ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Yash: 'ಟಾಕ್ಸಿಕ್‌' ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಅವಘಡ; ಕಾಲು ಮುರಿದುಕೊಂಡ ವಿದ್ಯಾರ್ಥಿ, ಪೊಲೀಸರು ಕೇಸ್‌ ದಾಖಲಿಸಿದ್ದು ಯಾರ ಮೇಲೆ?

ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ 'ಟಾಕ್ಸಿಕ್' ಪ್ರಚಾರ ಸಭೆಯಲ್ಲಿ ಸ್ಕ್ಯಾಫೋಲ್ಡಿಂಗ್ ಬಿದ್ದು ವಿದ್ಯಾರ್ಥಿಯೊಬ್ಬ ಕಾಲು ಮುರಿದುಕೊಂಡಿದ್ದಾನೆ. ತೆಲಂಗಾಣದ ಮಲ್ಲಾರೆಡ್ಡಿ ಕ್ಯಾಂಪಸ್‌ನಲ್ಲಿ ಜನದಟ್ಟಣೆ ಮಿತಿಮೀರಿದ ಪರಿಣಾಮ ಸೌಂಡ್ ಬಾಕ್ಸ್ ಕುಸಿದು ಹಲವರು ಗಾಯಗೊಂಡಿದ್ದರು. ಸದ್ಯ ಪೊಲೀಸರು ಕೇಸ್ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ʻಟಾಕ್ಸಿಕ್ʼ ಪ್ರೀ-ರಿಲೀಸ್ ಅವಘಡ; ಪೊಲೀಸರು FIR ದಾಖಲಿಸಿದ್ದು ಯಾರ ಮೇಲೆ?

-

Avinash GR
Avinash GR Aug 23, 2026 5:11 PM

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾರೀ ಅವಘಡ ಸಂಭವಿಸಿದೆ. ಜನದಟ್ಟಣೆಯ ಒತ್ತಡಕ್ಕೆ ಸೌಂಡ್ ಬಾಕ್ಸ್ ಸ್ಟ್ರಕ್ಚರ್ ಕುಸಿದು ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿಯ ಕಾಲು ಮುರಿದಿದ್ದು, ಮೂವರು ಗಾಯಗೊಂಡಿದ್ದಾರೆ. ಈ ವೈಫಲ್ಯದ ಹಿನ್ನೆಲೆಯಲ್ಲಿ ಈವೆಂಟ್ ಮ್ಯಾನೇಜರ್ ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ವಿವರ

ತೆಲಂಗಾಣದ ಮೇಡ್ಚಲ್‌ನಲ್ಲಿರುವ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಮೈಸಮ್ಮಗುಡ ಕ್ಯಾಂಪಸ್‌ನಲ್ಲಿ ಶನಿವಾರ (ಆಗಸ್ಟ್ 22) ರಾತ್ರಿ ʻಟಾಕ್ಸಿಕ್ʼ ಚಿತ್ರದ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಶ್ ಅವರನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಜಮಾಯಿಸಿದ್ದರು. ಈ ವೇಳೆ ನೆರೆದಿದ್ದ ಯುವಕರ ಗುಂಪೊಂದು ಯಶ್ ಅವರನ್ನು ನೋಡುವ ಸಲುವಾಗಿ ಲೈಟಿಂಗ್ ಕಂಬ ಹಾಗೂ ಸೌಂಡ್ ಬಾಕ್ಸ್ ನಿಲ್ಲಿಸಿದ್ದ ಸ್ಕ್ಯಾಫೋಲ್ಡಿಂಗ್ ಸ್ಟ್ರಕ್ಚರ್ ಏರಿದೆ.

