ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಭಯೋತ್ಪಾದನೆ ವಿರುದ್ಧ ಮೃದು ಧೋರಣೆʼʼ:‌ 58 ಮಂದಿಯ ಬಲಿ ಪಡೆದ ಕೊಯಮತ್ತೂರು ಸ್ಫೋಟ ಆರೋಪಿಗಳಿಗೆ ಜಾಮೀನು ದೊರೆತ ಬೆನ್ನಲ್ಲೇ ಟಿವಿಕೆ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

Coimbatore Blast: 58 ಜನರನ್ನು ಬಲಿ ಪಡೆದ, 1998ರ ತಮಿಳುನಾಡಿನ ಕೊಯಂಬತ್ತೂರು ಸ್ಫೋಟ ಪ್ರಕರಣದ 5 ಮಂದಿ ಆರೋಪಿಗಳಿಗೆ 60 ದಿನಗಳ ಜಾಮೀನು ದೊರೆತಿದ್ದು, ಬಿಜೆಪಿ ಕಿಡಿಕಾರಿದೆ. ಇದು ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರ ಭಯೋತ್ಪಾದನೆಯತ್ತ ತೋರುತ್ತಿರುವ ಮೃದು ಧೋರಣೆಯ ಸ್ಪಷ್ಟ ಉದಾಹರಣೆ ಎಂದು ಹೇಳಿದೆ.

ಕೊಯಮತ್ತೂರು ಸ್ಫೋಟದ ಆರೋಪಿಗಳಿಗೆ ಜಾಮೀನು

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Oct 20, 2026 7:44 PM

ಚೆನ್ನೈ, ಅ. 20: 58 ಜನರನ್ನು ಬಲಿ ಪಡೆದ, 1998ರ ಕೊಯಂಬತ್ತೂರು ಸ್ಫೋಟ (Coimbatore Blast) ಪ್ರಕರಣದ 5 ಮಂದಿ ಆರೋಪಿಗಳಿಗೆ 60 ದಿನಗಳ ಜಾಮೀನು ದೊರೆತಿದ್ದು, ಬಿಜೆಪಿ ಕಿಡಿಕಾರಿದೆ. ಇದು ವಿಜಯ್‌ ನೇತೃತ್ವದ ಟಿವಿಕೆ ಸರ್ಕಾರ ಭಯೋತ್ಪಾದನೆಯತ್ತ ತೋರುತ್ತಿರುವ ಮೃದು ಧೋರಣೆಯ ಸ್ಪಷ್ಟ ಉದಾಹರಣೆ ಎಂದು ಹೇಳಿದೆ. ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರನ್ನು ಗುರಿಯಾಗಿಸಿಕೊಂಡು ಈ ಬಾಂಬ್‌ ದಾಳಿ ನಡೆದಿತ್ತು. ಪ್ರಕರಣದ ವಿಚಾರಣೆ ನಡೆದು 5 ಮುಖ್ಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೀಗ ಅವರಿಗೆ ಜಾಮೀನು ಸಿಕ್ಕಿದ್ದು ರಾಜಕೀಯ ವಲಯದಲ್ಲಿ ಚರ್ಗೆಗೆ ಕಾರಣವಾಗಿದೆ.

ರಾಜಕೀಯ ಲಾಭ ಪಡೆದುಕೊಳ್ಳಲು ವಿಜಯ್‌ ನೇತೃತ್ವದ ತಮಿಳುನಾಡು ಸರ್ಕಾರ ಇದೀಗ ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ ಎಂದು ಬಿಜೆಪಿ ಆರೋಪಿಸಿದ್ದು, ವಾಕ್ಸಮರಕ್ಕೆ ಕಾರಣವಾಗಿದೆ. ಐಯುಎಂಎಲ್‌ (Indian Union Muslim League) ಪಕ್ಷದ ಓಲೈಕೆಗಾಗಿ ಸರ್ಕಾರ ಅಲ್ಪ ಸಂಖ್ಯಾತರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದೂ ತಿಳಿಸಿದೆ. ಈ ವರ್ಷದ ಜೂನ್‌ನಲ್ಲಿ ಡಿಎಂಕೆ ಜತೆಗಿನ ತನ್ನ 6 ವರ್ಷಗಳ ಸಂಬಂಧ ಕಡಿದುಕೊಂಡು ಮುಸ್ಲಿಂ ಲೀಗ್‌ ವಿಜಯ್‌ ಸರ್ಕಾರಕ್ಕೆ ಬೇಷರತ್‌ ಬೆಂಬಲ ಘೋಷಿಸಿತ್ತು. ಇದೇ ಕಾರಣಕ್ಕೆ ಸರ್ಕಾರ ಮುಸ್ಲಿಂ ಓಲೈಕೆಗೆ ಮುಂದಾಗಿದೆಯಾ ಎನ್ನುವ ಪ್ರಶ್ನೆಯೂ ಮೂಡಿದೆ.

ಸರ್ಕಾರದ ವಾದವೇನು?

