UPSC Results 2024: ಮಹಾರಾಷ್ಟ್ರದ ಮೊದಲ ಮುಸ್ಲಿಂ ಮಹಿಳಾ IAS ಅಧಿಕಾರಿಯಾಗಲಿರುವ ಆಟೋ ಚಾಲಕನ ಮಗಳು
ಮಹಾರಾಷ್ಟ್ರದ (Maharastra) ಯಾವತ್ಮಾಲ್ ಜಿಲ್ಲೆಯ ಆಟೋರಿಕ್ಷಾ ಚಾಲಕನ ಮಗಳು ಆದಿಬಾ ಅನಮ್ (Adiba Anam) 2024ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 142ನೇ ರ‍್ಯಾಂಕ್ ಪಡೆದಿದ್ದಾರೆ. ಆದಿಬಾ ಅವರ ತಂದೆ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಇದ್ದರೂ ಆದಿಬಾ ಭಾರತದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಪರೀಕ್ಷೆಯಲ್ಲಿ (UPSC Exam) ಉತ್ತೀರ್ಣರಾಗುವ ಮೂಲಕ ರಾಜ್ಯಕ್ಕೆ ಗೌರವ ತಂದಿದ್ದಾರೆ.


ಮಹಾರಾಷ್ಟ್ರ: ಆಟೋ ರಿಕ್ಷಾ (auto driver) ಚಾಲಕನ ಮಗಳೊಬ್ಬಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ (UPSC Results 2024) ತೇರ್ಗಡೆಯಾಗಿದ್ದು, ಈಕೆ ಮಹಾರಾಷ್ಟ್ರದ ಮೊದಲ ಮುಸ್ಲಿಂ ಮಹಿಳಾ ಐಎಎಸ್ (IAS Officer) ಅಧಿಕಾರಿಯಾಗಲಿದ್ದಾರೆ. ಮಹಾರಾಷ್ಟ್ರದ (Maharastra) ಯಾವತ್ಮಾಲ್ ಜಿಲ್ಲೆಯ ಆಟೋರಿಕ್ಷಾ ಚಾಲಕನ ಮಗಳು ಆದಿಬಾ ಅನಮ್ ( Adiba Anam ) 2024ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 142ನೇ ರ‍್ಯಾಂಕ್ ಪಡೆದಿದ್ದಾರೆ. ಆದಿಬಾ ಅವರ ತಂದೆ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಇದ್ದರೂ ಆದಿಬಾ ಭಾರತದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ರಾಜ್ಯಕ್ಕೆ ಗೌರವ ತಂದಿದ್ದಾರೆ.
ದೃಢನಿರ್ಧಾರ ಮತ್ತು ಕಠಿಣ ಪರಿಶ್ರಮದಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಆದಿಬಾ ಸಾಕ್ಷಿಯಾಗಿದ್ದಾರೆ. ಮನೆಯಲ್ಲಿ ಪ್ರತಿಕೂಲ ಪರಿಸ್ಥಿತಿ ಇದ್ದರೂ ಸಂಪೂರ್ಣ ಪ್ರಯತ್ನ ಮತ್ತು ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂಬುದನ್ನು ಆಕೆ ಸಾಬೀತುಪಡಿಸಿದ್ದಾರೆ. ಯುಪಿಎಸ್‌ಸಿ 2024 ರ ಪರೀಕ್ಷೆಯಲ್ಲಿ 142ನೇ ರ‍್ಯಾಂಕ್ ಪಡೆದ ಆದಿಬಾ ಮಹಾರಾಷ್ಟ್ರದ ಮೊದಲ ಮುಸ್ಲಿಂ ಮಹಿಳಾ ಐಎಎಸ್ ಅಧಿಕಾರಿಯಾಗಲಿದ್ದಾರೆ.

