ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

20 ವರ್ಷಗಳ ನಂತರ ಕೋಲ್ಕತಾಕ್ಕೆ ಮರಳಲು ಬಾಂಗ್ಲಾದೇಶ ಲೇಖಕಿ ತಸ್ಲಿಮಾ ನಸ್ರಿನ್ ಸಿದ್ಧತೆ

Taslima Nasrin: ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಸುಮಾರು ಎರಡು ದಶಕಗಳ ನಂತರ ಪಶ್ಚಿಮ ಬಂಗಾಳದ ಕೋಲ್ಕತಾಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಅವರನ್ನು ಸೆಕ್ಯುಲರ್ ಮಿಷನ್ ಮತ್ತು ಮಾನವ ಹಕ್ಕುಗಳು ಹಾಗೂ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಷ್ಠಾನ ಆಹ್ವಾನಿಸಿದೆ. ಕೋಲ್ಕತಾ ತನ್ನ ಹೃದಯಕ್ಕೆ ಹತ್ತಿರವಾದ ನಗರ ಎಂದು ನಸ್ರಿನ್ ಹಲವು ಬಾರಿ ಹೇಳಿದ್ದಾರೆ.

20 ವರ್ಷಗಳ ನಂತರ ಕೋಲ್ಕತಾಗೆ ಮರಳಲಿದ್ದಾರೆ ಲೇಖಕಿ ತಸ್ಲಿಮಾ ನಸ್ರಿನ್

ಲೇಖಕಿ ತಸ್ಲಿಮಾ ನಸ್ರಿನ್ (ಸಂಗ್ರಹ ಚಿತ್ರ) -

Priyanka P
Priyanka P Jul 14, 2026 6:48 PM

ಕೋಲ್ಕತಾ, ಜು. 14: ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ (Taslima Nasrin) ಸುಮಾರು ಎರಡು ದಶಕಗಳ ನಂತರ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ (Kolkata) ಮರಳಲಿದ್ದಾರೆ. ಆಗಸ್ಟ್ 1 ರಂದು ರವೀಂದ್ರ ಸದನದಲ್ಲಿ ಮೂಲಭೂತವಾದಿ ವಿರೋಧಿ ಕವಿಗಳು ಮತ್ತು ಬರಹಗಾರರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಘೋಷಿಸಿದ್ದಾರೆ.

ಈ ಬಾರಿ ಅವರನ್ನು ಸೆಕ್ಯುಲರ್ ಮಿಷನ್ ಮತ್ತು ಮಾನವ ಹಕ್ಕುಗಳು ಹಾಗೂ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಷ್ಠಾನ ಆಹ್ವಾನಿಸಿದೆ. ಮೂಲಭೂತವಾದದ ವಿರುದ್ಧ ಅವರ ದೀರ್ಘಕಾಲದ ನಿಲುವು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದನೆಯನ್ನು ಗುರುತಿಸಿ ಈ ಆಹ್ವಾನ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಆಗಸ್ಟ್‌ 1ರಂದು ಕೋಲ್ಕತಾಕ್ಕೆ ಲೇಖಕಿ ತಸ್ಲಿಮಾ ನಸ್ರಿನ್ ಭೇಟಿ:



ಅವರ ಪ್ರಸ್ತಾವಿತ ಭೇಟಿ ನಗರದೊಂದಿಗೆ ಅವರು ಹೊಂದಿರುವ ದೀರ್ಘ ನಂಟಿನ ಹಿನ್ನೆಲೆಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. 2007ರಲ್ಲಿ ಎಡರಂಗ ಸರ್ಕಾರದ ಅವಧಿಯಲ್ಲಿ ನಸ್ರೀನ್ ಅವರ ಬರವಣಿಗೆಗಳ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸಿದ ನಂತರ ಅವರು ಕೋಲ್ಕತಾ ತೊರೆದಿದ್ದರು. ಅಂದಿನಿಂದ ಭದ್ರತಾ ಕಾರಣಗಳಿಂದ ಅವರು ಕೋಲ್ಕತಾಗೆ ಭೇಟಿ ನೀಡಿರಲಿಲ್ಲ.

