ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

7 ಜನರನ್ನು ಹೊತ್ತು ದೆಹಲಿಗೆ ಹೊರಟಿದ್ದ ಏರ್‌ ಆಂಬ್ಯುಲೆನ್ಸ್‌ ರಾಂಚಿಯಲ್ಲಿ ಪತನ

Air Ambulance Crashes: ಸೋಮವಾರ (ಫೆಬ್ರವರಿ 23) ರಾತ್ರಿ ಜಾರ್ಖಂಡ್‌ನಿಂದ ದೆಹಲಿಗೆ 7 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ರಾಂಚಿ ಬಳಿ ಅಪಘಾತಕ್ಕೀಡಾಗಿದ್ದು, ಓರ್ವ ಮೃತಪಟ್ಟಿದ್ದಾರೆ. ಮೃತರನ್ನು ಸಂಜಯ್‌ ಕುಮಾರ್‌ (41) ಎಂದು ಗುರುತಿಸಲಾಗಿದೆ.

ರಾಂಚಿಯಲ್ಲಿ ಏರ್‌ ಆಂಬ್ಯುಲೆನ್ಸ್‌ ಪತನ

ಜಾರ್ಖಂಡ್‌ನಲ್ಲಿ ಪತನಗೊಂಡ ವಿಮಾನ -

Ramesh Ballamoole
Ramesh Ballamoole Feb 23, 2026 11:35 PM

ರಾಂಚಿ, ಫೆ. 23: ಸೋಮವಾರ (ಫೆಬ್ರವರಿ 23) ರಾತ್ರಿ ಜಾರ್ಖಂಡ್‌ನಿಂದ ದೆಹಲಿಗೆ 7 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ರಾಂಚಿ ಬಳಿ ಅಪಘಾತಕ್ಕೀಡಾಗಿದ್ದು, ಓರ್ವ ಮೃತಪಟ್ಟಿದ್ದಾಗಿ ವರದಿಯೊಂದು ತಿಳಿಸಿದೆ (Air Ambulance Crashes). ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿ ಸಂಜಯ್‌ ಕುಮಾರ್‌ (41) ಮೃತಪಟ್ಟಿದ್ದು, ವೈದ್ಯರು, ನರ್ಸ್‌ ಸೇರಿ ಪೈಲಟ್‌ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಟೇಕ್‌ ಆಫ್‌ ಆದ ಸುಮಾರು 23 ನಿಮಿಷದ ಬಳಿಕ ವಿಮಾನದ ರಾಡಾರ್‌ ಸಂಪರ್ಕ ಕಡಿತಗೊಂಡಿತ್ತು ಎಂದು ವರದಿಯೊಂದು ತಿಳಿಸಿದೆ. ಈ ವಿಮಾನ ರಾತ್ರಿ 10 ಗಂಟೆಗೆ ದೆಹಲಿ ತಲುಪಬೇಕಿತ್ತು.

ದೆಹಲಿಯ ಕಡೆಗೆ ಹೊರಟಿದ್ದ ವಿಮಾನ ಜಾರ್ಖಂಡ್‌ನ ಛತ್ರ ಜಿಲ್ಲೆಯ ಸಿಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಮತಂಡ್ ಗ್ರಾಮದ ಬಳಿಯ ಕಾಡಿನಲ್ಲಿ ಅಪಘಾತಕ್ಕೀಡಾಯಿತು ಎಂದು ಮೂಲಗಳು ತಿಳಿಸಿವೆ.

