ನೀಟ್ ಆಯ್ತು, ಇನ್ನು E20 ಪೆಟ್ರೋಲ್ ಸರದಿ; ಮತ್ತೊಂದು ಬೃಹತ್ ಜನಾಂದೋಲನಕ್ಕೆ ಸಜ್ಜಾಗುತಿದ್ಯಾ ದೇಶ?
Tehseen Poonawalla: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಬೃಹತ್ ಜನಾಂದೋಲನದಿಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಇದೀಗ ಕೇಂದ್ರ ಸರ್ಕಾರ ಪರಿಚಯಿಸಿದ E20 ಪೆಟ್ರೋಲ್ ವಿರುದ್ಧ ಬೃಹತ್ ಜನಾಂದೋಲನ ನಡೆಸಲು ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲ ಮುಂದಾಗಿದ್ದಾರೆ.
ಸಾಂದರ್ಭಿಕ ಚಿತ್ರ ಮತ್ತು ತೆಹ್ಸೀನ್ ಪೂನಾವಾಲಾ (ಸಂಗ್ರಹ ಚಿತ್ರ) -
ದೆಹಲಿ, ಜು. 26: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಬೃಹತ್ ಜನಾಂದೋಲನದಿಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ತಲೆದಂಡವಾಗಿದೆ. ಜುಲೈ 25ರಂದು ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ಸಿಜೆಪಿ ಪ್ರತಿಭಟನೆ ಹಿಂಪಡೆದಿದೆ. ಇದೀಗ ದೇಶ ಮತ್ತೊಂದು ಹೋರಾಟಕ್ಕೆ ಸಜ್ಜಾಗುತ್ತಿದೆ. ಹೌದು, ಕೇಂದ್ರ ಸರ್ಕಾರ ಪರಿಚಯಿಸಿದ E20 ಪೆಟ್ರೋಲ್ (ಶೇಕಡಾ 20ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್) ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ವಿರುದ್ಧ ನೀಟ್ ಹೋರಾಟ ಮಾದರಿಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲ (Tehseen Poonawalla) ಮುಂದಾಗಿದ್ದಾರೆ.
ಜುಲೈ 31ರಂದು ಎಥನಾಲ್ ಮಿಶ್ರಿತ ಪೆಟ್ರೋಲ್ ವಿರುದ್ಧ ʼಗಾಡಿ ಮಾರ್ಚ್, ಗಾಂಧಿ ಮಾರ್ಚ್ʼ ಆಂದೋಲನ ನಡೆಸುವುದಾಗಿ ತೆಹ್ಸೀನ್ ಪೂನಾವಾಲ ಘೋಷಿಸಿದ್ದಾರೆ. ಇಂಡಿಯಾ ಗೇಟ್‌ನಿಂದ ಸಂಸತ್‌ವರೆಗೆ ರ‍್ಯಾಲಿ ಮಾಡುವುದಾಗಿ ತಿಳಿಸಿದ್ದಾರೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಹರ್ದೀಪ್ ಸಿಂಗ್ ಪುರಿ ಅವರ ಮನೆಗಳ ಸುತ್ತ ಈ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದ್ದಾರೆ. ಎಥನಾಲ್ ಮಿಶ್ರತ ಪೆಟ್ರೋಲ್ ಪರಿಚಯಿಸಿದ್ದು, ಕೇಂದ್ರದ ಅತ್ಯಂತ ಕೆಟ್ಟ ಯೋಜನೆ ಎಂದು ಅವರು ಟೀಕಿಸಿದ್ದಾರೆ.
ತೆಹ್ಸೀನ್ ಪೂನಾವಾಲ ಅವರ ಎಕ್ಸ್ ಪೋಸ್ಟ್:
31st JULY at INDIA GATE
— Tehseen Poonawalla Official 🇮🇳 (@tehseenp) July 26, 2026
We are going to break all records for vehicle owners coming together against Ethanol
Join TEAM BHARAT for the #GaadiMarchGandhiMarch.