ಕೋಲ್ಕತಾ ವಿಮಾನ ನಿಲ್ದಾಣದೊಳಗಿನ ಮಸೀದಿ ಪ್ರವೇಶ ಸ್ಥಗಿತ, ಸಾಮೂಹಿಕ ಪ್ರಾರ್ಥನೆಗೆ ಇಲ್ಲ ಅವಕಾಶ

ಕೋಲ್ಕತಾ ಹೃದಯಕ್ಕೆ ಹತ್ತಿರವಾದ ನಗರ ಎಂದು ನಸ್ರಿನ್ ಹಲವು ಬಾರಿ ಹೇಳಿದ್ದಾರೆ. ಆದರೆ ಧಾರ್ಮಿಕ ಮೂಲಭೂತವಾದಿ ಗುಂಪುಗಳ ವಿರೋಧ ಮತ್ತು ಪದೇ ಪದೆ ಬರುವ ಬೆದರಿಕೆಗಳು ಅವರನ್ನು ಸುಮಾರು 20 ವರ್ಷಗಳ ಕಾಲ ನಗರದಿಂದ ದೂರವಿಟ್ಟಿತು.

ಮಹಿಳಾ ಹಕ್ಕುಗಳು, ಜಾತ್ಯತೀತತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನೇರ, ನಿಷ್ಠುರ ನಿಲುವುಗಳಿಗೆ ಹೆಸರುವಾಸಿಯಾದ ನಸ್ರೀನ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಮತ್ತು ವಿವಾದ ಎರಡನ್ನೂ ಗಳಿಸಿದ್ದಾರೆ. ಇಸ್ಲಾಂ ಧರ್ಮದ ಸಂಪ್ರದಾಯವಾದಿ ವ್ಯಾಖ್ಯಾನಗಳ ಬಗ್ಗೆ ಅವರ ಟೀಕೆಯು ಈ ಹಿಂದೆ ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು. ಹಾಗೆಯೇ ಅವರನ್ನು ಗಡಿಪಾರು ಮಾಡಬೇಕಾಯಿತು.

1994ರಲ್ಲಿ ಗಡಿಪಾರು

1994ರಲ್ಲಿ ಬಾಂಗ್ಲಾದೇಶವನ್ನು ತೊರೆದ ನಂತರ ನಸ್ರೀನ್ ಮೂರು ದಶಕಗಳಿಂದ ದೇಶಭ್ರಷ್ಟರಾಗಿದ್ದಾರೆ. ಅವರ ಬರವಣಿಗೆಗಳ ವಿರುದ್ಧ ಮುಸ್ಲಿಂ ಮುಖಂಡರು ಫತ್ವಾ ಹೊರಡಿಸಿದ್ದಾರೆ. ಯುರೋಪಿನಲ್ಲಿ ಹಲವು ವರ್ಷಗಳನ್ನು ಕಳೆದ ನಂತರ, ಅವರು ಅಂತಿಮವಾಗಿ ಭಾರತಕ್ಕೆ ಮರಳಿದರು. 2004 ಮತ್ತು 2007ರ ನಡುವೆ ಕೋಲ್ಕತಾದಲ್ಲಿ ವಾಸಿಸುತ್ತಿದ್ದರು. ನಂತರ ಮೂಲಭೂತವಾದಿ ಗುಂಪುಗಳ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಅವರು ಬಲವಂತವಾಗಿ ಕೋಲ್ಕತಾ ತೊರೆಯಬೇಕಾಗಿ ಬಂತು. ಆ ಅವಧಿಯಲ್ಲಿ ಅವರ ಪುಸ್ತಕ ʼದ್ವಿಖಂಡಿತೋʼವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಲಾಯಿತು.

ನಂತರ ಅವರು ಜೈಪುರದಲ್ಲಿ ಸ್ವಲ್ಪ ಕಾಲ ಉಳಿದು 2011ರಲ್ಲಿ ದೀರ್ಘಾವಧಿಯ ನಿವಾಸ ಪರವಾನಗಿಯ ಮೇಲೆ ದೆಹಲಿಯಲ್ಲಿ ನೆಲೆಸಿದರು. ಅಂದಿನಿಂದ ಇದನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತಿದೆ. ನಸ್ರಿನ್ ಸ್ವೀಡಿಷ್ ಪೌರತ್ವವನ್ನು ಹೊಂದಿದ್ದಾರೆ.

2024ರ ಸೆಪ್ಟೆಂಬರ್‌ನಲ್ಲಿ ನಸ್ರಿನ್ ಭಾರತದಲ್ಲಿ ತನ್ನ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಬಾಂಗ್ಲಾದೇಶದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದರು.