ಬಾಕ್ಸ್ ಆಫೀಸ್ನಲ್ಲಿ ಐದೇ ದಿನಕ್ಕೆ 664 ಕೋಟಿ ರೂ. ಬಾಚಿಕೊಂಡ ʻರಾಮಾಯಣʼ; ಸೋಮವಾರ ಸೃಷ್ಟಿಯಾಯ್ತು ಸಾರ್ವಕಾಲಿಕ ದಾಖಲೆ!
ರಣಬೀರ್ ಕಪೂರ್, ಯಶ್ ನಟನೆಯ ʻರಾಮಾಯಣʼ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದು, ಕೇವಲ ಐದೇ ದಿನಗಳಲ್ಲಿ ಜಗತ್ತಿನಾದ್ಯಂತ ಬರೋಬ್ಬರಿ 664 ಕೋಟಿ ರೂ. ಬಾಚಿಕೊಂಡಿದೆ. ಇನ್ನು, ಸೋಮವಾರ ಒಂದೇ ದಿನ 126 ಕೋಟಿ ಗಳಿಸಿ ಎಲ್ಲರ ಹುಬ್ಬೇರಿಸಿದ್ದು, ಮೊದಲ ವಾರಕ್ಕೆ 800 ಕೋಟಿ ಗಡಿ ದಾಟುವತ್ತ ದಾಪುಗಾಲು ಹಾಕುತ್ತಿದೆ.
-
ಬಾಲಿವುಡ್ನ ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ ಆಧಾರಿತ ಚಿತ್ರ 'ರಾಮಾಯಣ: ಭಾಗ 1' ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಸೃಷ್ಟಿಸಿದೆ. ರಣಬೀರ್ ಕಪೂರ್, ಯಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಬಿಡುಗಡೆಯಾದ ಕೇವಲ 5 ದಿನಗಳಲ್ಲೇ ವಿಶ್ವಾದ್ಯಂತ ಸುಮಾರು 664 ಕೋಟಿ ರೂ. ಗಳಿಕೆ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮಹಾಪೂರವೇ ಹರಿದುಬರುತ್ತಿದ್ದು, ಚಿತ್ರದ ಗಳಿಕೆಯನ್ನು ಕಂಡು ಇಡೀ ಚಿತ್ರರಂಗವೇ ನಿಬ್ಬೆರಗಾಗಿದೆ.
ಭಾರತದಲ್ಲಿ ದಾಖಲೆ ಬರೆದ ʻರಾಮಾಯಣʼ
ನವೆಂಬರ್ 5 ರಂದು ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಕಂಡ ಈ ಚಿತ್ರವು ಆರಂಭದಿಂದಲೂ ಅತ್ಯುತ್ತಮ ಕಲೆಕ್ಷನ್ ಕಾಯ್ದುಕೊಂಡು ಬಂದಿತ್ತು. ಭಾರತದಲ್ಲಿ ಮೊದಲ ದಿನ ಭಾರತದಲ್ಲಿ 77.50 ಕೋಟಿ ಗಳಿಕೆಯೊಂದಿಗೆ ಶುಭಾರಂಭ ಮಾಡಿದ್ದ ಚಿತ್ರ, ಎರಡನೇ ದಿನ 57.30 ಕೋಟಿ, ಮೂರನೇ ದಿನ 83.45 ಕೋಟಿ ಹಾಗೂ ನಾಲ್ಕನೇ ದಿನ 66.95 ಕೋಟಿ ಬಾಚಿಕೊಂಡಿತ್ತು.
Ramayana Movie: ರಾವಣ–ಜಟಾಯು ಯುದ್ಧದ ದೃಶ್ಯ ಮಾಡಲು ಎಷ್ಟು ವರ್ಷ ಬೇಕಾಯ್ತು ಗೊತ್ತಾ?
ಆದರೆ ನಿಜವಾದ ಪವಾಡ ನಡೆದಿದ್ದು ಐದನೇ ದಿನವಾದ ಸೋಮವಾರ (ನವೆಂಬರ್ 9). ಸಾಮಾನ್ಯವಾಗಿ ವಾರದ ಮೊದಲ ದಿನವಾದ ಸೋಮವಾರ ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಕುಸಿಯುವುದು ಸಹಜ. ಆದರೆ 'ರಾಮಾಯಣ' ಇದಕ್ಕೆ ಸಂಪೂರ್ಣ ಅಪವಾದವೆಂಬಂತೆ ಐದನೇ ಭರ್ಜರಿ 126 ಕೋಟಿ (ಎಲ್ಲಾ ಆವೃತ್ತಿಗಳಿಂದ) ಒಟ್ಟು ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ.
ಹಲವು ದಾಖಲೆಗಳು ಉಡೀಸ್
ಐದನೇ ದಿನ ದೇಶಾದ್ಯಂತ ಒಟ್ಟು 23,911 ಪ್ರದರ್ಶನಗಳಿಂದ ಚಿತ್ರವು ಭಾರತದಲ್ಲಿ ನಿವ್ವಳ 126 ಕೋಟಿ ಗಳಿಸಿದೆ. ಇದು ನಾಲ್ಕನೇ ದಿನದ ಕಲೆಕ್ಷನ್ಗೆ ಹೋಲಿಸಿದರೆ ಬರೋಬ್ಬರಿ ಶೇ. 91.5 ರಷ್ಟು ಭಾರೀ ಜಿಗಿತವಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ 'ಮೊದಲ ಸೋಮವಾರ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಮೊದಲ ಸೋಮವಾರ 60 ಕೋಟಿ ಗಳಿಸಿದ್ದ 'ಧುರಂಧರ್ 2' ಚಿತ್ರದ ದಾಖಲೆಯನ್ನು 'ರಾಮಾಯಣ' ಧೂಳಿಪಟ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗಳಿಕೆ 413.90 ಕೋಟಿಗೆ ತಲುಪಿದೆ.
ಸದ್ಯ ವಿಶ್ವಾದ್ಯಂತ ಒಟ್ಟು ಚಿತ್ರದ ಗಳಿಕೆ 664 ಕೋಟಿ ರೂ. ತಲುಪಿದ್ದು, ಆರನೇ ದಿನವಾದ (ಮಂಗಳವಾರ) ಕೂಡ ಉತ್ತಮ ರೆಸ್ಪಾನ್ಸ್ ಇದ್ದು, ಮೊದಲ ವಾರದ ಅಂತ್ಯಕ್ಕೆ ಏನಿಲ್ಲವೆಂದರೂ, 800+ ಕೋಟಿ ರೂ. ಗಳಿಕೆ ಆಗುವ ಸಾಧ್ಯತೆಗಳಿವೆ ಎಂಬುದು ಸದ್ಯದ ಲೆಕ್ಕಾಚಾರ.