Our Demands:
* Allow E10 Petrol for E10-compatible vehicles.
* Reduce the price of E20 petrol by 20%.
* Reduce… https://t.co/YkmNo3iiQ2
ʼʼಈ ನೀತಿಯನ್ನು ಸರಿಪಡಿಸಿದರೆ ಲೀಟರ್‌ಗೆ 80 ರುಪಾಯಿಯಿಂದ 90 ರುಪಾಯಿ ನಡುವೆ ಶುದ್ಧ ಮತ್ತು ಕಲಬೆರಕೆಯಿಲ್ಲದ ಪೆಟ್ರೋಲ್ ಪಡೆಯಬಹುದು. ಈ ಬೇಡಿಕೆ ಮುಂದಿಟ್ಟ ಜುಲೈ 31ರಂದು ದೆಹಲಿಯಲ್ಲಿ ʼಗಾಡಿ ಮಾರ್ಚ್, ಗಾಂಧಿ ಮಾರ್ಚ್ʼ ನಡೆಸುತ್ತೇವೆʼʼ ಎಂದು ಹೇಳಿದ್ದಾರೆ.
ಹೋರಾಟದಲ್ಲಿ ಭಾಗವಹಿಸುವಂತೆ ಕರೆ
ಸಾರ್ವಜನಿಕರು ಈ ಆಂದೋಲನವನ್ನು ಬೆಂಬಲಿಸುವಂತೆ ತೆಹ್ಸೀನ್ ಪೂನಾವಾಲಾ ಮನವಿ ಮಾಡಿದ್ದಾರೆ. ʼʼಈ ರ‍್ಯಾಲಿ ಇಂಡಿಯಾ ಗೇಟ್‌ನಿಂದ ಪ್ರಾರಂಭವಾಗಿ ಸಂಸತ್ ರಸ್ತೆಯ ಮೂಲಕ ಹಾದುಹೋಗಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಹರ್ದೀಪ್ ಸಿಂಗ್ ಪುರಿ ಅವರ ಕಚೇರಿ ಮತ್ತು ನಿವಾಸದ ಬಳಿಗೆ ತಲುಪಲಿದೆʼʼ ಎಂದಿದ್ದಾರೆ. ಸಾರ್ವಜನಿಕರು ತಮ್ಮ ಕಾರ್, ಬೈಕ್ ಜತೆಗೆ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ʼʼದೇಶದಲ್ಲಿ ಜಾರಿಗೊಳಿಸಲಾದ ಅತ್ಯಂತ ಕೆಟ್ಟ ನೀತಿಗಳಲ್ಲಿ ಇ20 ನೀತಿಯೂ ಒಂದು. ಈ ನೀತಿಯನ್ನು ಸುಧಾರಿಸಿದರೆ, ಪ್ರತಿ ಲೀಟರ್‌ಗೆ 80 ರುಪಾಯಿಯಿಂದ 90 ರುಪಾಯಿಗೆ ಶುದ್ಧ ಪೆಟ್ರೋಲ್ ಜನರಿಗೆ ಲಭ್ಯವಾಗುವಂತೆ ಮಾಡಬಹುದು. ಪ್ರಸ್ತುತ ವ್ಯವಸ್ಥೆಯಲ್ಲಿ ಜನರು ತಮಗೆ ಅಗತ್ಯವಾದ ಇಂಧನವನ್ನು ಆಯ್ಕೆ ಮಾಡುವ ಅವಕಾಶ ನೀಡಬೇಕು ಮತ್ತು ನೀತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕುʼʼ ಎಂದು ಅವರು ಹೇಳಿದ್ದಾರೆ.