ಪದವಿ ಪಡೆದ ಆದಿಬಾ ಬಳಿಕ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸಲು ಪುಣೆಗೆ ತೆರಳಿದರು. ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ಗಣಿತ ಪದವೀಧರೆಯಾದ ಆದಿಬಾಳಿಗೆ ಯಶಸ್ಸು ಸುಲಭವಾಗಿ ಕೈಹಿಡಿಯಲಿಲ್ಲ. ಒಮ್ಮೆ ಸಂದರ್ಶನ ಹಂತವನ್ನು ತಲುಪಿ ವಿಫಲರಾದ ಆಕೆಗೆ ಮೊದಲ ಎರಡು ಪ್ರಯತ್ನಗಳಲ್ಲಿ ಹಿನ್ನಡೆಯಾಗಿತ್ತು. ಆದರೂ ಧೃತಿಗೆಡದೆ ಆಕೆ ತನ್ನ ಗುರಿಯತ್ತ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದಳು.
ಮಹಾರಾಷ್ಟ್ರದ ಮಾಜಿ ಸಚಿವೆ ಮತ್ತು ಕಾಂಗ್ರೆಸ್ ನಾಯಕಿ, ಯಾವತ್ಮಾಲ್ ಜಿಲ್ಲೆಯವರಾದ ಮಾಣಿಕ್ರಾವ್ ಠಾಕ್ರೆ ಅವರು ಆದಿಬಾಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC-2024) ನ ಅಂತಿಮ ಫಲಿತಾಂಶವನ್ನು ಘೋಷಿಸಲಾಗಿದೆ. ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯ ಅದಿಬಾ ಅನಮ್ ಅಶ್ಫಾಕ್ ಅಹ್ಮದ್ ಭಾರತದಲ್ಲಿ 142 ನೇ ರ‍್ಯಾಂಕ್ ಗಳಿಸಿದ್ದಾರೆ.
ಇದಕ್ಕೂ ಮೊದಲು ಅದಿಬಾ ಯುಪಿಎಸ್ ಸಿ ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಅಂತಿಮ ಪಟ್ಟಿಗೆ ಆಯ್ಕೆಯಾಗಲಿಲ್ಲ. ಆದರೂ ಆಕೆ ತನ್ನ ಪ್ರಯತ್ನವನ್ನು ಮುಂದುವರಿಸಿದ್ದು, ಇದೀಗ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅದಿಬಾ ಮಹಾರಾಷ್ಟ್ರದ ಮೊದಲ ಮಹಿಳಾ ಮುಸ್ಲಿಂ ಐಎಎಸ್ ಅಧಿಕಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಆದಿಬಾ ಹಜ್ ಹೌಸ್ ಐಎಎಸ್ ತರಬೇತಿ ಸಂಸ್ಥೆ ಮತ್ತು ಜಾಮಿಯಾ ವಸತಿ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದರು. ಅವರ ಯಶಸ್ಸು ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ ಎಂದು ಮಾಣಿಕ್ರಾವ್ ಠಾಕ್ರೆ ಹೇಳಿದ್ದಾರೆ.
ಅದಿಬಾ ಸಾಧನೆಗೆ ಜಿಲ್ಲೆಯ ಉನ್ನತ ನಾಗರಿಕ ಸೇವಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಯವತ್ಮಾಲ್ ಪೊಲೀಸರು ಟ್ವಿಟ್ ಮಾಡಿ ಆಕೆಯನ್ನು ಅಭಿನಂದಿಸಿದ್ದಾರೆ. ಭಿವಾಂಡಿ ಪೂರ್ವ ಶಾಸಕಿ ರೈಸ್ ಶೇಖ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ತನ್ನ ಈ ಸಾಧನೆಯ ಶ್ರೇಯಸ್ಸನ್ನು ತಂದೆಗೆ ನೀಡಿರುವ ಆದಿಬಾ, ತನ್ನ ಕನಸುಗಳಿಗಾಗಿ ಪೋಷಕರು ಎಷ್ಟು ಕಷ್ಟಗಳನ್ನು ಎದುರಿಸಿದ್ದಾರೆ ಎಂಬುದನ್ನು ನೆನಪು ಮಾಡಿಕೊಳ್ಳುವ ಆಕೆ ಸವಲತ್ತು ರಹಿತರು, ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ದುಡಿಯುವುದಾಗಿ ಹೇಳಿಕೊಂಡಿದ್ದಾರೆ.