Thrissur Pooram Festival: ವಿಶ್ವ ಪ್ರಸಿದ್ಧ ತ್ರಿಶೂರ್ ಪೂರಂ ಸಿದ್ಧತೆ ವೇಳೆ ಭಾರಿ ಅನಾಹುತ; ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಮಂದಿ ಸಾವು
Firecracker Unit Explodes: ಕೇರಳಂನ ತ್ರಿಶೂರ್‌ನಲ್ಲಿ ಮಂಗಳವಾರ ಭಾರಿ ಅನಾಹುತ ಸಂಭವಿಸಿದ್ದು, ಪಟಾಕಿ ತಯಾರಿಕಾ ಕೇಂದ್ರದಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 6 ಮಂದಿ ಅಸುನೀಗಿದ್ದಾರೆ. ತ್ರಿಶೂರ್ ಪೂರಂನ ಹಿನ್ನೆಲೆಯಲ್ಲಿ ತಿರುವಂಬಾಡಿ ವಿಭಾಗ ಪಟಾಕಿ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ.
ತ್ರಿಶೂರ್‌ನಲ್ಲಿ ನಡೆದ ಸ್ಫೋಟದ ದೃಶ್ಯ -
ತಿರುವನಂತಪುರಂ, ಏ. 21: ಕೇರಳಂನ ತ್ರಿಶೂರ್‌ನಲ್ಲಿ ಮಂಗಳವಾರ (ಏಪ್ರಿಲ್ 21) ಭಾರಿ ಅನಾಹುತ ಸಂಭವಿಸಿದ್ದು, ಪಟಾಕಿ ತಯಾರಿಕಾ ಕೇಂದ್ರದಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 6 ಮಂದಿ ಅಸುನೀಗಿದ್ದಾರೆ (Firecracker Unit Explodes). ಸಾವಿನ ಸಂಖ್ಯೆ ಏರಿಕೆಯಾಗುವ ಭೀತಿ ಎದುರಾಗಿದೆ. ತ್ರಿಶೂರ್ ಪೂರಂನ (Thrissur Pooram) ಹಿನ್ನೆಲೆಯಲ್ಲಿ ತಿರುವಂಬಾಡಿ ವಿಭಾಗ ಪಟಾಕಿ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 40ಕ್ಕಿಂತ ಅಧಿಕ ಮಂದಿ ಗಾಯಗೊಂಡಿದ್ದು, ತ್ರಿಶೂರ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಈ ಪೈಕಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆಯೂ ಸ್ಫೋಟ ನಡೆದಿದೆ ಎಂದು ವರದಿ ತಿಳಿಸಿದೆ.
ಬೃಹತ್ ಸ್ಫೋಟದ ಶಬ್ದ ಕಿಲೋ ಮೀಟರ್‌ವರೆಗೆ ಕೇಳಿಸಿತು ಎಂದು ಸ್ಥಳೀಯರು ವಿವರಿಸಿದ್ದಾರೆ. ಸ್ಫೋಟದ ತೀವ್ರತೆಗೆ ಮೃತದೇಹದ ಚೂರುಗಳು ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಮೂಲಗಳು ವರದಿ ಮಾಡಿವೆ.
ತ್ರಿಶೂರ್‌ನಲ್ಲಿ ನಡೆದ ಸ್ಫೋಟದ ದೃಶ್ಯ:
Just days ahead of the famous #Thrissur Pooram festival a major explosion was reported at a fireworks storage facility. At least 3 people have been reported dead, with fears of more casualties or injuries as rescue operations continue. #Kerala pic.twitter.com/WPCBg2tmlQ
— Ashish (@KP_Aashish) April 21, 2026
ಘಟನೆಯಲ್ಲಿ ಪಟಾಕಿ ಪ್ರದರ್ಶನದ ಜವಾಬ್ದಾರಿ ಹೊತ್ತಿರುವ ಸತೀಶನ್ ಎಂಬವರಿಗೂ ಗಾಯವಾಗಿದೆ ಎನ್ನಲಾಗಿದೆ. ಸ್ಫೋಟ ನಡೆದ ಸ್ಥಳದ ಇಕ್ಕಟ್ಟಾದ ಪ್ರದೇಶವಾಗಿದ್ದು, ಅಗ್ನಿ ಶಾಮಕ ದಳದ ವಾಹನ ತೆರಳಲು ಕಷ್ಟಪಬೇಕಾಯಿತು. ಕೊನೆಗೆ ಕಾಂಪೌಂಡ್ ಧ್ವಂಸಗೊಳಿಸಿ ಅಗ್ನಿ ಶಾಮಕ ದಳದ ವಾಹನಕ್ಕೆ ದಾರಿ ಮಾಡಿಕೊಡಬೇಕಾಯಿತು.
ಪ್ರತ್ಯಕ್ಷದರ್ಶಿಗಳ ಪ್ರಕಾರ ಆರಂಭದಲ್ಲಿ 2 ದೊಡ್ಡ ಮಟ್ಟದ ಸ್ಫೋಟಗಳು ನಡೆದವು. ಬಳಿಕ ಸರಣಿ ಸ್ಫೋಟ ಸಂಭವಿಸಿತು. ಏಪ್ರಿಲ್ 24ರಂದು ತ್ರಿಶೂರ್ ಪೂರಂನ ಪಟಾಕಿ ಪ್ರದರ್ಶನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪಟಾತಿ ತಯಾರಿಕಾ ಘಟಕ ಸಂಪೂರ್ಣ ನೆಲಸಮವಾಗಿದೆ. ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ದೇಹಗಳು ಛಿದ್ರ ಛಿದ್ರ
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಘಟನಾ ಸ್ಥಳದ ಸುತ್ತಮುತ್ತ ಛಿದ್ರಗೊಂಡ ದೇಹದ ಭಾಗಗಳು ಪತ್ತೆಯಾಗಿವೆ. ಕೇರಳದ ಅತ್ಯಂತ ದೊಡ್ಡ ಸಾಂಸ್ಕೃತಿಕ ಹಬ್ಬವಾದ ತ್ರಿಶೂರ್ ಪೂರಂಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ನಡೆದಿರುವ ಈ ದುರಂತ ಭಕ್ತರಲ್ಲಿ, ಸ್ಥಳೀಯರಲ್ಲಿ ಕಳವಳ ಮೂಡಿಸಿದೆ.
ಆಂಧ್ರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 18 ಮಂದಿ ಸಾವು
ತಮಿಳುನಾಡು ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; 13 ಮಂದಿ ಸಾವು
2 ದಿನಗಳ ಹಿಂದೆಯಷ್ಟೇ ಅಂದರೆ ಏಪ್ರಿಲ್ 19ರಂದು ತಮಿಳುನಾಡಿನ ಪಟಾಕಿ ತಯಾರಿಕಾ ಕೇಂದ್ರದಲ್ಲಿಯೂ ಇಂತಹದ್ದೇ ದುರಂತ ಸಂಭವಿಸಿತ್ತು. ವಿರುಧುನಗರ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದರು. ಮುತ್ತುಮಣಿಕಂ ಅವರ ವನಜಾ ಕ್ರ್ಯಾಕರ್ಸ್ ಕಂಪನಿಯಲ್ಲಿ ಈ ಸ್ಫೋಟ ಸಂಭವಿಸಿತ್ತು. ಭಾನುವಾರ ರಜಾ ದಿನವಾಗಿದ್ದರೂ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ. ವಾತಾವರಣದಲ್ಲಿ ಹೆಚ್ಚುತ್ತಿರುವ ಉಷ್ಣತೆಯ ಕಾರಣದಿಂದ ರಾಸಾಯನಿಕಗಳ ಮಧ್ಯೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ತನಿಖೆಯ ಬಳಿಕ ಅಧಿಕಾರಿಗಳು ಹೇಳಿದ್ದಾರೆ. ಘಟನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಶಿವಕಾಶಿ, ವಿರುಧುನಗರ ಮತ್ತು ಸತ್ತೂರ್‌ನ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತಂದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.