ಈ ಐವರಿಗೆ ಜಾಮೀನು ನೀಡಿರುವುದು ಸಾಮಾನ್ಯ ಪ್ರಕ್ರಿಯೆಯ ಭಾಗವಾಗಿದ್ದು, ಅವರು ಜೈಲಿನಲ್ಲಿ ದೀರ್ಘಕಾಲ ಕಳೆದಿದ್ದಾರೆ. ಇತರ ಆರೋಪಿಗಳಿಗೆ ನೀಡಲಾದ ಪರಿಹಾರವನ್ನೇ ಇವರಿಗೂ ಒದಗಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಜಾಮೀನು ಒದಗಿಸಿದ್ದಕ್ಕಾಗಿ ವಿಜಯ್ ಅವರಿಗೆ ಟಿವಿಕೆ ಶಾಸಕ ವಿ.ಎಂ.ಎಸ್. ಮುಸ್ತಫ ಧನ್ಯವಾದ ಅರ್ಪಿಸಿದ್ದಾರೆ.

58 ಜನರನ್ನು ಸಾಯಿಸಿದ ಕೊಯಮತ್ತೂರು ಬಾಂಬ್‌ ಸ್ಫೋಟ ಆರೋಪಿ 27 ವರ್ಷಗಳ ಬಳಿಕ ಕರ್ನಾಟಕದಲ್ಲಿ ಸೆರೆ!

ಯಾರಿಗೆಲ್ಲ ಜಾಮೀನು?

ಕೊಯಮತ್ತೂರು ಸೆಂಟ್ರಲ್‌ ಜೈಲಿನಲ್ಲಿರುವ ಮೊಹಮ್ಮದ್‌ ಅನ್ಸಾರಿ, ಮೊಹಮ್ಮದ್‌ ಅಲಿ, ಮೋನಪ್ಪ ಆಲಿಯಾಸ್‌ ಮೊಹಮ್ಮದ್‌ ಹಸನ್‌, ಮೊಹಮ್ಮದ್‌ ಅಜಂ ಮತ್ತು ನವಾಬ್‌ ಖಾನ್‌ಗೆ ಸದ್ಯ ಜಾಮೀನು ಲಭಿಸಿದೆ. ಇವರೆಲ್ಲ 46-55 ವರ್ಷದವರು. ವೈಯಕ್ತಿಕ ಮತ್ತು ಆರೋಗ್ಯ ಕಾರಣ ನೀಡಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.

ಅಧಿಕಾರಿಗಳು ಹೇಳಿದ್ದೇನು?

ಅಧಿಕಾರಿಗಳ ಪ್ರಕಾರ ಈ ಐವರು ಆರೋಪಿಗಳಿಗೆ ಈ ವರ್ಷಾರಂಭದಲ್ಲೇ ಜಾಮೀನು ಮಂಜೂರಾಗಿತ್ತು. ಆದರೆ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಇದೀಗ ಅವರಿಗೆ ಜಾಮೀನು ಮಂಜೂರಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊಯಮತ್ತೂರು ಸ್ಫೋಟದ ತೀವ್ರತೆ

1998ರ ಫೆಬ್ರವರಿ 14ರಂದು ಕೊಯಮತ್ತೂರಿನ ಆರ್.ಎಸ್. ಪುರಂನಲ್ಲಿ ಬಿಜೆಪಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು. ಪಕ್ಷದ ಹಿರಿಯ ನಾಯಕ ಎಲ್​​.ಕೆ. ಅಡ್ವಾಣಿ ಸಭೆಯಲ್ಲಿ ಭಾಗವಹಿಸುವವರಿದ್ದರು. ಸಾರ್ವಜನಿಕ ಸಭೆಯ ವೇದಿಕೆಯಿಂದ 100 ಮೀಟರ್ ದೂರದಲ್ಲಿ ಇರಿಸಲಾಗಿದ್ದ ಬಾಂಬ್ ಮೊದಲು ಸ್ಫೋಟಗೊಂಡಿತ್ತು. ಅಡ್ವಾಣಿ ಬರಬೇಕಿದ್ದ ವಿಮಾನ ವಿಳಂಬವಾದ ಕಾರಣ ಅವರು ಬಚವಾಗಿದ್ದರು. ನಂತರ ಕೊಯಮತ್ತೂರಿನ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದು, 58 ಜನರು ಸಾವಿಗೀಡಾಗಿ 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಕೊಯಂಬತ್ತೂರ್: ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಕೊಯಮತ್ತೂರಿನಲ್ಲಿ ನಡೆದಿದ್ದ ಈ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ ರಾಜಾನನ್ನು 27 ವರ್ಷಗಳ ಬಳಿಕ 2025ರಲ್ಲಿ ವಿಜಯಪುರದಲ್ಲಿ ಆರೆಸ್ಟ್ ಮಾಡಲಾಗಿತ್ತು. ಸರಣಿ ಸ್ಫೋಟದ ಬಳಿಕ ಬೇರೆ ಬೇರೆ ಕಡೆ ಆತ ತಲೆ ಮರೆಸಿಕೊಂಡಿದ್ದ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.