ʼʼಈ ಅಭಿಯಾನವು ಕೇವಲ ಇಂಧನ ಬೆಲೆಗಳ ವಿಷಯವಲ್ಲ. ಬದಲಾಗಿ ಗ್ರಾಹಕರಿಗೆ ಆಯ್ಕೆ ನೀಡಬೇಕು ಮತ್ತು ನೀತಿಯಲ್ಲಿ ಪಾರದರ್ಶಕತೆ ತರಬೇಕು ಎನ್ನುವ ಉದ್ದೇಶವೂ ಇದರ ಹಿಂದಿದೆ. ಸರ್ಕಾರವು E20 ನೀತಿಯನ್ನು ಮರು ಪರಿಶೀಲಿಸಬೇಕು ಮತ್ತು ಈ ಇಂಧನ ಮಿಶ್ರಣದಿಂದ ಪರಿಣಾಮ ಎದುರಿಸುತ್ತಿರುವ ವಾಹನ ಮಾಲಕರ ಸಮಸ್ಯೆ ಪರಿಹರಿಸಬೇಕುʼʼ ಎಂದು ಅವರು ವಿವರಿಸಿದ್ದಾರೆ.
ತೆಹ್ಸೀನ್ ಬೇಡಿಕೆ ಏನು?
ʼʼE10 ಪೆಟ್ರೋಲ್‌ಗೆ ಹೊಂದಿಕೆಯಾಗುವ ವಾಹನಗಳಿಗೆ E10 ಪೆಟ್ರೋಲ್ ಲಭ್ಯವಾಗುವಂತೆ ಮಾಡಬೇಕು. E20 ಪೆಟ್ರೋಲ್‌ನ ಬೆಲೆಯನ್ನು ಶೇಕಡಾ 20ರಷ್ಟು ಕಡಿಮೆ ಮಾಡಬೇಕುʼʼ ಎಂಬ ಬೇಡಿಕೆ ಪಟ್ಟಿ ಸಲ್ಲಿಸಿದ್ದಾರೆ. ಜತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಎಥೆನಾಲ್ ವಿಷಯದಲ್ಲಿ ಸ್ವಹಿತಾಸಕ್ತಿ ಹೊಂದಿದ್ದಾರೆ ಎಂದು ದೂರಿದ್ದಾರೆ.
E20 ಶುದ್ಧ ಇಂಧನ, ಎಥನಾಲ್ ರಹಿತ ಪೆಟ್ರೋಲ್‌ಗೆ ಮರಳುವ ಯೋಜನೆ ಇಲ್ಲ: ಸಂಸತ್ತಿನಲ್ಲಿ ಕೇಂದ್ರದ ಸ್ಪಷ್ಟನೆ
ಏನಿದು E20 ಇಂಧನ?
E20 ಪೆಟ್ರೋಲ್ ಎಂದರೆ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್. ಅಂದರೆ ಇದರಲ್ಲಿ ಶೇಕಡಾ 80ರಷ್ಟು ಸಾಂಪ್ರದಾಯಿಕ ಪೆಟ್ರೋಲ್ ಇರುತ್ತದೆ. ಎಥೆನಾಲ್ ಎನ್ನುವುದು ಕಬ್ಬು, ಜೋಳ ಮತ್ತು ಇತರ ಕೃಷಿ ಉತ್ಪನ್ನಗಳಿಂದ ತಯಾರಿಸಲಾಗುವ ಒಂದು ಜೈವಿಕ ಇಂಧನ. ಭಾರತದಲ್ಲಿ 2022ರ ಹೊತ್ತಿಗೆ ಶೇಕಡಾ 10ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ತಲುಪಲಾಗಿತ್ತು. ಈಗ ಶೇಕಡಾ 20 ಎಥನಾಲ್ ಪರಿಚಯಿಸಲಾಗಿದೆ. ಆದರೆ E20 ಪೆಟ್ರೋಲ್‌ನಿಂದ ವಾಹನಗಳ ಎಂಜಿನ್‌ಗೆ ಹಾನಿಯಾಗುತ್ತದೆ ಮತ್ತು ಮೈಲೇಜ್ ಕಡಿಮೆಯಾಗುತ್ತದೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.