ಪ್ರಧಾನಿ ನರೇಂದ್ರ ಮೋದಿ ಜತೆ ಮಹಿಳೆಯ ಎಐ-ಮಾರ್ಫ್ ಫೋಟೊ: ಅಭಿಜಿತ್ ದೀಪ್ಕೆ ಸೇರಿ ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ನೋಟಿಸ್
AI morphed photo of woman: ಪ್ರತಿಭಟನೆಯೊಂದರಲ್ಲಿ ಮಹಿಳೆಯೊಬ್ಬರ ಮುಖವನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಿರುಚಿ ಪ್ರದರ್ಶಿಸಲಾಗಿದೆ ಎಂಬ ಆರೋಪದ ಮೇರೆಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಚಾಲಕ ಅಭಿಜಿತ್ ದೀಪ್ಕೆ ಹಾಗೂ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಅಭಿಜಿತ್ ದೀಪ್ಕೆ (ಸಂಗ್ರಹ ಚಿತ್ರ) -
ನವದೆಹಲಿ, ಸೆ. 25: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಚಾಲಕ ಅಭಿಜಿತ್ ದೀಪ್ಕೆ (Abhijith Dipke) ಹಾಗೂ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರತಿಭಟನೆಯೊಂದರಲ್ಲಿ ಮಹಿಳೆಯೊಬ್ಬರ ಮುಖವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಫೋಟೊದೊಂದಿಗೆ ತಿರುಚಿ ಪ್ರದರ್ಶಿಸಲಾಗಿದೆ ಎಂಬ ಅರ್ಜಿಯ ಸಂಬಂಧ ಮೆಟಾ ಸಂಸ್ಥೆಗೆ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆದುಹಾಕುವಂತೆಯೂ ಆದೇಶಿಸಿದೆ.
ಅರ್ಜಿಗೆ ಸಂಬಂಧಿಸಿದ ವೆಬ್ ಲಿಂಕ್‌ಗಳನ್ನು ಪಡೆದ ನಂತರ, ತಮ್ಮ ಉಸ್ತುವಾರಿಯಲ್ಲಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಆ ಆಕ್ಷೇಪಾರ್ಹ ಚಿತ್ರಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಕಂಪನಿ) ಸಂಸ್ಥೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
“ಇದು ಕೇವಲ ಒಬ್ಬ ಮಹಿಳೆಗೆ ಸಂಬಂಧಿಸಿದ ವಿಷಯವಲ್ಲ, ಬದಲಿಗೆ ದೇಶದ ಪ್ರಧಾನಮಂತ್ರಿ ಅವರಿಗೆ ಸಂಬಂಧಿಸಿದ ವಿಷಯ. ಈ ವಿಷಯದಲ್ಲಿ ದೆಹಲಿ ಪೊಲೀಸರು ಅತ್ಯಂತ ಸೂಕ್ಷ್ಮವಾಗಿ ಮತ್ತು ಗಂಭೀರವಾಗಿ ವರ್ತಿಸುವುದನ್ನು ನಾನು ಖಚಿತಪಡಿಸುತ್ತೇನೆ” ಎಂದು ನ್ಯಾಯಮೂರ್ತಿ ಗಿರೀಶ್ ಕತ್ಪಾಲಿಯಾ ಹೇಳಿರುವುದಾಗಿ ʼಬಾರ್ ಆ್ಯಂಡ್ ಬೆಂಚ್ʼ ವರದಿ ಮಾಡಿದೆ.
ಚುನಾವಣಾ ಆಯುಕ್ತರ ರಾಜಿನಾಮೆ ಸೇರಿ ಮೂರು ಬೇಡಿಕೆ: ಚುನಾವಣಾ ಆಯೋಗಕ್ಕೆ ಸಿಜೆಪಿ ಖಡಕ್ ಎಚ್ಚರಿಕೆ
ಚಿತ್ರಗಳು ಹರಿದಾಡಿದ ನಂತರ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದ ಆ ಮಹಿಳೆಗೆ ಸಂಪೂರ್ಣ ರಕ್ಷಣೆ ಒದಗಿಸುವಂತೆ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಸಂತ್ರಸ್ತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಕೆಯ ವಿಳಾಸವನ್ನು ರಹಸ್ಯವಾಗಿಡಬೇಕು ಮತ್ತು ಅದನ್ನು ಕೇವಲ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ತಿಳಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.
ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ನಿಗದಿಪಡಿಸಿದೆ. ಸಿಜೆಪಿ ನಾಯಕರು ತಮ್ಮ ಡೀಪ್ ಫೇಕ್ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಪ್ರಸಾರ ಮಾಡುತ್ತಿದ್ದಾರೆ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು. ಪ್ರಧಾನಿ ಅವರ ಪಕ್ಕದಲ್ಲಿ ಮಹಿಳೆಯ ಮಾರ್ಫ್ ಮಾಡಿದ ಮುಖವನ್ನು ತೋರಿಸುವ ನಕಲಿ ಚಿತ್ರಗಳನ್ನು ತೆಗೆದುಹಾಕಲು ಅರ್ಜಿಯಲ್ಲಿ ಕೋರಲಾಗಿತ್ತು.
ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಥಮ ಮಾಹಿತಿ ವರದಿ (FIR) ದಾಖಲಾಗಿದ್ದು, ಕಂಟೆಂಟ್ ಕ್ರಿಯೇಟರ್ ಆಗಿರುವ ದೂರು ನೀಡಿದ ಮಹಿಳೆಯು ಆ ಫೋಟೊದಿಂದಾಗಿ ಸಂಪೂರ್ಣ ಸಂಕಷ್ಟ, ಭಯ ಮತ್ತು ಆಘಾತಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಆ ಆಕ್ಷೇಪಾರ್ಹ ಚಿತ್ರವನ್ನು ಸಿಜೆಪಿ ಪ್ರತಿಭಟನೆಯ ನಿರ್ದಿಷ್ಟ ಸಂಘಟಕರು ಮತ್ತು ಪ್ರಮುಖ ಪದಾಧಿಕಾರಿಗಳೇ ಸೃಷ್ಟಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ದೂರಿನಲ್ಲಿ ಆಕೆ ಸಿಜೆಪಿ ವಕ್ತಾರರಾದ ಅಭಿಜಿತ್ ದೀಪ್ಕೆ, ರತ್ನಾ ಸಿಂಗ್ ಮತ್ತು ಸೌರವ್ ದಾಸ್ ಸೇರಿ ಇತರರ ಹೆಸರನ್ನು ಉಲ್ಲೇಖಿಸಿದ್ದು, ತಮ್ಮ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಪ್ರತಿಭಟನಾ ಸ್ಥಳದಲ್ಲಿ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.