ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಭರ್ಜರಿ ಟ್ವಿಸ್ಟ್: ಮತ ಎಣಿಕೆಗೆ ಮೊದಲು ಕೆಲವು ಕ್ಷೇತ್ರಗಳಲ್ಲಿ ಮರು ಮತದಾನ? ದೀದಿ ನಾಡಲ್ಲಿ ನಡೆಯಿತಾ ಅಕ್ರಮ?
ಪಶ್ಚಿಮ ಬಂಗಾಳದಲ್ಲಿ ಮರು ಮತದಾನಕ್ಕೆ ಭಾರತೀಯ ಚುನಾವಣಾ ಆಯೋಗವು ಚಿಂತನೆ ನಡೆಸುತ್ತಿದೆ. ಮತಗಟ್ಟೆವಾರು ವರದಿಗಳು ಮತ್ತು ದೂರುಗಳ ಪರಿಶೀಲನೆ ಆಧರಿಸಿ ಚುನಾವಣೆ ಫಲಿತಾಂಶಕ್ಕೂ ಮೊದಲೇ ಅಂದರೆ ಮೇ 2 ಅಥವಾ 3 ರಂದು ಕೆಲವು ಬೂತ್‌ಗಳಲ್ಲಿ ಮರು ಮತದಾನ ನಡೆಸಲು ನಿರ್ಧರಿಸಲಾಗಿದೆ.
ಸಂಗ್ರಹ ಚಿತ್ರ -
ಕೋಲ್ಕತ್ತಾ: ಚುನಾವಣೆ ಫಲಿತಾಂಶಕ್ಕೂ (election result) ಮೊದಲೇ ಪಶ್ಚಿಮ ಬಂಗಾಳದಲ್ಲಿ (west bengal election) ಮೇ 2 ಅಥವಾ 3 ರಂದು ಮರು ಮತದಾನ (Repoll) ನಡೆಸಲು ಭಾರತೀಯ ಚುನಾವಣಾ ಆಯೋಗವು ( Election Commission) ನಿರ್ಧರಿಸಿದೆ. ಜಿಲ್ಲೆಗಳ ಮತಗಟ್ಟೆವಾರು ವರದಿಗಳು ಮತ್ತು ದೂರುಗಳ ಪರಿಶೀಲನೆ ಆಧಾರದಲ್ಲಿ ಅಗತ್ಯವಿದ್ದರೆ ಪಶ್ಚಿಮ ಬಂಗಾಳದ ಆಯ್ದ ಕೆಲವು ಬೂತ್‌ಗಳಲ್ಲಿ ಮರು ಮತದಾನವನ್ನು ಮೇ 2 ಅಥವಾ 3 ರಂದು ನಡೆಸುವ ಸಾಧ್ಯತೆಯಿದೆ ಎಂದು ಭಾರತೀಯ ಚುನಾವಣಾ ಆಯೋಗವು ಹೇಳಿದೆ.
ಈ ಕುರಿತು ಗುರುವಾರ ಮಾಹಿತಿ ನೀಡಿದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಅವರು, ಪಶ್ಚಿಮ ಬಂಗಾಳದಲ್ಲಿ ಮರು ಮತದಾನ ಅಗತ್ಯವೇ ಎಂದು ನಿರ್ಧರಿಸಲು ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ವೀಕ್ಷಕರು ಸಲ್ಲಿಸಿದ ವರದಿಗಳನ್ನು ಚುನಾವಣಾ ಸಮಿತಿ ಪರಿಶೀಲಿಸುತ್ತಿದೆ. ಇದರ ಆಧಾರದಲ್ಲಿ ಯಾವ ಬೂತ್‌ನಲ್ಲಿ ಮರು ಮತದಾನ ನಡೆಸಬೇಕು ಎಂದು ನಿರ್ಧರಿಸಲಾಗುತ್ತದೆ ಎಂದರು.
ಕಳೆದ ಏಪ್ರಿಲ್ 23, 29ರಂದು ಎರಡು ಹಂತದಲ್ಲಿ ಪಶ್ಚಿಮ ಬಂಗಾಳದ ವಿಧಾನ ಸಭಾ ಕ್ಷೇತ್ರಕ್ಕೆ ಮತದಾನವಾಗಿದ್ದು, ಮೇ 4ರಂದು ಫಲಿತಾಂಶ ಘೋಷಣೆಗೆ ನಿರ್ಧರಿಸಲಾಗಿದೆ. ಒಂದು ವೇಳೆ ಮರು ಮತದಾನದ ಅಗತ್ಯವಿದ್ದರೆ ಫಲಿತಾಂಶ ಘೋಷಣೆಗೂ ಮೊದಲೇ ಅಂದರೆ ಮೇ 2 ಅಥವಾ 3ರಂದು ಮರು ಮತದಾನ ನಡೆಸಲಾಗುವುದು ಎಂದು ತಿಳಿಸಿದರು.
ಏಪ್ರಿಲ್ 29ರಂದು ಎರಡನೇ ಹಂತದ ಮತದಾನದ ಬಳಿಕ ಈ ನಡೆದಿದೆ. ಏಪ್ರಿಲ್ 23ರಂದು ನಡೆದ ಮೊದಲ ಹಂತದಲ್ಲಿ 152 ಕ್ಷೇತ್ರಗಳ ಸುಮಾರು 44,370 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಎರಡನೇ ಹಂತದಲ್ಲಿ 142 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 41,000 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದ ಮತದಾನ ಶಾಂತಿಯುತವಾಗಿದ್ದು, ಎರಡನೇ ಹಂತದಲ್ಲಿ ವಿವಿಧ ಭಾಗಗಳಲ್ಲಿ ಘರ್ಷಣೆಗಳು ಉಂಟಾಗಿದ್ದವು.
