ʼʼಮರ ನೆಲಕ್ಕುರುಳುವುದು ಪ್ರಕೃತಿ ಸಹಜ ಪ್ರಕ್ರಿಯೆʼʼ; ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕ ಮೃತಪಟ್ಟ ಘಟನೆಗೆ ಸಚಿವರ ಉಡಾಫೆಯ ಉತ್ತರ
Boy Killed After Tree Falls on School Bus: ಮರ ಬೀಳುವುದು ಅಥವಾ ಸಿಡಿಲು ಬಡಿಯುವುದು, ಇವು ಮಾನವ ನಿಯಂತ್ರಣಕ್ಕೆ ಮೀರಿದ ವಿಷಯಗಳು. ಮರ ಯಾವಾಗ ಬೀಳುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ ಎಂದು ಮಹಾರಾಷ್ಟ್ರ ಸಚಿವ ಸಂಜಯ್ ಶಿರ್ಸಾಟ್ ಹೇಳಿದ್ದಾರೆ. ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕ ಮೃತಪಟ್ಟ ಘಟನೆಗೆ ಅವರು ಪ್ರತಿಕ್ರಿಯಿಸಿದರು.
ಸಚಿವ ಸಂಜಯ್ ಶಿರ್ಸಾಟ್ ಹಾನಿಗೊಳಗಾದ ಬಸ್ ಮತ್ತು ಮೃತ ವಿದ್ಯಾರ್ಥಿ ವಿಹಾನ್ ಶ್ರೀವಾಸ್ತವ್ -
ಮುಂಬೈ, ಜು. 1: ಶಾಲಾ ಬಸ್ ಮೇಲೆ ಮರ ಬಿದ್ದು ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ (Maharashtra) ಸಾಮಾಜಿಕ ನ್ಯಾಯ ಸಚಿವ ಸಂಜಯ್ ಶಿರ್ಸಾಟ್ ನೀಡಿರುವ ಹೇಳಿಕೆ ಸದ್ಯ ವಿವಾದಕ್ಕೆ ಕಾರಣವಾಗಿದೆ. ಮರ ಬೀಳುವುದು ಅಥವಾ ಸಿಡಿಲು ಬಡಿಯುವುದು, ಇವು ಮಾನವ ನಿಯಂತ್ರಣಕ್ಕೆ ಮೀರಿದ ವಿಷಯಗಳು. ಮರ ಯಾವಾಗ ಬೀಳುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ ಎಂದು ಅವರು ಹೇಳಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂವೇದನಾರಹಿತವಾಗಿ ಅವರು ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಅದಾಗ್ಯೂ ಅವರು ಸರ್ಕಾರವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪಾಲಿಕೆಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ʼʼಮಂಗಳವಾರ (ಜೂನ್ 30) ನಡೆದ ಘಟನೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಸರ್ಕಾರ ಇಂದು ಸದನದಲ್ಲಿ ಇದರ ಬಗ್ಗೆ ಹೇಳಿಕೆ ನೀಡಲಿದೆ. ಅಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ನಿಗಮಕ್ಕೂ ಸೂಚನೆಗಳನ್ನು ನೀಡಲಾಗಿದೆʼʼ ಎಂದು ತಿಪ್ಪೆ ಸಾರಿಸುವ ಪ್ರಯತ್ನ ನಡೆಸಿದ್ದಾರೆ.
ಸಚಿವರು ಹೇಳಿದ್ದೇನು?
ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವ ಭರದಲ್ಲಿ ಆರಂಭದಲ್ಲಿ ಸಂಜಯ್ ಶಿರ್ಸಾಟ್ ನಾಲಗೆ ಹರಿಯಬಿಟ್ಟರು. ʼʼಮರ ಬೀಳುವುದು ಅಥವಾ ಸಿಡಿಲು ಬಡಿಯುವುದು, ಇವು ಮಾನವ ನಿಯಂತ್ರಣಕ್ಕೆ ಮೀರಿದ ವಿಷಯಗಳು. ಮರ ಯಾವಾಗ ಬೀಳುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲʼʼ ಎಂದು ಹೇಳಿದ್ದರು. ಮುಂಗಾರು ಪೂರ್ವ ಸಿದ್ಧತೆಗಳೆಲ್ಲವೂ ಪೂರ್ಣಗೊಂಡಿವೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ. ಇಂತಹ ಘಟನೆಗಳು ಅಸಲಿ ವಾಸ್ತವವನ್ನು ಬಿಚ್ಚಿಡುತ್ತಿವೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಬಗ್ಗೆ ಸಚಿವರ ಈ ಹೇಳಿಕೆ ನೀಡಿದ್ದಾರೆ.