ಆದರೆ, ಹೆಚ್ಚುವರಿ ತೂಕ ತಾಳಲಾರದೆ ಬೃಹತ್ ಸೌಂಡ್ ಸಿಸ್ಟಮ್ ನೆಲಕ್ಕುರುಳಿದೆ. ಸೌಂಡ್ ಬಾಕ್ಸ್ ಅಡಿಗೆ ಸಿಲುಕಿ ಓರ್ವ ವಿದ್ಯಾರ್ಥಿಯ ಕಾಲಿನ ಮೂಳೆ ಮುರಿದಿದ್ದು, ಇತರೆ ಮೂವರಿಗೆ ಗಾಯಗಳಾಗಿವೆ. ಏಕಾಏಕಿ ಸಂಭವಿಸಿದ ದುರಂತದಿಂದ ಸ್ಥಳದಲ್ಲಿ ಕಾಲ್ತುಳಿತದ ಆತಂಕ ನಿರ್ಮಾಣವಾಗಿ, ಓರ್ವ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಕ್ರಮ ಕೈಗೊಂಡ ಪೊಲೀಸರು

ಕಾರ್ಯಕ್ರಮಕ್ಕೆ ಅಗತ್ಯವಿರುವ ಭದ್ರತೆ, ಜನಸಂದಣಿ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಯೋಜಕರು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಹಾಗೂ ಮಲ್ಲಾರೆಡ್ಡಿ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಮೇಡ್ಚಲ್ ಠಾಣಾ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.‌

Toxic Movie: ಬುಕಿಂಗ್ ಓಪನ್ ಬೆನ್ನಲ್ಲೇ 'ಟಾಕ್ಸಿಕ್' ಟಿಕೆಟ್ ಸೋಲ್ಡ್ ಔಟ್

ಭಾಷಣ ನಿಲ್ಲಿಸಿ ಕಾಳಜಿ ಮೆರೆದ ಯಶ್

ವೇದಿಕೆ ಮೇಲೆ ಮಾತನಾಡುತ್ತಿದ್ದಾಗಲೇ ದುರಂತ ಸಂಭವಿಸಿದ್ದನ್ನು ಕಂಡ ನಟ ಯಶ್ ತಕ್ಷಣ ಭಾಷಣ ನಿಲ್ಲಿಸಿದರು. ಮೈಕ್ ಮೂಲಕ, "ಅಲ್ಲಿ ಎಲ್ಲವೂ ಸರಿಯಾಗಿದೆಯೇ? ದಯವಿಟ್ಟು ಪರಿಶೀಲಿಸಿ... ನೀವೆಲ್ಲರೂ ಸುರಕ್ಷಿತವಾಗಿದ್ದೀರಾ?" ಎಂದು ಪದೇಪದೇ ಆತಂಕ ವ್ಯಕ್ತಪಡಿಸಿದರು. ಅಲ್ಲದೆ, ಅಪಾಯಕಾರಿ ರೀತಿಯಲ್ಲಿ ಕಂಬ ಹಾಗೂ ಸ್ಟ್ರಕ್ಚರ್‌ಗಳನ್ನೇರಿದ್ದ ಅಭಿಮಾನಿಗಳಿಗೆ ಕೂಡಲೇ ಕೆಳಗೆ ಇಳಿಯುವಂತೆ ಕೈಮುಗಿದು ಮನವಿ ಮಾಡಿದರು. ಪರಿಸ್ಥಿತಿ ತಿಳಿಯಾದ ಬಳಿಕವೇ ಅವರು ಕಾರ್ಯಕ್ರಮ ಮುಂದುವರಿಸಿದರು.

'ಟಾಕ್ಸಿಕ್' ಹೈದರಾಬಾದ್‌ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಭಾರೀ ಅವಘಡ: ಸೌಂಡ್‌ಬಾಕ್ಸ್ ಕುಸಿದು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ, ಯಶ್ ಆತಂಕ!

ಆಗಸ್ಟ್‌ 26ಕ್ಕೆ ತೆರೆಗೆ 'ಟಾಕ್ಸಿಕ್'

ಗೀತು ಮೋಹನ್‌ದಾಸ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. 1940 ರಿಂದ 1970ರ ಗೋವಾದ ಗ್ಯಾಂಗ್‌ಸ್ಟರ್ ಹಿನ್ನೆಲೆಯ ಈ ಆಕ್ಷನ್-ಥ್ರಿಲ್ಲರ್ ಚಿತ್ರದಲ್ಲಿ ಯಶ್ 'ರಾಯ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ತಾರಾಗಣದಲ್ಲಿದ್ದಾರೆ.