ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದಂತೆ ಮತ್ತೊಂದು ಭಯೋತ್ಪಾದನೆ ತಾಣವಾಗುತ್ತಿದೆ ಬಾಂಗ್ಲಾದೇಶ: ಶೇಕ್ ಹಸೀನಾ ಪುತ್ರ ಸಜೀಬ್ ವಾಜೀದ್ ಜಾಯ್

ಬಾಂಗ್ಲಾದೇಶದ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯಗಳು ಮಧ್ಯಪ್ರವೇಶ ಮಾಡದೇ ಇದ್ದರೆ ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗಲಿದೆ. ಇದು ಭಯೋತ್ಪಾದನೆಯ ತಾಣವಾಗಲಿದೆ ಎಂದು ಶೇಖ್ ಹಸೀನಾ ಮಗ ಸಜೀಬ್ ವಾಜೀದ್ ಜಾಯ್ ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಬಾಂಗ್ಲಾದೇಶದಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನವಾಗುತ್ತಿದೆ ಬಾಂಗ್ಲಾದೇಶ: ಶೇಕ್ ಹಸೀನಾ ಪುತ್ರ ಆತಂಕ

ಸಂಗ್ರಹ ಚಿತ್ರ -

ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (Inter-Services Intelligence) ಮುಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಮತ್ತೊಂದು ಪಾಕಿಸ್ತಾನವಾಗಲಿದೆ (Pakistan). ಅಂತಾರಾಷ್ಟ್ರೀಯ ಸಮುದಾಯಗಳು ಮಧ್ಯಪ್ರವೇಶ ಮಾಡದೇ ಇದ್ದರೆ ಬಾಂಗ್ಲಾದೇಶವು ಕೂಡ ಭಯೋತ್ಪಾದನೆಯ (terrorism) ತಾಣವಾಗಲಿದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಮತ್ತು ಹಿರಿಯ ಅವಾಮಿ ಲೀಗ್ ನಾಯಕ ಸಜೀಬ್ ವಾಜೀದ್ ಜಾಯ್ (Sajeeb Wazed Joy) ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಬುಧವಾರ ಅಮೆರಿಕದ ಮೇರಿಲ್ಯಾಂಡ್‌ನಿಂದ ವರ್ಚುವಲ್ ಆಗಿ ನವದೆಹಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುತ್ತಿದೆ. ವಿದೇಶಿ ಗುಪ್ತಚರ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಈಗ ಬಾಂಗ್ಲಾದೇಶದಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿದೆ. ಬಾಂಗ್ಲಾದೇಶವು ವಿಫಲ ರಾಷ್ಟ್ರವಾಗಿದ್ದು, ಇದು ಪ್ರಾದೇಶಿಕ ಭಯೋತ್ಪಾದನೆಯ ತಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ನೀಟ್ ರದ್ದುಗೊಳಿಸಿ, ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಮೆಡಿಕಲ್‌ ಸೀಟ್‌ಗೆ ಪ್ರವೇಶ ಸಿಗಲಿ”: ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸಿಎಂ ವಿಜಯ್‌ ಮನವಿ

ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್ ಸರ್ಕಾರ ಅಧಿಕಾರದಲ್ಲಿದ್ದಾಗ ಬಂಧಿಸಲ್ಪಟ್ಟಿದ್ದ ನೂರಾರು ಶಿಕ್ಷೆಗೊಳಗಾದ ಭಯೋತ್ಪಾದಕರು ಈಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹಿಜ್ಬ್ ಉತ್-ತಹ್ರೀರ್‌ನಂತಹ ನಿಷೇಧಿತ ಗುಂಪುಗಳು ಬಹಿರಂಗವಾಗಿ ಮೆರವಣಿಗೆ ನಡೆಸುತ್ತಿವೆ. ಅಲ್-ಖೈದಾದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ಸಾರ್ವಜನಿಕ ರಾಲಿಗಳಲಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಭಾರತ ಈಗಾಗಲೇ ಪಾಕಿಸ್ತಾನದಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದೆ. ನಿರ್ಲಕ್ಷ್ಯ ವಹಿಸಿದರೆ ಬಾಂಗ್ಲಾದೇಶವು ಭಾರತದ ಪೂರ್ವ ಭಾಗದಲ್ಲಿ ಮತ್ತೊಂದು ಪಾಕಿಸ್ತಾನವಾಗಲಿದೆ. ಇದು ಕೇವಲ ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಆತಂಕಕಾರಿ ವಿಷಯ ಎಂದರು.

ಇದನ್ನು ಈಗಲೇ ನಿಲ್ಲಿಸದೇ ಇದ್ದರೆ ಮುಂದಿನ ಪೀಳಿಗೆ ಜಾಗತಿಕ ಭಯೋತ್ಪಾದನೆಗೆ ಬಲಿಯಾಗಲಿದೆ. ಹೆಚ್ಚಿನ ಭಯೋತ್ಪಾದಕರು ಬಾಂಗ್ಲಾದೇಶದಿಂದ ಬರಲಿದ್ದಾರೆ. ಇದು ಸಾಂದರ್ಭಿಕ ವಿಷಯವಲ್ಲ. ಈ ಕುರಿತು ನಿರಂತರವಾಗಿ ಮಾಧ್ಯಮಗಳಲ್ಲಿ ವರದಿಯಾಗಬೇಕಿದೆ ಎಂದು ತಿಳಿಸಿದರು.

ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾದ ಪ್ರತಿಭಟನೆಗಳ ಸಾವಿನ ಸಂಖ್ಯೆಯ ಕುರಿತು ಅವರು ಮಾತನಾಡಿ, ವಿಶ್ವಸಂಸ್ಥೆಯು ಸುಮಾರು 1,400 ಮಂದಿ ಸಾವನ್ನಪ್ಪಿರುವುದಾಗಿ ಹೇಳಿದೆ. ಆದರೆ ಸರ್ಕಾರದ ಅಂಕಿಅಂಶ ಸುಮಾರು 800. ಇದರಲ್ಲಿ 600 ಹೆಚ್ಚಾಗಿರುವುದು ಹೇಗೆ ಎನ್ನುವ ಕುರಿತು ಅವಾಮಿ ಲೀಗ್ ಪ್ರಶ್ನೆಗೆ ವಿಶ್ವಸಂಸ್ಥೆ ಪ್ರತಿಕ್ರಿಯಿಸಿಲ್ಲ ಎಂದು ತಿಳಿಸಿದರು.

ಯೂನಸ್ ಆಡಳಿತದಲ್ಲಿ ಅಂಗೀಕರಿಸಲ್ಪಟ್ಟ "ಪರಿಹಾರ ಮಸೂದೆ"ಯಲ್ಲಿ ಪ್ರತಿಭಟನೆ ವೇಳೆ ನಡೆದಿರುವ ಸಾವುಗಳ ಕುರಿತು ವಿಚಾರಣೆ ನಡೆಸಲು ಯಾವುದೇ ಮಾರ್ಗವನ್ನು ಇಟ್ಟಿಲ್ಲ. ಹಿರಿಯ ಮಾಜಿ ಅಧಿಕಾರಿಗಳು ಸೇರಿದಂತೆ ಸಾವಿರಾರು ಅವಾಮಿ ಲೀಗ್ ಸದಸ್ಯರನ್ನು ವಿಚಾರಣೆಗೆ ಒಳಪಡಿಸದೆ ದೀರ್ಘಕಾಲದವರೆಗೆ ಬಂಧನದಲ್ಲಿಡಲಾಗಿದೆ. ಬಂಧನದಲ್ಲಿದ್ದ ಕೆಲವರು ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಸಾಯುವ ಸ್ಥಿತಿಯಲ್ಲಿದ್ದಾರೆ. ಪ್ರತಿ ವಾರಗಳಿಗೊಮ್ಮೆ ಜೈಲಿನ ಹೊರಗೆ ಪಕ್ಷದ ಸದಸ್ಯರನ್ನು ಗುರಿಯಾಗಿಸಿ ಕೊಲ್ಲಲಾಗುತ್ತಿದೆ ಎಂದು ಆರೋಪಿಸಿದರು.

ಅವಾಮಿ ಲೀಗ್‌ಗೆ ಬೆಂಬಲ ನೀಡುವ ಪತ್ರಕರ್ತರು, ಸಂಪಾದಕರು ಮತ್ತು ಮಾಧ್ಯಮ ಮಾಲೀಕರು ಕೂಡ ಜೈಲಿನಲ್ಲಿದ್ದಾರೆ. ಈಗಾಗಲೇ ಒತ್ತಡಕ್ಕೊಳಗಾಗಿರುವ ಬಾಂಗ್ಲಾದೇಶದ ಆರ್ಥಿಕತೆಯು ಸಂಪೂರ್ಣ ಕುಸಿತದ ಅಪಾಯದಲ್ಲಿದೆ ಎಂದು ಎಚ್ಚರಿಸಿದರು.

ಮಹಿಳೆಯರ ಉಚಿತ ಬಸ್ ಪ್ರಯಾಣದ ಬಗ್ಗೆ ಟೀಕಿಸಿದ ಸಾರಿಗೆ ಸಚಿವ; ಭಾರಿ ಆಕ್ರೋಶ

ಶೇಖ್ ಹಸೀನಾ ಅವರ ಪದಚ್ಯುತಿಯ ಬಳಿಕ ಮುಹಮ್ಮದ್ ಯೂನಸ್ ಅವರ ಮಧ್ಯಂತರ ಆಡಳಿತ ಅಧಿಕಾರದಲ್ಲಿತ್ತು. ಇದರ ಅಂತ್ಯದ ಬಳಿಕ ನಡೆದ ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ನಿರ್ಣಾಯಕ ಬಹುಮತ ಗಳಿಸಿದ್ದು ಹೊಸ ಸರ್ಕಾರವನ್ನು ರಚಿಸಿತು. ಯೂನಸ್ ಅವರ ಉಸ್ತುವಾರಿಯಲ್ಲಿ ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ಅನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿತ್ತು.