ಚೆಂಬೂರ್‌ನಲ್ಲಿ ಮಂಗಳವಾರ ಮಧ್ಯಾಹ್ನ ಯೂನಿವರ್ಸಲ್ ಹೈಸ್ಕೂಲ್ ವಿದ್ಯಾರ್ಥಿಗಳ ಬಸ್ ಮೇಲೆ 70 ವರ್ಷ ಹಳೆಯದಾದ ರಸ್ತೆ ಬದಿಯ ಮರವೊಂದು ಬುಡಮೇಲಾಗಿ ಬಿದ್ದಿತ್ತು. ಅಪಘಾತದಲ್ಲಿ 11 ವರ್ಷದ ವಿದ್ಯಾರ್ಥಿ ವಿಹಾನ್ ಶ್ರೀವಾಸ್ತವ್ ಮೃತಪಟ್ಟಿದ್ದ. ಇನ್ನು ನಾಲ್ವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಒಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಎಲ್ಲ ಐದು ವಿದ್ಯಾರ್ಥಿಗಳನ್ನು ಝೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಆರ್ಭಟ; ನೇರಳೆ ಮಾರ್ಗದ ಹಳಿ ಮೇಲೆ ಮರ ಬಿದ್ದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಈ ಘಟನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಜೋರಾದ ಗಾಳಿ-ಮಳೆಗೆ ಮರಗಳು ಬೀಳುವುದು ಸಹಜ ಎಂದು ಸಚಿವರು ಮೊದಲಿಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ. ನಂತರ ಇದೊಂದು ದೊಡ್ಡ ದುರಂತ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ. ನಡೆದ ಘಟನೆಯಿಂದ ತೀವ್ರ ದುಃಖಿತರಾಗಿರುವುದಾಗಿ ಅವರು ತಿಳಿಸಿದ್ದಾರೆ.
ಶರದ್ ಪವಾರ್ ನೇತೃತ್ವದ ಎನ್‌ಸಿಪಿ ವಕ್ತಾರ ಕ್ಲೈಡ್ ಕ್ಯಾಸ್ಟ್ರೋ ಸಚಿವರ ಈ ಹೇಳಿಕೆಯನ್ನು ನಾಚಿಕೆಗೇಡು ಎಂದು ಕರೆದಿದ್ದಾರೆ. “ಇದು ಸಚಿವರ ಸಂವೇದನಾರಹಿತ ಹೇಳಿಕೆ. ಇವರಿಗೆ ಕನಿಷ್ಠ ನಾಚಿಕೆಯೂ ಇಲ್ಲ. ಮಗು ಪ್ರಾಣ ಕಳೆದುಕೊಂಡಿದೆ. ಮರ ಬೀಳುವುದು ಒಂದು ನೈಸರ್ಗಿಕ ಪ್ರಕ್ರಿಯೆ ಎಂದು ಅವರು ಹೇಳಿಕೆ ನೀಡುತ್ತಿದ್ದಾರೆ. ಯಾರಾದರೂ ಇಷ್ಟೊಂದು ನಾಚಿಕೆಗೇಡಿನಂತೆ ನಡೆದುಕೊಳ್ಳಲು ಹೇಗೆ ಸಾಧ್ಯ? ಇದು ಬಿಎಂಸಿ ಮಾಡಬೇಕಾದ ಕೆಲಸವಾಗಿತ್ತು. ಮರಗಳ ತಪಾಸಣೆ ಸರಿಯಾಗಿ ನಡೆದಿಲ್ಲ. ಈಗ ಬಿಎಂಸಿ ರಸ್ತೆ ಇಲಾಖೆಯ ಮೇಲೆ ಗೂಬೆ ಕೂರಿಸುತ್ತಿದೆ. ಪ್ರತಿ ಮುಂಗಾರಿಗೆ ಮುನ್ನ ಮರಗಳ ಆಡಿಟ್ ಕಡ್ಡಾಯವಾಗಿ ನಡೆಯಲೇಬೇಕು” ಎಂದು ಕ್ಯಾಸ್ಟ್ರೋ ಸಲಹೆ ನೀಡಿದ್ದಾರೆ.
ಅಪಘಾತ ನಡೆದ ರಸ್ತೆಯಲ್ಲಿನ ಮರಗಳನ್ನು ಕತ್ತರಿಸುವ ಕಾರ್ಯವನ್ನು ನಡೆಸಲಾಗಿದೆ ಎಂದು ಮುಂಬೈ ಮೇಯರ್ ರಿತು ತಾವ್ಡೆ ಹೇಳಿದ್ದಾರೆ. ಮಹಾರಾಷ್ಟ್ರ ಸಚಿವ ಯೋಗೇಶ್ ಕದಮ್, ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