ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೇಪಾಳದಲ್ಲಿ ಮತ್ತೆ ಮಳೆ ಆರ್ಭಟ: ಹೆಚ್ಚಾದ ಪ್ರವಾಹ, ಭೂಕುಸಿತದ ಭೀತಿ

Nepal Flood: ಆಗಸ್ಟ್‌ನಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಿಂದ ತತ್ತರಿಸಿದ್ದ ನೇಪಾಳದಲ್ಲಿ ಇದೀಗ ಮತ್ತೆ ಅಂತಹದ್ದೇ ಪರಿಸ್ಥಿತಿ ಎದುರಾಗುವ ಭೀತಿಯಲ್ಲಿದೆ. ನಿರಂತರ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ತಲುಪಿಸಲು ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿವೆ. ಪ್ರಮುಖ ಹೆದ್ದಾರಿಗಳು ಬಂದ್ ಆಗಿದ್ದು, ಬೆಟ್ಟಗುಡ್ಡಗಳಲ್ಲಿ ಭೂಕುಸಿತ ಸಂಭವಿಸುವ ಭೀತಿಯಿಂದಾಗಿ ನದಿ ಪಾತ್ರದ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಹವಾಮಾನ ಇಲಾಖೆಯು ದೇಶದಾದ್ಯಂತ ಇನ್ನಷ್ಟು ದಿನ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿ ರೆಡ್ ಅಲರ್ಟ್ ಘೋಷಿಸಿದೆ.

ನೇಪಾಳದಲ್ಲಿ ಮತ್ತೆ ಮಳೆ ಆರ್ಭಟ; ದುರಂತ ಮರುಕಳಿಸುವ ಅಪಾಯ

ನೇಪಾಳದಲ್ಲಿ ತುಂಬಿ ಹರಿಯುತ್ತಿರುವ ನದಿ -

Ramesh Ballamoole
Ramesh Ballamoole Sep 25, 2026 8:20 PM

ಕಾಠ್ಮಂಡು, ಸೆ. 25: ಆಗಸ್ಟ್ 26ರಂದು ಸಂಭವಿಸಿದ ಭೀಕರ ಭೋಟೆಕೋಶಿ ಪ್ರವಾಹಕ್ಕೆ (Bhotekoshi Floods) ಸಿಲುಕಿ ನಗುಗಿ ಇದೀಗ ಚೇತರಿಸಿಕೊಳ್ಳುತ್ತಿರುವ ನೇಪಾಳಕ್ಕೆ ಈಗ ಮತ್ತೆ ಭಾರೀ ಮಳೆ ಕಂಟಕವಾಗಿ ಪರಿಣಮಿಸಿದೆ (Nepal Flood). ದೇಶದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಹೊಸದಾಗಿ ಭೂಕೂಸಿತ ಮತ್ತು ಪ್ರವಾಹದ ಭೀತಿ ಎದುರಾಗಿದೆ. ಇದರಿಂದಾಗಿ ದುರಂತ ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿದ್ದ ಪರಿಹಾರ ಮತ್ತು ಪುನಶ್ಚೇತನ ಕಾರ್ಯಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಲಂಗ್‌ಟಂಗ್ ಲಿರುಂಗ್ ಹಿಮಪರ್ವತದಲ್ಲಿ ಸಂಭವಿಸಿದ ಹಿಮನದಿ ಮತ್ತು ಬಂಡೆಗಳ ಭೀಕರ ಕುಸಿತದಿಂದಾಗಿ ಭೋಟೆಕೋಶಿ ಹಾಗೂ ತ್ರಿಶೂಲಿ ನದಿಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿತ್ತು. ಈ ದುರಂತದಲ್ಲಿ 1,300ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, 5,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದಾರೆ. ಪ್ರವಾಹದ ಹಾನಿಯಿಂದ ಚೇತರಿಸಿಕೊಳ್ಳುವಷ್ಟರಲ್ಲೇ ರಸುವಾ , ನುವಾಕೋಟ್ , ಧಾಡಿಂಗ್ ಹಾಗೂ ಗೋರ್ಖಾ ಜಿಲ್ಲೆಗಳಲ್ಲಿ ನಿರಂತರ ಮಳೆ ಆರಂಭವಾಗಿದ್ದು, ಪುನರ್ ನಿರ್ಮಾಣ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಜತೆಗೆ ದುರಂತದ ಭೀತಿ ಎದುರಾಗಿದೆ.

ನೇಪಾಳದಲ್ಲಿ ಮತ್ತೆ ಭೀಕರ ಮಳೆ:



ರಸ್ತೆ ಸಂಚಾರ ಸಂಪೂರ್ಣ ಸ್ಥಗಿತ

ಭಾರಿ ಮಳೆಯಿಂದಾಗಿ ನೇಪಾಳ ಮತ್ತು ಚೀನಾ ಗಡಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆ ಸಂಪರ್ಕಗಳು ಮತ್ತೆ ಕಡಿತಗೊಂಡಿವೆ. ಕೃಷ್ಣಭೀರ್ ಮತ್ತು ತಿಗ್ರಾಂಗ್ ಖೋಲಾ ಭಾಗಗಳಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇನ್ನುಳಿದ 5 ಕಡೆಗಳಲ್ಲಿ ಕೇವಲ ಒಂದು ಬದಿಯ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಿರಂತರ ಮಳೆಯಾಗುತ್ತಿರುವುದರಿಂದ ರಸ್ತೆಗೆ ಬಿದ್ದಿರುವ ಮಣ್ಣು ಮತ್ತು ಕಸವನ್ನು ತೆರವುಗೊಳಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆಗಸ್ಟ್ ಪ್ರವಾಹದ ನಂತರ 18 ದಿನಗಳ ಕಾಲ ಬಂದ್ ಆಗಿದ್ದ ಪೃಥ್ವಿ ಹೆದ್ದಾರಿ ಸಮೀಪ ಸೆಪ್ಟೆಂಬರ್ 17ರಂದು ಹೊಸ ತಾತ್ಕಾಲಿಕ ರಸ್ತೆ ನಿರ್ಮಿಸಿ ಮರುಸಂಪರ್ಕ ಕಲ್ಪಿಸಲಾಗಿತ್ತು. ಸದ್ಯದ ಪರಿಸ್ಥಿತಿಯಿಂದಾಗಿ ಸಂತ್ರಸ್ತ ಪ್ರದೇಶಗಳಿಗೆ ತುರ್ತು ಆಹಾರ, ನೀರು ಮತ್ತು ವೈದ್ಯಕೀಯ ನೆರವು ತಲುಪಿಸಲು ರಕ್ಷಣಾ ಪಡೆಗಳು ಹೆಣಗಾಡುತ್ತಿವೆ.

ಭೀಕರ ಪ್ರವಾಹಕ್ಕೆ ಸುತ್ತಮುತ್ತಲ ಕಟ್ಟಡಗಳೆಲ್ಲ ಕುಸಿದರೂ ಗಟ್ಟಿಯಾಗಿ ಉಳಿದ ಮನೆ

ಮತ್ತೆ ಹೆಚ್ಚಿದ ಭೂಕುಸಿತದ ಭೀತಿ

ಹಿಮಾಲಯದ ಸೂಕ್ಷ್ಮ ಬೆಟ್ಟ ಪ್ರಧೇಶಗಳಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಮತ್ತೆ ಭೂಕಸಿತಗಳು ಸಂಭವಿಸುವ ಅಪಾಯ ಹೆಚ್ಚಿದೆ. ಹಿಮಾಲಯದ ಬೆಟ್ಟದ ಪ್ರದೇಶಗಳಲ್ಲಿ ಮಳೆ ನೀರು ಇಂಗಿ ಭೂಮಿ ಸಡಿಲಗೊಂಡಿರುವುದರಿಂದ ಮತ್ತೆ ಬೃಹತ್‌ ಪ್ರಮಾಣದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಧಾಡಿಂಗ್ ಜಿಲ್ಲೆಯ ಪೃಥ್ವಿ ಹೆದ್ದಾರಿಯ 7 ಕಡೆಗಳಲ್ಲಿ ಸಧ್ಯ ಭೂಕುಸಿತ ಉಂಟಾಗಿದೆ.

ರೆಡ್ ಅಲರ್ಟ್ ಘೋಷಣೆ

ನೇಪಾಳ ಹವಾಮಾನ ಇಲಾಖೆಯು ದೇಶದ ಪ್ರಮುಖ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಇನ್ನಷ್ಟು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಜಾರಿಗೊಳಿಸಿದೆ. ಸಾವಿರಾರು ಜನರು ಇಂದಿಗೂ ನಾಪತ್ತೆಯಾಗಿದ್ದು, ನದಿ ಪಾತ್ರದಿಂದ ಜನರು ದೂರವಿರಬೇಕೆಂದು ಜಲವಿಜ್ಞಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ತಗ್ಗು ಪ್ರದೇಶಗಳು ಹಾಗೂ ನದಿ ಪಾತ್ರದಲ್ಲಿ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಸಾವಿರಾರು ಕುಟುಂಬಗಳನ್ನು ಮುನ್ನೆಚ್ಚರಿಕೆಯಾಗಿ ಮತ್ತಷ್ಟು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲು ಸ್ಥಳೀಯ ಆಡಳಿತ ಹರಸಾಹಸ ಪಡುತ್ತಿದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.