ರಾಮ ಮಂದಿರದ ಬಳಿಕ ಬದ್ರಿನಾಥ ದೇವಾಲಯದ ಕಾಣಿಕೆ ದುರುಪಯೋಗ ಆರೋಪ: ತನಿಖೆಗೆ BKTC ಆದೇಶ
ಅಯೋಧ್ಯೆ ರಾಮಮಂದಿರದ ದೇಣಿಗೆ ದುರುಪಯೋಗ ಆರೋಪಗಳ ನಡುವೆಯೇ ಬದ್ರಿನಾಥ ಧಾಮದಲ್ಲೂ ಕಾಣಿಕೆ ಹಣದ ಅಕ್ರಮದ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC), ತನಿಖಾ ಸಮಿತಿ ರಚಿಸಿ ವಿಚಾರಣೆ ನಡೆಸಲು ಆದೇಶಿಸಿದೆ. ಸಂಬಂಧಪಟ್ಟ ಸಿಬ್ಬಂದಿಯಿಂದ ಸ್ಪಷ್ಟನೆ ಕೇಳಲಾಗಿದ್ದು, ತಪ್ಪಿತಸ್ಥರು ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಮಿತಿ ತಿಳಿಸಿದೆ.
ಭದ್ರಿನಾಥ್ -
ಡೆಹ್ರಾಡೂನ್: ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರುಪಯೋಗದ ಆರೋಪಗಳ ಬೆನ್ನಲ್ಲೇ, ಉತ್ತರಾಖಂಡದ ಪ್ರಸಿದ್ಧ ಬದ್ರಿನಾಥ ಧಾಮದಲ್ಲೂ ಕಾಣಿಕೆ ದುರುಪಯೋಗದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ಶುಕ್ರವಾರ ತನಿಖೆಗೆ ಆದೇಶಿಸಿದೆ.
ದೇವಾಲಯ ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂಬಂಧಪಟ್ಟ ಸಿಬ್ಬಂದಿಯಿಂದಲೂ ಸ್ಪಷ್ಟನೆ ಕೇಳಲಾಗಿದೆ.
ಶುಕ್ರವಾರ ಭೈರವ ಸೇನಾ ಎಂಬ ಸಂಘಟನೆ ಬದ್ರಿನಾಥ ಧಾಮದಲ್ಲಿ ಹಣಕಾಸು ಅಕ್ರಮ ನಡೆದಿದೆ ಎಂದು ಆರೋಪಿಸಿತ್ತು. ಜೊತೆಗೆ, ದೇವಾಲಯ ಸಮಿತಿ ಅಧ್ಯಕ್ಷರ ವೈಯಕ್ತಿಕ ಸಹಾಯಕರಿಗೆ ಸಂಬಂಧಿಸಿದ ಹಣ ದುರುಪಯೋಗ ಪ್ರಕರಣದ ಕುರಿತು ನ್ಯಾಯಸಮ್ಮತ ತನಿಖೆ ನಡೆಸುವಂತೆ ಆಗ್ರಹಿಸಿತ್ತು.
ಆದರೆ, ಅಧ್ಯಕ್ಷ ಹೇಮಂತ್ ದ್ವಿವೇದಿ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ 'ವೈಯಕ್ತಿಕ ಕಾರ್ಯದರ್ಶಿ' ಎಂದು ಉಲ್ಲೇಖಿಸಲಾದ ವ್ಯಕ್ತಿ ತಮ್ಮ ಖಾಸಗಿ ಕಾರ್ಯದರ್ಶಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು BKTCಯ ನಿಯಮಿತ ಸರ್ಕಾರಿ ಸಿಬ್ಬಂದಿಯಾಗಿದ್ದು, ಈ ಹಿಂದೆ ಸಮಿತಿಯ ಮೂವರು ಮಾಜಿ ಅಧ್ಯಕ್ಷರ ವೈಯಕ್ತಿಕ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿಸಿದ್ದಾರೆ.
ತನಿಖೆಯಲ್ಲಿ ಯಾವುದೇ ಸಿಬ್ಬಂದಿ ತಪ್ಪಿತಸ್ಥರೆಂದು ಸಾಬೀತಾದರೆ, ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದ್ವಿವೇದಿ ಭರವಸೆ ನೀಡಿದ್ದಾರೆ.
ಇದೇ ವೇಳೆ, ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸೋಹನ್ ಸಿಂಗ್ ರಂಗಡ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ಕೇಳಿಬಂದ ನಂತರ ದೇವಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಆದರೆ, ಲಭ್ಯವಿರುವ ದೃಶ್ಯಗಳು ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳವು ಪ್ರಕರಣ: ಕದ್ದ ಚಿನ್ನವನ್ನು ಆರೋಪಿಗಳು ಬಿಸ್ಕತ್ತು ಮಾಡಿದ್ರಾ?
ಪ್ರಕರಣದ ಗಂಭೀರತೆಯನ್ನು ಗಮನಿಸಿ ಅಧ್ಯಕ್ಷರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಅವರ ನಿರ್ದೇಶನದಂತೆ ಸಂಬಂಧಪಟ್ಟ ಸಿಬ್ಬಂದಿಯಿಂದ ಸ್ಪಷ್ಟನೆ ಕೇಳಲಾಗಿದೆ. ಅಲ್ಲದೆ, ಆಂತರಿಕ ತನಿಖಾ ಸಮಿತಿ ರಚಿಸುವ ಪ್ರಸ್ತಾವನೆಯನ್ನೂ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ತನಿಖಾ ಸಮಿತಿ ರಚನೆಯಾದ ಬಳಿಕ ಲಭ್ಯವಿರುವ ಸಾಕ್ಷ್ಯಗಳು, ದಾಖಲೆಗಳು ಹಾಗೂ ಸಂಬಂಧಪಟ್ಟವರ ಹೇಳಿಕೆಗಳನ್ನು ಆಧರಿಸಿ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲಿದೆ. ತನಿಖೆಯಲ್ಲಿ ಯಾವುದೇ ಅಕ್ರಮ ಬೆಳಕಿಗೆ ಬಂದರೆ, ಶ್ರೀ ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿ ಕಾಯ್ದೆ–1939 ಹಾಗೂ ಸಿಬ್ಬಂದಿ ನಡವಳಿಕೆ ನಿಯಮಗಳ ಪ್ರಕಾರ ಕಾನೂನು ಮತ್ತು ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು CEO ತಿಳಿಸಿದ್ದಾರೆ.
ಅಲ್ಲದೆ, ಈ ವಿಚಾರವು ಕೋಟ್ಯಂತರ ಭಕ್ತರ ನಂಬಿಕೆಗೆ ಸಂಬಂಧಿಸಿರುವುದರಿಂದ, ಯಾವುದೇ ಆಧಾರರಹಿತ ಅಥವಾ ತಪ್ಪು ಮಾಹಿತಿಯನ್ನು ಹರಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.