E20 ಪೆಟ್ರೋಲ್ ಬಳಕೆಗೆ ಎನ್‌ಡಿಎ ಬೆಂಬಲಿಗರಲ್ಲೂ ಹಿಂದೇಟು: ಸಿ-ವೋಟರ್ ಸಮೀಕ್ಷೆಯಲ್ಲಿ ಬಹಿರಂಗ
E20 Petrol: ಸಿ-ವೋಟರ್ ಸಮೀಕ್ಷೆಯ ಪ್ರಕಾರ, ಶೇ. 55.1ರಷ್ಟು ಜನರು E20 ಪೆಟ್ರೋಲ್ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಎನ್‌ಡಿಎ ಬೆಂಬಲಿಗರ ಪೈಕಿ ಶೇ. 52.5ರಷ್ಟು ಜನರು ಕೂಡ E20 ಬಳಸಲು ಹಿಂದೇಟು ಹಾಕಿದ್ದು, ವಾಹನದ ಎಂಜಿನ್ ಹಾನಿ ಮತ್ತು ಮೈಲೇಜ್ ಕಡಿಮೆಯಾಗುವ ಆತಂಕವೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಹೆಚ್ಚಿನವರು ಸಾಮಾನ್ಯ ಪೆಟ್ರೋಲ್ ಮತ್ತು E20 ಎರಡೂ ಮಾರುಕಟ್ಟೆಯಲ್ಲಿ ಲಭ್ಯವಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಐ ರಚಿತ ಚಿತ್ರ -
ನವದೆಹಲಿ, ಜು. 13: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಎಥನಾಲ್ ಮಿಶ್ರಿತ ಇಂಧನ (E20 Petrol) ನೀತಿಯ ಕುರಿತು ಆಡಳಿತಾರೂಢ ಎನ್‌ಡಿಎ (NDA) ಮೈತ್ರಿಕೂಟದ ಮತದಾರರಲ್ಲೇ ಭಾರಿ ಆತಂಕ ವ್ಯಕ್ತವಾಗಿದೆ. ಇತ್ತೀಚೆಗೆ ನಡೆಸಲಾದ ಸಿ-ವೋಟರ್ (C-Voter) ಜನಾಭಿಪ್ರಾಯ ಸಮೀಕ್ಷೆಯ ಪ್ರಕಾರ, ಅರ್ಧಕ್ಕಿಂತ ಹೆಚ್ಚು ಎನ್‌ಡಿಎ ಬೆಂಬಲಿಗರು ತಮ್ಮ ವಾಹನಗಳಲ್ಲಿ E20 ಪೆಟ್ರೋಲ್ ಬಳಸಲು ಇಷ್ಟಪಡುತ್ತಿಲ್ಲ. ಈ ಇಂಧನದಿಂದ ವಾಹನಗಳ ಎಂಜಿನ್ ಹಾಳಾಗಬಹುದು ಮತ್ತು ಮೈಲೇಜ್ ಕಡಿಮೆಯಾಗಬಹುದು ಎಂಬ ಭೀತಿಯೇ ಇದಕ್ಕೆ ಮುಖ್ಯ ಕಾರಣ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ
E20 ಇಂಧನಕ್ಕೆ ವ್ಯಾಪಕ ವಿರೋಧ: ಶೇಕಡಾ 52.5ರಷ್ಟು ಎನ್‌ಡಿಎ ಮತದಾರರೇ E20 ಪೆಟ್ರೋಲ್ ಬಳಸಲು ನಿರಾಕರಿಸಿದ್ದು, ಕೇವಲ ಶೇಕಡಾ 18.1ರಷ್ಟು ಜನರು ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಹಾಗೆಯೇ ಶೇಕಡಾ 57.9ರಷ್ಟು ವಿರೋಧ ಪಕ್ಷದ ಮತದಾರರು ಈ ಇಂಧನವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ದೇಶಾದ್ಯಂತ ಒಟ್ಟು ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇಕಡಾ 55.1ರಷ್ಟು ಮಂದಿ E20 ಇಂಧನಕ್ಕೆ ಬೇಡ ಎಂದಿದ್ದಾರೆ.
ವಾಹನ ಹಾನಿ ಮತ್ತು ಮೈಲೇಜ್ ಆತಂಕ: ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 52.8ರಷ್ಟು ಜನರು E20 ಪೆಟ್ರೋಲ್ ವಾಹನದ ಮೈಲೇಜ್ ಕಡಿಮೆ ಮಾಡುತ್ತದೆ ಎಂದು ನಂಬಿದ್ದಾರೆ (ಇದರಲ್ಲಿ ಶೇಕಡಾ 51.2ರಷ್ಟು ಎನ್‌ಡಿಎ ಮತದಾರರು ಸೇರಿದ್ದಾರೆ). ಶೇಕಡಾ 54.2ರಷ್ಟು ಒಟ್ಟಾರೆ ಜನಸಮೂಹ ಮತ್ತು ಶೇಕಡಾ 49.9ರಷ್ಟು ಎನ್‌ಡಿಎ ಬೆಂಬಲಿಗರು ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಬಹುತೇಕ ವಾಹನಗಳು ಹಾಳಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡಾ 56.3ರಷ್ಟು ಜನರು E20 ಪೆಟ್ರೋಲ್ ಕಡ್ಡಾಯಗೊಳಿಸುವುದು ಹಳೆಯ ವಾಹನಗಳ ಮಾlಕರಿಗೆ ಮಾಡುವ ಅನ್ಯಾಯ ಎಂದು ಭಾವಿಸಿದ್ದಾರೆ.
ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ಬೇಕು
ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 75.9ರಷ್ಟು ಜನರು (ಶೇಕಡಾ 72.4ರಷ್ಟು ಎನ್‌ಡಿಎ ಮತದಾರರು ಸೇರಿ) ಮಾರುಕಟ್ಟೆಯಲ್ಲಿ ಎಥನಾಲ್ ಮಿಶ್ರಿತ ಮತ್ತು ಸಾಮಾನ್ಯ ಪೆಟ್ರೋಲ್ ಎರಡೂ ಲಭ್ಯವಿರಬೇಕು ಹಾಗೂ ಗ್ರಾಹಕರಿಗೆ ತಮಗೆ ಬೇಕಾದ ಇಂಧನವನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಸಾಮಾನ್ಯ ಪೆಟ್ರೋಲ್‌ಗಿಂತ E20 ಇಂಧನದ ಬೆಲೆ ಕಡಿಮೆ ಇರಬೇಕು ಎಂದು ಶೇ. 74.5ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಥನಾಲ್ ಮಿಶ್ರಿತ ಇಂಧನದಿಂದ ವಾಹನಗಳು ಹಾಳಾಗುತ್ತವೆ ಎಂಬುದಕ್ಕೆ ಕನಿಷ್ಠ ಒಬ್ಬರೇ ಒಬ್ಬರು ಪುರಾವೆ ನೀಡಲಿ ಎಂದು ಸವಾಲು ಹಾಕಿದ ಬೆನ್ನಲ್ಲೇ ಈ ಸಮೀಕ್ಷಾ ವರದಿ ಪ್ರಕಟಗೊಂಡಿರುವುದು ಗಮನಾರ್ಹ. ಜುಲೈ 8 ಮತ್ತು 9ರ ನಡುವೆ ದೇಶಾದ್ಯಂತ 1,641 ಜನರನ್ನು ಕಂಪ್ಯೂಟರ್ ನೆರವಿನ ದೂರವಾಣಿ ಸಂದರ್ಶನ ಮೂಲಕ ಸಂಪರ್ಕಿಸಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.