IND vs ENG: ಭಾರತ ತಂಡದ ಸಹಾಯಕ ಕೋಚ್ ಹುದ್ದೆ ತೊರೆಯಲಿರುವ ರಯಾನ್ ಟೆನ್ ಡಶ್ಕಾಟೆ?
ಭಾರತ ತಂಡದ ಸಹಾಯಕ ಕೋಚ್ ಹುದ್ದೆಯನ್ನು ತೊರೆಯಲು ರಯಾನ್ ಟೆನ್ ಡಶ್ಕಾಟೆ ನಿರ್ಧರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಬಳಿಕ ಅವರು ಈ ಬಗ್ಗೆ ಬಿಸಿಸಿಐಗೆ ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ. ಇದೀಗ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸುತ್ತಿವೆ.
ಸಹಾಯಕ ಕೋಚ್ ಹುದ್ದೆಯನ್ನು ತೊರೆಯಲಿರುವ ರಯಾನ್ ಟೆನ್ ಡಶ್ಕಾಟೆ. -
ಬರ್ಮಿಂಗ್‌ಹ್ಯಾಮ್: ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಮೊದಲನೇ ಏಕದಿನ ಪಂದ್ಯಕ್ಕೂ (IND vs ENG) ಮುನ್ನ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಟೀಮ್ ಇಂಡಿಯಾ ಸಹಾಯಕ ಕೋಚ್ ರಯಾನ್ ಟೆನ್ ಡಶ್ಕಾಟೆ (Ryan Ten Doeschate) ಅವರು ತಮ್ಮ ಹುದ್ದೆಯನ್ನು ತೊರೆಯಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ. ಅವರು ಪ್ರಸ್ತುತ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಬಳಿಕ ಅವರು ಭಾರತ ತಂಡದಿಂದ ನಿರ್ಗಮಿಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ತಿಳಿಸಿದ್ದಾರೆಂದು ಕೂಡ ಮೂಲಗಳು ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.
ಟೆನ್ ಡಶ್ಕಾಟೆ ಅವರು ಭಾರತ ಕ್ರಿಕೆಟ್ ತಂಡದ ಕೋಚಿಂಗ್ ವಿಭಾಗಕ್ಕೆ ಸೇರಿ ಎರಡು ವರ್ಷಗಳು ಕಳೆದಿವೆ. ಬಿಸಿಸಿಐ ಜೊತೆಗಿನ ಅವರ ಆರಂಭಿಕ ಒಪ್ಪಂದದ ಅವಧಿಯೂ ಮುಕ್ತಾಯಗೊಂಡಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅವರ ಅವಧಿ ಜುಲೈ 12ರಿಂದ 14ರ ನಡುವಿನ ಅವಧಿಯಲ್ಲಿ ಅಂತ್ಯಗೊಂಡಿದೆ ಎನ್ನಲಾಗಿದೆ. ಆದರೆ ಇಬ್ಬರೂ ಒಪ್ಪಿಕೊಂಡರೆ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿ ಮುಗಿದ ಬಳಿಕ ಅವರು ತಮ್ಮ ಜವಾಬ್ದಾರಿಯಿಂದ ಅಧಿಕೃತವಾಗಿ ದೂರ ಸರಿಯುವ ನಿರೀಕ್ಷೆಯಿದೆ.
