2020 ರ ಗಲಭೆ ಪಿತೂರಿ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ರ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಕೋರ್ಟ್
2020 Riots Conspiracy Case: 2020ರ ದೆಹಲಿ ಗಲಭೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಹೊಸ ಜಾಮೀನು ಅರ್ಜಿಗಳನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ. ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿದ ನಂತರ, ಅವರು ಜಾಮೀನಿಗಾಗಿ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದರು.
ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಜಾಮೀನು ಅರ್ಜಿ ತಿರಸ್ಕಾರ -
ದೆಹಲಿ, ಜು.4: 2020ರ ದೆಹಲಿ ಗಲಭೆ ಪಿತೂರಿ ಪ್ರಕರಣಕ್ಕೆ (2020 Riots Conspiracy Case) ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ. ಕರ್ಕಾರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ASJ) ಸಮೀರ್ ಬಾಜ್ಪೈ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಇಮಾಮ್ ಮತ್ತು ಖಾಲಿದ್ ಇಬ್ಬರಿಗೂ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್‌ನ (Supreme Court) ಆದೇಶವನ್ನು ಪ್ರಶ್ನಿಸಿದ ನಂತರ, ಅವರು ಜಾಮೀನಿಗಾಗಿ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದರು.
ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿ ಆರು ತಿಂಗಳು ಕಳೆದರೂ ವಿಚಾರಣಾ ಪ್ರಕ್ರಿಯೆಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಅವರು ವಾದಿಸಿದರು. ಆದರೆ ಆರೋಪದ ಮೇಲಿನ ವಾದಗಳು ಇನ್ನೂ ಅಪೂರ್ಣವಾಗಿಯೇ ಉಳಿದಿವೆ. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ನಂತಹ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನುಗಳ ಅಡಿಯಲ್ಲಿಯೂ ಸಹ ಜಾಮೀನೇ ನಿಯಮ ಎಂಬ ಕಾನೂನು ತತ್ವವು ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದ ನಂತರ ಅವರು ಜಾಮೀನು ಪಡೆಯಲು ಅರ್ಹರು ಎಂದು ಪ್ರತಿವಾದಿಗಳು ವಾದಿಸಿದರು.
ಆದರೆ, ಜಾಮೀನು ಅರ್ಜಿಗಳನ್ನು ದೆಹಲಿ ಪೊಲೀಸರು ವಿರೋಧಿಸಿ, ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ದೊಡ್ಡ ಪೀಠದಿಂದ ಸ್ಪಷ್ಟನೆ ಸಿಗುವವರೆಗೆ ಬದ್ಧವಾಗಿಯೇ ಇರುತ್ತದೆ ಎಂದು ವಾದಿಸಿದರು. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳ ವಿಚಾರವನ್ನು ಈಗಾಗಲೇ ದೊಡ್ಡ ಪೀಠಕ್ಕೆ ವರ್ಗಾಯಿಸಲಾಗಿದೆ. ಆ ವಿಷಯದಲ್ಲಿ ಅಂತಿಮ ನಿರ್ಧಾರವಾಗುವವರೆಗೆ ಇಮಾಮ್ ಮತ್ತು ಖಾಲಿದ್ ಅವರ ಜಾಮೀನು ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
Stone-Pelting Case: 2020ರ ಗಲಭೆ ಪ್ರಕರಣ- ಉಮರ್ ಖಾಲಿದ್‌ಗೆ ಬಿಗ್ ಶಾಕ್; ಜಾಮೀನು ತಿರಸ್ಕಾರ
ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶದಲ್ಲಿ, ಸಂರಕ್ಷಿತ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಬಳಿಕ ಅಥವಾ ಆ ಆದೇಶ ಹೊರಬಿದ್ದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡ ನಂತರ ಮಾತ್ರ ಈ ಇಬ್ಬರು ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು ಎಂದು ಪೀಠ ಉಲ್ಲೇಖಿಸಿದೆ.
ಹೀಗಾಗಿ, ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಮೇಲ್ಕಂಡ ಆದೇಶವನ್ನು ಅನುಸರಿಸಿ, ಈ ನ್ಯಾಯಾಲಯವು ಅರ್ಜಿದಾರರ ಜಾಮೀನು ಅರ್ಜಿಗಳನ್ನು ಪರಿಗಣಿಸಲು ಅಥವಾ ಅವರಿಗೆ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ, ಈ ಅರ್ಜಿಗಳು ವಿಚಾರಣೆಗೆ ಅರ್ಹವಾಗಿಲ್ಲ. ಆದ್ದರಿಂದ, ಅವುಗಳನ್ನು ವಜಾಗೊಳಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಜಾಮೀನು ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಏನು ಹೇಳಿತ್ತು?
ಖಾಲಿದ್ ಮತ್ತು ಇಮಾಮ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಜನವರಿ 5 ರಂದು ತಿರಸ್ಕರಿಸಿದ ಸುಮಾರು ಆರು ತಿಂಗಳ ನಂತರ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ. ಗುಲ್ಫಿಶಾ ಫಾತಿಮಾ ಮತ್ತು ಮೀರನ್ ಹೈದರ್ ಸೇರಿದಂತೆ ಇತರ ಐದು ಸಹ-ಆರೋಪಿಗಳಿಗೆ ಈ ವಾರದ ಆರಂಭದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದರೂ, ಇಮಾಮ್ ಮತ್ತು ಖಾಲಿದ್ ತಿಹಾರ್ ಜೈಲಿನಲ್ಲಿದ್ದಾರೆ.
ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ಕೋಮು ಹಿಂಸಾಚಾರಕ್ಕೆ ಕಾರಣವಾದ ಪೂರ್ವಯೋಜಿತ, ವ್ಯವಸ್ಥಿತ ಪಿತೂರಿಯ ಹಿಂದಿನ ಪ್ರಮುಖ ಮಾಸ್ಟರ್‌ಮೈಂಡ್‌ಗಳು ಖಾಲಿದ್, ಇಮಾಮ್ ಮತ್ತು ಇತರ ಹಲವರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಭುಗಿಲೆದ್ದಿದ ಈ ಘರ್ಷಣೆಯಲ್ಲಿ 53 ಜನರು ಮೃತಪಟ್ಟು, 700 ಕ್ಕೂ ಹೆಚ್ಚು ಜನರು ಗಾಯಗೊಂಡರು.