ಚುನಾವಣಾ ಆಯೋಗದ ಮೂಲಗಳ ಪ್ರಕಾರ ಕೆಲವು ಬೂತ್‌ಗಳಲ್ಲಿ ಮತದಾನವಾಗದಂತೆ ತಡೆಯಲಾಗಿದೆ. ಇನ್ನು ಕೆಲವೆಡೆ ಮತಗಟ್ಟೆ ಏಜೆಂಟ್‌ಗಳ ಬೆದರಿಕೆ ಮತ್ತು ಇವಿಎಂ ಟ್ಯಾಂಪರಿಂಗ್ ಸೇರಿದಂತೆ ಸುಮಾರು 3,500ಕ್ಕೂ ಹೆಚ್ಚು ದೂರುಗಳು ಬಂದಿವೆ. ಈ ದೂರುಗಳಲ್ಲಿ ಸುಮಾರು 23 ದೂರುಗಳನ್ನು ಪ್ರಾಥಮಿಕವಾಗಿ ಮಾನ್ಯ ಎಂದು ಗುರುತಿಸಲಾಗಿದೆ. ಹೀಗಾಗಿ ಈ ದೂರುಗಳು ಬಂದಿರುವ ಕೇಂದ್ರದಲ್ಲಿ ಮರು ಮತದಾನವನ್ನು ನಡೆಸಲು ಆಯೋಗ ನಿರ್ಧರಿಸಿದೆ.
ನಾಡಿಯಾ, ಪುರ್ಬಾ ಬರ್ಧಮಾನ್, ಕೋಲ್ಕತ್ತಾ ಉತ್ತರ ಮತ್ತು ಕೋಲ್ಕತ್ತಾ ದಕ್ಷಿಣದಂತಹ ಜಿಲ್ಲೆಗಳಲ್ಲಿ ಪರಿಶೀಲನೆ ಪೂರ್ಣಗೊಂಡಿದ್ದು, ಅಲ್ಲಿ ಯಾವುದೇ ಮರು ಮತದಾನ ಅಗತ್ಯವಿಲ್ಲ ಎಂದು ಪರಿಗಣಿಸಲಾಗಿದೆ. ಇನ್ನು ಉತ್ತರ 24 ಪರಗಣ ಮತ್ತು ದಕ್ಷಿಣ 24 ಪರಗಣಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಮರು ಮತದಾನದ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಅಗತ್ಯವಿರುವ ಮತಗಟ್ಟೆಗಳಿಗೆ ವಿಶೇಷ ವೀಕ್ಷಕ ಸುಬ್ರತಾ ಗುಪ್ತಾ ಅವರು ಭೇಟಿ ನೀಡಿ ಇತರ ವೀಕ್ಷಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಟಿಎಂಸಿ ಆರೋಪ
ಈ ನಡುವೆ ಹೌರಾದ ಉದಯನಾರಾಯಣಪುರದಲ್ಲಿ ಮತದಾನದ ವೇಳೆ ವೃದ್ಧ ಮತದಾರರೊಬ್ಬರು ಸಾವನ್ನಪ್ಪಿದ್ದು, ಇದನ್ನು ರಾಜಕೀಯವಾಗಿ ಪರಿಗಣಿಸಲಾಗಿದೆ. ಮತ ಚಲಾಯಿಸುವಾಗ ಪೂರ್ಣಚಂದ್ರ ದೋಲುಯಿ ಅವರು ಮತಗಟ್ಟೆಯೊಳಗೆ ಕುಸಿದು ಬಿದ್ದಿದ್ದು, ಇದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಅವರ ಮೇಲೆ ಹಲ್ಲೆ ನಡೆಸಿದ್ದರಿಂದ ಆಗಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಇದರ ವಿಡಿಯೋವನ್ನು ಬಿಡುಗಡೆ ಮಾಡಲಾಗಿದ್ದು, ಯಾವುದೇ ಹಲ್ಲೆ ನಡೆದಿರುವ ಸಂಗತಿ ಕಂಡು ಬಂದಿಲ್ಲ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಸಶಸ್ತ್ರ ಪಡೆಗಳಿಗೆ ಸಾವಯವ ಆಹಾರ ಪೂರೈಕೆಗೆ ಒತ್ತು; ಜೋಶಿ ನೇತೃತ್ವದಲ್ಲಿ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳ ಸಭೆ
ಪೂರ್ಣಚಂದ್ರ ದೋಲುಯಿ ಅವರ ಮಗ ತಮ್ಮನ್ನು ಮತ್ತು ತಮ್ಮ ತಂದೆಯನ್ನು ಭದ್ರತಾ ಸಿಬ್ಬಂದಿ ತಳ್ಳಿದ್ದಾರೆ ಎಂದು ದೂರಿದ್ದು, ಇದಕ್ಕೆ ಸಂಬಂಧಿಸಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಕೇಂದ್ರ ಪಡೆಗಳು ಬಿಜೆಪಿಯ ಖಾಸಗಿ ಸೈನ್ಯದಂತೆ ವರ್ತಿಸುತ್ತಿವೆ ಎಂದು ಆರೋಪಿಸಿದ್ದಾರೆ. ಬಿಜೆಪಿ ನಾಯಕ ರಾಹುಲ್ ಸಿನ್ಹಾ ಅವರು ಇದನ್ನು ತಿರಸ್ಕರಿಸಿದ್ದು, ಆಡಳಿತ ಪಕ್ಷವು ಸಾವನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.