಡು ಭಾಗಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಮೊದಲ ಭಾಗವು ನವೆಂಬರ್ 5 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ.