ಮತ್ತೊಂದು ಜಲ ದುರಂತ; ಮಹಾರಾಷ್ಟ್ರದಲ್ಲಿ ಮುಳುಗಿದ 35 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ದೋಣಿ
Boat Accident: 35 ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ನದಿಯಲ್ಲಿ ಮಗುಚಿ ಬಿದ್ದಿದ್ದು, ಓರ್ವ ಮಹಿಳೆ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪುರುಷೋತ್ತಮಪುರಿಯಲ್ಲಿ ನಡೆದಿದೆ. ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮಗುಚಿಬಿದ್ದ 35 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ದೋಣಿ -
ಮುಂಬೈ, ಜೂ. 10: 35 ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ನದಿಯಲ್ಲಿ ಮಗುಚಿ ಬಿದ್ದು (Boat Accident) ಓರ್ವ ಮಹಿಳೆ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡ ಘಟನೆ ಮಹಾರಾಷ್ಟ್ರದ (Maharashtra) ಬೀಡ್ ಜಿಲ್ಲೆಯ ಪುರುಷೋತ್ತಮಪುರಿಯಲ್ಲಿ ನಡೆದಿದೆ. ನಿರ್ವಾಹಕರು ದೋಣಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿದ್ದರು. ಇದರಿಂದಾಗಿ ಸಮತೋಲನ ತಪ್ಪಿ ಉರುಳಿಬಿದ್ದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹೀಗಾಗಿ 34 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೋಣಿಯು ಬಲವಾದ ಪ್ರವಾಹಕ್ಕೆ ಸಿಲುಕಿ ಕೆಲವೇ ಸೆಕೆಂಡುಗಳಲ್ಲಿ ಮುಳುಗಿತು ಎನ್ನಲಾಗಿದೆ. ದುರ್ಘಟನೆಯಲ್ಲಿ ಪ್ರಮೀಳಾ ರಾಥೋಡ್ ಎಂಬ ಮಹಿಳೆ ಮೃತಪಟ್ಟಿದ್ದಾರೆ. ವಾಶಿಮ್‌ನ ಮಹಾಗಾಂವ್ ನಿವಾಸಿ ಸಿಂಧುಬಾಯಿ ಮಾವಲ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಗ್ಗೆ ಉಪವಿಭಾಗಾಧಿಕಾರಿ (ಎಸ್‌ಡಿಒ) ಮಟ್ಟದ ತನಿಖೆಗೆ ಜಿಲ್ಲಾಧಿಕಾರಿ ವಿವೇಕ್ ಜಾನ್ಸನ್ ಆದೇಶಿಸಿದ್ದಾರೆ. ಶೀಘ್ರದಲ್ಲೇ ವಿವರವಾದ ವರದಿ ಸಲ್ಲಿಸುವಂತೆ ಅವರು ತನಿಖಾ ತಂಡಕ್ಕೆ ಸೂಚಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ದೋಣಿ ದುರಂತ:
A tragic accident occurred at Shri Kshetra Purushottampuri on Wednesday when a boat carrying devotees capsized in a river, resulting in the death of one woman.
— Hate Detector 🔍 (@HateDetectors) June 10, 2026
According to preliminary reports, the boat was carrying more than 50 pilgrims when it overturned. Panic ensued as… pic.twitter.com/1m5SkS6NyA
ದೋಣಿ ತನ್ನ ಸಾಮರ್ಥ್ಯವನ್ನು ಮೀರಿದ್ದು ಹೇಗೆ ಮತ್ತು ಸುರಕ್ಷತಾ ಮಾನದಂಡಗಳನ್ನು ಎಲ್ಲಿ ನಿರ್ಲಕ್ಷಿಸಲಾಗಿದೆ ಎಂಬುದನ್ನು ತನಿಖೆಯು ನಿರ್ಧರಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ನಿರ್ಲಕ್ಷ್ಯಕ್ಕೆ ತಪ್ಪಿತಸ್ಥರು ಎಂದು ಕಂಡುಬಂದರೆ ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪುರುಷೋತ್ತಮಪುರಿಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಭಕ್ತರು ಸೇರಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಒಬ್ಬರನ್ನು ಹೊರತುಪಡಿಸಿ, ಉಳಿದವರೆಲ್ಲ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಮತ್ತು ಬೈಕ್ ನಡುವೆ ಡಿಕ್ಕಿ, 6 ಮಂದಿ ಸಾವು
ವೇಗವಾಗಿ ಬಂದ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆರು ಜನರು ಸ್ಥಳದಲ್ಲೇ ಮೃತಪಟ್ಟು, ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಕಾರಿನಲ್ಲಿದ್ದವರು ಗುಜರಾತ್‌ನಿಂದ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಲು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದರು.
ಲೋಂಡೆ ಫಾಟಾ ಬಳಿ ಅವರ ಕಾರು ಎದುರುಗಡೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ, ಬೈಕ್ ನಿಯಂತ್ರಣ ತಪ್ಪಿ ಹಿಂದಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮತ್ತು ಬೈಕ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕಾರಿನಲ್ಲಿದ್ದ ನಂದಲಾಲ್ ಮಹಾಜನ್, ಅನಿತಾ ಮಹಾಜನ್, ಸುರೇಶ್ ಮಹಾಜನ್ ಮತ್ತು ನಿರ್ಮಲಾ ಮಹಾಜನ್ ಮತ್ತು ಬೈಕ್‌ನಲ್ಲಿದ್ದ ನೀಲೇಶ್ ತಾವ್ಡೆ ಮತ್ತು ಫಲ್ಗುಣಿ ಭೋಯ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಕಾರು ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.