IND vs ENG: ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ನಡುವೆ ಮುನಿಸು? ವಿಡಿಯೊ ವೈರಲ್
ಕ್ರಿಕ್‌ಬಜ್ ವರದಿ ಪ್ರಕಾರ, ಟೆನ್ ಡಶ್ಕಾಟೆ ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಲಂಡನ್‌ನಲ್ಲಿ ನೆಲೆಸಿರುವ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವರು ಬಯಸಿದ್ದಾರೆ ಎನ್ನಲಾಗಿದೆ. ಕಡಿಮೆ ಪ್ರಯಾಣ ಹಾಗೂ ಹೆಚ್ಚು ಒತ್ತಡವಿಲ್ಲದ ವೇಳಾಪಟ್ಟಿ ಇರುವ ಜವಾಬ್ದಾರಿಯನ್ನು ಅವರು ಹುಡುಕುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಗಂಭೀರ್ ಕೈಯಲ್ಲಿದೆ ಡಶ್ಕಾಟೆ ಅವರ ಭವಿಷ್ಯ
ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡ ವೇಳೆ, ಸಹಾಯಕ ಕೋಚ್ ಹುದ್ದೆಗೆ ಟೆನ್ ಡಶ್ಕಾಟೆ ಅವರ ಹೆಸರನ್ನು ಬಿಸಿಸಿಐಗೆ ಶಿಫಾರಸು ಮಾಡಿದ್ದರು. ವರದಿಗಳ ಪ್ರಕಾರ, ಟೆನ್ ಡಶ್ಕಾಟೆ ಅವರ ರಾಜೀನಾಮೆಯನ್ನು ತಿರಸ್ಕರಿಸುವ ಅಧಿಕಾರ ಗಂಭೀರ್ ಅವರಿಗೆ ಇದೆ. ಆದರೆ ಅವರು ಅಂತಹ ನಿರ್ಧಾರ ಕೈಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಕೂಡ ಹೇಳಲಾಗುತ್ತಿದೆ.
IND vs ENG: 200ನೇ ಒಡಿಐ ಪಂದ್ಯವನ್ನು ಆಡಿ ಆಂಗ್ಲರ ಪರ ಇತಿಹಾಸ ಬರೆದ ಜೋಸ್ ಬಟ್ಲರ್!
ಗೌತಮ್ ಗಂಭೀರ್‌ಗೆ ಎಂಎಸ್‌ಕೆ ಪ್ರಸಾದ್ ಬೆಂಬಲ
ಮತ್ತೊಂದೆಡೆ, ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್, ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಗಳಲ್ಲಿ ಗೌತಮ್ ಗಂಭೀರ್ ಅವರಿಗೆ ಅತ್ಯುತ್ತಮ ತಂಡ ಲಭ್ಯವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರೆ, ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರಿಗೆ ಟಿ20 ಮಾದರಿಯಲ್ಲಿ ವಿಶ್ರಾಂತಿ ನೀಡಲಾಗಿತ್ತು. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಐರ್ಲೆಂಡ್ ವಿರುದ್ಧದ ಸರಣಿಯನ್ನು 0-2 ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 0-4 ಅಂತರದಿಂದ ಕಳೆದುಕೊಂಡಿತ್ತು.
"ತಂಡ ಉತ್ತಮ ಪ್ರದರ್ಶನ ನೀಡಿಲ್ಲ ಎಂಬ ಕಾರಣಕ್ಕೆ ಅದರ ಸಂಪೂರ್ಣ ಹೊಣೆಯನ್ನು ಮುಖ್ಯ ಕೋಚ್ ಮೇಲೆಯೇ ಹೊರಿಸುವುದು ಸರಿಯಲ್ಲ. ಗಂಭೀರ್ ಆಟಗಾರರಿಗೆ ಪ್ರೇರಣೆ ನೀಡಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ, ನಾವು ಟೂರ್ನಿಗಳು ಅಥವಾ ವಿಶ್ವಕಪ್ ಗೆದ್ದಿದ್ದೇವೆ ಎಂದರೆ ಅದಕ್ಕೆ ಗಂಭೀರ್ ಒಬ್ಬರೇ ಕಾರಣ ಎಂದೂ ಹೇಳಲಾಗದು. ಒಂದು ತಂಡದ ಯಶಸ್ಸು ಅಥವಾ ವೈಫಲ್ಯ ಹಲವು ಅಂಶಗಳ ಒಟ್ಟಾರೆ ಫಲಿತಾಂಶವಾಗಿರುತ್ತದೆ. ಆದ್ದರಿಂದ ಈಗಲೇ ಗೌತಮ್ ಗಂಭೀರ್ ಅವರನ್ನು ಟೀಕಿಸಿ ತಳ್ಳಿಹಾಕುವುದು ತುಂಬಾ ಆತುರದ ನಿರ್ಧಾರವಾಗುತ್ತದೆ," ಎಂದು ಎಂಎಸ್‌ಕೆ ಪ್ರಸಾದ್ ಪಿಟಿಐಗೆ ತಿಳಿಸಿದ್ದಾರೆ.