ಆರಂಭಿಕ ಮಾಹಿತಿಯ ಪ್ರಕಾರ, ವಿಮಾನ ಟೇಕ್‌ಆಫ್‌ ಆದ ಕೆಲವೇ ಹೊತ್ತಲ್ಲಿ ವಾಯು ಸಂಚಾರ ನಿಯಂತ್ರಣ (ATC)ದೊಂದಿಗಿನ ಸಂಪರ್ಕ ಕಡಿತಗೊಂಡಿತು. ಬಳಿಕ ಚಾತ್ರಾ ಅಪಘಾತಕ್ಕೀಡಾಯಿತು. ಅಪಘಾತಕ್ಕೀಡಾದ ವಿಮಾನವನ್ನು ರಾಂಚಿ ಮತ್ತು ದೆಹಲಿ ನಡುವೆ ಕಾರ್ಯನಿರ್ವಹಿಸುವ ರೆಡ್‌ಬರ್ಡ್ ಏರ್‌ವೇಸ್ ನಿರ್ವಹಿಸುವ ವಿಟಿ-ಎಜೆವಿ ಏರ್ ಆಂಬ್ಯುಲೆನ್ಸ್ ಎಂದು ವರದಿ ತಿಳಿಸಿದೆ.

ಏರ್‌ ಆಂಬ್ಯುಲೆನ್ಸ್‌ ಪತನದ ದೃಶ್ಯ:



ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಈ ವಿಮಾನವು ರಾಂಚಿ ಏರ್‌ಪೋರ್ಟ್‌ನಿಂದ ವೈದ್ಯಕೀಯ ಕಾರ್ಯಾಚರಣೆಗಾಗಿ ನಿಯಮಿತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ʼʼವಿಮಾನದಲ್ಲಿ ಪೈಲಟ್-ಇನ್-ಕಮಾಂಡ್ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಮತ್ತು ಸಹ-ಪೈಲಟ್ ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ಪ್ರಯಾಣಿಕರಾದ ಸಂಜಯ್ ಕುಮಾರ್ (ರೋಗಿ), ಅರ್ಚನಾ ದೇವಿ (ಅಟೆಂಡೆಂಟ್), ಧುರು ಕುಮಾರ್ (ಅಟೆಂಡೆಂಟ್), ಡಾ. ವಿಕಾಸ್ ಕುಮಾರ್ ಗುಪ್ತಾ (ವೈದ್ಯ) ಮತ್ತು ಸಚಿನ್ ಕುಮಾರ್ ಮಿಶ್ರಾ (ಪ್ಯಾರಾಮೆಡಿಕ್) ಇದ್ದರುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲ್ಯಾಂಡಿಂಗ್‌ ವೇಳೆ ಮತ್ತೊಂದು ತೇಜಸ್ ಲಘು ಯುದ್ಧ ವಿಮಾನ ಪತನ; ವಾಯುಪಡೆ ಹೇಳಿದ್ದೇನು?

ಕಾರಣ ತಿಳಿದು ಬಂದಿಲ್ಲ

ವಿಮಾನವು ರಾಂಚಿಯಿಂದ ರಾತ್ರಿ 7:11ಕ್ಕೆ ಹೊರಟಿತು ಮತ್ತು 7:34ಕ್ಕೆ ಅಟಾಲಿ ಬಳಿ ಸಂಪರ್ಕ ಕಳೆದುಕೊಂಡಿತು. ನಿರ್ಗಮನದ ನಂತರ ಕೋಲ್ಕತ್ತಾದ ವಾಯು ಸಂಚಾರ ನಿಯಂತ್ರಣ ಕೇಂದ್ರದೊಂದಿಗೆ ಆರಂಭಿಕ ಸಂಪರ್ಕವನ್ನು ಸ್ಥಾಪಿಸಲಾಯಿತು. ಬಳಿಕ ಸಂವಹನ ಕಡಿತಗೊಂಡಿತು. ಅದಾದ ಬಳಿಕ ವಿಮಾನವು ರಾಂಚಿ ವಿಮಾನ ನಿಲ್ದಾಣದೊಂದಿಗೆ ಮತ್ತೆ ಸಂಪರ್ಕ ಹೊಂದಲಿಲ್ಲ. ಸದ್ಯ ವಿಮಾನ ಪತನಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ದೇಶದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.