all-party delegation: ಆಪರೇಷನ್ ಸಿಂದೂರ್ ನಿಯೋಗದಲ್ಲಿ ಟಿಎಂಸಿಯಿಂದ ಅಭಿಷೇಕ್ ಬ್ಯಾನರ್ಜಿ ಆಯ್ಕೆ
ಆಪರೇಷನ್ ಸಿಂಧೂರ್ ನಂತರ ಭಯೋತ್ಪಾದನೆಯ ವಿರುದ್ಧ ಭಾರತದ ಸಂದೇಶವನ್ನು ಸಾರಲು ಜಗತ್ತಿನಾದ್ಯಂತ ಪ್ರವಾಸ ಮಾಡಲಿರುವ ಸರ್ವಪಕ್ಷ ನಿಯೋಗಗಳಲ್ಲಿ ತೃಣಮೂಲ ಕಾಂಗ್ರೆಸ್‌ನ ಒಂದು ಕಾಲದ ಉತ್ತರಾಧಿಕಾರಿ ಅಭಿಷೇಕ್ ಬ್ಯಾನರ್ಜಿ ಬಂಗಾಳದ ಆಡಳಿತ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ನವದೆಹಲಿ: ಆಪರೇಷನ್ ಸಿಂಧೂರ್ ನಂತರ ಭಯೋತ್ಪಾದನೆಯ ವಿರುದ್ಧ ಭಾರತದ ಸಂದೇಶವನ್ನು ಸಾರಲು ಜಗತ್ತಿನಾದ್ಯಂತ ಪ್ರವಾಸ ಮಾಡಲಿರುವ ಸರ್ವಪಕ್ಷ ನಿಯೋಗಗಳಲ್ಲಿ (all-party delegation) ತೃಣಮೂಲ ಕಾಂಗ್ರೆಸ್‌ನ ಒಂದು ಕಾಲದ ಉತ್ತರಾಧಿಕಾರಿ ಅಭಿಷೇಕ್ ಬ್ಯಾನರ್ಜಿ ಬಂಗಾಳದ ಆಡಳಿತ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟಿಎಂಸಿ ಸಂಸದ ಯೂಸುಫ್ ಪಠಾಣ್ ಅವರನ್ನು ನಾಮನಿರ್ದೇಶನ ಮಾಡುವ ಮೊದಲು ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗುತ್ತಿದೆ. ತೃಣಮೂಲ ಕಾಂಗ್ರೆಸ್ ಐದು ಸದಸ್ಯರ ನಿಯೋಗವನ್ನು ಕಾಶ್ಮೀರಕ್ಕೆ ಕಳುಹಿಸಲಿದೆ ಎಂದು ಪಕ್ಷ ಮಂಗಳವಾರ ತಿಳಿಸಿದೆ.
ನಿಯೋಗದಲ್ಲಿ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ'ಬ್ರೇನ್, ಮೊಹಮ್ಮದ್ ನದಿಮುಲ್ ಹಕ್, ಸಗೋರಿಕಾ ಘೋಷ್ ಮತ್ತು ಮಮತಾ ಠಾಕೂರ್ ಮತ್ತು ಬಂಗಾಳದ ಜಲ ಸಚಿವ ಮಾನಸ್ ರಂಜನ್ ಭುನಿಯಾ ಸೇರಿದ್ದಾರೆ. ಸಂಸದೀಯ ನಿಯೋಗದಲ್ಲಿ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸದಸ್ಯರು ಇಲ್ಲದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸರ್ವಪಕ್ಷ ಸಂಸದೀಯ ನಿಯೋಗದ ಜೊತೆ ಹೋಗದಿರಲು ಖುದ್ದಿ ಟಿಎಂಸಿ ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು.
ಸರ್ವಪಕ್ಷ ಸಂಸದೀಯ ನಿಯೋಗ ಸೇರುವಂತೆ ಕೇಂದ್ರ ಸರ್ಕಾರದಿಂದ ಯಾವುದೇ ಮನವಿ ಬಂದಿಲ್ಲ. ಒಂದು ವೇಳೆ ಅಂತಹ ಮನವಿ ಬಂದರೆ ನಾವು ಖಂಡಿತವಾಗಿಯೂ ಪರಿಗಣಿಸುತ್ತೇವೆ. ದೇಶದ ಹಿತಾಸಕ್ತಿಗಾಗಿ ನಾವು ಸದಾ ಸಿದ್ಧರಾಗಿದ್ದು, ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡಲು ಯಾವುದೇ ಹಿಂಜರಿಕೆ ಇಲ್ಲ. ವಿದೇಶಾಂಗ ವ್ಯವಹಾರಗಳಲ್ಲಿ ನಾವು ಯಾವಾಗಲೂ ಕೇಂದ್ರದ ನೀತಿಯನ್ನು ಬೆಂಬಲಿಸುತ್ತೇವೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹೇಳಿದ್ದರು. ಇದೀಗ ಟಿಎಂಸಿಯಿಂದ ಅಭಿಷೇಕ್ ಬ್ಯಾನರ್ಜಿ ಆಯ್ಕೆಯಾಗಿದ್ದಾರೆ ಎಂದ ತಿಳಿದು ಬಂದಿದೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಡಲು, ಕೇಂದ್ರ ಸರ್ಕಾರ ಸರ್ವಪಕ್ಷ ಸಂಸದೀಯ ನಿಯೋಗದ ರಚನೆ ಮಾಡಿದೆ. ಒಟ್ಟು ಏಳು ಭಿನ್ನ ನಿಯೋಗಗಳು ಜಗತ್ತಿನ 32 ದೇಶಗಳಿಗೆ ಭೇಟಿ ನೀಡಿ, ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಲಿದೆ. ಕೇಂದ್ರ ಸರ್ಕಾರ ಶಶಿ ತರೂರ್ ಅವರಲ್ಲಿರುವ ತಾಕತ್ತು, ಪ್ರತಿಭೆಗಳನ್ನು ಗುರುತಿಸಿ ತಾನು ಹೊಸದಾಗಿ ರಚಿಸಿರುವ ಏಳು ಸರ್ವಪಕ್ಷಗಳ ನಿಯೋಗಗಳಲ್ಲೊಂದಕ್ಕೆ ತರೂರ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಿದೆ. ಭಯೋತ್ಪಾದನೆಯ ನಿರ್ಮೂಲನೆಯ ಬಗ್ಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು (ಆಪರೇಷನ್ ಸಿಂಧೂರ್ ಸೇರಿ) ಜಗತ್ತಿನ ನಾನಾ ದೇಶಗಳಿಗೆ ಹೋಗಿ ಅಲ್ಲಿನ ರಾಜಕೀಯ ನಾಯಕರಿಗೆ ಮನವರಿಕೆ ಮಾಡಲು ಈ ನಿಯೋಗಗಳನ್ನು ರಚಿಸಲಾಗಿದೆ. ಹಾಗಾಗಿ, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳಿಗೂ ತಮ್ಮ ಪಕ್ಷದಲ್ಲಿರುವ ಸಂವಹನ ಕಲೆಯಲ್ಲಿ ಅತ್ಯಂತ ನಿಪುಣವಿರುವ, ರಾಜತಾಂತ್ರಿಕ ಕೌಶಲ್ಯವಿರುವಂಥ ನಾಲ್ವರ ಹೆಸರುಗಳನ್ನು ಶಿಫಾರಸು ಮಾಡಬೇಕೆಂದು ಇತ್ತೀಚೆಗೆ ಕೋರಿತ್ತು.