"ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಯಾವುದೇ ಸಮಸ್ಯೆ ಆಗಲ್ಲ"; ವದಂತಿ ಕುರಿತು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು?
Ethanol-Blended Petrol: ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಸುತ್ತಲಿನ ಯೋಜನೆಗೆ ಸಂಬಂಧಿಸಿದಂತೆ ವ್ಯಕ್ತವಾಗುತ್ತಿರುವ ಆತಂಕಗಳನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿಹಾಕಿದ್ದಾರೆ. ಜೈವಿಕ ಇಂಧನ ಮಿಶ್ರಣದ ಸುತ್ತಲಿನ ವದಂತಿಗಳನ್ನು ಪರಿಗಣಿಸುವುದಿಲ್ಲ ಎಂದು ಸಚಿವರು ಹೇಳಿದ ಕೆಲವೇ ದಿನಗಳ ನಂತರ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (ಸಂಗ್ರಹ ಚಿತ್ರ) -
ನವದೆಹಲಿ, ಜು.8: ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ (Ethanol-Blended Petrol) ಸುತ್ತಲಿನ ಯೋಜನೆಗೆ ಸಂಬಂಧಿಸಿದಂತೆ ವ್ಯಕ್ತವಾಗುತ್ತಿರುವ ಆತಂಕಗಳನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ತಳ್ಳಿಹಾಕಿದ್ದಾರೆ. ಈ ಕುರಿತು ನಡೆಯುತ್ತಿರುವ ಚರ್ಚೆಗಳು ತಪ್ಪು ವರದಿ ಮತ್ತು ತಪ್ಪು ವ್ಯಾಖ್ಯಾನದ ಪರಿಣಾಮ ಎಂದು ಅವರು ವಿವರಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಹರಡುತ್ತಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶದಿಂದ ಎಥೆನಾಲ್-ಮಿಶ್ರಿತ ಇಂಧನದ ಕುರಿತು ಪ್ರಮುಖ ಮಾಹಿತಿಗಳನ್ನೂ ಅವರು ಹಂಚಿಕೊಂಡಿದ್ದಾರೆ.
ಸರ್ಕಾರವು ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತದೆ. ಆದರೆ ಜೈವಿಕ ಇಂಧನ ಮಿಶ್ರಣದ ಸುತ್ತಲಿನ ವದಂತಿಗಳನ್ನು ಪರಿಗಣಿಸುವುದಿಲ್ಲ ಎಂದು ಸಚಿವರು ಹೇಳಿದ ಕೆಲವೇ ದಿನಗಳ ನಂತರ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ. E20 ಪೆಟ್ರೋಲ್, ಕೀಟಗಳನ್ನು ಆಕರ್ಷಿಸುತ್ತದೆ. ವಾಹನಗಳ ಎಂಜಿನ್‌ಗೆ ಹಾನಿ ಉಂಟುಮಾಡುತ್ತದೆ ಹಾಗೂ ಇಂಧನ ದಕ್ಷತೆಯನ್ನು ಕಡಿಮೆ ಮಾಡುತ್ತದೆ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಸಚಿವರು ಈ ಹೇಳಿಕೆ ನೀಡಿದ್ದಾರೆ.
ಇಲ್ಲಿದೆ ವಿಡಿಯೊ:
#WATCH | Delhi | On the controversy surrounding E20 fuel, Union Minister for Petroleum and Natural Gas Hardeep Singh Puri says, "...It is a misinterpretation and I don't want to use stronger words..." pic.twitter.com/2uYsCiPuta
— ANI (@ANI) July 7, 2026
ಎಥೆನಾಲ್ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಾ ?: ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು?
ದೇಶಾದ್ಯಂತ E20 ಪೆಟ್ರೋಲ್ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಲಭ್ಯವಿದ್ದರೂ, ಈಗ ಮಾತ್ರ ಈ ವಿಚಾರ ಏಕೆ ದೊಡ್ಡ ಚರ್ಚೆಯಾಗುತ್ತಿದೆ ಎಂದು ಅವರು ಪ್ರಶ್ನಿಸಿದರು. ಲಕ್ಷಾಂತರ ವಾಹನಗಳು ಈಗಾಗಲೇ ಯಾವುದೇ ದೂರುಗಳಿಲ್ಲದೆ ಈ ಇಂಧನದಲ್ಲಿ ಚಲಿಸುತ್ತಿದೆ ಎಂದು ಅವರು ಹೇಳಿದರು. ಜೊತೆಗೆ, ವಾಹನ ತಯಾರಿಕಾ ಕಂಪನಿಗಳು ಹಾಗೂ ವಾಹನ ಸೇವಾ ಪೂರೈಕೆದಾರರು ಸಹ E20 ಇಂಧನ ಮಿಶ್ರಣದಿಂದ ವಾಹನಗಳ ಕಾರ್ಯಾಚರಣೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಿಲುವನ್ನು ನಿರಂತರವಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಕೆಲವು ತಪ್ಪು ವ್ಯಾಖ್ಯಾನಗಳಿವೆ. ದೇಶದಲ್ಲಿ ಸುಮಾರು 20 ಕೋಟಿ ದ್ವಿಚಕ್ರ ವಾಹನಗಳು ರಸ್ತೆಗಳಲ್ಲಿ ಸಂಚರಿಸುತ್ತಿವೆ. 20 ಲಕ್ಷಕ್ಕೂ ಹೆಚ್ಚು ನಾಲ್ಕುಚಕ್ರ ವಾಹನಗಳು ಈ ಇಂಧನವನ್ನು ಬಳಸುತ್ತಿವೆ. ಆಟೋಮೊಬೈಲ್ ತಯಾರಕರ, ಕಾರುಗಳನ್ನು ಸರ್ವಿಸ್ ಮಾಡುವವರು ಅನೇಕರಿದ್ದಾರೆ. ಅವರೆಲ್ಲರೂ ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಈಗೇಕೆ ಈ ವಿಚಾರದ ಬಗ್ಗೆ ಇಷ್ಟೊಂದು ಆಸಕ್ತಿ ಏಕೆ ಮೂಡಿದೆ? ಎಂದು ಹರ್‌ದೀಪ್ ಸಿಂಗ್ ಪುರಿ ಪ್ರಶ್ನಿಸಿದರು.
ಭವಿಷ್ಯದಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಫಲಿತಾಂಶವನ್ನು ಅವಲಂಬಿಸಿರುತ್ತದೆ ಎಂದು ಪುರಿ ಸ್ಪಷ್ಟಪಡಿಸಿದರು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರ್ಕಾರವು ವಾಹನ ತಯಾರಿಕಾ ಕಂಪನಿಗಳು ಸೇರಿದಂತೆ ಎಲ್ಲ ಸಂಬಂಧಿತ ಹಿತಾಸಕ್ತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ ನಂತರವೇ ಯಾವುದೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹರ್‌ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದರು.