ನಿರ್ಲಕ್ಷ್ಯ ತಂದ ದುರಂತ: ಹದಗೆಟ್ಟ ರಸ್ತೆಯಲ್ಲಿ 3 ಗಂಟೆ ಮಣ್ಣಿನಡಿ ಸಿಲುಕಿಕೊಂಡ ಆಂಬ್ಯುಲೆನ್ಸ್; ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಬಾಲಕಿ ಸಾವು
Ambulance Stuck in Mud: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬ್ಯುಲೆನ್ಸ್ ಸುಮಾರು ಮೂರು ಗಂಟೆಗಳ ಕಾಲ ಮಣ್ಣಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಪರಿಣಾಮ 17 ವರ್ಷದ ಹದಿಹರೆಯದ ಬಾಲಕಿ ಮೃತಪಟ್ಟಿದ್ದಾಳೆ. ಚಕ್ ಮೆಥ್ಯಾನಿಯಲ್ಲಿ ಮಣ್ಣು ಕುಸಿತದಿಂದಾಗಿ ವಾಹನ ಸಿಕ್ಕಿಹಾಕಿಕೊಂಡಿತು ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ -
ಶ್ರೀನಗರ, ಆ. 8: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿ ಜಿಲ್ಲೆಯ ರಸ್ತೆಯಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಆಂಬ್ಯುಲೆನ್ಸ್ ಸುಮಾರು ಮೂರು ಗಂಟೆಗಳ ಕಾಲ ಮಣ್ಣಿನಲ್ಲಿ ಸಿಲುಕಿಕೊಂಡ ನಂತರ 17 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಘಟನೆಯ ನಂತರ ಜಿಲ್ಲಾಡಳಿತವು ಸರ್ಕಾರಿ ಅಧಿಕಾರಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ (Heavy Rain) ಉಂಟಾದ ಮಣ್ಣು ಕುಸಿತದಿಂದ ರಸ್ತೆ ಹಾನಿಗೊಳಗಾಗಿತ್ತು.
ಸಂಬಂಧಪಟ್ಟ ಅಧಿಕಾರಿಯು ರಸ್ತೆಯನ್ನು ಮರುನಿರ್ಮಿಸಲಾಗಿದ್ದು, ಸಂಚಾರಕ್ಕೆ ಮುಕ್ತವಾಗಿದೆ ಎಂದು ಆಡಳಿತಕ್ಕೆ ತಿಳಿಸಿದ್ದರು ಎನ್ನಲಾಗಿದೆ. ಮೆಥ್ಯಾನಿ ಗ್ರಾಮದ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದು, ರಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಜಿಎಂಸಿ) ಕರೆದೊಯ್ಯುತ್ತಿದ್ದಾಗ, ಚಕ್ ಮೆಥ್ಯಾನಿಯಲ್ಲಿ ಮಣ್ಣು ಕುಸಿತದಿಂದಾಗಿ ಆಂಬ್ಯುಲೆನ್ಸ್ ಸಿಕ್ಕಿಹಾಕಿಕೊಂಡಿತು.
ತೀವ್ರ ಪ್ರಯತ್ನದ ನಂತರ, ಸ್ಥಳೀಯ ಸ್ವಯಂಸೇವಕರು ವಾಹನವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಆದರೆ ಬಾಲಕಿಯ ಪರಿಸ್ಥಿತಿ ಅಷ್ಟೊತ್ತಿಗಾಗಲೇ ಹದಗೆಟ್ಟಿತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಆಕೆ ಸಾವಿಗೀಡಾದಳು. ಈ ಪ್ರದೇಶದ ಹಲವು ದೂರದ ಹಳ್ಳಿಗಳನ್ನು ಸಂಪರ್ಕಿಸುವ ಏಕೈಕ ರಸ್ತೆ ಸಂಪರ್ಕವಾಗಿದ್ದ ಚಕ್ ಮೆಥ್ಯಾನಿ-ಪಾಂಗ್ಲಾರ್-ಕೋಟೆಚಾರ್ವಾಲ್ ರಸ್ತೆಯು ಕಳೆದ ವರ್ಷದ ಮಳೆಗಾಲದಲ್ಲಿ ಮೆಥ್ಯಾನಿ ಬಳಿ ಕೊಚ್ಚಿಹೋಗಿ, ನಂತರ ತಾತ್ಕಾಲಿಕವಾಗಿ ಪುನಃಸ್ಥಾಪಿಸಲಾಯಿತು.
ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಬಂದ್
ಎರಡು ವಾರಗಳ ಹಿಂದೆ ಇದೇ ಭಾಗದಲ್ಲಿ ಮಣ್ಣು ಕುಸಿತ ಸಂಭವಿಸಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಂತಾಯ್ತು. ಈ ಘಟನೆಯು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪಿಎಂಜಿಎಸ್‌ವೈ ಅಧಿಕಾರಿಗಳು ಪದೇ ಪದೆ ಮನವಿ ಮಾಡಿದರೂ ಪ್ರಮುಖ ರಸ್ತೆಯನ್ನು ಪುನಃಸ್ಥಾಪಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು.
