ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಾಳಿಪಟ ಹಾರಿಸುತ್ತಾ ಚರಂಡಿಗೆ ಬಿದ್ದ ಬಾಲಕ; 4 ದಿನಗಳ ಬಳಿಕ ಮೃತದೇಹ ಪತ್ತೆ: ಕಸದ ರಾಶಿಯಲ್ಲಿ ಮಗನನ್ನು ಹುಡುಕುತ್ತಿದ್ದ ಮುಗ್ಧ ತಂದೆಯ ವಿಡಿಯೊ ವೈರಲ್‌

Boy Falls into Drain: ದೆಹಲಿಯಲ್ಲಿ ತೆರೆದ ಚರಂಡಿಗೆ ಬಿದ್ದು ನಾಪತ್ತೆಯಾಗಿದ್ದ ನಾಲ್ಕು ದಿನಗಳ ನಂತರ ಇದೀಗ ಬಾಲಕನ ಮೃತದೇಹ ಪತ್ತೆಯಾಗಿದೆ. ಶನಿವಾರ (ಆಗಸ್ಟ್‌ 22) ಬೆಳಗ್ಗೆ ಗಾಳಿಪಟವನ್ನು ಹಾರಿಸುತ್ತಾ ಓಡುವಾಗ 15 ವರ್ಷದ ಬಾಲಕ ಮಿಥುನ್ ತೆರೆದ ಚರಂಡಿಗೆ ಬಿದ್ದಿದ್ದ. ನಾಲ್ಕು ದಿನಗಳಿಂದ ಬಾಲಕನಿಗಾಗಿ ಹುಡುಕಾಟ ನಡೆಯುತ್ತಿತ್ತು.

ಗಾಳಿಪಟ ಹಾರಿಸುವಾಗ ಚರಂಡಿಗೆ ಬಿದ್ದು ಬಾಲಕ ಸಾವು

ದೆಹಲಿಯಲ್ಲಿ ತೆರದ ಚರಂಡಿಗೆ ಬಿದ್ದು ಮೃತಪಟ್ಟ ಬಾಲಕ ಮಿಥುನ್‌ -

Priyanka P
Priyanka P Aug 25, 2026 11:01 PM

ನವದೆಹಲಿ, ಆ. 25: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ತೆರೆದ ಚರಂಡಿಗೆ ಬಿದ್ದು ನಾಪತ್ತೆಯಾಗಿದ್ದ ನಾಲ್ಕು ದಿನಗಳ ನಂತರ ಇದೀಗ ಬಾಲಕನ ಮೃತದೇಹ ಪತ್ತೆಯಾಗಿದೆ. ಆಗ್ನೇಯ ದೆಹಲಿಯ ಜಸೋಲಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಶನಿವಾರ (ಆಗಸ್ಟ್‌ 22) ಬೆಳಗ್ಗೆ ಗಾಳಿಪಟವನ್ನು ಹಾರಿಸುತ್ತಾ ಓಡುವಾಗ 15 ವರ್ಷದ ಬಾಲಕ ಮಿಥುನ್ ತೆರೆದ ಚರಂಡಿಗೆ ಬಿದ್ದಿದ್ದ. ನಾಲ್ಕು ದಿನಗಳಿಂದ ಬಾಲಕನಿಗಾಗಿ ಹುಡುಕಾಟ ನಡೆಯುತ್ತಿತ್ತು. ಮಂಗಳವಾರ (ಆಗಸ್ಟ್‌ 25) ಬಾಲಕನ ಮೃತದೇಹ ಪತ್ತೆಯಾಗಿದೆ.

ಘಟನೆಯ ನಂತರ, ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಆಗ್ನೇಯ (ಮಧ್ಯ) ವಲಯದ ಜೂನಿಯರ್ ಎಂಜಿನಿಯರ್ ಒಬ್ಬರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಳಿಸಿದೆ. ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಎಂಸಿಡಿ ತಿಳಿಸಿದೆ.

8ನೇ ತರಗತಿಯ ವಿದ್ಯಾರ್ಥಿ ಮಿಥುನ್ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದು, ಅವರ ಮನೆಯ ಸಮೀಪವಿರುವ ಚರಂಡಿಗೆ ಬಿದ್ದಿರಬಹುದು ಎಂದು ಅವರ ಕುಟುಂಬ ಮತ್ತು ಅಧಿಕಾರಿಗಳು ಶಂಕಿಸಿದ್ದರು. ಉತ್ತರ ಪ್ರದೇಶದ ಮೂಲದ ಮಿಥುನ್ ಅವರ ಕುಟುಂಬಸ್ಥರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ದೆಹಲಿಯಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಿಥುನ್‌ ನಾಪತ್ತೆಯಾದ ಬಳಿಕ ಆತನ ತಂದೆ ಕಸದ ರಾಶಿಯಲಲಿ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ವಿಡಿಯೊ ವೈರಲ್‌ ಆಗಿತ್ತು. ಮಿಥುನ್‌ ಸುರಕ್ಷಿತವಾಗಿ ಕುಟುಂಬದ ಜತೆ ಸೇರಲಿ ಎಂದು ಇಡೀ ದೇಸವೇ ಪ್ರಾರ್ಥಿಸಿತ್ತು. ಆದರೆ ಕೊನೆಗೂ ಪ್ರಾರ್ಥನೆ ಫಲಿಸಲಿಲ್ಲ.

ವಿಡಿಯೊ ವೀಕ್ಷಿಸಿ:



ಘಟನೆಯ ನಂತರ ದೆಹಲಿ ಅಗ್ನಿಶಾಮಕ ಸೇವೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಕ್ಷಣಾ ತಂಡಗಳು ಮತ್ತು ಡೈವರ್‌ಗಳನ್ನು ಒಳಗೊಂಡ ಬಹು-ಸಂಸ್ಥೆಗಳ ನೇತೃತ್ವದಲ್ಲಿ ಹುಡುಕಾಟ ಪ್ರಾರಂಭಿಸಲಾಯಿತು. ಬಾಲಕ ಮಿಥುನ್ ತಂದೆ ಕೈಯಲ್ಲಿ ಕೋಲು ಹಿಡಿದುಕೊಂಡು ಚರಂಡಿಯಲ್ಲಿ ಮಗನನ್ನು ಹುಡುಕುತ್ತಿರುವ ಹೃದಯ ವಿದ್ರಾವಕ ವಿಡಿಯೊ ನೋಡಿ ಹಲವರ ಕಣ್ಣಂಚು ಒದ್ದೆಯಾಗಿತ್ತು. ರಕ್ಷಣಾ ಕಾರ್ಯಾಚರಣೆ ವಿಫಲವಾದಾಗ, ಮಿಥುನ್ ತಂದೆ ಸ್ವತಃ ಚರಂಡಿಗೆ ಇಳಿದಿದ್ದರು.

ದೆಹಲಿಯಲ್ಲಿ ಮಹಾರಾಷ್ಟ್ರ ದುರಂತ ನೆನಪಿಸುವ ಘಟನೆ: ಐಫೋನ್‌ ಇಎಂಐ ಕಟ್ಟಲು ಸಾಧ್ಯವಾಗದೆ ಯಮುನಾ ನದಿಗೆ ಹಾರಿದ ಶಿಕ್ಷಕ

ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ರೇಖಾ ಗುಪ್ತಾ ತೀವ್ರ ಅಸಮಾಧಾನ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಒಂದು ಗಂಟೆಯೊಳಗೆ ಚರಂಡಿಯ ವ್ಯಾಪ್ತಿಯ ಬಗ್ಗೆ ಮಾಹಿತಿ ಒದಗಿಸುವಂತೆ ಮತ್ತು ತಪ್ಪಿತಸ್ಥ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಗುಪ್ತಾ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.