ಘಟನೆಯನ್ನು ಗಮನಿಸಿದ ರಜೌರಿ ಜಿಲ್ಲಾಡಳಿತವು, ಪಿಎಂಜಿಎಸ್‌ವೈ ವಿಭಾಗದ ರಜೌರಿ ಕಾರ್ಯನಿರ್ವಾಹಕ ಎಂಜಿನಿಯರ್ ಅಧಿಕೃತ ವಾಟ್ಸ್ಆ್ಯಪ್ ಗ್ರೂಪ್ ಮೂಲಕ ರಸ್ತೆಯನ್ನು ಪುನಃಸ್ಥಾಪಿಸಲಾಗಿದೆ ಮತ್ತು ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಆಡಳಿತಕ್ಕೆ ತಿಳಿಸಿರುವುದಾಗಿ ಆದೇಶ ಹೊರಡಿಸಿದೆ.
ಹೆಚ್ಚುವರಿ ಉಪ ಆಯುಕ್ತ (ಎಡಿಸಿ) ಕೊಟ್ರಂಕಾ ನಡೆಸಿದ ಪರಿಶೀಲನೆಯಲ್ಲಿ, ಭೂಕುಸಿತಗಳು ಮತ್ತು ಹಳ್ಳಗಳಿಂದಾಗಿ ರಸ್ತೆ ಅತ್ಯಂತ ಕಳಪೆ ಸ್ಥಿತಿಯಲ್ಲಿದೆ. ವಾಹನ ಸಂಚಾರಕ್ಕೆ ಅನರ್ಹವಾಗಿದೆ ಎಂದು ಕಂಡುಬಂತು. ಎಡಿಸಿ ವರದಿಯ ಪ್ರಕಾರ, ಬಾಲಕಿ ಸುಮಾರು ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು.
ಜಮ್ಮು-ಕಾಶ್ಮೀರದಲ್ಲಿ ಹೈಬ್ರಿಡ್ ಉಗ್ರರು ಸಕ್ರಿಯ; ಸಾಮಾನ್ಯ ಜನರ ನಡುವೆ ಬೆರೆತು ತಪ್ಪಿಸಿಕೊಳ್ಳುವ ತಂತ್ರ
ಇದಕ್ಕೂ ಮೊದಲು ಬಾಲಕಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಳು. ಸುಮಾರು ಎರಡು ವಾರಗಳ ಹಿಂದೆ ಆಕೆಯನ್ನು ಬಿಡುಗಡೆ ಮಾಡಲಾಯಿತು. ಆದರೆ ಆಕೆಯ ಸ್ಥಿತಿ ಮತ್ತೆ ಹದಗೆಟ್ಟಿತು. ಆಕೆಯ ಕುಟುಂಬವು ಆಕೆಯನ್ನು ಜಿಎಂಸಿ ರಜೌರಿಗೆ ಕರೆದೊಯ್ಯಲು ಮುಂದಾಯಿತು.
ರಸ್ತೆ ಅಡಚಣೆಯಿಂದಾಗಿ ಪ್ರಯಾಣ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ವಿಳಂಬವಾಯಿತು ಎನ್ನಲಾಗಿದೆ. ಹಾನಿಗೊಳಗಾದ ರಸ್ತೆಯಿಂದಾಗಿ ರೋಗಿಗಳು, ಆಹಾರ ಧಾನ್ಯಗಳು ಮತ್ತು ರಸಗೊಬ್ಬರಗಳನ್ನು ಸಾಗಿಸುವಲ್ಲಿ ನಾರ್ಲಾ ಬ್ಯಾಂಬಳೆ, ಕೋಟೆಚರ್ವಾಲ್ ಮತ್ತು ಪಾಂಗ್ಲರ್ ನಿವಾಸಿಗಳು ಎದುರಿಸುತ್ತಿರುವ ತೊಂದರೆಗಳನ್ನು ಎಡಿಸಿ ಎತ್ತಿ ಹಿಡಿದರು.
ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಅಭಿವೃದ್ಧಿ ಆಯುಕ್ತ (ಡಿಡಿಸಿ)ಅಭಿಷೇಕ್ ಶರ್ಮಾ, ಚಕ್ ಮೆಥ್ಯಾನಿ-ಪಾಂಗ್ಲರ್-ಕೋಟೆಚಾರ್ವಾಲ್ ರಸ್ತೆ ಯೋಜನೆಯ ಉಸ್ತುವಾರಿ ವಹಿಸಿದ್ದ ಪಿಎಂಜಿಎಸ್‌ವೈ ಉಪವಿಭಾಗದ ಕಲಕೋಟೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದರು.